ಪುತ್ತೂರು: ಪುತ್ತೂರಿನ ಎಪಿಎಂಸಿ ರಸ್ತೆಯ ಮಣಾಯಿ ಆರ್ಚ್ನಲ್ಲಿ ಪ್ರಧಾನ ಕಚೇರಿ ಹೊಂದಿರುವ ಒಕ್ಕಲಿಗ ಸಮುದಾಯ ಪತ್ತಿನ ಸಹಕಾರ ಸಂಘದ 10ನೇ ಶಾಖೆಯು ವಿಟ್ಲದಲ್ಲಿ ಜು.13ಕ್ಕೆ ಉದ್ಘಾಟನೆಗೊಳ್ಳಲಿದೆ ಎಂದು ಸಂಘದ ಅಧ್ಯಕ್ಷ ಚಿದಾನಂದ ಬೈಲಾಡಿ ತಿಳಿಸಿದರು.
ಜು.8ರಂದು ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು, ಪುತ್ತೂರು ತಾಲೂಕು ಒಕ್ಕಲಿಗ ಗೌಡ ಸೇವಾ ಸಂಘದ ಪ್ರಾಯೋಜಕತ್ವದಲ್ಲಿ 2002ರಲ್ಲಿ ಶ್ರೀ ಮಹಾಲಿಂಗೇಶ್ವರ ಸಭಾ ಭವನದ ಕಟ್ಟಡದಲ್ಲಿ ಪ್ರಾರಂಭಗೊಂಡ ಒಕ್ಕಲಿಗ ಸಮುದಾಯ ಪತ್ತಿನ ಸಹಕಾರ ಸಂಘವು ಪುತ್ತೂರು ಎಪಿಎಂಸಿ, ಕಡಬ, ಉಪ್ಪಿನಂಗಡಿ, ನೆಲ್ಯಾಡಿ, ಕುಂಬ್ರ, ಆಲಂಕಾರು, ಪುತ್ತೂರು ಎಸ್‌ಎಂಟಿ, ಕಾಣಿಯೂರು, ಬೆಳ್ಳಾರೆ ಶಾಖೆಗಳನ್ನು ಹೊಂದಿದೆ. ಒಟ್ಟು ಸುಮಾರು 8,000ಕ್ಕಿಂತ ಮಿಕ್ಕಿ ಸದಸ್ಯರನ್ನು ಹೊಂದಿದೆ. ಕಳೆದ ಆರ್ಥಿಕ ವರ್ಷದಲ್ಲಿ ರೂ.542 ಕೋಟಿಗಿಂತಲೂ ಮಿಕ್ಕಿ ವ್ಯವಹಾರ ನಡೆಸಿದೆ. ರೂ.4.6 ಕೋಟಿಗಿಂತ ಮಿಕ್ಕಿ ಪಾಲು ಬಂಡವಾಳ, ರೂ.103 ಕೋಟಿಗಿಂತ ಮಿಕ್ಕಿ ಠೇವಣೆ, ರೂ.99 ಕೋಟಿಗಿಂತ ಮಿಕ್ಕಿ ಹೊರಬಾಕಿ ಸಾಲ ಇರುತ್ತದೆ. ಕಳೆದ ಸಾಲಿನಲ್ಲಿ ರೂ.1.50 ಕೋಟಿಗಿಂತಲೂ ಮಿಕ್ಕಿ ಲಾಭ ಪಡಕೊಂಡಿರುತ್ತದೆ. ಸಹಕಾರಿ ಸಂಘದಲ್ಲಿ ಆಸ್ತಿ ಖರೀದಿ, ಆಸ್ತಿ ಅಡವು, ಮನೆ ನಿರ್ಮಾಣ, ವಾಹನ ಸಾಲ, ಠೇವಣಿ ಸಾಲ, ಜಾಮೀನು ಸಾಲ, ವ್ಯಾಪಾರ ಸಾಲ, ಚಿನ್ನಾಭರಣ ಅಡವು, ವೇತನ ಆಧಾರಿತ ಸಾಲ ಸೇರಿದಂತೆ ವಿವಿಧ ಸಾಲಗಳನ್ನು ಆಕರ್ಷಕ ಬಡ್ಡಿಯಲ್ಲಿ ನೀಡಲಾಗುತಿದೆ. ಠೇವಣಿಗಳಿಗೆ ಆಕರ್ಷಕ ಬಡ್ಡಿಯನ್ನು ನೀಡಲಾಗುತ್ತಿದೆ. 2015 ರಿಂದ ಅಡಿಟ್ ವರದಿಯಲ್ಲಿ ನಿರಂತರವಾಗಿ ‘ಎ’ ತರಗತಿ ಪಡೆಯುತ್ತಿದೆ. ಸಂಘದ ಉತ್ತಮ ವ್ಯವಹಾರಕ್ಕಾಗಿ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ನಿಂದ ಸತತ 2 ಬಾರಿ ಸಾಧನಾ ಪ್ರಶಸ್ತಿಯನ್ನು ಪಡೆದಿದೆ ಎಂದರು.
5 ವರ್ಷದಲ್ಲಿ 5 ಶಾಖೆಗಳು:
ಸಂಘದ ಈಗಿನ ಆಡಳಿತ ಮಂಡಳಿಯ ಅವಧಿಯ 5 ವರ್ಷದಲ್ಲಿ 5 ಶಾಖೆಗಳನ್ನು ಪ್ರಾರಂಭಿಸಲಾಗಿದೆ. ವರ್ಷಕ್ಕೊಂದು ಶಾಖೆಯಂತೆ ತೆರೆಯಲಾಗಿದೆ. ಆಲಂಕಾರು, ಪುತ್ತೂರು ಎಸ್.ಎಂ.ಟಿ, ಕಾಣಿಯೂರು, ಬೆಳ್ಳಾರೆಯಲ್ಲಿ ಈಗಾಗಲೇ ಶಾಖೆ ಪ್ರಾರಂಭಿಸಲಾಗಿದ್ದು ವಿಟ್ಲ ಶಾಖೆ ಪ್ರಾರಂಭಗೊಳ್ಳುತ್ತಿದೆ. ಇದು ಸಹಕಾರಿಯ ಬೆಳವಣಿಗೆಗೆ ಪೂರಕವಾಗಿದೆ.
ಮುಂದೆ ಬೆಳ್ತಂಗಡಿಗೆ ವಿಸ್ತರಣೆ:
ತಾಲೂಕು ಮಟ್ಟದಲ್ಲಿ ಪ್ರಾರಂಭಗೊಂಡಿರುವ ಸಹಕಾರಿ ಸಂಘದ ಕಾರ್ಯವನ್ನು ವಿಸ್ತರಿಸುತ್ತಾ ಈಗ ಜಿಲ್ಲಾ ಮಟ್ಟದ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುತ್ತಿದೆ. ಸಹಕಾರಿ ನಿಯಮದಂತೆ ಮಂಗಳೂರು ತಾಲೂಕು ಹೊರತು ಪಡಿಸಿ ಉಳಿದ ತಾಲೂಕುಗಳಲ್ಲಿ ಸಂಘದ ವ್ಯಾಪ್ತಿ ಹೊಂದ್ದು ಪುತ್ತೂರು, ಸುಳ್ಯ, ಕಡಬ, ಬಂಟ್ವಾಳದಲ್ಲಿ ಈಗಾಗಲೇ ಶಾಖೆಗಳನ್ನು ಒಳಗೊಂಡಿದೆ. ಮುಂದೆ ಬೆಳ್ತಂಗಡಿ ತಾಲೂಕಿನಲ್ಲಿಯೂ ಸಂಘದ ಶಾಖೆ ತೆರೆಯುವ ಯೋಜನೆಯಿದೆ. ರಾಜ್ಯಮಟ್ಟದ ವ್ಯಾಪ್ತಿಯ ಅನುಮತಿ ದೊರೆತಾಗ ಮಂಗಳೂರಿನಲ್ಲಿಯೂ ಶಾಖೆ ತೆರೆಯಲಾಗುವುದು.
10 ಶಾಖೆ, 542 ಕೋಟಿ ವ್ಯವಹಾರ:
ಸಂಘದಲ್ಲಿ 10 ಶಾಖೆಗಳನ್ನು ತೆರೆಯುವುದು ಹಾಗೂ 500 ಕೋಟಿ ವಾರ್ಷಿಕ ವ್ಯವಹಾರ ನಡೆಸುವ ಯೋಜನೆ ಹಾಕಿಕೊಳ್ಳಲಾಗಿತ್ತು. ಇದಕ್ಕೆ ಪೂರಕವಾಗಿ ವಿಟ್ಲದಲ್ಲಿ 10ನೇ ಶಾಖೆ ಉದ್ಘಾಟನೆಗೊಳ್ಳುತ್ತಿದೆ. 2023-24ನೇ ಸಾಲಿನಲ್ಲಿ ರೂ.542ಕೋಟಿ ವಾರ್ಷಿಕ ವ್ಯವಹಾರ ನಡೆಸುವ ಮೂಲಕ ಗುರಿ ಮೀರಿ ಸಾಧನೆ ನಡೆಸಿದೆ. 2022-23ರಲ್ಲಿ ರೂ.400ಕೋಟಿ ವ್ಯವಹಾರ ನಡೆಸಿರುವ ಸಂಘವು 2023-24ರಲ್ಲಿ ರೂ.140ಕೋಟಿ ಹೆಚ್ಚುವರಿ ವ್ಯವಹಾರ ನಡೆಸಿದೆ.
ಪ್ರತಿ ಶಾಖೆಯಲ್ಲೂ ಸಲಹಾ ಸಮಿತಿ:
ಸ್ಥಳೀಯವಾಗಿ ಶಾಖೆಯನ್ನು ಬಲಪಡಿಸುವ ನಿಟ್ಟಿನಲ್ಲಿ ಶಾಖೆ ಪ್ರಾರಂಭಿಸುವಾಗ ಆಯಾ ಶಾಖೆಯ ವ್ಯಾಪ್ತಿಯಲ್ಲಿ ಆಯಾ ಭಾಗದ ನಿರ್ದೇಶಕರ ಅಧ್ಯಕ್ಷತೆಯಲ್ಲಿ ಸಲಹಾ ಸಮಿತಿ ಕಾರ್ಯನಿರ್ವಹಿಸುತ್ತಿದೆ. ಶಾಖೆಗಳ ಮೇಲುಸ್ತುವಾರಿಯನ್ನು ಆಯಾ ಶಾಖೆಯ ಸಲಹಾ ಸಮಿತಿಯೇ ನಿರ್ವಹಿಸುತ್ತಿದೆ. ತಳ ಮಟ್ಟದಿಂದ ಅಭಿಪ್ರಾರ ಸಂಗ್ರಹಿಸುವ ನಿಟ್ಟಿನಲ್ಲಿ ಸಲಹಾ ಸಮಿತಿ ಸಭೆಯಲ್ಲಿ ಸ್ಥಳೀಯವಾಗಿ ಅಭಿಪ್ರಾಯಗಳನ್ನು ಸಂಗ್ರಹಿಸಲಾಗುತ್ತಿದೆ. ಪ್ರತಿ ತಿಂಗಳ 2ನೇ ಸೋಮವಾರ ಪ್ರತಿ ಶಾಖೆಯ ಸಭೆ, 3ನೇ ಸೋಮವಾರ ಎಲ್ಲಾ ಶಾಖೆಗಳ ವ್ಯವಸ್ಥಾಪಕರ ಸಭೆ ಹಾಗೂ 4ನೇ ಸೋಮವಾರ ಸಂಘದ ಆಡಳಿತ ಮಂಡಳಿಯ ಸಭೆ ನಡೆಸಲಾಗುತ್ತಿದೆ.
ಸಂಘದ 10ನೇ ಶಾಖೆಯನ್ನು ಶ್ರೀ ಆದಿಚುಂಚನಗಿರಿ ಮಂಗಳೂರು ಶಾಖಾ ಮಠದ ಶ್ರೀ ಡಾ| ಧರ್ಮಪಾಲನಾಥ ಸ್ವಾಮೀಜಿಯವರು ದೀಪ ಪ್ರಜ್ವಲಿಸಿ, ಆಶೀರ್ವಚನ ನೀಡಲಿದ್ದಾರೆ. ಸಂಘದ ಅಧ್ಯಕ್ಷ ಚಿದಾನಂದ ಬೈಲಾಡಿ ಅಧ್ಯಕ್ಷತೆ ವಹಿಸಲಿದ್ದಾರೆ. ಮಾಜಿ ಶಾಸಕ ಸಂಜೀವ ಮಠಂದೂರು, ದ.ಕ.ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ನ ನಿರ್ದೇಶಕ ಶಶಿಕುಮಾರ್ ರೈ ಬಾಲ್ಯೊಟ್ಟು, ಸಹಕಾರ ಸಂಘಗಳ ಉಪನಿಬಂಧಕ ಹೆಚ್.ಎನ್ ರಮೇಶ್, ವಿಟ್ಲ ಪಟ್ಟಣ ಪಂಚಾಯತ್‌ನ ಸದಸ್ಯ ಜಯಂತ ಪಿ. ಹೆಚ್, ಒಕ್ಕಲಿಗ ಗೌಡ ಸೇವಾ ಸಂಘ ಪುತ್ತೂರು ತಾಲೂಕು ಅಧ್ಯಕ್ಷ ರವಿ ಮುಂಗ್ಲಿಮನೆ, ಬಂಟ್ವಾಳ ತಾಲೂಕು ಗೌಡರ ಯಾನೆ ಒಕ್ಕಲಿಗರ ಸಂಘದ ಅಧ್ಯಕ್ಷ ಕೆ.ಮೋನಪ್ಪ ಗೌಡ ಶಿವಾಜಿನಗರ, ಎಂಪೈರ್ ಮಹಲ್‌ನ ಮಾಲಕ ಪೀಟರ್ ಪ್ರಾನ್ಸಿಸ್ ಲಾಸ್ರಾದೋ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದವರು ಹೇಳಿದರು.
ಒಕ್ಕಲಿಗ ಸಮುದಾಯ ಪತ್ತಿನ ಸಹಕಾರ ಸಂಘದ ಉಪಾಧ್ಯಕ್ಷ ಯು.ಪಿ.ರಾಮಕೃಷ್ಣ, ನಿರ್ದೇಶಕ ರಾಮಕೃಷ್ಣ ಕರ್ಮಲ, ಜಿನ್ನಪ್ಪ ಗೌಡ ಮಳವೇಲು, ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಸುಧಾಕರ್ ಕೆ, ಆಂತರಿಕ ಲೆಕ್ಕಪರಿಶೋಧಕ ಶ್ರೀಧರ್ ಕಣಜಾಲು ಪತ್ರಿಕಾಗೋಷ್ಟಿಯಲ್ಲಿ ಉಪಸ್ಥಿತರಿದ್ದರು.