ಪುತ್ತೂರು: ದರ್ಬೆ ಪಾಂಗಳಾಯಿ ಬೆಥನಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ 2024-25 ನೇ ಸಾಲಿನ ಶೈಕ್ಷಣಿಕ ವರ್ಷದ ಶಾಲಾ ಮಂತ್ರಿ ಮಂಡಲದ ಉದ್ಘಾಟನೆ ಹಾಗೂ ಪ್ರಮಾಣ ವಚನ ಸ್ವೀಕಾರವು ಜು.೩ರಂದು ಶಾಲಾ ಸಭಾಂಗಣದಲ್ಲಿ ನೆರವೇರಿತು.
ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ ಪುತ್ತೂರು ಲಿಟ್ಲ್ ಫ್ಲವರ್ ಹಿ. ಪ್ರಾ. ಶಾಲಾ ಶಿಕ್ಷಕ ಬಾಲಕೃಷ್ಣ ರೈ ಪೊರ್ದಾಲ್ ಮಾತನಾಡಿ, ಇಂದಿನ ಎಳೆಯರು ನಾಡಿನ ನಾಳಿನ ನಾಯಕರು. ಆ ನಿಟ್ಟಿನಲ್ಲಿ ಬಾಲ್ಯದಲ್ಲಿಯೇ ಅವರಿಗೆ ಪ್ರಜಾಪ್ರಭುತ್ವದ ನೈಜ ಅನುಭವ, ಮತದಾನದ ಅವಶ್ಯಕತೆ ಹಾಗೂ ಸಂವಿಧಾನ ಬಗೆಗಿನ ಗೌರವ ಶಾಲಾ ಸಂಸತ್ತಿನ ಚಟುವಟಿಕೆಗಳ ಮೂಲಕ ಮೂಡಿಸಬೇಕಾಗಿದೆ. ಪ್ರಜಾಪ್ರಭುತ್ವದ ಆತ್ಮವೇ ಮತದಾನ, ನಾಯಕತ್ವದ ಜವಾಬ್ದಾರಿ ಕರ್ತವ್ಯದ ಕಾಳಜಿ ಮಕ್ಕಳಲ್ಲಿ ಜಾಗೃತಗೊಳ್ಳಲಿ ಎಂದರು.
ಶಾಲಾ ಮುಖ್ಯ ಶಿಕ್ಷಕಿ ಭಗಿನಿ ಶಾಂತಿ ಆಗ್ನೇಸ್ ಮಕ್ಕಳಿಗೆ ಪ್ರಮಾಣ ವಚನ ಬೋಧಿಸಿದರು. ಶಿಕ್ಷಕಿಯರಾದ ಜೆನಿಫರ್ ಮೊರಾಸ್ ಸ್ವಾಗತಿಸಿ, ಭಗಿನಿ ರೀಮಾ ಬಿ.ಎಸ್ ರವರು ವಂದಿಸಿದರು. ಹೇಮಲತಾ ಮತ್ತು ಸೌಮ್ಯ ಕಾರ್ಯಕ್ರಮ ನಿರೂಪಿಸಿದರು.