ಒಳಮೊಗ್ರು ತುರ್ತು ಟಾಸ್ಕ್ ಪೋರ್ಸ್ ಸಭೆ – ಚೆಲ್ಯಡ್ಕ ಸೇತುವೆಯಲ್ಲಿ ಬಸ್ಸು ಸಹಿತ ಘನ ವಾಹನ ಸಂಚಾರ ನಿರ್ಬಂಧ – ಬಡ ವಿದ್ಯಾರ್ಥಿಗಳಿಗೆ ತೊಂದರೆ- ಪರ್ಯಾಯ ವ್ಯವಸ್ಥೆ ಮಾಡಲು ಆಗ್ರಹ

0

ಪುತ್ತೂರು: ಮುಳುಗು ಸೇತುವೆ ಎಂದೇ ಪ್ರಸಿದ್ದಿ ಪಡೆದುಕೊಂಡಿದ್ದ ಚೆಲ್ಯಡ್ಕ ಸೇತುವೆ ಕಳೆದೆರಡು ದಿನಗಳ ಹಿಂದೆ ಸುರಿದ ಮಳೆಗೆ ಮುಳುಗಡೆಯಾಗಿತ್ತು. ಈ ಹಿನ್ನೆಲೆಯಲ್ಲಿ ಸ್ಥಳಕ್ಕೆ ಆಗಮಿಸಿದ್ದ ಜಿಲ್ಲಾಧಿಕಾರಿ ಮುಲ್ಲೈ ಮುಹಿಲನ್‌ರವರು ಸೇತುವೆಯ ಮೇಲೆ ಘನ ವಾಹನ ಸಂಚಾರ ನಿರ್ಬಂಧ ಮಾಡಿದ್ದು ಅಲ್ಲದೆ ರಾತ್ರಿ ವೇಳೆ ಎಲ್ಲಾ ವಾಹನಗಳ ಸಂಚಾರವನ್ನು ನಿರ್ಬಂಧಗೊಳಿಸಿ ಆದೇಶ ಹೊರಡಿಸಿದ್ದು ಇದರಿಂದಾಗಿ ಈ ಸೇತುವೆ ಮೇಲೆ ಬಸ್ಸು ಕೂಡ ಸಂಚರಿಸದೆ ಇರುವುದರಿಂದ ಈ ಭಾಗದಿಂದ ಶಾಲೆ, ಕಾಲೇಜಿಗಳಿಗೆ ತೆರಳುವ ಬಡ ವಿದ್ಯಾರ್ಥಿಗಳಿಗೆ ಬಹಳಷ್ಟು ತೊಂದರೆಯಾಗುತ್ತಿದೆ. ಯಾವುದೇ ಪರ್ಯಾಯ ವ್ಯವಸ್ಥೆ ಮಾಡದೇ ಏಕಾಏಕಿ ಈ ರೀತಿಯ ಆದೇಶ ಮಾಡಿದ್ದರಿಂದ ಗ್ರಾಮಸ್ಥರಿಗೆ ಮುಖ್ಯವಾಗಿ ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ಬಹಳಷ್ಟು ತೊಂದರೆಯಾಗಿದೆ.ಆದ್ದರಿಂದ ಪರ್ಯಾಯ ವ್ಯವಸ್ಥೆ ಮಾಡುವಂತೆ ಒಳಮೊಗ್ರು ಗ್ರಾಪಂ ಸದಸ್ಯ ಮಹೇಶ್ ರೈ ಕೇರಿಯವರು ಒಳಮೊಗ್ರು ಗ್ರಾಪಂ ಕಛೇರಿಯಲ್ಲಿ ನಡೆದ ತುರ್ತು ಟಾಸ್ಕ್ ಪೋರ್ಸ್ ಸಭೆಯಲ್ಲಿ ವಿಷಯ ಪ್ರಸ್ತಾಪಿಸಿದರು.


ಪ್ರಾಕೃತಿಕ ವಿಕೋಪದಿಂದ ಆಗುವ ಅಪಾಯಕಾರಿ ತೊಂದರೆಗಳಿಗೆ ಮುನ್ನೆಚ್ಚರಿಕೆ ಕ್ರಮ ತೆಗೆದುಕೊಳ್ಳುವ ಸಲುವಾಗಿ ಜಿಲ್ಲಾಧಿಕಾರಿಯವರ ವಿ.ಸಿ ಆದೇಶದಂತೆ ತುರ್ತು ಟಾಸ್ಕ್ ಪೋರ್ಸ್ ಸಭೆಯು ಒಳಮೊಗ್ರು ಗ್ರಾಮ ಪಂಚಾಯತ್‌ನಲ್ಲಿ ಜೂ.29ರಂದು ನಡೆಯಿತು. ಗ್ರಾಪಂ ಅಧ್ಯಕ್ಷೆ ತ್ರಿವೇಣಿ ಪಲ್ಲತ್ತಾರುರವರ ಅಧ್ಯಕ್ಷತೆಯಲ್ಲಿ ನಡೆದ ಸಭೆಗೆ ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಕೃಷ್ಣರವರು ನೋಡೆಲ್ ಅಧಿಕಾರಿಯಾಗಿ ಆಗಮಿಸಿದ್ದರು. ಚೆಲ್ಯಡ್ಕ ಭಾಗದಲ್ಲಿ ಬಹಳಷ್ಟು ಮನೆಗಳಿದ್ದು ಈ ಪ್ರದೇಶದ ಬಹುತೇಕ ಭಾಗ ಒಳಮೊಗ್ರು ಗ್ರಾಪಂಗೆ ಸೇರಿರುತ್ತದೆ. ಮುಖ್ಯವಾಗಿ ಈ ಭಾಗದಲ್ಲಿ ಪರಿಶಿಷ್ಟ ಪಂಗಡಕ್ಕೆ ಸೇರಿದ ಮನೆಗಳೇ ಹೆಚ್ಚಿನ ಸಂಖ್ಯೆಯಲ್ಲಿದೆ ಎಂದ ಮಹೇಶ್ ರೈ ಕೇರಿಯವರು, ಗುಮ್ಮಟಗದ್ದೆ ಇತ್ಯಾದಿ ಪ್ರದೇಶಗಳಿಂದ ಬೆಟ್ಟಂಪಾಡಿ ಶಾಲಾ,ಕಾಲೇಜಿಗೆ ಹೋಗುವ ಬಡ ವಿದ್ಯಾರ್ಥಿಗಳಿದ್ದು ಇವರುಗಳು ಪ್ರತಿನಿತ್ಯ ಬಸ್ಸಿನಲ್ಲೇ ಓಡಾಡುತ್ತಾರೆ. ಮುಖ್ಯವಾಗಿ ಈ ರಸ್ತೆಯಲ್ಲಿ ಖಾಸಗಿ ಬಸ್ಸುಗಳೇ ಓಡಾಡುತ್ತಿರುವುದರಿಂದ ಹೆಚ್ಚಿನ ಮಕ್ಕಳು ಅದನ್ನೇ ನಂಬಿಕೊಂಡಿದ್ದಾರೆ. ಪುತ್ತೂರಿನಿಂದ ದೇವಸ್ಯವಾಗಿ ಗುಮ್ಮಟೆಗದ್ದೆ ತನಕ ಬಸ್ಸುಗಳು ಬರಬೇಕು ಎಂದು ತಿಳಿಸಿದ್ದರು. ಬಸ್ಸಿನವರಿಗೆ ಪ್ರಯಾಣಿಕರ ಕೊರತೆಯಿಂದ ಅವರು ಬರುತ್ತಿಲ್ಲ ಎಂದು ಅವರು ಸಭೆಗೆ ತಿಳಿಸಿದರು.
ಜಿಲ್ಲಾಧಿಕಾರಿಯವರ ಆದೇಶವನ್ನು ಗೌರವಿಸುತ್ತೇನೆ.


ಜೀವ ಹಾನಿ ಸಂಭವಿಸುವುದನ್ನು ತಪ್ಪಿಸುವ ಸಲುವಾಗಿ ಜಿಲ್ಲಾಧಿಕಾರಿಯವರು ಈ ಆದೇಶವನ್ನು ನೀಡಿದ್ದಾರೆ ಅದನ್ನು ನಾನು ಗೌರವಿಸುತ್ತೇನೆ ಎಂದ ಮಹೇಶ್ ರೈಯವರು, ಪರ್ಯಾಯ ವ್ಯವಸ್ಥೆಮಾಡದೇ ಇರುವುದು ಇಲ್ಲಿ ತೊಂದರೆಯಾಗಿದೆ. ಮಳೆಗಾಲದಲ್ಲಿ ಈ ಸೇತುವೆ ಈ ಹಿಂದೆಯೂ ಮುಳುಗಡೆಯಾಗುತ್ತಿತ್ತು ಅದರೆ ಇದುವರೇಗೆ ಯಾವುದೇ ಜೀವ ಹಾನಿಯಾಗಲಿ ತೊಂದರೆಯಾಗಲಿ ಆಗಲಿಲ್ಲ, ಇನ್ನು ಮುಂದೆಯೂ ಆಗುವುದು ಬೇಡ. ಅದೇಶದಿಂದ ಗ್ರಾಮದ ಜನರಿಗೆ ಸಮಸ್ಯೆಯಾಗಿದ್ದು ಸಾರ್ವಜನಿಕರಿಗೆ ಹಾಗೂ ವಿದ್ಯಾರ್ಥಿಗಳಿಗೆ ಪರ್ಯಾಯ ವ್ಯವಸ್ಥೆ ಮಾಡಿಕೊಡಬೇಕಾಗಿರುವುದು ಮಾತ್ರ ಸತ್ಯ ಎಂದು ಅವರು ತಿಳಿಸಿದರು. ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಗ್ರಾಪಂ ಅಭಿವೃದ್ಧಿ ಅಧಿಕಾರಿ ನಮಿತಾ ಎ.ಕೆಯವರು, ಜೀವ ಹಾನಿ ಸಂಭವಿಸುವುದನ್ನು ತಪ್ಪಿಸುವ ಸಲುವಾಗಿ ಮುನ್ನೆಚ್ಚರಿಕೆ ಕ್ರಮವಾಗಿ ಜಿಲ್ಲಾಧಿಕಾರಿಯವರು ಈ ಆದೇಶ ಹೊರಡಿಸಿದ್ದಾರೆ. ಈ ಬಗ್ಗೆ ನಮ್ಮಿಂದ ಯಾವುದೇ ಕ್ರಮ ಕೈಗೊಳ್ಳಲು ಸಾಧ್ಯವಿಲ್ಲ ಎಂದರು. ಗ್ರಾಪಂ ಅಧ್ಯಕ್ಷೆ ತ್ರಿವೇಣಿ ಪಲ್ಲತ್ತಾರು ಪ್ರತಿಕ್ರಿಯೆ ನೀಡಿ, ಪರ್ಯಾಯ ವ್ಯವಸ್ಥೆ ಮಾಡಿಕೊಡುವಂತೆ ನಾವು ಮೇಲಾಧಿಕಾರಿಗಳಿಗೆ ಕೇಳಿಕೊಳ್ಳಬಹುದು ಎಂದು ತಿಳಿಸಿದರು.

ಸಭೆಯಲ್ಲಿ ಗ್ರಾಪಂ ಉಪಾಧ್ಯಕ್ಷ ಅಶ್ರಫ್ ಉಜಿರೋಡಿ, ಮೆಸ್ಕಾಂ ಜೆಇ ರವೀಂದ್ರ, ಅರಣ್ಯ ಅಧಿಕಾರಿ ಮದನ್ ಬಿ.ಕೆ, ಗ್ರಾಮ ಆಡಳಿತ ಅಧಿಕಾರಿ ಸುಮನ್ ಹಾಗೂ ಪಂಚಾಯತ್ ಸದಸ್ಯರುಗಳು, ಶಾಲಾ, ಕಾಲೇಜು ಮುಖ್ಯಗುರು, ಪ್ರಾಂಶುಪಾಲರು, ಕಿರಿಯ ಆರೋಗ್ಯ ಸಹಾಯಕರು, ಎ.ಎನ್.ಎಮ್, ಅಂಗನವಾಡಿ, ಆಶಾ ಕಾರ್ಯಕರ್ತೆಯರು, ಪೊಲೀಸ್ ಇಲಾಖೆಯವರು, ಸ್ತ್ರೀ ಶಕ್ತಿ ಗುಂಪಿನ ಸದಸ್ಯರು ಉಪಸ್ಥಿತರಿದ್ದರು. ಗ್ರಾಪಂ ಕಾರ್ಯದರ್ಶಿ ಜಯಂತಿ ಸ್ವಾಗತಿಸಿ, ವಂದಿಸಿದರು. ಸಿಬ್ಬಂದಿಗಳಾದ ಗುಲಾಬಿ, ಕೇಶವ,ಲೋಕನಾಥ್, ಮೋಹನ್ ಸಹಕರಿಸಿದ್ದರು.

ಸಭೆಯಲ್ಲಿ ಕೇಳಿ ಬಂದ ಇತರೆ ವಿಷಯಗಳು
ಗ್ರಾಮದ ಹಲವು ಕಡೆಗಳಲ್ಲಿ ಹಳೆಯ ವಿದ್ಯುತ್ ತಂತಿಗಳಿದ್ದು ಇದನ್ನು ಬದಲಾಯಿಸುವಂತೆ ಕೇಳಿಕೊಳ್ಳಲಾಯಿತು. ಗ್ರಾಮದ ಕೆಲವೊಂದು ಕಡೆಗಳಲ್ಲಿ ಅಪಾಯಕಾರಿ ಮರಗಳಿವೆ ಅದನ್ನು ತೆರವು ಮಾಡುವಂತೆ ಅರಣ್ಯ ಇಲಾಖೆಗೆ ಕೇಳಿಕೊಳ್ಳಲಾಯಿತು.ಅದರಲ್ಲಿ ಮುಖ್ಯವಾಗಿ ಬಿಜತ್ರೆ ಬಳಿ ಬೀಟೆ ಮರ, ಕುರಿಯ ರಸ್ತೆಯಲ್ಲಿ, ಉಜಿರೋಡಿನಲ್ಲಿ, ಕುಂಬ್ರ ಶಾಲಾ ಬಳಿ ಇತ್ಯಾದಿ ಕಡೆಗಳಲ್ಲಿ ಅಪಾಯಕಾರಿ ಮರಗಳಿರುವ ಬಗ್ಗೆ ತಿಳಿಸಲಾಯಿತು. ಮನೆಯ ಪಕ್ಕ ಮರ ಇದ್ದರೆ ಅದನ್ನು ಅರಣ್ಯ ಇಲಾಖೆ ಒಪ್ಪಿಗೆ ಪಡೆದುಕೊಂಡು ಮನೆಯವರೇ ತೆರವು ಮಾಡಬಹುದು ಎಂದು ಅರಣ್ಯ ಇಲಾಖಾ ಅಧಿಕಾರಿ ತಿಳಿಸಿದರು. ವಿದ್ಯುತ್ ಸಮಸ್ಯೆಗಳಿದ್ದಲ್ಲಿ ತುರ್ತಾಗಿ 1912 ಟೋಲ್‌ಫ್ರೀ ನಂಬರ್‌ಗೆ ಕರೆ ಮಾಡುವಂತೆ ಜೆಇ ತಿಳಿಸಿದರು. ಮಳೆಗಾಲದಲ್ಲಿ ಜೀವ ಹಾನಿ ತರುವ ಯಾವುದೇ ವಿಷಯಗಳಿದ್ದರೂ ಗ್ರಾಮಸ್ಥರು ಜವಬ್ದಾರಿ ತೆಗೆದುಕೊಂಡು ಪಂಚಾಯತ್‌ಗೆ ತಿಳಿಸುವ ಕೆಲಸ ಮಾಡಬೇಕು ಎಂದ ನೋಡೆಲ್ ಅಧಿಕಾರಿಯವರು, ಕಿಂಡಿ ಅಣೆಕಟ್ಟು, ಪಾಲ, ಕಲ್ಲಿನ ಕೋರೆ, ಅಪಾಯಕಾರಿ ಮರ, ಕೆರೆ, ಹಳ್ಳ,ತೋಡು, ದೊಡ್ಡ ಧರೆ ಇತ್ಯಾದಿಗಳ ಬಗ್ಗೆ ಪಂಚಾಯತ್‌ಗೆ ಮಾಹಿತಿ ನೀಡುವಂತೆ ಅವರು ಕೇಳಿಕೊಂಡರು. ಸಭೆಯ ಬಳಿಕ ನೋಡೆಲ್ ಅಧಿಕಾರಿ, ಗ್ರಾಪಂ ಅಧ್ಯಕ್ಷ, ಉಪಾಧ್ಯಕ್ಷ, ಅಭಿವೃದ್ಧಿ ಅಧಿಕಾರಿ, ಸದಸ್ಯರು ಕೆಲವೊಂದು ಅಪಾಯಕಾರಿ ಸ್ಥಳಗಳಿಗೆ ಭೇಟಿ ಕೊಟ್ಟು ಪರಿಶೀಲನೆ ನಡೆಸಿದರು.

ನಾನು 30 ವರ್ಷಗಳಿಂದ ಈ ಸೇತುವೆ ಮೇಲೆ ಓಡಾಡುತ್ತಿದ್ದೇನೆ
ಚೆಲ್ಯಡ್ಕ ಸೇತುವೆಗೆ ಬರೋಬ್ಬರಿ 100 ವರ್ಷಗಳು ಕಳೆದಿದೆ. ನಾನು ಕಳೆದ 30 ವರ್ಷಗಳಿಂದ ಈ ಸೇತುವೆ ಮೇಲೆ ಓಡಾಡುತ್ತಿದ್ದೇನೆ. ಪ್ರತಿ ಮಳೆಗಾಲದಲ್ಲಿ ಮುಳುಗುತ್ತದೆ. ಕೆಲವೊಮ್ಮೆ ಮೂರು ದಿನಗಳ ಕಾಲ ಮುಳುಗಿದ್ದು ಇದೆ. ಜಿಲ್ಲಾಧಿಕಾರಿಯವರು ಮೊನ್ನೆ ಒಮ್ಮೆ ಬಂದು ಸೇತುವೆ ನೋಡಿದ್ದು ಆದರೆ ಈ ಭಾಗದ ಜನರಿಗೆ ಈ ಸೇತುವೆ ಬಗ್ಗೆ ಚೆನ್ನಾಗಿ ಗೊತ್ತಿದೆ ಎಂದು ಮಹೇಶ್ ರೈ ಕೇರಿ ತಿಳಿಸಿದರು.

ಶಾಲಾ ಬಸ್ಸು ಸಂಚರಿಸಲಿ
ಶಾಲಾ, ಕಾಲೇಜಿನ ಬಡ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಸೇತುವೆ ಮೇಲೆ ಬಸ್ಸು ಸಂಚರಿಸಲು ಜಿಲ್ಲಾಧಿಕಾರಿಯವರು ಅನುಮತಿ ನೀಡಬೇಕಾಗಿದೆ. ಇತರೆ ಘನ ವಾಹನಗಳಾದ ಜಲ್ಲಿ, ಹೊಗೆ ಇತ್ಯಾದಿ ಸಾಗಾಟದ ಟಿಪ್ಪರ್, ಸರಕು ಸಾಗಾಟದ ಲಾರಿಗಳ ಓಡಾಟವನ್ನು ನಿರ್ಬಂಧಿಸುವುದು ಸೂಕ್ತ. ಈ ಬಗ್ಗೆ ತಹಶೀಲ್ದಾರ್, ಎಸಿ.ಯವರು ಕೂಡ ಗಮನ ಹರಿಸುವ ಮೂಲಕ ಗ್ರಾಮಸ್ಥರಿಗೆ ಪರಿಹಾರ ಕೊಡಬೇಕಾದ ಅಗತ್ಯತೆ ಇದೆ ಎಂದು ಮಹೇಶ್ ರೈ ಕೇರಿ ತಿಳಿಸಿದರು.

LEAVE A REPLY

Please enter your comment!
Please enter your name here