ಜಿಲ್ಲೆಯ ಗ್ರಾ.ಪಂ.ಗಳು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಸರಕಾರದ ಗಮನಕ್ಕೆ ತಂದು ಪರಿಹರಿಸಲಾಗುವುದು: ಸುಭಾಶ್ಚಂದ್ರ ಶೆಟ್ಟಿ
ವಿಟ್ಕ: ಪಂಚಾಯತ್ರಾಜ್ ಸಂಘಟಣೆ ದಕ್ಷಿಣ ಕನ್ನಡ ಜಿಲ್ಲಾ ಸಮಿತಿ ಸಭೆಯ ಜಿಲ್ಲಾ ಕಾಂಗ್ರೆಸ್ ಕಚೇರಿ ಸಭಾಂಗಣದಲ್ಲಿ ಜಿಲ್ಲಾಧ್ಯಕ್ಷ ಸುಭಾಶ್ಚಂದ್ರ ಶೆಟ್ಟಿಯವರ ಅಧ್ಯಕ್ಷತೆಯಲ್ಲಿ ಸಂಘಟನೆಯ ರೂಪುರೇಷೆ ಬಗ್ಗೆ ಸಭೆ ನಡೆಯಿತು.
ಬಳಿಕ ಜಿಲ್ಲಾಧ್ಯಕ್ಷ ಸುಭಾಶ್ಚಂದ್ರ ಶೆಟ್ಟಿಯವರು ಮಾತನಾಡಿ ಈಗಾಗಲೇ ಜಿಲ್ಲಾ ಸಮಾವೇಶದಲ್ಲಿ ನಿರ್ಧರಿಸಿದಂತೆ ಪಂಚಾಯತ್ ರಾಜ್ ಕಾರ್ಯಪಡೆ ರಚನೆ ಬಗ್ಗೆ ಜಿಲ್ಲೆಯ ಎಲ್ಲಾ ಗ್ರಾಮ ಪಂಚಾಯತ್ ವ್ಯಾಪ್ತಿಗೆ ಬೇಟಿ ನೀಡಿ ಆಯಾಯ ಗ್ರಾಮದ ಜಿಲ್ಲಾ, ತಾಲೂಕು ಹಾಗೂ ಗ್ರಾಮ ಪಂಚಾಯತ್ ಗಳ ಹಾಲಿ, ಮಾಜಿ ಸದಸ್ಯರುಗಳು ಮತ್ತು ಸ್ಪರ್ಧಿಸಿದ ಅಭ್ಯರ್ಥಿಗಳನ್ನೊಳಗೊಂಡ ಸಮಿತಿಯನ್ನು ರಚನೆ ಮಾಡಿ ಪಂಚಾಯತ್ ರಾಜ್ ವ್ಯವಸ್ಥೆಯನ್ನು ಬಲಪಡಿಸುವುವದರ ಜೊತೆಗೆ ಅವುಗಳಲ್ಲಿ ದುಡಿದವರನ್ನು ಸಕ್ರಿಯಗೊಳಿಸುವ ಉದ್ದೇಶದಿಂದ ಅವರೆಲ್ಲರ ಮಾಹಿತಿ ಸಂಗ್ರಹ ಮಾಡಿ ಡಿಜಿಟಲ್ ದಾಖಲಾತಿ ಮಾಡುವುದೆಂದು ಸಭೆಯಲ್ಲಿ ನಿರ್ಣಯಿಸಲಾಯಿತು.
ಪ್ರತೀ ಗ್ರಾಮದಿಂದ ಓರ್ವ ಹಾಗೂ ಜಿಲ್ಲಾ ಪಂಚಾಯತ್ ಕ್ಷೇತ್ರದಿಂದ ಓರ್ವ ಸಕ್ರಿಯ ಸದಸ್ಯರನ್ನು ಬ್ಲಾಕ್ ಮತ್ತು ಜಿಲ್ಲಾ ಸಮಿತಿಗೆ ಆಯ್ಕೆ ಮಾಡುವುದೆಂದು ಸಭೆಯಲ್ಲಿ ನಿರ್ಣಯಿಸಲಾಯಿತು. ಮುಂದಿನ ಹಂತದಲ್ಲಿ ಈ ಸಮಿತಿಯ ಸದಸ್ಯರುಗಳನ್ನು ಜಿಲ್ಲಾ ಪಂಚಾಯತ್ ಕ್ಷೇತ್ರವಾರು ಸಭೆಗಳನ್ನು ನಡೆಸಿ ತರಬೇತಿ ನೀಡುವುದರ ಜೊತೆಗೆ ಸಂವಾದ ಕಾರ್ಯಕ್ರಮಗಳನ್ನು ಆಯೋಜಿಸಲಾಗುವುದು.
ಸ್ಥಳೀಯ ಸಂಸ್ಥೆಗಳಲ್ಲಿ ಈಗಾಗಲೇ ಸಮಾವೇಶದಲ್ಲಿ ಮಂಡಿಸಿರುವ ಕೆಲವು ವಿಚಾರಗಳು ಅನುಷ್ಟಾನವಾಗುತ್ತಿದ್ದು ಅದಕ್ಕೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವರಾದ ಶ್ರೀಪ್ರಿಯಾಂಕ್ ಖರ್ಗೆಯವರನ್ನು ಹಾಗೂ ಅದಕ್ಕೆ ಸಹಕರಿಸಿದ ವಿಧಾನ ಪರಿಷತ್ ಸದಸ್ಯರಾದ ಮಂಜುನಾಥ ಭಂಡಾರಿಯವರನ್ನು ಅಭಿನಂದಿಸಿ ಇನ್ನು ಕೆಲವು ಗ್ರಾಮ ಪಂಚಾಯತ್ ಎದುರಿಸುತ್ತಿರುವ ನಮೂನೆ 9 & 11, ಜಿಲ್ಲೆಯಲ್ಲಿ ಕೊರತೆಯಿರುವ ಪಿಡಿಒ ಹಾಗೂ ಇತರ ಸಿಬ್ಬಂದಿಗಳ ಬಗ್ಗೆ ಇತ್ಯಾದಿ ಗಂಭೀರ ಸಮಸ್ಯೆಗಳನ್ನು ಪಟ್ಟಿ ಮಾಡಿ ಅಧಿವೇಶನ ಸಂದರ್ಭದಲ್ಲಿ ನಿಯೋಗ ಬೆಂಗಳೂರಿಗೆ ತೆರಳಿ ಜಿಲ್ಲೆಯ ಉಸ್ತುವಾರಿ ಸಚಿವರು, ಸಭಾಧ್ಯಕ್ಷರು ಹಾಗೂ ಶಾಸಕರುಗಳ ಸಹಕಾರದೊಂದಿಗೆ ಸಚಿವರ ಮೂಲಕ ಸರಕಾರದ ಗಮನ ಸೆಳೆದು ಸಮಸ್ಯೆಗಳಿಗೆ ಪರಿಹಾರ ದೊರಕಿಸುವ ಬಗ್ಗೆ ಪ್ರಯತ್ನ ಮಾಡುವುದೆಂದು ಸಭೆಯಲ್ಲಿ ತೀರ್ಮಾನಿಸಲಾಯಿತು ಎಂದವರು ತಿಳಿಸಿದರು.