ಶ್ರೀ ರಾಮಕುಂಜೇಶ್ವರ ಪದವಿಪೂರ್ವ ಕಾಲೇಜಿನಲ್ಲಿ ಸಿಇಟಿ, ನೀಟ್ ತರಗತಿಗಳ ಉದ್ಘಾಟನೆ

0

ಪುತ್ತೂರು: ರಾಮಕುಂಜೇಶ್ವರ ಪದವಿಪೂರ್ವ ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ವಿದ್ಯಾರ್ಥಿ ಗಳಿಗಾಗಿ ಸಿಇಟಿ, ನೀಟ್ ತರಗತಿಗಳ ಉದ್ಘಾಟನೆಯು ನಡೆಯಿತು. ಕಾರ್ಯಕ್ರಮದ ಉದ್ಘಾಟನೆಯನ್ನು ಪ್ರಖ್ಯಾತ ತರಬೇತುದಾರ ರಾಜ್‌ಕಿರಣ್ ಇವರು ದೀಪ ಬೆಳಗಿಸಿ ಮಾತನಾಡಿ ಉನ್ನತ ವಿದ್ಯಾಭ್ಯಾಸಕ್ಕೆ ತಯಾರಾಗುವ ವಿದ್ಯಾರ್ಥಿಗಳು ನಕಾರಾತ್ಮಕ ಭಾವನೆಗಳನ್ನು ಹೊಂದಬಾರದು.ನಿರಂತರ ಓದು, ಅಧ್ಯಯನ ಇದ್ದಾಗ ಮಾತ್ರ ಉನ್ನತ ಸಾಧನೆಗಳನ್ನು ಖಂಡಿತವಾಗಿಯೂ ಮಾಡಬಹುದು. ಈ ವಯಸ್ಸಿನಲ್ಲಿ ವಿವಿಧ ವಿಷಯಗಳಿಗೆ ಆಕರ್ಷಿತರಾಗುವುದು ವಿದ್ಯಾರ್ಥಿಗಳ ಸಹಜ ಗುಣ. ಆದರೆ, ಅವುಗಳಿಗೆ ಗಮನ ಕೊಡದೇ,ಅನ್ಯ ಆಸಕ್ತಿಗಳನ್ನು ತ್ಯಾಗ ಮಾಡಿ ಗುರಿಯ ಕಡೆಗೆ ನಿರಂತರ ಪ್ರಯತ್ನ ಮಾಡಬೇಕು. ಸಿಇಟಿ ನೀಟ್ ಪರೀಕ್ಷೆಯ ಮೂಲ ಗುರಿಯೊಂದಿಗೆ, ಜೆಇಇ ಮತ್ತು ಅನ್ಯ ಸ್ಪರ್ಧಾತ್ಮಕ ಪರೀಕ್ಷೆಗಳ ಕಡೆಗೂ ಪ್ರಯತ್ನ ಮಾಡಿದರೆ ಉತ್ತಮ” ಎಂದು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಚಂದ್ರಶೇಖರ ಕೆ ಇವರು ಕಾರ್ಯಕ್ರಮವನ್ನು ವಿಡಿಯೋ ಬಿಡುಗಡೆಯ ಮೂಲಕ ಉದ್ಘಾಟನೆಯನ್ನು ಮಾಡಿದರು. ನಂತರ ಮಾತನಾಡುತ್ತಾ ಅವರು “ನಾವು ಮಾಡುವ ಕಠಿಣ ಪರಿಶ್ರಮ ಎಲ್ಲರಿಗೆ ಕಾಣಿಸುವುದಿಲ್ಲ.ಆದರೆ ಪರಿಶ್ರಮದ ಫಲ ಎಲ್ಲರಿಗೂ ಗೊತ್ತಾಗುತ್ತದೆ. ಇಂದು ನೀವು ಕಷ್ಟಪಟ್ಟು ಓದಿದರೆ, ಮುಂದೆಗೆ ಉತ್ತಮ ಭವಿಷ್ಯ ನಿಮ್ಮದಾಗುವುದು. ಮುಂದಿನ ಗೆಲುವಿಗೆ ಮೊದಲ ಹೆಜ್ಜೆಯನ್ನು ಇಂದು ನೀವು ಇಟ್ಟಿದ್ದೀರಿ. ನಿಮ್ಮ ಪ್ರಯತ್ನ ಯಶಸ್ಸನ್ನು ಪಡೆಯುವಂತಾಗಲಿ” ಎಂದು ಶುಭಹಾರೈಸಿದರು.

ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಸಾಧನೆಯನ್ನು ಮಾಡಿದ ಜೀವನ್ ಇವರು ತಮ್ಮ ಅನುಭವವನ್ನು ಹಂಚಿಕೊಳ್ಳುತ್ತಾ ವಿದ್ಯಾರ್ಥಿಗಳಿಗೆ ಪ್ರೇರಣೆಯನ್ನು ನೀಡಿದರು. ರಾಜ್‌ಕಿರಣ್ ಅವರನ್ನು ಮತ್ತು ಜೀವನ್ ಅವರನ್ನು ಸಂಸ್ಥೆಯ ವತಿಯಿಂದ ಪ್ರಾಂಶುಪಾಲರು ಶಾಲು ಹಾಗು ಸ್ಮರಣಿಕೆ ನೀಡಿ ಗೌರವಿಸಿದರು. ಈ ಸಂದರ್ಭದಲ್ಲಿ ವೇದಿಕೆಯಲ್ಲಿ ವಿಜ್ಞಾನ ವಿಭಾಗದ ಮುಖ್ಯಸ್ಥ ಬಿ.ಸುಬ್ರಹ್ಮಣ್ಯ ಕಾರಂತ್ ಮತ್ತು ಉಪನ್ಯಾಸಕರು ಉಪಸ್ಥಿತರಿದ್ದರು. ಸಿಇಟಿ ನೀಟ್ ತರಗತಿಗಳ ಸಂಯೋಜಕ ಸ್ವಾತಿ ಅವರು ಪ್ರಾಸ್ತಾವಿಕ ಮಾತುಗಳನ್ನಾಡಿದರು. ವಿದ್ಯಾರ್ಥಿನಿ ಶ್ರೀರಕ್ಷಾ ಸ್ವಾಗತಿಸಿ, ಭವ್ಯ ವಂದಿಸಿದರು. ವಿದ್ಯಾರ್ಥಿ ಆಂಟೊನಿ ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here