ಪುತ್ತೂರು ವಿವೇಕಾನಂದ ಕಾಲೇಜಿನಲ್ಲಿ ‘ಸಮನ್ವಯ’ ಸಮಾಜ-ವಿಜ್ಞಾನ ಶಿಕ್ಷಕರ ಪುನಶ್ಚೇತನ ಕಾರ್ಯಗಾರ.

0

ದೇಶ ಕಟ್ಟುವ ಕಾರ್ಯ ಸಮಾಜ ವಿಜ್ಞಾನ ಶಿಕ್ಷಕರಿಗಿರುವ ಬಹುದೊಡ್ಡ ಜವಾಬ್ದಾರಿ : ಸತೀಶ್ ಕುಮಾರ್ ರೈ.

ಪುತ್ತೂರು: ಶಿಕ್ಷಕರಾದವರು ಸಮಾಜ ಕಟ್ಟುವ ಕಾರ್ಯದಲ್ಲಿ ಕೈಜೋಡಿಸಬೇಕು. ಶಾಲೆಯನ್ನು ಸಮಾಜಕ್ಕೆ ತೆರೆದಿಡುವ ಕಾರ್ಯ ನಿರಂತರವಾಗಿರಬೇಕು. ಮಕ್ಕಳಿಗೆ ಸೂಕ್ತ ಮಾರ್ಗದರ್ಶನ ನೀಡುವ ಮೂಲಕ ದೇಶ ಕಟ್ಟುವ ಕಾಯಕದಲ್ಲಿರುವ ಅಧ್ಯಾಪಕರಿಗೆ ಆಗಾಗ ತರಬೇತಿಗಳನ್ನು ನೀಡುತ್ತಿದ್ದರೆ ಹೊಸ ಹೊಸ ಪ್ರಯೋಗಗಳಿಗೆ ಮಕ್ಕಳನ್ನು ತೊಡಗಿಸಿಕೊಳ್ಳಲು ಪ್ರೇರೇಪಣೆ ಸಿಕ್ಕಂತಾಗುತ್ತದೆ ಎಂದು ಪುತ್ತೂರಿನ ತೆಂಕಿಲದ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ ಮುಖ್ಯ ಶಿಕ್ಷಕ ಸತೀಶ್ ಕುಮಾರ್ ರೈ ನುಡಿದರು. ಗುರುವಾರ ಪುತ್ತೂರಿನ ವಿವೇಕಾನಂದ ವಿದ್ಯಾವರ್ಧಕ ಸಂಘದ ವತಿಯಿಂದ ನೆಹರು ನಗರದಲ್ಲಿರುವ ವಿವೇಕಾನಂದ ಪಾಲಿಟೆಕ್ನಿಕ್ ಕಾಲೇಜಿನ ಎ.ವಿ.ಹಾಲ್‌ ನಲ್ಲಿ ನಡೆದ ‘ಸಮನ್ವಯ’ ಸಮಾಜ ವಿಜ್ಞಾನ ಶಿಕ್ಷಕರ ಪುನಶ್ವೇತನ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದಂತಹ ವಿವೇಕಾನಂದ ಪದವಿ ಪೂರ್ವ ಕಾಲೇಜಿನ ಅಧ್ಯಕ್ಷ ರವೀಂದ್ರ ಪಿ ಮಾತನಾಡಿ, ಶಿಕ್ಷಕರು ಎಂದರೆ ಪಾಠ ಮಾಡುವ ಕೆಲಸಗಾರರಲ್ಲ. ಶಿಕ್ಷಕರು ಎಂದರೆ ತಯಾರು ಮಾಡುವವರು ಎಂದರ್ಥ. ಕಲಿಕೆ ನಿರಂತರವಾಗಿರುವ ಕಾಲಘಟ್ಟದಲ್ಲಿ ಶಿಕ್ಷಕನಾದವನು ತನ್ನನ್ನು ಹೊಸತನಕ್ಕೆ ತೆರೆದುಕೊಳ್ಳಬೇಕು. ಸಮಾಜ ಶಿಕ್ಷಕರಾದವರಿಗೆ ಮಕ್ಕಳಲ್ಲಿ ದೇಶಭಕ್ತಿ ಮೂಡಿಸುವ ಬಲು ದೊಡ್ಡ ಜವಾಬ್ದಾರಿ ಇದೆ, ಮಕ್ಕಳಿಗೆ ಒಂದು ವಿಷಯದ ಬಗ್ಗೆ ನಾವು ತಿಳಿಸುವ ಮೊದಲು ನಾವು ಹೆಚ್ಚು ಓದಿಕೊಂಡಿರಬೇಕು. ನಾವು ಓದುವ ಜೊತೆಗೆ ಮಕ್ಕಳಿಗೂ ಓದುವ ಅಭ್ಯಾಸವನ್ನು ಮಾಡಿಸಬೇಕು ಎಂದರು. ಮಕ್ಕಳಿಗೆ ಪೂರಕವಾಗಿರುವ ಶಿಕ್ಷಕರ ಪುನಶ್ಚೇತನ ಕಾರ್ಯವು ಸಮಾಜ ಕಟ್ಟುವ ಕಾರ್ಯದಲ್ಲಿ ಸಹಕಾರಿಯಾಗಲಿದೆ ಎಂದು ಅಭಿಪ್ರಾಯ ಪಟ್ಟರು.
ಈ ಸಂದರ್ಭ ವಿವೇಕಾನಂದ ವಿದ್ಯಾವರ್ಧಕ ಸಂಘದ ಶಿಕ್ಷಣ ಸಂಯೋಜಕ ರಘುರಾಜ್ ಉಬರಡ್ಕ ಉಪಸ್ಥಿತರಿದ್ದರು. ಕಾರ್ಯಗಾರವು ಎರಡು ದಿನ ನಡೆಯಲಿದೆ. ಶಿಕ್ಷಕರ ಸರಸ್ವತಿ ವಂದನೆಯೊಂದಿಗೆ ಆರಂಭವಾದ ಕಾರ್ಯಕ್ರಮದಲ್ಲಿ ಸಮಾಜ ವಿಜ್ಞಾನ ವಿಷಯ ವರ್ತುಲ ಸಂಯೋಜಕಿ ಸೌಮ್ಯ ಸ್ವಾಗತಿಸಿದರು. ಅಲಂಕಾರಿನ ಶ್ರೀ ಭಾರತೀ ಶಾಲೆಯ ಮುಖ್ಯ ಶಿಕ್ಷಕಿ ಆಶಾ ವಂದಿಸಿದರು. ಶಿಕ್ಷಕಿ ಸೌಮ್ಯ ನಿರೂಪಿಸಿದರು.

ಕಾರ್ಯಗಾರದ ಮೊದಲ ಅವಧಿಯಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಬಂಟ್ವಾಳದ ಸಂಚಯ ಗಿರಿಯ ರಾಣಿ ಅಬ್ಬಕ್ಕ ತುಳು ಅಧ್ಯಯನ ಕೇಂದ್ರದ ಅಧ್ಯಕ್ಷ ಡಾ. ತುಕಾರಾಮ ಪೂಜಾರಿ, ” ವಸ್ತು ರೂಪಗಳಲ್ಲಿ ಇತಿಹಾಸ ಅಧ್ಯಯನ ‘ ಮಾಹಿತಿ ನೀಡಿದರು.

ಎರಡನೇ ಅವಧಿಯಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ನೆಲ್ಯಾಡಿಯ ಸಂತ ಜಾರ್ಜ್ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕ ವಿಶ್ವನಾಥ ಶೆಟ್ಟಿ, “ಸಮಾಜ ವಿಜ್ಞಾನ ಬೋಧನೆಯ ಮೂಲಕ ರಾಷ್ಟ್ರೀಯತೆಯ ಅರಿವು” ಎನ್ನುವ ವಿಷಯವನ್ನು ಚಟುವಟಿಕೆಗಳ ಮೂಲಕ ತಿಳಿಸಿದರು. ಮೂರನೇ ಅವಧಿಯಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಕಲ್ಲಡ್ಕದ ಶ್ರೀರಾಮ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಕೃಷ್ಣಪ್ರಸಾದ್ ಕಲ್ಲಡ್ಕ, ಶಿಕ್ಷಕರಿಗೆ ಭಾರತ ಭೂಪಟ ಪರಿಚಯ ಮಾಡಿದರು.

LEAVE A REPLY

Please enter your comment!
Please enter your name here