ಬಿಜೆಪಿಯಿಂದ ತೋರಿಕೆಯ ರಾಜಕಾರಣ – ಅಮಳ ರಾಮಚಂದ್ರ

0

ಪುತ್ತೂರು: ಡೆಲ್ಲಿಯಿಂದ ತೊಡಗಿ ಹಳ್ಳಿಯವರೆಗೆ, ಪ್ರಧಾನಮಂತ್ರಿ ಮೋದಿಯವರಿಂದ ತೊಡಗಿ ರಾಜ್ಯ ಬಿಜೆಪಿ ನಾಯಕರವರೆಗೆ ಜನಪರವಾದ ಯಾವ ಕಾಳಜಿಯೂ ಇಲ್ಲ, ಅವರು ಮಾಡುವುದು ಕೇವಲ ತೋರಿಕೆಯ ರಾಜಕಾರಣ ಮಾತ್ರ. ಅಭಿವೃದ್ಧಿ ಕೆಲಸಗಳಿಂದ ಹಿಡಿದು ಪ್ರತಿಭಟನೆಯವರೆಗೆ ಅವರು ನಡೆಸುವ ಎಲ್ಲಾ ಕಾರ್ಯಕ್ರಮಗಳು ಹಣ ಮಾಡುವ ಅಥವಾ ಜನರನ್ನು ತಪ್ಪು ದಾರಿಗೆಳೆಯುವ, ತಪ್ಪು ಮಾಹಿತಿಯನ್ನು ನೀಡಿ ಜನರನ್ನು ವಂಚಿಸಿ ಪ್ರಚಾರವನ್ನು ಪಡೆಯುವ ಉದ್ದೇಶವನ್ನು ಹೊಂದಿದೆ ಎಂದು ಕಾಂಗ್ರೆಸ್ ವಕ್ತಾರ ಅಮಳ ರಾಮಚಂದ್ರ ಪತ್ರಿಕಾಗೋಷ್ಟಿಯಲ್ಲಿ ಆರೋಪಿಸಿದ್ದಾರೆ.


ಬಿಜೆಪಿ ಸುಳ್ಳು ಮತ್ತು ಅಪಪ್ರಚಾರದ ಮೂಲಕ ವಿರೋಧ ಪಕ್ಷಗಳನ್ನು ಅವಹೇಳನ ಮಾಡಿ ಆ ಮೂಲಕ ಅಧಿಕಾರಕ್ಕೆ ಏರುವ, ಕಳಪೆ ಕಾಮಗಾರಿಗಳನ್ನು ನಡೆಸಿ ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದೇವೆ ಎಂದು ಬಿಂಬಿಸುವ ಪ್ರಯತ್ನಗಳನ್ನು ಮಾಡುತ್ತರಲ್ಲದೆ ಅವರಿಗೆ ಜನರ ಬಗ್ಗೆ ಯಾವ ಕಾಳಜಿಯೂ ಇಲ್ಲ ಎನ್ನುವುದನ್ನು ಇತ್ತೀಚೆಗೆ ನಡೆದ ಕೆಲವು ಘಟನೆಗಳು ಕಾಣುತ್ತಿದೆ. ಹಾಲಿನ ದರ ಏರಿಕೆಯಾಗಿದೆ ಎಂದು ಬಿಜೆಪಿ ಪ್ರತಿಭಟನೆ ಮಾಡುತ್ತಿದೆ. ಆದರೆ ಅಸಲಿಗೆ ಹಾಲಿನಲ್ಲಿ ಯಾವ ಏರಿಕೆ ಕೂಡ ಆಗಲಿಲ್ಲ.


ಹಾಲಿನ ದರ ಏರಿಕೆಯಾಗಿಲ್ಲ:
ಹಾಲಿನ ಪ್ಯಾಕೆಟ್ ನಲ್ಲಿ ನೀಡುವ ಹೆಚ್ಚುವರಿ ಹಾಲಿಗೆ ಅನುಗುಣವಾಗಿ ಹಾಲಿನ ಪ್ಯಾಕೆಟ್ ಬೆಲೆ ಏರಿಕೆಯಾಗಿದಯೇ ಹೊರತು ಹಾಲಿನ ದರ ಏರಿಕೆಯಾಗಲೇ ಇಲ್ಲ. ಉತ್ಪಾದನೆಯಾದ ಮಿಗತೆ ಹಾಲನ್ನು ರೈತ ಪರವಾಗಿ ವಿಲೇವಾರಿ ಮಾಡಬೇಕೆಂಬ ಉದ್ದೇಶದಿಂದ ಹೆಚ್ಚುವರಿ ಹಾಲನ್ನು ಪ್ರತಿ ಪ್ಯಾಕೆಟ್‌ನಲ್ಲಿ 50 ಎಮ್‌ಎಲ್ ಹೆಚ್ಚು ನೀಡಿ ಆ ಪ್ರಮಾಣಕ್ಕೆ ಅನುಗುಣವಾಗಿಯೇ 2 ರೂಪಾಯಿಗಳನ್ನು ಏರಿಸಿ ಮಾರಾಟ ಮಾಡಲಾಗುತ್ತಿದೆ. ರಾಜ್ಯ ಸರಕಾರದ ಈ ಕ್ರಮದ ಹಿಂದೆ ಕರ್ನಾಟಕ ರಾಜ್ಯದ ಎಲ್ಲಾ ಹೈನುಗಾರ ರೈತರಿಗೆ ಅನುಕೂಲವಾಗಬೇಕೆಂಬ ಉದ್ದೇಶವಿದೆಯೇ ಹೊರತು ಇದರಿಂದ ರಾಜ್ಯ ಸರ್ಕಾರಕ್ಕಾಗಲೀ ಕೆಎಂಎಫ್‌ಗಾಗಲೀ ಯಾವುದೇ ಹಣಕಾಸಿನ ಹೆಚ್ಚುವರಿ ಆದಾಯ ಇರುವುದಿಲ್ಲ. ರೈತರ ಹಿತದೃಷ್ಟಿಯಿಂದ ರಾಜ್ಯ ಸರಕಾರ ತೆಗೆದುಕೊಂಡ ಈ ಕ್ರಮವನ್ನು ಕೇವಲ ವಿರೋಧಕ್ಕಾಗಿ ವಿರೋಧಿಸುವ ರಾಜ್ಯ ಬಿಜೆಪಿಯ ಕ್ರಮ ಅದು ರೈತ ವಿರೋಧಿಯಾಗಿದೆ ಎಂದು ಅಮಳ ರಾಮಚಂದ್ರ ಹೇಳಿದರು.


ತೈಲ ಬೆಲೆ ಪ್ರತಿಭಟನೆ ಬಿಜೆಪಿಯ ನಾಟಕ:
ತೈಲ ಬೆಲೆ ಏರಿಕೆ ಎಂದು ಪ್ರತಿಭಟನೆಗೆ ಕುಳಿತ ಬಿಜೆಪಿಯವರಿಗೆ ನಿಜವಾಗಿಯೂ ಜನರ ಬಗ್ಗೆ ಕಾಳಜಿ ಇರುತ್ತಿದ್ದರೆ ಅವರು ಈ ಹಿಂದೆಯೇ, 70 ರೂಪಾಯಿಯಲ್ಲಿದ್ದ ಪೆಟ್ರೋಲ್ ದರವನ್ನು ಕೇಂದ್ರದ ಬಿಜೆಪಿ ಸರಕಾರ 110 ರೂಪಾಯಿಗಳ ತನಕ ಏರಿಸಿದ ಸಂದರ್ಭದಲ್ಲಿ ಪ್ರತಿಭಟನೆ ನಡೆಸಬೇಕಾಗಿತ್ತು. ಅದಲ್ಲದಿದ್ದರೆ ಕನಿಷ್ಟ ಆ ಸಂದರ್ಭದಲ್ಲಿ ನಿಯೋಗದೊಂದಿಗೆ ದೆಹಲಿಗೆ ತೆರಳಿ ಪ್ರಧಾನಮಂತ್ರಿಗಳಿಗೆ ದರ ಏರಿಸದಂತೆ ಮನವಿಯನ್ನಾದರೂ ಮಾಡಬಹುದಿತ್ತು. ಆದರೆ ಹಾಗೆ ಮಾಡುವ ಯಾವ ಮನಸ್ಸನ್ನೂ ಮಾಡದ ಕರ್ನಾಟಕ ಬಿಜೆಪಿಯವರು ಈಗ ರಾಜ್ಯ ಸರ್ಕಾರ ಅನಿವಾರ್ಯವಾಗಿ ಮೂರು ರೂಪಾಯಿಗಳ ಬೆಲೆ ಏರಿಕೆ ಮಾಡಿದಾಗ ಪ್ರತಿಭಟನೆ ನಡೆಸುವುದು ಯಾಕೆ ? ಮನಮೋಹನ್ ಸಿಂಗ್ ನೇತೃತ್ವದ ಕಾಂಗ್ರೆಸ್ ಸರಕಾರದ ಅವಧಿಯಲ್ಲಿ ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾತೈಲದ ಬೆಲೆ 150 ಡಾಲರ್ ತಲುಪಿದ್ದಾಗ ಭಾರತದಲ್ಲಿ ಕೇವಲ 70 ರೂಪಾಯಿಗೆ ದೊರೆಯುತ್ತಿದ್ದ 1 ಲೀಟರ್ ಪೆಟ್ರೋಲ್ 2014ರಲ್ಲಿ ಮೋದಿಯವರು ಪ್ರಧಾನ ಮಂತ್ರಿಯಾದ ನಂತರ ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬೆಲೆ 40 ಡಾಲರ್ ಗೆ ಕುಸಿದಿದ್ದಾಗಲೂ ಏರಿಕೆ ಆಗುತ್ತಲೇ ಹೋಗಿ ಲೀಟರ್ ಪೆಟ್ರೋಲಿಗೆ 110 ರೂಪಾಯಿ ಆದಾಗಲೂ ಬಾಯಿ ಬಿಡದ ಬಿಜೆಪಿಯವರಿಗೆ 2020ರ ಬಜೆಟ್‌ನಲ್ಲಿ ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರಕಾರ 3 ರೂಪಾಯಿ ತೈಲ ಬೆಲೆ ಏರಿಕೆ ಮಾಡಿದಾಗ ಬಾಯಿ ಮುಚ್ಚಿ ಕುಳಿತ ಬಿಜೆಪಿಯವರಿಗೆ, ಅಡಿಗೆ ಅನಿಲದ ಸಿಲಿಂಡರ್ ಬೆಲೆ 600ರಿಂದ 1200 ರೂಪಾಯಿ ಆದಾಗ ಮಾತನಾಡದ ಬಿಜೆಪಿಯವರಿಗೆ ಈಗ ಪೆಟ್ರೋಲಿನ ಬೆಲೆ 103 ರೂಪಾಯಿ ಆದಾಗ ಪ್ರತಿಭಟಿಸುತ್ತಿರುವುದು ಅವರು ನಡೆಸುತ್ತಿರುವ ನಾಟಕವಲ್ಲದೆ ಬೇರೇನೂ ಅಲ್ಲ ಎಂದು ಅಮಳ ರಾಮಚಂದ್ರ ಹೇಳಿದರು.


ಬರ ಪರಿಹಾರ ನೀಡದ ಕೇಂದ್ರ ಬಿಜೆಪಿ ಸರಕಾರ:
ಕರ್ನಾಟಕದ ಅಭಿವೃದ್ಧಿಯನ್ನು ತಡೆಹಿಡಿಯಲೇಬೇಕೆಂದು ಕೇಂದ್ರ ಬಿಜೆಪಿ ಸರಕಾರದ ಸಂಕಲ್ಪ. ಕಳೆದ ವರ್ಷ ಸಂಭವಿಸಿದ ಭೀಕರ ಬರದ ಕಾರಣದಿಂದ ಸಂಕಷ್ಟಕ್ಕೆ ಸಿಲುಕಿದ ಕರ್ನಾಟಕ ರಾಜ್ಯಕ್ಕೆ ಎನ್ ಡಿ ಆರ್ ಎಫ್ ನಿಧಿಯಿಂದ ನಿಡಲೇಬೇಕಾಗಿದ್ದ ಬರ ಪರಿಹಾರವನ್ನು ಕೇಂದ್ರ ಸರಕಾರದಿಂದ ಕೊಡಿಸಲು ಸುಪ್ರೀಂಕೋರ್ಟ್ ಮಧ್ಯ ಪ್ರವೇಶಿಸಿಸಬೇಕಾಯಿತು. ಸುಪ್ರೀಂ ಕೋರ್ಟಿನ ಆದೇಶದ ಹೊರತಾಗಿಯೂ ಚುನಾವಣಾ ನೀತಿ ಸಂಹಿತೆಯ ನೆಪವನ್ನು ಒಡ್ಡಿ ಕೇಂದ್ರದ ಬಿಜೆಪಿ ಸರಕಾರ ಪರಿಹಾರ ಬಿಡುಗಡೆಗೆ ಮೀನಾ ಮೇಷ ಎಣಿಸಿ ಕಡೆಗೂ ಎಪ್ರಿಲ್ 27ರಂದು ನ್ಯಾಯ ಬದ್ಧವಾಗಿ ಕರ್ನಾಟಕಕ್ಕೆ 18 ಸಾವಿರ ಕೋಟಿ ರೂಪಾಯಿಗಳು ಬರಬೇಕಾಗಿದ್ದರೂ ಕೇವಲ 3498.82 ಕೋಟಿ ರೂಪಾಯಿಗಳನ್ನು ನೀಡಿ ಕರ್ನಾಟಕಕ್ಕೆ ಅನ್ಯಾಯವನ್ನು ಎಸೆಗಿತು. ಈ ರೀತಿಯಲ್ಲಿ ಕರ್ನಾಟಕದ ಎಲ್ಲ ಯೋಜನೆಗಳನ್ನು ಹಳ್ಳ ಹಿಡಿಸಬೇಕೆಂಬ ಉದ್ದೇಶದಿಂದ ಕರ್ನಾಟಕಕ್ಕೆ ನ್ಯಾಯ ಬದ್ಧವಾಗಿ ಸಿಗಬೇಕಾದ ಎಲ್ಲಾ ಅನುದಾನವನ್ನು ತಡೆಹಿಡಿದ ಕಾರಣದಿಂದಲೇ ಕರ್ನಾಟಕ ರಾಜ್ಯ ಸರಕಾರ ರಾಜ್ಯದ ಅಭಿವೃದ್ಧಿಯ ದೃಷ್ಟಿಯಿಂದ ತೈಲ ಬೆಲೆ ಏರಿಕೆ ಅನಿವಾರ್ಯವಾಯಿತು.


ಕೇಂದ್ರದ ಕಾಮಗಾರಿಗಳು ಭ್ರಷ್ಟಾಚಾರ, ಚುನಾವಣೆ ಗೆಲಲುವುದಕ್ಕೆ ಮಾತ್ರ:
ಕೇಂದ್ರದ ಬಿಜೆಪಿ ಸರಕಾರ ನಡೆಸಿದ ಅಭಿವೃದ್ಧಿ ಕಾರ್ಯಗಳೆಲ್ಲವೂ ಭ್ರಷ್ಟಾಚಾರವನ್ನು ಎಸಗುವುದಕ್ಕೆ ಮತ್ತು ಚುನಾವಣೆಗಳನ್ನು ಗೆಲ್ಲುವುದಕ್ಕೆ ಮಾತ್ರವೇ ಹೊರತು ಅದರಲ್ಲಿ ಈ ದೇಶ ಅಭಿವೃದ್ಧಿಯಾಗಬೇಕೆಂಬ ಕಾಳಜಿಯಾಗಲಿ ಜನರಿಗೆ ಅನುಕೂಲವಾಗಬೇಕೆಂಬ ವಿಚಾರವಾಗಲಿ ಇಲ್ಲವೇ ಇಲ್ಲ. ಕೋಟ್ಯಾಂತರ ರೂಪಾಯಿ ವೆಚ್ಚದಲ್ಲಿ ನಿರ್ಮಿಸಿದ ರಸ್ತೆಗಳು, ದೇವಾಲಯಗಳು, ಎಲ್ಲವೂ ಕಳಪೆ ಕಾಮಗಾರಿಯಿಂದ ಕೂಡಿದ್ದು ಒಂದೊಂದಾಗಿ ಧರೆಗುರುಳುತ್ತಿದೆ. ದೇಶದ ಜನರ ಶ್ರದ್ಧಾ ಕೇಂದ್ರವಾದ ಶ್ರೀರಾಮ ದೇವಾಲಯದ ಗರ್ಭಗುಡಿ ಇಂದು ಸೋರುತ್ತಿದೆ. ರಾಮಪಥ ರಸ್ತೆ ಅಲ್ಲಲ್ಲಿ ಕುಸಿತವಾಗಿದ್ದು ಢಮಾರ್ ಕಾಮಗಾರಿಯಾದರೆ, ಚುನಾವಣಾ ಸಮೀಪದಲ್ಲಿ ತರಾತುರಿಯಿಂದ ಪ್ರಧಾನಿ ಮೋದಿಯವರಿಂದ ಉದ್ಘಾಟನೆಗೊಂಡ 3 ವಿಮಾನ ನಿಲ್ದಾಣಗಳ ಛಾವಣಿಗಳು ಈ ವರ್ಷದ ಮಳೆಗೆ ಕುಸಿದು ಬಿದ್ದು ಸಾವು ನೋವಿಗೆ ಕಾರಣವಾಗಿದೆ. ದೆಹಲಿ ವಿಮಾನ ನಿಲ್ದಾಣದ ಟರ್ಮಿನಲ್ 1ರ ವಿಸ್ತರಿತ ಭಾಗ ಕುಸಿದು ಹೋಗಿದ್ದು ಇದರ ಜೊತೆಗೆ ಕಳೆದ ಜುಲೈಯಲ್ಲಿ ಮದ್ಯಪ್ರದೇಶದ ಜಬಲ್‌ಪುರ ವಿಮಾನ ನಿಲ್ದಾಣ ಹಾಗೂ ಗುಜರಾತ್‌ನ ರಾಜ್‌ಕೋಟ್ ವಿಮಾನ ನಿಲ್ದಾಣವೂ ಕುಸಿದು ಹೋಗಿದೆ. 777 ಕೋಟಿ ವೆಚ್ಚದ ಪ್ರಗತಿ ಮೈದಾನದ ಸುರಂಗ ಮಾರ್ಗ ಅವೈಜ್ಞಾನಿಕ ಕಾಮಗಾರಿಯಿಂದಾಗಿ ನೀರಿನಲ್ಲಿ ಮುಳುಗಿದ್ದರೆ, 17843 ಕೋಟಿ ವೆಚ್ಚದ ಮುಂಬೈನ ಅಟಲ್ ಸೇತು ಸಂಪರ್ಕ ರಸ್ತೆ ಬಿರುಕು ಬಿಟ್ಟಿದೆ. ಇದೆಲ್ಲವೂ ಬಿ.ಜೆ.ಪಿ.ಗೆ ಡೆಲ್ಲಿಯಿಂದ ತೊಡಗಿ ಹಳ್ಳಿಯವರೆಗೆ, ಪ್ರಧಾನಿ ಮೋದಿಯವರಿಂದ ತೊಡಗಿ ರಾಜ್ಯ ನಾಯಕರವರೆಗೆ, ಅಭಿವೃದ್ಧಿಯಲ್ಲಾಗಲೀ, ಪ್ರತಿಭಟನೆಯಲ್ಲಾಗಲೀ, ಯಾವುದೇ ರೀತಿಯ ಜನಪರ ಕಾಳಜಿಯೂ ಇಲ್ಲ ಬಿಜೆಪಿಯವರಿಗೆ ಇರುವುದು ಕೇವಲ ಚುನಾವಣೆಯಲ್ಲಿ ಗೆದ್ದು ಅಧಿಕಾರ ಹಿಡಿದು ಮಜಾ ಮಾಡುವ ಉದ್ದೇಶ ಮಾತ್ರ ಎಂಬುದು ಸ್ಪಷ್ಟವಾದ ವಿಚಾರವಾಗಿದೆ ಎಂದು ಅಮಳ ರಾಮಚಂದ್ರ ಹೇಳಿದರು. ಪತ್ರಿಕಾಗೋಷ್ಟಿಯಲ್ಲಿ ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೃಷ್ಣಪ್ರಸಾದ್ ಆಳ್ವ, ಜಿಲ್ಲಾ ಕಾರ್ಯದರ್ಶಿ ಉಮಾನಾಥ್ ಶೆಟ್ಟಿ, ಪುತ್ತೂರು ಬ್ಲಾಕ್ ಕಾಂಗ್ರಸ್ ಉಪಾಧ್ಯಕ್ಷ ಮೌರೀಸ್ ಮಸ್ಕರೇನಸ್, ಯಾಕೂಬ್ ಮುಲಾರ್ ಉಪಸ್ಥಿತರಿದ್ದರು.

ಮೆಡಿಕಲ್ ಕಾಲೇಜು ಪುತ್ತೂರಿಗೆ ಬರಬಹುದು
ಮೆಡಿಕಲ್ ಕಾಲೇಜಿಗಾಗಿ ನಮ್ಮ ಶಾಸಕರು ಪ್ರಯತ್ನ ಮಾಡುತ್ತಾ ಇದ್ದಾರೆ. ನಿನ್ನೆ ಮುಖ್ಯಂತ್ರಿಗಳಿಗೆ ಒತ್ತಡ ತಂದಿದ್ದಾರೆ. ಸ್ವಲ್ಪ ತಡವಾದರೂ ಪುತ್ತೂರಿಗೆ ಮೆಡಿಕಲ್ ಕಾಲೇಜು ಬರಬಹುದು ಎಂದು ಅಮಳ ರಾಮಚಂದ್ರ ಅವರು ಈ ಹಿಂದಿನ ಪತ್ರಿಕಾಗೋಷ್ಟಿಯಲ್ಲಿ ಪತ್ರಕರ್ತರು ಕೇಳಿದ ಪ್ರಶ್ನೆಗೆ ಉತ್ತರಿಸಿದರು.

ರಾಹುಲ್ ಗಾಂಧಿ ಹಿಂದೂ ವಿರೋಧಿಯಾಗಿ ಮಾತನಾಡಿಲ್ಲ:
ರಾಹುಲ್ ಗಾಂಧಿ ಹಿಂಧು ವಿರೋಧಿಯಾಗಿ ಸಂಸತ್‌ನಲ್ಲಿ ಮಾತನಾಡಿಲ್ಲ. ಆದರೆ ಅದನ್ನು ಬಿಜೆಪಿಯವರು ಸಮಾಜಕ್ಕೆ ತಪ್ಪು ಸಂದೇಶ ಹೋಗುವಂತೆ ಮಾಡುತ್ತಿದ್ದಾರೆ. ಈ ಕುರಿತು ಕಾಂಗ್ರೆಸ್ ಬಿಜೆಪಿಯ ಸುಳ್ಳು ಆಪಾದನೆಯನ್ನು ಖಂಡಿಸುತ್ತದೆ ಎಂದು ಕಾಂಗ್ರೆಸ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕೃಷ್ಣಪ್ರಸಾದ್ ಅಳ್ವ ಹೇಳಿದ್ದಾರೆ.

LEAVE A REPLY

Please enter your comment!
Please enter your name here