ಉಪ್ಪಿನಂಗಡಿಯಲ್ಲಿ ಹಲಸಿನ ಹಬ್ಬ-24ಕ್ಕೆ ಚಾಲನೆ

0

ಮಾರುಕಟ್ಟೆ ಮೌಲ್ಯ ದೊರೆತಾಗ ರೈತರಿಗೆ ಪ್ರಯೋಜನ ಸಾಧ್ಯ: ಶಶಿಕುಮಾರ್ ರೈ ಬಾಲ್ಯೊಟ್ಟು

ಉಪ್ಪಿನಂಗಡಿ: ಹೆಚ್ಚಿನ ಎಲ್ಲರ ಮನೆಯಲ್ಲಿ ಹಲಸು ಇದ್ದು, ಆದರೆ ಅದಕ್ಕೆ ಮಾರುಕಟ್ಟೆ ಮೌಲ್ಯ ದೊರೆತಾಗ ಮಾತ್ರ ರೈತನಿಗೆ ಪ್ರಯೋಜನ ಸಿಗಲು ಸಾಧ್ಯ. ಈ ನಿಟ್ಟಿನಲ್ಲಿ ಜೇಸಿಐಯವರು ಎಲ್ಲರನ್ನೂ ಕ್ರೂಢೀಕರಿಸಿಕೊಂಡು ಹಲಸಿನ ಹಬ್ಬವನ್ನು ಆಯೋಜಿಸಿದ್ದು, ಇದರಿಂದ ಹಲಸಿನ ಮೌಲ್ಯವರ್ಧನೆ ಸಾಧ್ಯ ಎಂದು ದ.ಕ. ಕೇಂದ್ರ ಜಿಲ್ಲಾ ಸಹಕಾರಿ ಬ್ಯಾಂಕ್ ನಿರ್ದೇಶಕ ಶಶಿಕುಮಾರ್ ರೈ ಬಾಲ್ಯೊಟ್ಟು ತಿಳಿಸಿದರು.


ಜೇಸಿಐ ಉಪ್ಪಿನಂಗಡಿ ಚಾರಿಟೇಬಲ್ ಟ್ರಸ್ಟ್, ಜೇಸಿಐ ಉಪ್ಪಿನಂಗಡಿ, ಉಪ್ಪಿನಂಗಡಿ ಸಹಕಾರಿ ವ್ಯವಸಾಯಿಕ ಸಂಘ ಸೇರಿದಂತೆ ವಿವಿಧ ಸಂಘ ಸಂಸ್ಥೆಗಳ ಆಶ್ರಯದಲ್ಲಿ ಉಪ್ಪಿನಂಗಡಿಯ ಎಚ್.ಎಂ. ಅಡಿಟೋರಿಯಂನಲ್ಲಿ ಎರಡು ದಿನಗಳ ಕಾಲ ನಡೆಯುವ ‘ಹಲಸು ಹಬ್ಬ- 24’ನ್ನು ಜು.6ರಂದು ಹಲಸಿನ ಗಿಡಕ್ಕೆ ನೀರೆರೆಯುವ ಮೂಲಕ ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.


ರೈತರು ಬೆಳೆಯುವ ಉತ್ಪನ್ನಗಳಿಗೆ ಉತ್ತಮ ಮಾರುಕಟ್ಟೆ ದೊರೆತಾಗ ಮಾತ್ರ ರೈತನ ಬದುಕು ಹಸನಾಗಲು ಸಾಧ್ಯ. ಹಲಸಿನಿಂದ ವಿವಿಧ ಉತ್ಪನ್ನಗಳನ್ನು ತಯಾರಿಸಲು ಸಾಧ್ಯವಿದ್ದು, ಅದಕ್ಕೊಂದು ಉತ್ತಮ ಮಾರುಕಟ್ಟೆ ದೊರೆಯಬೇಕು. ಈ ನಿಟ್ಟಿನಲ್ಲಿ ಜೇಸಿಐ ಪ್ರಯತ್ನ ಶ್ಲಾಘನೀಯ ಎಂದರು.


ಅತಿಥಿಯಾಗಿದ್ದ ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘದ ಅಧ್ಯಕ್ಷ ಸಹಕಾರ ರತ್ನ ಚಿತ್ತರಂಜನ್ ಬೋಳಾರ್ ಮಾತನಾಡಿ, ನಮ್ಮ ಹಿರಿಯರ ಕಾಲದಲ್ಲಿ ಆಹಾರವಾಗಿದ್ದ ಹಲಸು ಬಳಿಕದ ಕಾಲಘಟ್ಟದಲ್ಲಿ ಯಾರಿಗೂ ಬೇಡವಾಗಿ ಬಿಸಾಡುವಂತಹ ಹಂತ ತಲುಪಿತ್ತು. ಆದರೆ ಈಗ ಮತ್ತೆ ಹಲಸಿಗೆ ಮಾರುಕಟ್ಟೆ ಮೌಲ್ಯ ಬಂದಿದೆ. ಕ್ಯಾನ್ಸರ್‌ನಂತಹ ಮಾರಕ ರೋಗಗಳಿಗೂ ಹಲಸು ಔಷಧಿಯಾಗಿದೆ. ಇಂತಹ ಮೇಳಗಳು ಇನ್ನಷ್ಟು ನಡೆದಾಗ ಹಲಸಿಗೆ ಉತ್ತಮ ಮಾರುಕಟ್ಟೆ ದೊರೆಯಲು ಸಾಧ್ಯ ಎಂದರು.


ಉಪ್ಪಿನಂಗಡಿ ಸಹಕಾರಿ ವ್ಯವಸಾಯಿಕ ಸಂಘದ ಅಧ್ಯಕ್ಷ ಕೆ.ವಿ. ಪ್ರಸಾದ ಮಾತನಾಡಿ, ಹಲಸಿಗೆ ಮಾರುಕಟ್ಟೆಯ ಮೌಲ್ಯ ದೊರಕಿಸಿಕೊಡಲು ಮೊದಲಾಗಿ ಪ್ರೇರಣೆ ಕೊಟ್ಟವರು ಶ್ರೀಪಡ್ರೆಯವರು. ಹಲಸನ್ನು ಹಣ್ಣು ಮಾಡಿ ಮಾತ್ರ ತಿನ್ನುವುದಲ್ಲ. ಹಲಸಿನಿಂದ ದೋಸೆ, ಇತರ ಬೇರೆ ಬೇರೆ ಖಾದ್ಯಗಳನ್ನು ಮಾಡಬಹುದು. ಎಲ್ಲರೂ ಒಂದೇ ಕೃಷಿಯ ಮೊರೆ ಹೋದಾಗ ಅದಕ್ಕಿರುವ ಮಾರುಕಟ್ಟೆ ಮೌಲ್ಯ ಕುಸಿಯುತ್ತದೆ. ಆದ್ದರಿಂದ ಹಲಸನ್ನು ಪರ್ಯಾಯ ಕೃಷಿಯನ್ನಾಗಿ ಬೆಳೆಸುವತ್ತ ಕೃಷಿಕರು ಯೋಚನೆ ಮಾಡಬೇಕು ಎಂದರು.


ಜೇಸಿಐ ಭಾರತದ ಪೂರ್ವ ರಾಷ್ಟ್ರೀಯ ಉಪಾಧ್ಯಕ್ಷ ಪುರಂದರ ರೈ ಮಿತ್ರಂಪಾಡಿ ಮಾತನಾಡಿ, ಹಲಸಿಗೆ ಮತ್ತು ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಜನತೆಗೆ ಅವಿನಾಭವ ಸಂಬಂಧ ಇದೆ. ನಮ್ಮ ಹಿರಿಯರು ಹಲಸನ್ನು ಆಹಾರವಾಗಿ ಉಪಯೋಗಿಸುತ್ತಿದ್ದರಲ್ಲದೆ, ಆ ಸಂದರ್ಭದಲ್ಲಿ ಕೃಷಿ ಕೆಲಸಕ್ಕೆ ಬರುವ ಕಾರ್ಮಿಕರಿಗೆ ಹಲಸಿನ ಬೀಜ ಮತ್ತು ಉಪ್ಪಿನಲ್ಲಿ ಹಾಕಿಡಲಾಗುವ ಹಲಸಿನ ಸೊಲೆಯನ್ನು ಹಣದ ಬದಲಿಗೆ ನೀಡುತ್ತಿದ್ದರು. ಅಂತಹ ಶ್ರೇಷ್ಟತೆ ಹಲಸಿಗಿತ್ತು. ಈಗ ಮತ್ತೆ ಹಲಸು ಮತ್ತು ಅದರ ಉತ್ಪನ್ನಗಳಿಗೆ ಮಾನ್ಯತೆ ಸಿಗಲೆಂದು ಇಂತಹ ಹಲಸಿನ ಮೇಳಗಳು ಆಯೋಜನೆಗೊಳ್ಳುತ್ತಿದ್ದು, ಮುಂದಿನ 5-10 ವರ್ಷದಲ್ಲಿ ಹಲಸಿಗೆ ಅಂತರಾಷ್ಟ್ರೀಯ ಮಾನ್ಯತೆ ದೊರೆಯಲಿದೆ ಎಂದರು.


ಕಾರ್ಯಕ್ರಮದಲ್ಲಿ ಕೃಷಿಕರಾದ ನೇಮಣ್ಣ ಪೂಜಾರಿ ಪಾಲೇರಿ, ಸಿದ್ದಪ್ಪ ನಾಯ್ಕ್, ಧರ್ನಪ್ಪ ಗೌಡ ಅಂಡಿಲ, ಕೆ.ಪಿ. ಜಯರಾಮ ಶೆಟ್ಟಿ, ಪ್ರತಾಪ್ ಪೆರಿಯಡ್ಕ, ಪದ್ಮ ಶೆಟ್ಟಿ ಅಡೆಕ್ಕಲ್ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ವೇದಿಕೆಯಲ್ಲಿ ಐಸಿಎಆರ್ ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿ ಡಾ. ರಶ್ಮಿ, ಉಪ್ಪಿನಂಗಡಿ ರೋಟರಿ ಕ್ಲಬ್ ಅಧ್ಯಕ್ಷ ನವೀನ್ ಬ್ರಾಗ್ಸ್, ಪೋಟೋಗ್ರಾಫರ್ ಅಸೋಸಿಯೇಶನ್‌ನ ಪುತ್ತೂರು ವಲಯಾಧ್ಯಕ್ಷ ರಘು ಶೆಟ್ಟಿ, ಒಡಿಯೂರು ಶ್ರೀ ಗ್ರಾಮವಿಕಾಸ ಯೋಜನೆಯ ಸಂಯೋಜಿಯಕಿಯರಾದ ಸುಮಿತ್ರ, ಭಾರತಿ, ಜೇಸಿಯ ಉಪ್ಪಿನಂಗಡಿಯ ಅಧ್ಯಕ್ಷೆ ಲವೀನಾ ಪಿಂಟೋ, ಕಾರ್ಯದರ್ಶಿ ಸುರೇಶ್ ಉಪಸ್ಥಿತರಿದ್ದರು.


ಇದಕ್ಕೂ ಮೊದಲು ಉಪ್ಪಿನಂಗಡಿ ಶ್ರೀ ಸಹಸ್ರಲಿಂಗೇಶ್ವರ- ಮಹಾಕಾಳಿ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಕೆ. ರಾಧಾಕೃಷ್ಣ ನಾಕ್ ಮಳಿಗೆಗಳಿಗೆ ಚಾಲನೆ ನೀಡಿದರು. ಈ ಸಂದರ್ಭ ಗೆಳೆಯರು 94 ಉಪ್ಪಿನಂಗಡಿ ಇದರ ಅಧ್ಯಕ್ಷ ರಾಧಾಕೃಷ್ಣ ಬೊಳ್ಳಾವು ಉಪಸ್ಥಿತರಿದ್ದರು. ಸಭಾ ಕಾರ್ಯಕ್ರಮಕ್ಕೂ ಮೊದಲು ನೇತ್ರಾವತಿ ನದಿಗೆ ಹಾಲೆರೆಯಲಾಯಿತು.
ಅಧ್ಯಕ್ಷತೆ ವಹಿಸಿದ್ದ ಜೇಸಿಐ ಉಪ್ಪಿನಂಗಡಿ ಚಾರಿಟೇಬಲ್ ಟ್ರಸ್ಟ್‌ನ ಅಧ್ಯಕ್ಷ ಪ್ರಶಾಂತ್ ಕುಮಾರ್ ರೈ ಸ್ವಾಗತಿಸಿದರು. ಶಶಿಧರ ನೆಕ್ಕಿಲಾಡಿ ಜೇಸಿವಾಣಿ ವಾಚಿಸಿದರು. ಜೇಸಿಐ ನಿಕಟಪೂರ್ವಾಧ್ಯಕ್ಷ ಶೇಖರ ಗೌಂಡತ್ತಿಗೆ ವಂದಿಸಿದರು. ಪೂರ್ವಾಧ್ಯಕ್ಷ ಮೋಹನಚಂದ್ರ ತೋಟದಮನೆ ಪ್ರಾಸ್ತಾವಿಕವಾಗಿ ಮಾತನಾಡಿ, ಕಾರ್ಯಕ್ರಮ ನಿರೂಪಿಸಿದರು. ಜೇಸಿಗಳಾದ ಕೇಶವ ರಂಗಾಜೆ, ಮೋನಪ್ಪ ಪಮ್ಮನಮಜಲು, ಉಮೇಶ್ ಆಚಾರ್ಯ, ಗುಣಕರ ಅಗ್ನಾಡಿ, ಎ.ವಿ. ಕುಲಾಲ್ ವಿವಿಧ ಕಾರ್ಯಕ್ರಮಗಳನ್ನು ನಿರ್ವಹಿಸಿದರು.

LEAVE A REPLY

Please enter your comment!
Please enter your name here