ಪುತ್ತೂರು: ರಾಜೀವ ಗಾಂಧಿ ವಸತಿ ನಿಗಮದಡಿ ವಸತಿಗಾಗಿ ಹಲವರು ಅರ್ಜಿ ಸಲ್ಲಿಸಿದ್ದು, ಒಂದುವರೆ ವರ್ಷದ ಹಿಂದೆ ಸಲ್ಲಿಸಿದ್ದ ಅರ್ಜಿ ನಿಗಮದ ಕಛೇರಿಗೆ ಇನ್ನೂ ತಲುಪಿಲ್ಲ ಎಂದು ಶಾಸಕ ಅಶೋಕ್ ಕುಮಾರ್ ರೈ ಇಂದು ನಡೆದ ಕೆಡಿಪಿ ಸಭೆಯಲ್ಲಿ ತಿಳಿಸಿದ್ದಾರೆ.
ಸಭೆಯಲ್ಲಿ ಮಾತನಾಡಿದ ಅವರು ಈ ವಿಚಾರವಾಗಿ ನಿಗಮದ ಬೆಂಗಳೂರು ಕಛೇರಿ ಸಿಬ್ಬಂದಿ ನನಗೆ ಮಾಹಿತಿ ನೀಡಿದ್ದರು. ಆ ಬಳಿಕ ನಾನೇ ಹೇಳಿಸಿ ಪುಟಪ್ ಮಾಡಿಸಿದ್ದೆ. ಈ ರೀತಿಯಾದರೆ ಬಡವರಿಗೆ ಮನೆ ಕೊಡುವುದಾದರೂ ಹೇಗೆ? ಇದಕ್ಕೆ ಯಾರು ಹೊಣೆ? ಎಂದು ಪ್ರಶ್ನಿಸಿದ್ದಾರೆ.
ಇದನ್ನು ಕೇಳಿದ ಸಭೆಯಲ್ಲಿದ್ದ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡುರಾವ್ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡು ಕಡತಗಳು ವಿಲೇವಾರಿಯಾಗದೆ ಯಾಕೆ ಬಾಕಿಯಾಗಿದೆ? ಪುಟಪ್ ಯಾಕೆ ಮಾಡಿಲ್ಲ? ಟೆಕ್ನಿಕಲ್ ಸಮಸ್ಯೆ ಒಂದು ಬಾರಿ ಬಂದರೆ ಮತ್ತೆ ಕಳುಹಿಸಿದ ಕಡತ ಏನಾಗಿದೆ ಎಂದು ಪರಿಶೀಲನೆ ಮಾಡುವಷ್ಟು ಜ್ಞಾನ ನಿಮಗಿಲ್ಲವೇ? ಶಾಸಕ ಅಶೋಕ್ ರೈ ಪುಟಪ್ ಮಾಡಿದ ಕಾರಣ ಫೈಲ್ ಮೂವ್ ಆಗಿದೆ. ನೀವು ಮಾಡಬೇಕಾದ ಕೆಲಸವನ್ನು ಶಾಸಕರು ಮಾಡಬೇಕಾ? ನಿಮ್ಮ ಕೆಲಸವನ್ನು ಅವರು ಮಾಡುವುದಾದರೆ ನಿಮ್ಮ ಕೆಲಸ ಏನು? ಎಂದು ಪ್ರಶ್ನಿಸಿದ್ದಾರೆ. ನಗರ ಸಭೆಯಲ್ಲಿ ಮಾತ್ರವಲ್ಲ, ಗ್ರಾಪಂ ಗಳಲ್ಲೂ ಇದೇ ರೀತಿ ಸಮಸ್ಯೆ ಇದೆ ಎಂದು ಶಾಸಕ ಅಶೋಕ್ ರೈ ಉಸ್ತುವಾರಿ ಸಚಿವರ ಗಮನಕ್ಕೆ ತಂದರು. ಈ ಬಗ್ಗೆ ವರದಿ ತರಿಸಿ ತಪ್ಪಿತಸ್ಥರ ವಿರುದ್ದ ಶಿಸ್ತು ಕ್ರಮ ಕೈಗೊಳ್ಳಿ ಎಂದು ಸಚಿವರು ಜಿಲ್ಲಾಧಿಕಾರಿಗೆ ಸೂಚನೆ ನೀಡಿದ್ದಾರೆ.