ಪುತ್ತೂರು: ಆಲಡ್ಕ ಶ್ರೀ ಸದಾಶಿವ ದೇವಸ್ಥಾನದ ಕಾಮಗಾರಿ ಕುರಿತು ದೂರು ನೀಡಿದ ಹಿನ್ನೆಲೆಯಲ್ಲಿ ವಾಟ್ಸಪ್ ಗ್ರೂಪ್‌ನಲ್ಲಿ ಅವಹೇಳನಕಾರಿ ಹೇಳಿಕೆ ನೀಡುವ ಮೂಲಕ ದೇವಳದ ಪಾವಿತ್ರ್ಯತೆಗೆ ದಕ್ಕೆ ತರಲು ಪ್ರಯತ್ನಿಸುವುದು ಅಕ್ಷಮ್ಯ ಅಪರಾಧವಾಗಿದೆ. ಒಂದು ವೇಳೆ ದೇವಸ್ಥಾನದ ಕಾಮಗಾರಿಗೆ ಯಾರಾದರು ತಡೆ ತರಲು ಬಂದಿದ್ದರೆ ಸೂಕ್ತ ದಾಖಲೆಗಳನ್ನು ಬಿಡುಗಡೆ ಮಾಡಬೇಕಾಗುತ್ತದೆ. ತಪ್ಪಿದಲ್ಲಿ ಅವರು ಬಹಿರಂಗವಾಗಿ ಕ್ಷಮೆಯಾಚಿಸಬೇಕೆಂದು ಆಲಡ್ಕ ಶ್ರೀ ಸದಾಶಿವ ದೇವಸ್ಥಾನದ ಮಾಜಿ ಆಡಳಿತ ಮೊಕ್ತೇಸರ ಚಂದ್ರಹಾರ ರೈ ಬಿ ಅವರು ಸವಾಲು ಹಾಕಿದ್ದಾರೆ.
ಪತ್ರಿಕಾಗೋಷ್ಟಿಯಲ್ಲಿ ಅವರು ಮಾತನಾಡಿ ಆಲಡ್ಕ ಶ್ರೀ ಸದಾಶಿವ ದೇವಸ್ಥಾನದ 2023-24ನೇ ಸಾಲಿನ ಜಾತ್ರೋತ್ಸವವು ಭಕ್ತಾದಿಗಳ ಸಹಕಾರದೊಂದಿಗೆ ಅದ್ದೂರಿಯಾಗಿ ನಡೆದು ರೂ. 20ಲಕ್ಷಕ್ಕೂ ಮಿಕ್ಕಿ ಉಳಿತಾಯವಾಗಿರುತ್ತದೆ. ಉಳಿಕೆ ಮೊತ್ತದಲ್ಲಿ ದೇವಸ್ಥಾನದ ಅಭಿವೃದ್ಧಿ ಕೆಲಸಗಳಿಗೆ ವಿನಿಯೋಗಿಸುವ ಕುರಿತು ತೀರ್ಮಾನ ನಡೆದು ಕಾಮಗಾರಿಯನ್ನು ಆರಂಭಿಸಲಾಗಿತ್ತು. ಪ್ರಸ್ತುತ ಸಮಯದಲ್ಲಿ ಕೆದಂಬಾಡಿ ಪಂಚಾಯತ್‌ಗೆ ಈ ಬಗ್ಗೆ ಯಾರೋ ದೂರು ನೀಡಿ ಕಾಮಗಾರಿಯನ್ನು ನಿಲ್ಲಿಸಲು ಹುನ್ನಾರ ನಡೆಸಿದ್ದಾರೆಂದು ಪ್ರಚಾರವಾಗಿತ್ತು. ಮುಂದಕ್ಕೆ ಪಂಚಾಯತ್‌ನವರು ಕೊಟ್ಟ ಅಶ್ವಾಸನೆಯ ಮೇರೆಗೆ ಕಾಮಗಾರಿಯನ್ನು ಸಾಂಗವಾಗಿ ನೆರವೇರಿಸಲಾಗಿದೆ. ಆದರೆ ಪಂಚಾಯತ್‌ಗೆ ದೂರು ಕೊಟ್ಟವರ ಬಗ್ಗೆ ಜನರು ಆಕ್ರೋಶಿತರಾಗಿ ವಾಟ್ಸಪ್ ಗ್ರೂಪ್‌ನಲ್ಲಿ ಅನೇಕ ಅವಹೇಳನಕಾರಿ ಹೇಳಿಕೆಗಳು ಹರಿದಾಡುತ್ತಿದ್ದು, ಇದರ ಸತ್ಯಾಸತ್ಯತೆಯನ್ನು ಕಾಣುವ ನಿಟ್ಟಿನಲ್ಲಿ ಪಂಚಾಯತ್‌ನಲ್ಲಿ ಈ ಬಗ್ಗೆ ಲಿಖಿತ ಮಾಹಿತಿ ಕೇಳಿದಾಗ ಯಾರು ಕೂಡ ದೇವಸ್ಥಾನದ ಕಾಮಗಾರಿಗಳ ಬಗ್ಗೆ ದೂರು ನೀಡಿಲ್ಲ ಎಂದು ದಾಖಲೆ ಒದಗಿಸಿದ್ದಾರೆ. ಹಾಗಾಗಿ ದೇವಳದ ಕಾಮಗಾರಿಗೆ ಯಾರಾದರೂ ತಡೆ ತರಲು ಬಂದಿದ್ದರೆ ಅವರು ಸೂಕ್ತ ದಾಖಲೆಗಳನ್ನು ಬಿಡುಗಡೆ ಮಾಡಲಿ. ಇಲ್ಲವಾದಲ್ಲಿ ಅವರು ಬಹಿರಂಗವಾಗಿ ಕ್ಷಮೆಯಾಚಿಸಲಿ ಎಂದು ಸವಾಲು ಹಾಕಿದರು. ಮುಂದಕ್ಕೆ ಸುಳ್ಳು ಸಂದೇಶಗಳ ಬಗ್ಗೆ ಕಾನೂನು ಹೋರಾಟವನ್ನು ಕೂಡಾ ನಾವು ನಡೆಸಲಿದ್ದೇವೆ ಎಂದು ಎಚ್ಚರಿಕೆ ನೀಡಿದರು. ಪತ್ರಿಕಾಗೋಷ್ಟಿಯಲ್ಲಿ ರಘುನಾಥ ರೈ ಉಪಸ್ಥಿತರಿದ್ದರು.