ಪುತ್ತೂರು: ದೊಡ್ಡದಾದ ಅಪಾಯಕಾರಿ ಮರವೊಂದು ಹತ್ತಿರದಲ್ಲೇ ಹಾದು ಹೋಗುತ್ತಿದ್ದ ವಿದ್ಯುತ್ ತಂತಿಗಳ ಮೇಲೆ ವಾಲಿದ ಹಿನ್ನೆಲೆಯಲ್ಲಿ, ಮೆಸ್ಕಾಂ ಇಲಾಖೆಯವರು ತಕ್ಷಣ ಎಚ್ಚೆತ್ತು ಅಪಾಯಕಾರಿ ಮರವನ್ನು ತೆರವುಗೊಳಿಸಿದ ಪರಿಣಾಮ ಸಂಭಾವ್ಯ ಆಗಬಹುದಾದ ಭಾರೀ ಅನಾಹುತವೊಂದು ಸ್ವಲ್ಪದರಲ್ಲೇ ತಪ್ಪಿದೆ.
ನಗರಸಭಾ ವ್ಯಾಪ್ತಿಯ ಮುಕ್ರಂಪಾಡಿ-ಮೊಟ್ಟೆತ್ತಡ್ಕ ತಿರುವಿನ ಸ್ವಲ್ಪ ಎದುರಿನ ಮತ್ತೊಂದು ತಿರುವಿನ ರಸ್ತೆ ಬದಿಯಲ್ಲಿ ಈ ದೃಶ್ಯ ಕಂಡು ಬಂದಿದ್ದು ಮೆಸ್ಕಾಂ ಇಲಾಖೆಯವರ ಸಮಯಪ್ರಜ್ಞೆಯಿಂದ ಅನಾಹುತವೊಂದು ತಪ್ಪಿದೆ. ಕಳೆದ ಕೆಲವು ದಿನಗಳಿಂದ ಜೋರಾಗಿ ಬೀಸುತ್ತಿರುವ ಗಾಳಿ-ಮಳೆಯಿಂದ ಸದ್ರಿ ಮರವು ವಿದ್ಯುತ್ ತಂತಿಗಳ ಮೇಲೆ ವಾಲಿ ನಿಂತಿತ್ತು. ಒಂದು ವೇಳೆ ಮೆಸ್ಕಾಂ ಇಲಾಖೆ ಎಚ್ಚೆತ್ತುಕೊಳ್ಳದಿದ್ದರೆ ಮರವು ವಿದ್ಯುತ್ ತಂತಿಗಳ ಮೇಲೆ ಬಿದ್ದು ಹತ್ತಾರು ವಿದ್ಯುತ್ ಕಂಬಗಳು ಕಡಿದು ನೆಲಸಮವಾಗುವ ಮೂಲಕ ಸದ್ರಿ ಪ್ರದೇಶವು ವಿದ್ಯುತ್ ಇಲ್ಲದೆ ಕತ್ತಲೆಯನ್ನು ಆವರಿಸಿಕೊಳ್ಳುವಂತಿತ್ತು.
ಪರಿಸ್ಥಿತಿಯನ್ನು ಗಮನಿಸಿದ ಮೆಸ್ಕಾಂ ಇಲಾಖೆ ಕ್ರೇನ್ ಮುಖೇನ ಅಪಾಯಕಾರಿ ಮರವನ್ನು ತೆರವುಗೊಳಿಸಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಲಾಯಿತು ಅಲ್ಲದೆ ಇಲಾಖೆಗೆ ಅಪಾರ ನಷ್ಟವುಂಟಾಗುವುದು ಸ್ವಲ್ಪದರಲ್ಲೇ ತಪ್ಪಿ ಹೋಗಿದೆ ಎನ್ನಬಹುದು. ಅಪಾಯಕಾರಿ ಮರ ತೆರವುಗೊಳಿಸುವ ಸಂದರ್ಭ ರಸ್ತೆಯ ಎರಡೂ ಇಕ್ಕೆಲಗಳಲ್ಲಿ ವಾಹನ ಸಂಚಾರವನ್ನು ಸ್ವಲ್ಪ ಸಮಯ ನಿರ್ಬಂಧಿಸಲಾಗಿತ್ತು.