ಟೀಮ್ ಕಲ್ಲೇಗ ಟೈಗರ್ಸ್ ತಂಡದ ಕೆಲಸ ಸಮಾಜಕ್ಕೆ ನಿದರ್ಶನ-ಅಶೋಕ್ ರೈ
ಪುತ್ತೂರು: ಒಬ್ಬ ಮನುಷ್ಯ ಸತ್ತಾಗ ಕೆಲವೇ ದಿನಗಳಲ್ಲಿ ಅವರನ್ನು ಮರೆಯುವ ಕಾಲ ಇವತ್ತು ಇದೆ. ಆದರೆ ಗೆಳೆಯನ ಹೆಸರಿನಲ್ಲಿ ಸಮಾಜಕ್ಕೆ ಪೂರಕವಾದ , ನೆನಪಿನಲ್ಲಿ ಉಳಿಯುವಂತಹ ಕೆಲಸವನ್ನು ಟೀಮ್ ಕಲ್ಲೇಗ ಟೈಗರ್ಸ್ ತಂಡದವರು ಮಾಡುತ್ತಿದ್ದಾರೆ. ಇಂತಹ ಕೆಲಸಗಳನ್ನು ಮಾಡುವ ಮೂಲಕ ಸಮಾಜಕ್ಕೆ ನಿದರ್ಶನರಾಗಬೇಕು ಎಂದು ಶಾಸಕ ಅಶೋಕ್ ಕುಮಾರ್ ರೈ ಹೇಳಿದರು.
ಅಕ್ಷಯ್ ಕಲ್ಲೇಗ ಜನ್ಮದಿನದ ಪ್ರಯುಕ್ತ ಟೀಮ್ ಕಲ್ಲೇಗ ಟೈಗರ್ಸ್ ತಂಡದ ವತಿಯಿಂದ ಮಂಗಳೂರು ಅತ್ತಾವರದ ಕೆಎಂಸಿ ಆಸ್ಪತ್ರೆಯ ಸಹಯೋಗದಲ್ಲಿ ಕಲ್ಲೇಗ ಭಾರತ್ ಮಾತಾ ಸಮುದಾಯ ಭವನದಲ್ಲಿ ನಡೆದ ಬೃಹತ್ ರಕ್ತದಾನ ಶಿಬಿರ ಮತ್ತು ಬಡ ಕುಟುಂಬವೊಂದಕ್ಕೆ ನೂತನ ಮನೆ ನಿರ್ಮಾಣ ವಾಗ್ದಾನದ ಸಭಾ ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿ ಶಾಸಕರು ಮಾತನಾಡಿದರು. ಅಕ್ಷಯ್ ಕಲ್ಲೇಗರವರು ಗೆಳೆಯರನ್ನು ಸೇರಿಸಿಕೊಂಡು ಸಮಾಜಮುಖಿ ಕೆಲಸವನ್ನು ಮಾಡಿಕೊಂಡು ಬಂದಿದ್ದರು. ಇವತ್ತು ಅಕ್ಷಯ ಕಲ್ಲೇಗರವರ ಗೆಳೆಯರು ಸೇರಿ ಒಳ್ಳೆಯ ಕಾರ್ಯಕ್ರಮ ಆಯೋಜನೆ ಮಾಡಿದ್ದಾರೆ. ನಾನು ಕೂಡ ಟ್ರಸ್ಟ್ ಮುಖಾಂತರ ಮನೆ ಕಟ್ಟಲು ಹಲವರಿಗೆ ಸಹಾಯ ಮಾಡಿದ್ದೇನೆ ಎಂದರು. ನಾವು ಜಾತಿ ಮತ ಭೇಧವಿಲ್ಲದೆ ರಕ್ತದಾನ ಮಾಡುತ್ತಿದ್ದೇವೆ. ನಮಗೆ ತುರ್ತಾಗಿ ರಕ್ತ ಬೇಕಿದ್ದರೆ ನಾವು ಜಾತಿ ಮತ ನೋಡುವುದಿಲ್ಲ. ರಕ್ತಕ್ಕೆ ಜಾತಿ ಇಲ್ಲ ಎಂದರು. ನಾವು ಒಳ್ಳೆಯ ಕೆಲಸವನ್ನು ಮಾಡುವ ಅವಶ್ಯಕತೆ ಇದೆ. ಬಡ ಮಹಿಳೆಗೆ ಮನೆ ಮಾಡುವ ಶಕ್ತಿ ಇಲ್ಲ. ಅಕ್ಷಯ್ ಕಲ್ಲೇಗ ಟೀಮ್ ಮಹಿಳೆಗೆ ಶಕ್ತಿ ತುಂಬುವ ಕೆಲಸ ಮಾಡಿದೆ. ನಾನು ಶಾಸಕರ ನೆಲೆಯಲ್ಲಿ 1.25 ಲಕ್ಷ ರೂ. ಕೊಡುವ ಕೆಲಸ ಮಾಡುತ್ತೇನೆ. ಇದಕ್ಕೆ ಅನುಮೋದನೆ ನೀಡುತ್ತೇನೆ. ನಮಗೂ ಜವಾಬ್ದಾರಿ ಇದೆ. ಶಾಸಕರ ನಿಧಿಯಿಂದ ಹಣ ನೀಡುವ ಕೆಲಸ ಮಾಡುತ್ತೇನೆ ಎಂದರು. ಪುತ್ತೂರಿನ ಯುವಕರು ಸಾಕಷ್ಟು ರಕ್ತದಾನ ಮಾಡುತ್ತಾರೆ. ನಮ್ಮ ಯುವಕರಿಗೆ ರಕ್ತ ಬೇಕಾದಾಗ ಆದ್ಯತೆಯ ನೆಲೆಯಲ್ಲಿ ರಕ್ತದ ಅವಶ್ಯಕತೆ ಮಾಡಿ ಎಂದು ಕೆಎಂಸಿ ಆಸ್ಪತ್ರೆಯ ವೈದ್ಯರಲ್ಲಿ ವಿನಂತಿಸಿದರು.
ಕಾಂಗ್ರೆಸ್ ಮುಖಂಡ ನೆಲ್ಲಿಕಟ್ಟೆ ಜಗದೀಶ್ ಶೆಟ್ಟಿ ಮಾತನಾಡಿ ಯಾರ ಆಯುಷ್ಯ ಎಷ್ಟು ಇದೆ ಅನ್ನುವುದು ಗೊತ್ತಿಲ್ಲ. ಆದ್ದರಿಂದ ನಾವು ಹೋಗುವಂತಹ ದಾರಿ, ಇಡುವಂತಹ ಹೆಜ್ಜೆ ನಾಳೆಯ ದಿನ ದಿನ ನನ್ನನ್ನು ನೆನಪಿಸುವಂತಿರಬೇಕು. ಆ ರೀತಿ ಜೀವನ ಮಾಡಿದರೆ ತನ್ನ ಕೊನೆಯ ನಂತರವೂ ಜನರು ನಮ್ಮನ್ನು ಹೃದಯಲ್ಲಿಟ್ಟು ನೋಡುತ್ತಾರೆ. ನಿಮ್ಮ ಎಲ್ಲಾ ಕಾರ್ಯಗಳಿಗೂ ನಾನು ಸಹಕಾರ ನೀಡುತ್ತೇನೆ ಎಂದರು.
ಕಹಳೆ ನ್ಯೂಸ್ ಸಂಪಾದಕ ಶ್ಯಾಮ್ ಸುದರ್ಶನ್ ಮಾತನಾಡಿ ಅಕ್ಷಯ್‌ರವರ ಜನ್ಮದಿನದ ನೆನಪಿನಲ್ಲಿ ರಕ್ತದಾನ ಮಾಡುವ ಮೂಲಕ ಯುವಕರ ತಂಡ ಸಮಾಜಕ್ಕೆ ಒಳ್ಳೆಯ ಸಂದೇಶ ಕೊಡುವ ಕೆಲಸ ಮಾಡಿದ್ದಾರೆ. ಅಲ್ಲದೆ ಅಶಕ್ತರಿಗೆ ಮನೆ ನಿರ್ಮಾಣದ ವಾಗ್ದಾನ ಮಾಡುವ ಮೂಲಕ ಮಾರ್ಗದರ್ಶನ ಕೊಡುವಂತಹ ಕೆಲಸ ತಂಡ ಮಾಡಿದೆ ಎಂದು ಹೇಳಿ ಅಭಿನಂದನೆ ಸಲ್ಲಿಸಿದರು. ಅಕ್ಷಯ್ ಅವರ ಸಾವಿಗೆ ಕಾರಣರಾದವರಿಗೆ ಕಾನೂನಿನ ಮೂಲಕ ತಕ್ಕಶಿಕ್ಷೆ ಆಗುವಂತಹ ಕೆಲಸ ಯುವಕರು ಮಾಡುತ್ತಿದ್ದಾರೆ ಎಂದರು. ಅಕ್ಷಯ್ ಕಲ್ಲೇಗರವರನ್ನು ಘೋರ ಹತ್ಯೆ ಮಾಡಿದವರಿಗೆ ಕಾನೂನಿನಲ್ಲಿ ಶಿಕ್ಷೆ ಆಗಿಯೇ ಆಗುತ್ತದೆ. ನಿಮ್ಮ ಜೊತೆಗೆ ಪ್ರತೀ ಹಂತದಲ್ಲಿಯೂ ನಾವು ಇದ್ದೇವೆ ಎಂದು ಭರವಸೆ ನೀಡಿದರು.
ಬೆಂಗಳೂರು ಕಂಬಳ ಸಮಿತಿ ಕಾರ್ಯಾಧ್ಯಕ್ಷ ಮುರಳೀಧರ ರೈ ಮಠಂತಬೆಟ್ಟು ಮಾತನಾಡಿ ಅಕ್ಷಯ್ ಕಲ್ಲೇಗರವರ ಗೆಳೆಯರು ಅಭಿಮಾನಿಗಳು ಸೇರಿ ರಕ್ತದಾನ ಶಿಬಿರ, ಮನೆ ನಿರ್ಮಾಣದಂತಹ ಕೆಲಸಗಳನ್ನು ಮಾಡುತ್ತಿದ್ದೀರಿ ಈ ಮೂಲಕ ನೀವು ಸಮಾಜಕ್ಕೆ ಮಾದರಿಯಾಗಿದ್ದೀರಿ. ಮುಂದೆಯೂ ಇಂತಹ ಕೆಲಸಗಳನ್ನು ಮಾಡಿ ಇದರಿಂದ ಅಕ್ಷಯ್ ಕಲ್ಲೇಗರವರ ಆತ್ಮಕ್ಕೆ ತೃಪ್ತಿ ಸಿಗಲಿ ಎಂದು ಹೇಳಿದರು.
ಕೆಎಂಸಿ ಆಸ್ಪತ್ರೆಯ ವೈದ್ಯ ಡಾ.ಅಗಸ್ಟಿನ್ ಮಾತನಾಡಿ ರಕ್ತದಾನ ಮಾಡುವುದು ಮಾನವೀಯ ಕಾರ್ಯ ಎಂದು ಹೇಳಿ ರಕ್ತದಾನ ಮಾಡಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದರು. ಬನ್ನೂರು ರೈತರ ಸೇವಾ ಸಹಕಾರ ಸಂಘದ ಅಧ್ಯಕ್ಷ ಪಂಜಿಗುಡ್ಡೆ ಇಶ್ವರ ಭಟ್, ಸಿಝ್ಲರ್ ಗ್ರೂಫ್‌ನ ಪ್ರಸನ್ನ ಕುಮಾರ್ ಶೆಟ್ಟಿ, ಪುಡಾ ಸದಸ್ಯ ನಿಹಾಲ್ ಶೆಟ್ಟಿ, ಅಕ್ಷಯ್ ಕಲ್ಲೇಗರವರ ತಂದೆ ಚಂದ್ರಶೇಖರ ಗೌಡ, ರೋಶನ್ ರೆಬೆಲ್ಲೊ, ಅಭಿಶೇಕ್ ಶೆಟ್ಟಿ, ಪ್ರಜ್ವಲ್ ರೈ ಪಾತಾಜೆ, ದಿನೇಶ್, ಪ್ರಹ್ಲಾದ್ ಬೆಳ್ಳಿಪ್ಪಾಡಿ, ರಾಧಾಕೃಷ್ಣ ರೈ(ಪಿಲಿ ರಾಧಣ್ಣ), ಬಶೀರ್ ಪರ್ಲಡ್ಕ, ಕಾರ್ತಿಕ್ ರೈ ಬೆಳ್ಳಿಪ್ಪಾಡಿರವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ರಕ್ತದಾನ ಶಿಬಿರ:
ಕಾರ್ಯಕ್ರಮದ ಆರಂಭದಲ್ಲಿ ರಕ್ತದಾನ ಶಿಬಿರದ ಉದ್ಘಾಟನೆ ನಡೆಯಿತು. ಶಾಸಕ ಸಂಜೀವ ಮಠಂದೂರು ಶಿಬಿರ ಉದ್ಘಾಟಿಸಿ ಶುಭಹಾರೈಸಿದರು. ನಗರಸಭಾ ಮಾಜಿ ಅಧ್ಯಕ್ಷ ಜೀವಂಧರ್ ಜೈನ್, ಬಿಜೆಪಿ ಮುಖಂಡ ಪುರುಷೋತ್ತಮ ಗೌಡ ಮುಂಗ್ಲಿಮನೆ, ಅಕ್ಷಯ್ ಕಲ್ಲೇಗರವರ ತಂದೆ ಚಂದ್ರಶೇಖರ ಗೌಡ ಹಾಗೂ ಟೀಮ್ ಕಲ್ಲೇಗ ಟೈಗರ್ಸ್ ತಂಡದವರು ಉಪಸ್ಥಿತರಿದ್ದರು.
ಸನ್ಮಾನ:
ಸ್ವಿಮ್ಮಿಂಗ್‌ನಲ್ಲಿ ರಾಷ್ಟ್ರಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿ ಕರಾವಳಿಯ ಪ್ರಪ್ರಥಮ ಈಜು ಡೈವರ್ ಬಿರುದು ಪಡೆದ ರಾಷ್ಟ್ರಮಟ್ಟದ ಈಜುಪಟು ನಂದನ ನಾಯಕ್‌ರವರನ್ನು ಟೀಮ್ ಕಲ್ಲೇಗ ಟೈಗರ್ಸ್ ತಂಡದಿಂದ ಸನ್ಮಾನಿಸಲಾಯಿತು.
ರಕ್ತದಾನ ಶಿಬಿರದಲ್ಲಿ ವಿಶೇಷ ಸಾಧನೆ ಮಾಡಿದ ಅಲಿ ಪರ್ಲಡ್ಕರವರನ್ನು ಗೌರವಿಸಲಾಯಿತು. ಟೀಂ ಕಲ್ಲೇಗ ಟೈಗರ್ಸ್ ತಂಡಕ್ಕೆ ರಕ್ತದಾನ ಮಾಡಿದ ಸಲುವಾಗಿ ಕೆಎಂಸಿ ಆಸ್ಪತ್ರೆಯ ವೈದ್ಯ ಅಗಸ್ಟಿನ್ ಪ್ರಮಾಣ ಪತ್ರ ಹಸ್ತಾಂತರಿಸಿದರು. ಕಾರ್ಯಕ್ರಮ ಬಳಿಕ ಭೋಜನ ಕೂಟ ನಡೆಯಿತು. ಟೀಮ್ ಕಲ್ಲೇಗ ಟೈಗರ್ಸ್ ತಂಡದ ಸರ್ವೇಶ್ ಸ್ವಾಗತಿಸಿದರು. ಶಿಕ್ಷಕ ಬಾಲಕೃಷ್ಣ ಪೊರ್ದಾಳ್ ಕಾರ್ಯಕ್ರಮ ನಿರೂಪಿಸಿದರು.ಟೀಮ್ ಕಲ್ಲೇಗ ಟೈಗರ್ಸ್ ತಂಡದ ನಿಶಾಂತ್ ಬನ್ನೂರು ಕಾರ್ಯಕ್ರಮಕ್ಕೆ ಸಹಕರಿಸಿದರು.
ಮನೆ ನಿರ್ಮಾಣ ವಾಗ್ದಾನ:
ಅಕ್ಷಯ್ ಕಲ್ಲೇಗ ಜನ್ಮದಿನದ ಪ್ರಯುಕ್ತ ಬಡ ಮಹಿಳೆಗೆ ಮನೆ ನಿರ್ಮಾಣದ ವಾಗ್ದಾನವನ್ನು ಟೀಮ್ ಕಲ್ಲೇಗ ಟೈಗರ್ಸ್ ತಂಡದಿಂದ ಮಾಡಲಾಯಿತು. ಶಾಸಕ ಅಶೋಕ್ ಕುಮಾರ್ ರೈರವರು ಫಲಾನುಭವಿ ಬಡ ಮಹಿಳೆ ಸರೋಜ ಎಂಬವರಿಗೆ ಫಲಪುಷ್ಪ ನೀಡುವದರ ಮೂಲಕ ಮನೆ ನಿರ್ಮಾಣ ವಾಗ್ದಾನ ಮಾಡಲಾಯಿತು. ಟೀಮ್ ಕಲ್ಲೇಗ ಟೈಗರ್ಸ್ ತಂಡ ಹಾಗೂ ಅಕ್ಷಯ್ ಕಲ್ಲೇಗರವರ ತಂದೆ ಚಂದ್ರಶೇಖರ ಗೌಡ ಮತ್ತು ಕುಸುಮಾವತಿ ದಂಪತಿಯವರು ಉಪಸ್ಥಿತರಿದ್ದರು.
106 ಮಂದಿಯಿಂದ ರಕ್ತದಾನ
ಬೃಹತ್ ರಕ್ತದಾನ ಶಿಬಿರಕ್ಕೆ ಅಭೂತಪೂರ್ವ ಬೆಂಬಲ ಸಿಕ್ಕಿದ್ದು ಕಾಲೇಜು ವಿದ್ಯಾರ್ಥಿಗಳು ಸೇರಿದಂತೆ 106 ಮಂದಿ ರಕ್ತದಾನ ಶಿಬಿರದಲ್ಲಿ ಭಾಗವಹಿಸಿ ರಕ್ತದಾನ ಮಾಡಿದರು.