ಉಪ್ಪಿನಂಗಡಿ: ಕೆರೆಗೆ ಬಿದ್ದು ಬಾಲಕನ ಸಾವು ಪ್ರಕರಣ- ಮುಳುಗಿ ಮೃತಪಟ್ಟಿದ್ದೆಂದು ವೈದ್ಯರ ಅಭಿಪ್ರಾಯ

0

ಉಪ್ಪಿನಂಗಡಿ: ಕಳೆದ ಜನವರಿಯಲ್ಲಿ ಕೆರೆಗೆ ಬಿದ್ದು ಮೃತಪಟ್ಟ ಸ್ಥಿತಿಯಲ್ಲಿದ್ದ ಆರು ವರ್ಷದ ಬಾಲಕನ ಮರಣೋತ್ತರ ವರದಿ ಬಂದಿದ್ದು, ಅದರಲ್ಲಿ ವೈದ್ಯರು, ‘ಇದು ಮುಳುಗಿರುವುದು ಬಿಟ್ಟರೆ, ಬೇರೆ ಯಾವುದೇ ಕಾರಣದಿಂದ ಸಾವನ್ನಪ್ಪಿದ್ದು ಎಂದು ಸೂಚಿಸಲು ಏನೂ ಆಧಾರಗಳಿಲ್ಲ’ ಎಂದು ತಿಳಿಸಿದ್ದಾರೆ.

ಬಜತ್ತೂರು ಗ್ರಾಮದ ಪೊರೋಳಿ ನಿವಾಸಿ ದಿವಂಗತ ನಾರಾಯಣ ಗೌಡರ ಪುತ್ರ ರಕ್ಷಿತ್ (6) ಎಂಬಾತ ಕಳೆದ ಜ.21ರಂದು ಕೆರೆಗೆ ಬಿದ್ದು ಮೃತಪಟ್ಟಿದ್ದ. ಹುಲ್ಲು ತೆಗೆಯಲು ತೋಟಕ್ಕೆ ಹೋದಾಗ ಅವರೊಂದಿಗೆ ತೋಟಕ್ಕೆ ಹೋಗಿದ್ದ ಬಾಲಕ ಅಲ್ಲಿ ಸ್ಪಿಂಕ್ಲರ್ ನೀರಿನಲ್ಲಿ ಸ್ನಾನ ಮಾಡುವ ಆಸೆ ವ್ಯಕ್ತಪಡಿಸಿದ್ದ. ಇದಕ್ಕೆ ನಿರಾಕರಣೆ ತೋರಿದ ತಾಯಿ ಆತನನ್ನು ಮನೆಗೆ ಕರೆದುಕೊಂಡು ಬಂದು ತಿಂಡಿ ನೀಡಿದ್ದರು. ತಿಂಡಿ ತಿನ್ನುತ್ತಲೇ ಈಗ ಬರುತ್ತೇನೆಂದು ತನ್ನ ಚಿಕ್ಕಮ್ಮನ ಬಳಿ ಹೇಳಿ ಹೋದ ಬಾಲಕ ಮತ್ತೆ ನಾಪತ್ತೆಯಾಗಿದ್ದ. ಹುಡುಕಾಟ ನಡೆಸಿದಾಗ ಅವರ ತೋಟದ ಕೆರೆಯಲ್ಲಿ ಶವವಾಗಿ ಪತ್ತೆಯಾಗಿದ್ದ. ಬಾಲಕನ ತಂದೆ ಮೂರು ವರ್ಷದ ಹಿಂದೆ ಅಪಘಾತದಲ್ಲಿ ಮೃತಪಟ್ಟಿದ್ದು, ಆ ಬಳಿಕ ಆ ಮನೆಯಲ್ಲಿ ಕೌಟುಂಬಿಕ ವೈ ಮನಸ್ಸು ಮೂಡಿತ್ತು. ಇದರಿಂದಾಗಿ ಈ ಬಾಲಕನ ಸಾವಿನಲ್ಲಿ ಸಂಶಯ ವ್ಯಕ್ತವಾಗಿತ್ತು. ಇದರಿಂದಾಗಿ ಬಾಲಕನ ಮೃತದೇಹದ ಮರಣೋತ್ತರ ಪರೀಕ್ಷೆಯನ್ನು ಮಂಗಳೂರಿನ ಕೆ.ಎಸ್. ಮೆಡಿಕಲ್ ಅಕಾಡಮಿಯ ವಿಧಿವಿಜ್ಞಾನ ಪ್ರಯೋಗಾಲಯದಲ್ಲಿ ಮಾಡಲಾಗಿತ್ತು. ಈಗ ಅದರ ವರದಿ ಬಂದಿದ್ದು, ಶವ ಪರೀಕ್ಷೆ ಮತ್ತು ಆರ್‌ಎಫ್‌ಎಸ್‌ಎಲ್ ವರದಿಗಳ ಅವಲೋಕನದ ಮೇಲೆ ವೈದ್ಯರು, ‘ಇದು ಮುಳುಗಿರುವುದು ಬಿಟ್ಟರೆ, ಬೇರೆ ಯಾವುದೇ ಕಾರಣದಿಂದ ಸಾವನ್ನಪ್ಪಿದ್ದು ಎಂದು ಸೂಚಿಸಲು ಏನೂ ಆಧಾರಗಳಿಲ್ಲ’ ಎಂದು ಅಭಿಪ್ರಾಯಿಸಿದ್ದಾರೆ.

LEAVE A REPLY

Please enter your comment!
Please enter your name here