ಉಪ್ಪಿನಂಗಡಿಯಲ್ಲಿ ಅಕ್ರಮ- ಸಕ್ರಮ ಬೈಠಕ್

0

ಭ್ರಷ್ಟಾಚಾರವಿಲ್ಲದೆ, ರಾಜಕೀಯ ರಹಿತವಾಗಿ ಕಡತಗಳ ವಿಲೇವಾರಿ: ಅಶೋಕ್ ಕುಮಾರ್ ರೈ

ಉಪ್ಪಿನಂಗಡಿ: ಕಳೆದ ಐದು ವರ್ಷದಲ್ಲಿ ಪುತ್ತೂರು ವಿಧಾನ ಸಭಾ ಕ್ಷೇತ್ರದಲ್ಲಿ ೨೮ ಸಾವಿರ ಅಕ್ರಮ- ಸಕ್ರಮ ಕಡತಗಳು ಪೆಂಡಿಂಗ್ ಆಗಿವೆ. ಈ ಬಗ್ಗೆ ಕಾರಣ ನನಗೆ ಗೊತ್ತಿಲ್ಲ. ಯಾರು ಅಕ್ರಮ- ಸಕ್ರಮದಡಿ ಅರ್ಜಿ ಕೊಟ್ಟಿದ್ದಾರೋ? ಯಾರು 94ಸಿ, 94ಸಿಸಿ ಅರ್ಜಿ ಕೊಟ್ಟಿದ್ದಾರೋ ಅವರೆಲ್ಲರ ಕಡತವನ್ನು ಯಾವುದೇ ಭ್ರಷ್ಟಾಚಾರವಿಲ್ಲದೆ, ಪಕ್ಷ- ರಾಜಕೀಯ ರಹಿತವಾಗಿ ಕಾನೂನು ಪರಿಧಿಯೊಳಗೆ ವಿಲೇವಾರಿ ಮಾಡುವ ಕೆಲಸ ಓರ್ವ ಶಾಸಕನಾಗಿ ನನ್ನದಾಗಿದ್ದು, ಅದರ ಮೊದಲ ಹಂತ ಈಗ ಆರಂಭವಾಗಿದೆ ಎಂದು ಶಾಸಕ ಅಶೋಕ್ ಕುಮಾರ್ ರೈ ಹೇಳಿದರು.


ಉಪ್ಪಿನಂಗಡಿ ಗ್ರಾ.ಪಂ. ಸಭಾಂಗಣದಲ್ಲಿ ಜು.6ರಂದು ನಡೆದ ಬೆಳ್ಳಿಪ್ಪಾಡಿ, ಕೋಡಿಂಬಾಡಿ, 34 ನೆಕ್ಕಿಲಾಡಿ, ಉಪ್ಪಿನಂಗಡಿ, ಹಿರೇಬಂಡಾಡಿ ಮತ್ತು ಬಜತ್ತೂರು ಗ್ರಾಮಗಳ ಅಕ್ರಮ- ಸಕ್ರಮ ಬೈಠಕ್ ಮತ್ತು ಹಕ್ಕು ಪತ್ರ ವಿತರಣಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.


ಹಲವು ವರ್ಷಗಳಿಂದ ಕೃಷಿ ಮಾಡಿಕೊಂಡು ಬಂದ ಸರಕಾರಿ ಭೂಮಿಯನ್ನು ಅವರ ವಶಕ್ಕೆ ಪಡೆದುಕೊಳ್ಳುವುದು, ತಾವು ವಾಸವಾಗಿದ್ದ ಸರಕಾರಿ ಭೂಮಿಯ ಹಕ್ಕನ್ನು 94ಸಿ, ಅಥವಾ 94 ಸಿಸಿಯಲ್ಲಿ ಪಡೆದುಕೊಳ್ಳುವುದು ಅವರ ಹಕ್ಕು. ಅಕ್ರಮ- ಸಕ್ರಮದಡಿಯಾಗಲೀ, ೯೪ಸಿಯಿಂದಾಗಲಿ ಜನರಿಗೆ ಸಿಗುವ ಜಾಗವನ್ನು ಯಾರೋ ಅಧಿಕಾರಿಯ ಮನೆಯಿಂದ ಕೊಡುವುದಲ್ಲ. ಕಾನೂನಾತ್ಮಕವಾಗಿ ಅದು ಸರಕಾರ ಕೊಡುವಂತದ್ದು. ಆದ್ದರಿಂದ ದಯವಿಟ್ಟು ಇಂತಹ ಅರ್ಜಿಗಳ ಕಡತ ಬಾಕಿಯಿಟ್ಟು ಜನರನ್ನು ಸತಾಯಿಸುವಂತಹ ಕೆಲಸ ಹಾಗೂ ಮೊಸರಲ್ಲಿ ಕಲ್ಲು ಹುಡುಕುವ ಕೆಲಸ ಅಧಿಕಾರಿಗಳು ಮಾಡಬೇಡಿ. ನನ್ನ ಕ್ಷೇತ್ರದಲ್ಲಿ ಯಾವುದೇ ಭ್ರಷ್ಟಾಚಾರ ನಡೆಯಲು ನಾನು ಆಸ್ಪದ ನೀಡುವುದಿಲ್ಲ. ಆದ್ದರಿಂದ ನನ್ನ ನಿಲುವಿಗೆ ಬದ್ಧರಾದ ಅಧಿಕಾರಿಗಳು ಮಾತ್ರ ಈ ಕ್ಷೇತ್ರದಲ್ಲಿ ನಿಲ್ಲಬಹುದು. ಇಲ್ಲದಿದ್ದಲ್ಲಿ ನಿಮ್ಮ ನಿಮ್ಮ ಜಾಗಕ್ಕೆ ಹೋಗಬಹುದು ಎಂದು ಖಡಕ್ಕಾಗಿ ನುಡಿದ ಶಾಸಕ ಅಶೋಕ್ ಕುಮಾರ್ ರೈಯವರು, ಶಾಸಕನಾದ ಮೇಲೆ ನಾನು ಎಲ್ಲರ ಶಾಸಕನಾಗಿದ್ದು, ತನ್ನ ಕೆಲಸ ಕಾರ್ಯದಲ್ಲಿ ನಾನು ಯಾವುದೇ ರಾಜಕೀಯ ಬೇಧ ಮಾಡೋದಿಲ್ಲ. ಅಕ್ರಮ- ಸಕ್ರಮದಡಿಯಲ್ಲಾಗಲೀ, 94ಸಿ, 94ಸಿಸಿಯಲ್ಲಾಗಲೀ ನಿಮ್ಮ ಹಕ್ಕನ್ನು ಪಡೆದುಕೊಳ್ಳಲು ಯಾರೂ ಕೂಡಾ ಯಾವುದೇ ಅಧಿಕಾರಿಗಳಿಗೆ ಲಂಚ ಕೊಡುವುದಾಗಲೀ, ಅವರಿಗೆ ದಮ್ಮಯ್ಯ ಹೊಡೆಯುವ ಕೆಲಸವನ್ನು ಮಾಡಬೇಡಿ. ಅವರು ಲಂಚ ಪಡೆದಿದ್ದರೆ ನನ್ನ ಗಮನಕ್ಕೆ ತನ್ನಿ ಎಂದರು.


ಅಕ್ರಮ- ಸಕ್ರಮ ಕಡತ ಈಗ ಆಪ್‌ನಲ್ಲಿ ಆನ್‌ಲೈನ್ ಮೂಲಕ ನೋಂದಣಿಯಾಗಬೇಕಿದೆ. ನಾನು ಶಾಸಕನಾದ ಮೇಲೆ ಅಕ್ರಮ- ಸಕ್ರಮ ಸಮಿತಿ ನೇಮಕವಾಗಲು ಆರು ತಿಂಗಳು ಹಿಡಿದಿದೆ. ಆದರೂ ನಾನು ಸರಕಾರಕ್ಕೆ ಒತ್ತಡಗಳನ್ನು ತಂದಿದ್ದರಿಂದ ರಾಜ್ಯದಲ್ಲಿ ಮೊದಲ ಬಾರಿಗೆ ಅಕ್ರಮ- ಸಕ್ರಮ ಬೈಠಕ್ ಆಪ್ ಮೂಲಕ ನನ್ನ ಕ್ಷೇತ್ರದಲ್ಲಿ ಮೊದಲ ಬಾರಿಗೆ ಆಗಿದೆ. ಇದು ಎರಡನೇ ಬೈಠಕ್ ಆಗಿದ್ದು, ಚುನಾವಣೆ ಸಂದರ್ಭ ಮಾತು ಕೊಟ್ಟಂತೆ ಗ್ರಾಮ ಮಟ್ಟದಲ್ಲಿ ಅಕ್ರಮ- ಸಕ್ರಮ ಬೈಠಕನ್ನು ನಡೆಸುತ್ತಿದ್ದೇನೆ. ಈಗ ಬಂದಿರುವ ಆಪ್‌ನಲ್ಲಿ ಕೆಲವೊಂದು ಲೋಪದೋಷಗಳಿದ್ದು, ಅದನ್ನು ಶೀಘ್ರದಲ್ಲೇ ಸರಿಪಡಿಸುವ ಕೆಲಸ ಮಾಡಲಾಗುವುದು. ಈ ಬಗ್ಗೆ ಮುಂದಿನ ಅಧಿವೇಶನದಲ್ಲಿ ಕೂಡಾ ಮಾತನಾಡುತ್ತೇನೆ. ಇಂದು ಕೆಲವರು ನಮ್ಮ ಅಕ್ರಮ- ಸಕ್ರಮ ಕಡತ ವಿಲೇವಾರಿಯಾಗಬೇಕೆಂದು ಹೆದರಬೇಕಿಲ್ಲ. ಆಪ್‌ನ ದೋಷದಿಂದಾಗಿ ಸ್ವಲ್ಪ ಸಮಸ್ಯೆಯಾಗಿದೆ. ಅದನ್ನು ಸರಿಪಡಿಸಿಕೊಂಡು ಮುಂದಿನ ದಿನಗಳಲ್ಲಿ ಅರ್ಜಿ ಹಾಕಿದ ಎಲ್ಲರಿಗೂ ಕಾನೂನು ಪರಿಧಿಯೊಳಗೆ ಅಕ್ರಮ- ಸಕ್ರಮ ಕಡತ ವಿಲೇವಾರಿ ಹಾಗೂ 94ಸಿ, 94ಸಿಸಿ ಹಕ್ಕು ಪತ್ರ ನೀಡಲಾಗುವುದು ಎಂದರು.


ಅಕ್ರಮ- ಸಕ್ರಮ ಸಮಿತಿಯ ಸದಸ್ಯ ಮುಹಮ್ಮದ್ ಬಡಗನ್ನೂರು ಮಾತನಾಡಿ, ಹಸಿವಾದ್ರೆ ಅನ್ನ ಕೊಡಬೇಡಿ. ಅನ್ನ ಪಡೆಯುವ ದಾರಿ ಕೊಡಿ ಎಂಬ ನಿಲುವು ನಮ್ಮ ಶಾಸಕರಾಗಿದ್ದು, ಹಲವು ವರ್ಷಗಳಿಂದ ವಿಲೇವಾರಿಯಾಗದೇ ಬಾಕಿ ಉಳಿದಿರುವ ನನ್ನ ಕ್ಷೇತ್ರದ ಎಲ್ಲಾ ಅಕ್ರಮ-ಸಕ್ರಮ, 94ಸಿ, 94ಸಿಸಿ ಕಡತಗಳನ್ನು ಶೀಘ್ರ ವಿಲೇವಾರಿ ಮಾಡುವ ಮೂಲಕ ಕ್ಷೇತ್ರದ ಜನತೆಗೆ ನ್ಯಾಯ ಕೊಡುವ ಹುಮ್ಮಸ್ಸಿನಿಂದ ಶಾಸಕರು ಹೊರಟಿದ್ದರೂ, ಅವರ ವೇಗಕ್ಕೆ ಅಕ್ರಮ- ಸಕ್ರಮದ ಆಪ್ ತೆರೆದುಕೊಳ್ಳುತ್ತಿಲ್ಲ. ಆದ್ದರಿಂದ ಅವರ ನಿರೀಕ್ಷೆಯಷ್ಟು ಕಡತಗಳ ವಿಲೇವಾರಿ ಈಗ ಆಗಿಲ್ಲ. ರಾಜ್ಯ ಮಟ್ಟದಲ್ಲಿ ಈ ಆಪ್‌ನ ಲೋಪ-ದೋಷಗಳನ್ನು ಸರಿಪಡಿಸಿಕೊಳ್ಳಬೇಕಾಗಿದ್ದು, ಮುಂದಿನ ದಿನಗಳಲ್ಲಿ ಆ ಕೆಲಸ ನಡೆದು, ಎಲ್ಲರಿಗೂ ಹಕ್ಕು ಪತ್ರ ಸಿಗಲಿದೆ ಎಂದರು.


ಪುತ್ತೂರು ತಹಶೀಲ್ದಾರ್ ಪುರಂದರ ಹೆಗ್ಡೆ ಪ್ರಾಸ್ತಾವಿಕವಾಗಿ ಮಾತನಾಡಿ, ಮೊದಲು ಮಾನವ ನಿರ್ಮಿತವಾಗಿ ಅಕ್ರಮ- ಸಕ್ರಮದ ಹಕ್ಕು ನೀಡಲಾಗುತ್ತಿತ್ತು. ಆದರೆ ಈಗ ಆಪ್ ಮೂಲಕ ಆನ್‌ಲೈನ್‌ನಲ್ಲಿ ಕಡತಗಳ ವಿಲೇವಾರಿ ನಡೆಯುತ್ತಿದ್ದು, ಇದರಲ್ಲಿ ಮೋಸ, ವಂಚನೆ, ಭ್ರಷ್ಟಾಚಾರಕ್ಕೆ ಅವಕಾಶವಿಲ್ಲ. ರಾಜ್ಯದಲ್ಲಿ ಪ್ರಪ್ರಥಮ ಬಾರಿಗೆ ಪುತ್ತೂರಿನಲ್ಲಿ ಆಪ್ ಮೂಲಕ ಅಕ್ರಮ- ಸಕ್ರಮ ಬೈಠಕ್ ನಡೆಸಲಾಗಿದೆ. ಶಾಸಕರ ಪ್ರಯತ್ನದಿಂದ ಈಗ ತಾಲೂಕು ಕಚೇರಿಯಲ್ಲೂ ಕೂಡಾ ಆಧಾರ್ ನೋಂದಣಿ ಕೇಂದ್ರ ಉದ್ಘಾಟನೆಗೊಂಡಿದೆ ಎಂದರು.


ವೇದಿಕೆಯಲ್ಲಿ ಅಕ್ರಮ ಸಮಿತಿಯ ಸದಸ್ಯರಾದ ರಾಮಣ್ಣ ಪಿಲಿಂಜ, ರೂಪಾರೇಖಾ ಆಳ್ವ, ಉಪ್ಪಿನಂಗಡಿ ಗ್ರಾ.ಪಂ. ಅಧ್ಯಕ್ಷೆ ಶ್ರೀಮತಿ ಲಲಿತಾ, ಉಪಾಧ್ಯಕ್ಷೆ ವಿದ್ಯಾಲಕ್ಷ್ಮೀ ಪ್ರಭು ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಉಪ್ಪಿನಂಗಡಿ ಕಂದಾಯ ಹೋಬಳಿ ಉಪತಹಶೀಲ್ದಾರ್ ಚೆನ್ನಪ್ಪ ಗೌಡ, ಕಂದಾಯ ಇಲಾಖೆಯ ತಾಲೂಕು ಮಟ್ಟದ ಅಧಿಕಾರಿಗಳು, ವಿಎಗಳು, ಉಪ್ಪಿನಂಗಡಿ ಗ್ರಾ.ಪಂ. ಅಭಿವೃದ್ಧಿ ಅಧಿಕಾರಿ ವಿಲ್ಫ್ರೆಡ್ ಲಾರೆನ್ಸ್ ರೊಡ್ರಿಗಸ್, ಕಾರ್ಯದರ್ಶಿ ಗೀತಾ ಶೇಖರ್, ವಿಟ್ಲ- ಉಪ್ಪಿನಂಗಡಿ ಬ್ಲಾಕ್ ಕಾಂಗ್ರೆಸ್ ನಿಕಟಪೂರ್ವಾಧ್ಯಕ್ಷ ಡಾ. ರಾಜಾರಾಮ್ ಕೆ.ಬಿ., ಜಿಲ್ಲಾ ಕಾಂಗ್ರೆಸ್‌ನ ಉಪಾಧ್ಯಕ್ಷರಾದ ಮುರಳೀಧರ ರೈ ಮಠಂತಬೆಟ್ಟು, ಉಮಾನಾಥ ಶೆಟ್ಟಿ ಪೆರ್ನೆ, ಕಾಂಗ್ರೆಸ್ ವಲಯಾಧ್ಯಕ್ಷರಾದ ಅನಿ ಮಿನೇಜಸ್, ಆದಂ ಕೊಪ್ಪಳ, ರವಿ ಪಟಾರ್ತಿ, ಮೋನಪ್ಪ ಪಲ್ಲಮಜಲು, ಉಪ್ಪಿನಂಗಡಿ ಗ್ರಾ.ಪಂ. ಸದಸ್ಯರಾದ ಅಬ್ದುರ್ರಹ್ಮಾನ್ ಕೆ., ಅಬ್ದುರ್ರಶೀದ್, ಧನಂಜಯ ನಟ್ಟಿಬೈಲು, ಕಾಂಗ್ರೆಸ್ ಮುಖಂಡರಾದ ನಝೀರ್ ಮಠ, ಜಯಪ್ರಕಾಶ್ ಬದಿನಾರು, ಯೊಗೀಶ್ ಸಾಮಾನಿ, ಜಗನ್ನಾಥ ಶೆಟ್ಟಿ ನಡುಮನೆ, ವೆಂಕಪ್ಪ ಪೂಜಾರಿ ಮರುವೇಲು, ರೈ ಎಸ್ಟೇಟ್ ಎಜ್ಯುಕೇಶನ್ ಆಂಡ್ ಚಾರಿಟೇಬಲ್ ಟ್ರಸ್ಟ್‌ನ ಅಧ್ಯಕ್ಷ ಸುದೇಶ್ ಶೆಟ್ಟಿ, ಪ್ರಮುಖರಾದ ಸೀತಾರಾಮ ಶೆಟ್ಟಿ ಹೆಗ್ಡೆಹಿತ್ಲು, ಶಿವಪ್ರಸಾದ್ ರೈ ಮಠಂತಬೆಟ್ಟು ಮತ್ತಿತರರು ಉಪಸ್ಥಿತರಿದ್ದರು.
ಉಪ್ಪಿನಂಗಡಿ ಕಂದಾಯ ನಿರೀಕ್ಷಕ ಚಂದ್ರ ನಾಯ್ಕ ಸ್ವಾಗತಿಸಿ, ವಂದಿಸಿದರು.

ಉತ್ತಮ ಕೆಲಸ ಮಾಡಿದ್ದರೆ ಮಾತ್ರ ಓಟು ಕೊಡಿ
ಹಕ್ಕು ಪತ್ರವನ್ನು ವಿತರಿಸುವಾಗ ಶಾಸಕರು ಅರ್ಜಿ ಕೊಟ್ಟು ಎಷ್ಟು ಸಮಯವಾಗಿದೆ ಎಂದು ಅವರಲ್ಲಿ ಪ್ರಶ್ನಿಸಿದ್ದಾಗ ಅವರು ನೀಡಿದ ಉತ್ತರವು ಶಾಸಕರನ್ನು ಅಚ್ಚರಿಗೊಳಪಡಿಸುವಂತಾಯಿತು. ಬಳಿಕ ಮಾತನಾಡಿದ ಶಾಸಕ ಅಶೋಕ್ ಕುಮಾರ್ ರೈ, ಮನೆಯಡಿಯ ಜಾಗಕ್ಕೆ ಹಕ್ಕು ಪತ್ರ ಪಡೆಯಲು ಕೆಲವರು 94ಸಿಯಡಿ ಅರ್ಜಿ ಕೊಟ್ಟು 3ರಿಂದ 4 ವರ್ಷ ಆಗಿದೆ. ಅವರಿಗೆ ಹಕ್ಕು ಪತ್ರ ನೀಡಲು ನಾನೇ ಬರಬೇಕಾಗಿತ್ತ. ಅವರ ಕಡತ ಬಾಕಿಯುಳಿಯಲು ಕಾರಣವೇನು? ಘಟ್ಟ ಪ್ರದೇಶಕ್ಕೆ ಒಮ್ಮೆ ಹೋಗಿ ನೋಡಿ. ಅಲ್ಲಿ ಒಬ್ಬೊಬ್ಬರಿಗೆ 30ರಿಂದ40 ಎಕರೆ ಜಮೀನು ಇರುತ್ತದೆ. ಆದರೆ ಇಲ್ಲಿ ಮನೆಯಡಿಯ ನಿವೇಶನಕ್ಕೆ ಬಡವರು ಅರ್ಜಿ ಸಲ್ಲಿಸಿದರೆ, ಯಾಕೆ ಅದನ್ನು ಕಡೆಗಣಿಸುತ್ತೀರಿ? ಎಂದು ಅಧಿಕಾರಿಗಳನ್ನು ಪ್ರಶ್ನಿಸಿದರಲ್ಲದೆ, ಅಧಿಕಾರಿಗಳು ಇಂದು ಬರುತ್ತಾರೆ. ನಾಳೆ ಹೋಗುತ್ತಾರೆ. ಆದರೆ ಜನಪ್ರತಿನಿಧಿಗಳು ಇಲ್ಲೇ ಇರುವವರು. ಜನಪ್ರತಿನಿಧಿಗಳಾದವರು ಅಲ್ಲಿನ ಜನರ ಇಂತಹ ಕಡತಗಳನ್ನು ಅಧಿಕಾರಿಗಳಿಗೆ ತೋರಿಸುವ ಕೆಲಸ ಮಾಡಬೇಕು. ನಾನು ಶಾಸಕನಾಗಿ ಆಯ್ಕೆಯಾದ ಮೇಲೆ 2,500 ಹಕ್ಕು ಪತ್ರಗಳ್ನು ನೀಡಿದ್ದು, ಯಾವುದೇ ಭ್ರಷ್ಟಾಚಾರವಾಗಲೀ, ಪಕ್ಷಭೇಧವಾಗಲಿ ಮಾಡಿಲ್ಲ. ನಾನು ಕ್ಷೇತ್ರದಲ್ಲಿ ಉತ್ತಮ ಕೆಲಸ ಮಾಡಿದ್ದೇನೆ ಅಂದರೆ ಮಾತ್ರ ನನಗೆ ಮುಂದಕ್ಕೆ ಓಟು ಕೊಡಿ. ಉತ್ತಮ ಕೆಲಸ ಮಾಡಿಲ್ಲ ಅಂದರೆ ನನಗೆ ಮತ ನೀಡಬೇಡಿ ಎಂದರು.

ಉಪ್ಪಿನಂಗಡಿಯಲ್ಲಿಂದು 40 ಮಂದಿಗೆ ಹಕ್ಕು ಪತ್ರ ನೀಡಲಾಯಿತು. 16 ಅಕ್ರಮ- ಸಕ್ರಮ ಕಡತಗಳನ್ನು ಬೈಠಕ್‌ನಲ್ಲಿ ವಿಲೇವಾರಿ ಮಾಡಲಾಯಿತು.

LEAVE A REPLY

Please enter your comment!
Please enter your name here