ನೆಲ್ಯಾಡಿ: ಸಂತ ಜಾರ್ಜ್ ವಿದ್ಯಾಸಂಸ್ಥೆಯಲ್ಲಿ ಸಂಸ್ಥಾಪನಾ ದಿನಾಚರಣೆ, ಸಾಧಕರಿಗೆ ಸನ್ಮಾನ

0

ನೆಲ್ಯಾಡಿ: ನೆಲ್ಯಾಡಿ ಸಂತ ಜಾರ್ಜ್ ವಿದ್ಯಾಸಂಸ್ಥೆಗಳ ಸಂಸ್ಥಾಪನಾ ದಿನಾಚರಣೆ, ಕಾಲೇಜು ಸಂಸತ್ತಿನ ವಾರ್ಷಿಕ ಚಟುವಟಿಕೆಗಳ ಶುಭಾರಂಭ ಮತ್ತು ಸಾಧಕರಿಗೆ ಸನ್ಮಾನ ಕಾರ್ಯಕ್ರಮ ಜೂ.29ರಂದು ಕಾಲೇಜಿನ ಸಭಾಂಗಣದಲ್ಲಿ ನಡೆಯಿತು.


ಕಾರ್ಯಕ್ರಮದ ಆರಂಭದಲ್ಲಿ ದಿವ್ಯಚೇತನ ಚಾಪಲ್‌ನಲ್ಲಿ ಕೃತಜ್ಞತಾ ಬಲಿ ಪೂಜೆ, ಗೈಡ್ಸ್ ವಿದ್ಯಾರ್ಥಿಗಳಿಂದ ಶಿಕ್ಷಕಿ ಪ್ರಪುಲ್ಲಾ, ಜೆಸಿಂತಾ ಡಿಸೋಜಾ ಅವರ ನೇತೃತ್ವದಲ್ಲಿ ಸರ್ವಧರ್ಮ ಪ್ರಾರ್ಥನೆ ನಡೆಯಿತು. ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಸಂಸ್ಥೆಯ ಆಡಳಿತ ಮಂಡಳಿ ಉಪಾಧ್ಯಕ್ಷ ರೆ| ಪಿ.ಕೆ ಅಬ್ರಹಾಂ ಕೋರ್‌ಎಪಿಸ್ಕೋಪಾರವರು, 1978 ಜೂ.1ರಂದು ಪೋಳಿಕಾರ್ಪಸ್ ಮೋರ್ ಗೀವರ್ಗೀಸ್ ಅವರ ನೇತೃತ್ವದಲ್ಲಿ ಬಾಡಿಗೆ ಕಟ್ಟಡದಲ್ಲಿ ಆರಂಭವಾದ ಈ ಶಿಕ್ಷಣ ಸಂಸ್ಥೆಯು ಹಂತ ಹಂತವಾಗಿ ಬೆಳೆದು ಬಂದಿದೆ. ಶಿಸ್ತಿನ ಶಿಕ್ಷಣ ನೀಡುವುದರಲ್ಲಿ ಸಂತ ಜಾರ್ಜ್ ವಿದ್ಯಾಸಂಸ್ಥೆಯ ಕೊಡುಗೆ ಅಪಾರವಾದದ್ದು, ಇಲ್ಲಿ ಕಲಿತ ವಿದ್ಯಾರ್ಥಿಗಳು ಉನ್ನತ ಹುದ್ದೆಯಲ್ಲಿ ಕಾರ್ಯನಿರ್ವಹಿಸುತ್ತಿರುವುದು ಈ ಶಿಕ್ಷಣ ಸಂಸ್ಥೆ ನೀಡಿದ ಶಿಕ್ಷಣವೇ ಸಾಕ್ಷಿಯಾಗಿದೆ ಎಂದು ಹೇಳಿದರು. ಅತಿಥಿಯಾಗಿದ್ದ ಕಕ್ಕಿಂಜೆ ಸೈಂಟ್ ಮೇರೀಸ್ ಚಾಕೋಬೈಟ್ ಸಿರಿಯನ್ ಚರ್ಚ್‌ನ ವಿಕಾರ್ ವೆ.ರೆ. ಕುರಿಯಾಕೋಸ್ ಕವಣಾಟೇಲ್ ಕೋರ್ ಎಪಿಸ್ಕೋಪಾ, ಪೂರ್ವ ವಿದ್ಯಾರ್ಥಿ ಸಂಘದ ಅಧ್ಯಕ್ಷ ಇಸ್ಮಾಯಿಲ್ ಎನ್ ಶುಭಾಸಂಶನೆ ಮಾಡಿದರು.


ಸಂಸ್ಥೆಯ ಸ್ಥಾಪಕ ಕಾರ್ಯದರ್ಶಿ ಅಬ್ರಹಾಂ ವರ್ಗೀಸ್ ಅವರು ಅಧ್ಯಕ್ಷತೆ ವಹಿಸಿದ್ದರು.2024-25ನೇ ಸಾಲಿನ ವಿದ್ಯಾರ್ಥಿ ಸಂಸತ್ತಿಗೆ ಆಯ್ಕೆಯಾದ ಪದಾಧಿಕಾರಿಗಳಿಗೆ ಸಂಸ್ಥೆಯ ಸಂಚಾಲಕ ನೋಮಿಸ್ ಕುರಿಯಕೋಸ್ ಅವರು ಅಧಿಕಾರ ಹಸ್ತಾಂತರ ಮಾಡಿದರು. ಪ್ರತಿಜ್ಞಾವಿಧಿಯನ್ನು ಪ್ರಾಚಾರ್ಯರಾದ ಎಲಿಯಾಸ್ ಎಮ್.ಕೆ ಬೋಧಿಸಿದರು. ವೇದಿಕೆಯಲ್ಲಿ ಪುತ್ತೂರು ಕ್ಷೇತ್ರಾಧಿಕಾರಿ ಲೋಕೇಶ್ ಎಸ್.ಆರ್, ಶಿಕ್ಷಣ ಸಂಯೋಜಕ ಹರಿಪ್ರಸಾದ್, ಕೊಣಾಲು ಚರ್ಚ್‌ನ ಧರ್ಮಗುರು ರೆ.ಫಾ.ಅನಿಲ್ ಪಾರಿಚ್ಚೇರಿ, ವಿದ್ಯಾರ್ಥಿ ಸಂಘದ ನಾಯಕಿ ಇಂಚರ ವಿ ಗೌಡ, ಪ್ರಧಾನ ಕಾರ್ಯದರ್ಶಿ ಮಹಮ್ಮದ್ ಆಶಿಕ್, ಕನ್ನಡ ಮಾಧ್ಯಮದ ವಿಭಾಗದ ಉಪಾಧ್ಯಕ್ಷ ಆದಿರ, ಕಾರ್ಯದರ್ಶಿ ಸಾನ್ವಿ, ಆಂಗ್ಲ ಮಾಧ್ಯಮ ವಿಭಾಗದ ಉಪಾಧ್ಯಕ್ಷ ಪುನೀತ್, ಕಾರ್ಯದರ್ಶಿ ತ್ರಿಷಾ ಉಪಸ್ಥಿತರಿದ್ದರು.


ವಿದ್ಯಾರ್ಥಿ ಸಂಘದ ಪ್ರಧಾನ ಕಾರ್ಯದರ್ಶಿ ಆಶಿಕ್ ಶೈಕ್ಷಣಿಕ ವರ್ಷದ ವರದಿಯನ್ನು ವಾಚಿಸಿದರು. ಆಂಗ್ಲ ಮಾಧ್ಯಮದ ಮುಖ್ಯಶಿಕ್ಷಕ ಹರಿಪ್ರಸಾದ್.ಕೆ ಸ್ವಾಗತಿಸಿದರು. ಕನ್ನಡ ಮಾಧ್ಯಮದ ಮುಖ್ಯಶಿಕ್ಷಕ ತೋಮಸ್ ಎಂ.ವೈ ವಂದಿಸಿದರು. ಉಪನ್ಯಾಸಕ ಚೇತನ್ ಆನೆಗುಂಡಿ ನಿರೂಪಿಸಿದರು. ಆಡಳಿತ ಮಂಡಳಿ ಕಾರ್ಯದರ್ಶಿ ಸ್ಟೀಪನ್, ಪದಾಧಿಕಾರಿ ಪಾಪಚ್ಚನ್, ನಿವೃತ್ತ ಶಿಕ್ಷಕರು, ಪೂರ್ವ ವಿದ್ಯಾರ್ಥಿಗಳು, ವಿದ್ಯಾರ್ಥಿಗಳ ಪೋಷಕರು ಭಾಗವಹಿಸಿದ್ದರು. ಕಾರ್ಯಕ್ರಮದ ಸಂಯೋಜಕರಾದ ಸಿನಿ ಜಾರ್ಜ್, ಜೆಸಿಂತಾ ಡಿಸೋಜ ಸಹಕರಿಸಿದರು.

ಸನ್ಮಾನ
ಸಂಸ್ಥೆಯ ಹಳೆ ವಿದ್ಯಾರ್ಥಿ ಕೋರ್ ಎಪಿಸ್ಕೋಪಾ ಪದವಿಯನ್ನು ಪಡೆದ ಕಕ್ಕಿಂಜೆ ಸೈಂಟ್ ಮೇರೀಸ್ ಚಾಕೋಬೈಟ್ ಸಿರಿಯನ್ ಚರ್ಚ್‌ನ ವಿಕಾರ್ ವೆ.ರೆ.ಕುರಿಯಾಕೋಸ್ ಕವಣಾಟೇಲ್ ಕೋರ್ ಎಪಿಸ್ಕೋಪಾ ಅವರನ್ನು ಹಾಗೂ 2023-24ನೇ ಸಾಲಿನಲ್ಲಿ ಎಸ್‌ಎಸ್‌ಎಲ್‌ಸಿ ಹಾಗೂ ಪಿಯುಸಿಯಲ್ಲಿ ಅತ್ಯಧಿಕ ಅಂಕ ಪಡೆದ ವಿದ್ಯಾರ್ಥಿಗಳನ್ನು ಸಂಸ್ಥೆಯ ವತಿಯಿಂದ ಪುರಸ್ಕರಿಸಿ ಸನ್ಮಾನಿಸಲಾಯಿತು.

LEAVE A REPLY

Please enter your comment!
Please enter your name here