ಮಕ್ಕಳನ್ನು ಬೈಕ್​​ಗಳಲ್ಲಿ ಕರೆದುಕೊಂಡು ಹೋಗುವಾಗ ಶಿಶು ಕವಚ ಹಾಕುವುದು ಕಡ್ಡಾಯ – ಜುಲೈ ಎರಡನೇ ವಾರದಿಂದ ಕಾರ್ಯಾಚರಣೆ – ಸಾರಿಗೆ ಇಲಾಖೆ ಹೆಚ್ಚುವರಿ ಆಯುಕ್ತ ಮಲ್ಲಿಕಾರ್ಜುನ

0

ಪುತ್ತೂರು: ರಾಜ್ಯದಾದ್ಯಂತ ಬೈಕ್​​ಗಳಲ್ಲಿ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳದೆ ಮಕ್ಕಳನ್ನು ಹಿಂದೆ ಮುಂದೆ ಕೂರಿಸಿಕೊಂಡು ಹೋಗುವ ವಾಹನ ಸವಾರರಿಗೆ ಬಿಸಿ ಮುಟ್ಟಿಸಲು ಟ್ರಾಫಿಕ್ ಪೊಲೀಸರು ಮುಂದಾಗಿದ್ದಾರೆ.

ಮಕ್ಕಳನ್ನು ಬೈಕ್​​ಗಳಲ್ಲಿ ಕರೆದುಕೊಂಡು ಹೋಗುವಾಗ ಶಿಶು ಕವಚ (ಸೇಫ್ಟಿ ಹಾರ್ನೆಸ್ ಬೆಲ್ಟ್) ಹಾಕದಿದ್ದರೆ ಕೇಸ್ ಹಾಕಲಾಗುತ್ತದೆ ಮತ್ತು ಐನೂರರಿಂದ ಒಂದು ಸಾವಿರ ರೂಪಾಯಿ ವರೆಗೆ ದಂಡ ವಿಧಿಸಲಾಗುತ್ತದೆ ಎಂದು ಸಾರಿಗೆ ಇಲಾಖೆ ಹೆಚ್ಚುವರಿ ಆಯುಕ್ತ ಮಲ್ಲಿಕಾರ್ಜುನ ತಿಳಿಸಿದ್ದಾರೆ.

ಜುಲೈ ಎರಡನೇ ವಾರದಿಂದ ಕಾರ್ಯಾಚರಣೆ

9 ತಿಂಗಳು ಮೇಲ್ಪಟ್ಟ ಹಾಗೂ 4 ವರ್ಷದ ಒಳಗಿನ ಎಲ್ಲ ಮಕ್ಕಳು ಶಿಶು ಕವಚ ಹಾಕಲೇಬೇಕು. ಕೇಂದ್ರ ಮೋಟಾರು ವಾಹನ ನಿಯಮಾವಳಿ 1989ರ ನಿಯಮ 138 (7) ಅನ್ವಯ ದ್ವಿಚಕ್ರ ವಾಹನದಲ್ಲಿ ಪ್ರಯಾಣಿಸುವ ಮಕ್ಕಳು ಸೇಫ್ಟಿ ಹಾರ್ನಸ್ ಧಾರಣೆ ಮಾಡುವುದು ಕಡ್ಡಾಯ. ಜುಲೈ ಮೊದಲ ವಾರದಲ್ಲಿ ಪೋಷಕರು ಮತ್ತು ಶಾಲೆಗಳಲ್ಲಿ ಈ ಬಗ್ಗೆ ಜಾಗೃತಿ ಮೂಡಿಸಲು ಕ್ರಮ ಕೈಗೊಳ್ಳುತ್ತೇವೆ. ಎರಡನೆಯ ವಾರದಿಂದ ವಾಹನ ತಪಾಸಣೆ ಮಾಡಿ ದಂಡ ಹಾಕಲು ಶುರು ಮಾಡುತ್ತೇವೆ ಎಂದು ಸಾರಿಗೆ ಇಲಾಖೆ ಹೆಚ್ಚುವರಿ ಆಯುಕ್ತ ಮಲ್ಲಿಕಾರ್ಜುನ ತಿಳಿಸಿದ್ದಾರೆ.

ಈ ಬಗ್ಗೆ 2022ರ ಫೆಬ್ರವರಿ 2ರಂದೇ ಕೇಂದ್ರ ಸರ್ಕಾರ ಅಧಿಸೂಚನೆ ಹೊರಡಿಸಿತ್ತು. ಆದರೆ ಇದು ರಾಜ್ಯದಲ್ಲಿ ಪರಿಣಾಮಕಾರಿಯಾಗಿ ಯೋಜನೆ ಜಾರಿಯಾಗಿರಲಿಲ್ಲ.

ಇದೇ ವಿಚಾರ ಹೈಕೋರ್ಟ್ ಮೆಟ್ಟಿಲೇರಿದ್ದು, ಸೇಫ್ಟಿ ಹಾರ್ನೆಸ್ ಯೋಜನೆ ಅನುಷ್ಠಾನಕ್ಕೆ ಕೈಗೊಂಡಿರುವ ಕ್ರಮಗಳ ಕುರಿತು ವರದಿ ಸಲ್ಲಿಸಲು ಸಾರಿಗೆ ಇಲಾಖೆಗೆ ಕೋರ್ಟ್​​ ಕಾಲಾವಕಾಶ ಕೊಟ್ಟಿದೆ. ಈ ಹಿನ್ನೆಲೆಯಲ್ಲಿ ರಾಜ್ಯ ಸಾರಿಗೆ ಆಯುಕ್ತರು ಎಲ್ಲಾ ಆರ್​ಟಿಒಗಳಿಗೆ ಬೈಕ್​​ಗಳ ತಪಾಸಣೆ ಮಾಡುವಂತೆ ಸೂಚನೆ ನೀಡಿದ್ದಾರೆ.

LEAVE A REPLY

Please enter your comment!
Please enter your name here