ಪುತ್ತೂರು: ಮಕ್ಕಳಲ್ಲಿ ಉತ್ತಮ ಸಂಸ್ಕಾರ ಬೆಳೆಸುವ ಜವಾಬ್ದಾರಿ ಪ್ರತಿಯೊಬ್ಬ ಹೆತ್ತವರಿಗೆ ಸೇರಿದ್ದು. ನಾವು ಎಷ್ಟೇ ಕಲಿತರೂ, ಕಲಿಸಿದರೂ, ಪ್ರಯತ್ನಿಸಿದರೂ ಪರಿಪೂರ್ಣವಾದ ಭವಿಷ್ಯವನ್ನು ಮಕ್ಕಳಿಗೆ ನಿರ್ಮಾಣ ಮಾಡಲಾರೆವು; ಆದರೆ ಮಕ್ಕಳನ್ನು ಭವಿಷ್ಯಕ್ಕೆ ನಿರ್ಮಾಣ ಮಾಡಬಲ್ಲೆವು. ಹೆತ್ತವರು ಮಕ್ಕಳ ಏಳ್ಗೆಗೆ ಮಕ್ಕಳನ್ನು ಉತ್ತಮ ಶಿಲ್ಪಿಗಳನ್ನಾಗಿ ರೂಪಿಸುವ ಕೆಲಸವನ್ನು ಮಾಡಬೇಕು ಎಂದು ಉಜಿರೆ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ವಸತಿಯುತ ಪದವಿ ಪೂರ್ವ ಕಾಲೇಜು ಇಲ್ಲಿನ ನಿವೃತ್ತ ಪ್ರಾಂಶುಪಾಲರಾದ ಡಾ.ಟಿ.ಕೃಷ್ಣಮೂರ್ತಿ ಹೇಳಿದರು.
ಜುಲೈ 6 ರಂದು ಪುತ್ತೂರಿನ ಸಂತ ಫಿಲೋಮಿನಾ ಪದವಿ ಪೂರ್ವ ಕಾಲೇಜಿನ ರಜತ ಮಹೋತ್ಸವ ಸಭಾಭವನದಲ್ಲಿ ನಡೆದ 2024 – 25 ನೇ ಸಾಲಿನ ರಕ್ಷಕ – ಶಿಕ್ಷಕ ಸಂಘದ ಮಹಾಸಭೆಯನ್ನು ದೀಪ ಬೆಳಗಿಸಿ ಉದ್ಘಾಟಿಸಿ, ಬಳಿಕ ‘ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಯಲ್ಲಿ ಪೋಷಕರ ಪಾತ್ರ’ದ ಕುರಿತು ಚಿಂತನ ಕಾರ್ಯಕ್ರಮದಲ್ಲಿ ಮಾತನಾಡಿ, ಮಕ್ಕಳ ಪಾಲನೆ – ಪೋಷಣೆ ತುಂಬಾ ಸಂಕೀರ್ಣವಾದ ವಿಚಾರ. ನಿಖರವಾಗಿ ಇಂತಹ ಕ್ರಮದಿಂದ ಮಕ್ಕಳನ್ನು ಸರಿಯಾದ ದಾರಿಗೆ ತರುತ್ತೇವೆ ಎಂದು ಹೇಳಲು ಸಾಧ್ಯವಿಲ್ಲ. ಕಾಲಕಾಲಕ್ಕೆ ಸೂಕ್ತ ಬದಲಾವಣೆಗಳನ್ನು ಪೋಷಕರು ತಮ್ಮ ಅನುಭವದ ಮೂಸೆಯಿಂದ ತೆಗೆದು ಸೂಕ್ತ ಮಾರ್ಪಾಟುಗಳನ್ನು ಮಾಡಿಕೊಂಡಲ್ಲಿ, ಭವ್ಯ ಭಾರತದ ನಿರ್ಮಾಣಕ್ಕೆ ಒಳ್ಳೆಯ ಕೊಡುಗೆಯನ್ನು ನೀಡಬಹುದು. ಯಶಸ್ವಿ ಪೋಷಕರಾಗಲು ಹೆತ್ತವರು ಅಳವಡಿಸಿಕೊಳ್ಳಬೇಕಾದ ಹಲವಾರು ತಂತ್ರಗಳು, ಮಕ್ಕಳ ಪಾಲನೆ – ಪೋಷಣೆ, ಮಕ್ಕಳ ತಪ್ಪುಗಳನ್ನು ತಿದ್ದುವ ವಿಧಾನಗಳ ಕುರಿತು ಮಾಹಿತಿಯನ್ನು ನೀಡಿದರು.
ಅಧ್ಯಕ್ಷತೆಯನ್ನು ವಹಿಸಿದ ಮಾಯಿದೆ ದೇವುಸ್ ಸಮೂಹ ಶಿಕ್ಷಣ ಸಂಸ್ಥೆಗಳ ಸಂಚಾಲಕರಾದ ರೆ.ಫಾ.ಲಾರೆನ್ಸ್ ಮಸ್ಕರೇನಸ್ ಮಾತನಾಡಿ, ಮಾನವನ ವ್ಯಕ್ತಿತ್ವದ ರೂಪುರೇಖೆಯು ಅವನ ಬಾಲ್ಯದಿಂದ ಅವನ ಸುತ್ತಮುತ್ತಲಿರುವ ಶಿಕ್ಷಕರ, ಪಾಲಕರ ಹಾಗು ಸಮಾಜದ ಜನರ ಪ್ರಭಾವದಿಂದ ಆಗಿರುತ್ತದೆ. ಬರೀ ಶಿಕ್ಷಣವೊಂದೇ ಸಿಕ್ಕರೆ ಸಾಲದು. ಅದರ ಜೊತೆ ಇನ್ನು ಅನೇಕ ಅಂಶಗಳನ್ನು ಬಾಲ್ಯದಿಂದ ರೂಢಿಸಿಕೊಂಡರೆ ಆತ ಯಶಸ್ವಿಯಾಗುತ್ತಾನೆಎಂದು ಹೇಳಿದರು.
2023 – 24ನೇ ಸಾಲಿನ ರಕ್ಷಕ-ಶಿಕ್ಷಕ ಸಂಘದ ಅಧ್ಯಕ್ಷರಾದ ಜಯಂತ್ ನಡುಬೈಲು ಇವರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು. 2024 – 25ನೇ ಸಾಲಿನ ನೂತನ ಉಪಾಧ್ಯಕ್ಷರಾಗಿ ಪುತ್ತೂರಿನ ಪ್ರಸಿದ್ಧ ದಂತ ವೈದ್ಯರಾದ ಡಾಕ್ಟರ್ ಶ್ರೀ ಪ್ರಕಾಶ್. ಬಿ ಇವರನ್ನು ಆಯ್ಕೆ ಮಾಡಲಾಯಿತು. ಕಾಲೇಜಿನ ಪ್ರಾಂಶುಪಾಲ
ರೆ.ಫಾ.ಅಶೋಕ್ ರಾಯನ್ ಕ್ರಾಸ್ತಾ ಪ್ರಾಸ್ತಾವಿಕ ಮಾತುಗಳನ್ನಾಡಿದರು. ರಕ್ಷಕ – ಶಿಕ್ಷಕ ಸಂಘದ ಅಧ್ಯಕ್ಷರಾದ ಜಯಂತ್ ನಡುಬೈಲು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಪ್ರದರ್ಶನ ಕಲಾ ಸಂಘದ ವಿದ್ಯಾರ್ಥಿಗಳು ಪ್ರಾರ್ಥಿಸಿ, ರಕ್ಷಕ – ಶಿಕ್ಷಕ ಸಂಘದ ಕಾರ್ಯದರ್ಶಿ ಯಶವಂತ್ ಎಂ. ಡಿ ಸ್ವಾಗತಿಸಿ, 2023-24ನೇ ಸಾಲಿನ ಲೆಕ್ಕಪತ್ರವನ್ನು ಕೋಶಾಧಿಕಾರಿ ಸಂಜಯ್ ಎಸ್ ಮಂಡಿಸಿದರು. ಉಪನ್ಯಾಸಕರಾದ ಆಶಾಲತಾ.ಕೆ ವಂದಿಸಿ, ಉಷಾ ಯಶ್ವಂತ್ ಕಾರ್ಯಕ್ರಮ ನಿರೂಪಿಸಿದರು.