





ಪುತ್ತೂರು: ಕಾಫಿಕಾಡು ಕೈಕಾರ ರಸ್ತೆಯಲ್ಲಿ ಮೊಡಪಾಡಿ ಮೂಲೆ ಎಂಬಲ್ಲಿ ರಸ್ತೆ ಬದಿಯಲ್ಲಿದ್ದ ಮರವೊಂದು ಉರುಳಿ ಬಿದ್ದ ಪರಿಣಾಮ ಎರಡು ವಿದ್ಯುತ್ ಕಂಬಗಳು ಮುರಿದು ರಸ್ತೆಗೆ ಅಡ್ಡಲಾಗಿ ಬಿದ್ದಿದ್ದರಿಂದ ವಾಹನ ಸಂಚಾರಕ್ಕೆ ತೊಂದರೆಯಾದ ಘಟನೆ ಜು.5ರಂದು ಸಂಜೆ ನಡೆದಿದೆ.



ಚೆಲ್ಯಡ್ಕ ಸೇತುವೆ ಮೇಲೆ ಘನ ವಾಹನ ಸಂಚಾರ ನಿಷೇಧಿಸಿರುವುದರಿಂದ ದೇವಸ್ಯದಿಂದ ಇರ್ದೆ ಬೆಟ್ಟಂಪಾಡಿಗೆ ಚಲಿಸುವ ವಾಹನಗಳು ಕಾಫಿ ಕಾಡು ಕೈಕಾರ ರಸ್ತೆಯಲ್ಲಿ ಬರುತ್ತಿದ್ದು ಮರ ಬಿದ್ದ ಪರಿಣಾಮ ವಾಹನಗಳ ಸಂಚಾರಕ್ಕೆ ತೊಂದರೆ ಉಂಟಾಯಿತು. ಶಾಲಾ ಮಕ್ಕಳನ್ನು ಕರೆದುಕೊಂಡು ಹೋಗುವ ಸ್ಕೂಲ್ ಬಸ್ಸುಗಳು ಈ ರಸ್ತೆಯಲ್ಲಿ ಬರುವುದರಿಂದ ಪುಟಾಣಿ ಮಕ್ಕಳು ಪರದಾಡಬೇಕಾಯಿತು. ಮೆಸ್ಕಾಂ ಪವರ್ ಮ್ಯಾನ್ ಗಳು ಸ್ಥಳಕ್ಕೆ ಆಗಮಿಸಿ ಕಂಬಗಳನ್ನು ತೆರೆವುಗೊಳಿಸಲು ಸಹಕರಿಸಿದ್ದರು.






ಚೆಲ್ಯಡ್ಕ ಸೇತುವೆ ಮೇಲೆ ಬಸ್ ಸಂಚಾರಕ್ಕೆ ಅವಕಾಶ ಕೊಡಿ
ಜಿಲ್ಲಾಧಿಕಾರಿಯವರು ಸೂಚಿಸಿದ ದೇವಸ್ಯ ಕಾಪಿಕಾಡ್ ಕೈಕಾರ ರಸ್ತೆಯು ಸಂಪೂರ್ಣ ಹದಗೆಟ್ಟಿದ್ದು ವಾಹನ ಸಂಚಾರಕ್ಕೆ ಸಮಸ್ಯೆಯಾಗಿದೆ. ಆದ್ದರಿಂದ ಚೆಲ್ಯಡ್ಕ ಸೇತುವೆ ಮೇಲೆ ಶಾಲಾ ಕಾಲೇಜ್ ಬಸ್ಸು ಸಹಿತ ಖಾಸಗಿ ಬಸ್ಸುಗಳ ಪ್ರಯಾಣಿಕರ ವಾಹನಗಳ ಸಂಚಾರಕ್ಕೆ ಅವಕಾಶ ಮಾಡಿಕೊಡುವಂತೆ ಜಿಲ್ಲಾಧಿಕಾರಿಯವರು ತಮ್ಮ ಆದೇಶವನ್ನು ಪರಿಶೀಲನೆ ಮಾಡಿ ಸಾರ್ವಜನಿಕರ ಸಮಸ್ಯೆಯನ್ನು ಪರಿಹರಿಸುವಂತೆ ಸಾರ್ವಜನಿಕರು ಆಗ್ರಹಿಸಿದ್ದಾರೆ.
ಡಿಸಿ ಸೂಚಿಸಿದ ಬದಲಿ ರಸ್ತೆ
ಚೆಲ್ಯಡ್ಕ ಸೇತುವೆ ಮೇಲೆ ಘನ ವಾಹನ ಸಂಚಾರ ನಿಯಂತ್ರಿಸಿ ಜಿಲ್ಲಾಧಿಕಾರಿಯವರು ಆದೇಶ ಹೊರಡಿಸಿದ್ದು ಬದಲಿರಸ್ತೆಯಾಗಿ ದೇವಸ್ಯ ಕಾಪಿಕಾಡ್ ಕೈಕಾರ ರಸ್ತೆಯನ್ನು ಸೂಚಿಸಿದ್ದರು. ಈ ರಸ್ತೆಯು ತೀರ ಹದಗೆಟ್ಟಿದ್ದು ವಾಹನ ಸವಾರರು ಈ ರಸ್ತೆಯಲ್ಲಿ ಬರಲು ಹಿಂದೇಟು ಹಾಕುತ್ತಿದ್ದಾರೆ. ಇದೀಗ ಮರ ಮುರಿದು ಬಿದ್ದು ವಿದ್ಯುತ್ ಕಂಬಗಳು ಧರೆಗುರುಳಿದುದರಿಂದ ವಾಹನ ಸವಾರರು ಅದರಲ್ಲೂ ಶಾಲೆಯ ಪುಟಾಣಿ ಮಕ್ಕಳು ಪರದಾಡುವಂತಾಯಿತು.









