ಉಪ್ಪಿನಂಗಡಿ: ವ್ಯಕ್ತಿಯೋರ್ವರು ಹೃದಯಾಘಾತದಿಂದ ಮೃತಪಟ್ಟಿದ್ದು, ಈ ಪ್ರಕರಣಕ್ಕೆ ಸಂಬಂಧಿಸಿ ಜು.1ರಂದು ಅನುಷ್ಠಾನಗೊಂಡ ಹೊಸ ಕ್ರಿಮಿನಲ್ ಕಾನೂನಾದ ಕಲಂ: 194 ಭಾರತೀಯ ನಾಗರಿಕ ಸುರಕ್ಷಾ ಸಂಹಿತೆಯಡಿ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕೊಣಾಲು ಗ್ರಾಮದ ಆರ್ಲದ ಅರುಣ್ ಕುಮಾರ್ ಅವರ ತಂದೆ ಪದ್ಮರಾಜ್ (55) ಹೃದಯಾಘಾತದಿಂದ ಮೃತಪಟ್ಟ ವ್ಯಕ್ತಿ. ಇವರು ಅಲ್ಲಲ್ಲಿ ರಬ್ಬರ್ ಟ್ಯಾಪಿಂಗ್ ಕೆಲಸ ಮಾಡಿಕೊಂಡಿದ್ದು, ಪ್ರಸ್ತುತ ಸುಮಾರು ಎರಡು ತಿಂಗಳಿಂದ ಕೊಣಾಲು ಗ್ರಾಮದ ಬಸ್ತಿ ಎಂಬಲ್ಲಿ ಸುಮಂತ್ ಅವರ ರಬ್ಬರ್ ತೋಟವನ್ನು ವಾಸು ಎಂ.ಎನ್. ಎಂಬವರು ಲೀಸಿಗೆ ತೆಗೆದುಕೊಂಡಿದ್ದು, ಆ ರಬ್ಬರ್ ತೋಟದಲ್ಲಿ ಕೆಲಸ ಮಾಡಿಕೊಂಡಿದ್ದರು. ಜು.1ರಂದು ಬೆಳಗ್ಗೆ 6 ಗಂಟೆಗೆ ರಬ್ಬರ್ ತೋಟದಲ್ಲಿ ಟ್ಯಾಪಿಂಗ್ ಕೆಲಸಕ್ಕೆ ಪದ್ಮರಾಜ್ ಹೋಗಿದ್ದರು. ಬೆಳಗ್ಗೆ ಸುಮಾರು 10.45ಕ್ಕೆ ಅರುಣ್ ಕುಮಾರ್ ಅವರು ತಂದೆಯಾದ ಪದ್ಮರಾಜ್ ಅವರಿಗೆ ಕರೆ ಮಾಡಿದ್ದು, ಅವರು ಕರೆ ಸ್ವೀಕರಿಸಿರಲಿಲ್ಲ. ಬಳಿಕ ಅವರು ತನ್ನ ಸ್ನೇಹಿತ ಶಶಿಧರನ್ ಪಿಳ್ಳೆಗೆ ಕರೆ ಮಾಡಿ ತಂದೆಯನ್ನು ನೋಡಿ ಬರುವಂತೆ ತಿಳಿಸಿದ್ದರು. ಶಶಿಧರನ್ ಪಿಳ್ಳೆ ಅವರು ಪದ್ಮರಾಜ್ ಟ್ಯಾಪಿಂಗ್ ಮಾಡುತ್ತಿದ್ದ ಸ್ಥಳಕ್ಕೆ ಹೋಗಿ ಸುಮಾರು 11:15ಕ್ಕೆ ಅರುಣ್ ಕುಮಾರ್ ಅವರಿಗೆ ಕರೆ ಮಾಡಿ ರಬ್ಬರ್ ಟ್ಯಾಪಿಂಗ್ ಮಾಡುವ ಸ್ಥಳದಲ್ಲಿ ನಿನ್ನ ತಂದೆ ಬಿದ್ದುಕೊಂಡಿದ್ದಾರೆ ಎಂದು ತಿಳಿಸಿದ್ದರು. ಬಳಿಕ ಅರುಣ್ ಕುಮಾರ್ ಅವರು ಗೆಳೆಯ ವೈಶಾಕ್‌ರೊಂದಿಗೆ ಸ್ಥಳಕ್ಕೆ ತೆರಳಿ ನೋಡಿದಾಗ ಪದ್ಮರಾಜ್ ಮೃತಪಟ್ಟಿದ್ದರು. ಈ ಬಗ್ಗೆ ಉಪ್ಪಿನಂಗಡಿ ಪೊಲೀಸರಿಗೆ ದೂರು ನೀಡಿದ ಅರಣ್ ಕುಮಾರ್ ನನ್ನ ಬೆಳಗ್ಗೆ 6ರಿಂದ 11:15ರೊಳಗೆ ಹೃದಯಾಘಾತದಿಂದ ಮೃತಪಟ್ಟಿದ್ದಾರೆ ಎಂದು ಉಪ್ಪಿನಂಗಡಿ ಪೊಲೀಸರಿಗೆ ದೂರು ನೀಡಿದ್ದರು. ಈ ಬಗ್ಗೆ ಉಪ್ಪಿನಂಗಡಿ ಪೊಲೀಸರು ಹೊಸದಾಗಿ ಅನುಷ್ಠಾನಗೊಂಡ ಹೊಸ ಕ್ರಿಮಿನಲ್ ಕಾನೂನಾದ ಕಲಂ: 194 ಭಾರತೀಯ ನಾಗರಿಕ ಸುರಕ್ಷಾ ಸಂಹಿತದಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.