ಉಪ್ಪಿನಂಗಡಿ: ಯಕ್ಷಗಾನ ವೇಷಧಾರಿಯಾಗಿ ಮತ್ತು ಅರ್ಥಧಾರಿಯಾಗಿ ಕುಂಬಳೆ ಶ್ರೀಧರ ರಾವ್ ನಿರ್ವಹಿಸಿದ ಪಾತ್ರಗಳು ಅತ್ಯಂತ ಪ್ರಬುದ್ಧವಾಗಿದ್ದು, ಹಿರಿಯ ಕಲಾವಿದರೊಂದಿಗಿನ ದೀರ್ಘ ಒಡನಾಟದಲ್ಲಿ ಅವರು ಗಳಿಸಿದ ಜ್ಞಾನವನ್ನು ಅಭಿನಯ ಮತ್ತು ಮಾತುಗಲ್ಲಿ ಕೇಳುವ ಅವಕಾಶ ಇನ್ನಿಲ್ಲವೆನ್ನುವ ಕೊರಗು ಕಲಾವಲಯದಲ್ಲಿ ಮೂಡಿದೆ. ಸವ್ಯಸಾಚಿ ಕಲಾವಿದರಾಗಿ ಯಕ್ಷಗಾನದ ಕಿರಿಯ ಕಲಾವಿದರಿಗೆ ಅವರು ನೀಡುತ್ತಿದ್ದ ಮಾರ್ಗದರ್ಶನ ಸದಾ ಸ್ಮರಣೀಯವೆಂದು ಮೂಡಬಿದ್ರೆ ಆಳ್ವಾಸ್ ಕಾಲೇಜಿನ ಉಪನ್ಯಾಸಕ, ಕಲಾವಿದ ವಿದ್ವಾನ್ ಡಾ. ವಿನಾಯಕ ಭಟ್ ಗಾಳಿಮನೆ ತಿಳಿಸಿದರು.
ಉಪ್ಪಿನಂಗಡಿ ಶ್ರೀ ಕಾಳಿಕಾಂಬ ಯಕ್ಷಗಾನ ಕಲಾ ಸೇವಾ ಸಂಘದ ವತಿಯಿಂದ ಶ್ರೀ ಸಹಸ್ರಲಿಂಗೇಶ್ವರ- ಮಹಾಕಾಳಿ ದೇವಾಲಯದ ಸಭಾಂಗಣದಲ್ಲಿ ನಡೆದ ದಿ. ಕುಂಬ್ಳೆ ಶ್ರೀಧರ್ ರಾವ್ ಅವರಿಗೆ ನುಡಿನಮನ ಸಲ್ಲಿಸುವ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ನಿವೃತ್ತ ಶಿಕ್ಷಕ ಗೋಪಾಲ ಶೆಟ್ಟಿ ಕಳೆಂಜ, ಯಕ್ಷಗಾನ ಕಲಾಪೋಷಕ ಉಮೇಶ ಶೆಣೈ ರಾಮನಗರ, ಪಾರೆಂಕಿ ಮಹಿಷಮರ್ಧಿನಿ ಯಕ್ಷಗಾನ ಸಂಘ ಅಧ್ಯಕ್ಷರಾದ ಕಿಶೋರ್ ಶೆಟ್ಟಿ ಮೂಡಾಯಿರು, ಶ್ರೀ ಕಾಳಿಕಾಂಬ ಯಕ್ಷಗಾನ ಸಂಘದ ಅಧ್ಯಕ್ಷ ದಿವಾಕರ ಆಚಾರ್ಯ ಗೇರುಕಟ್ಟೆ, ವಿಶ್ವಕರ್ಮ ಸೇವಾಸಂಘದ ಅಧ್ಯಕ್ಷ ಹರೀಶ್ ಆಚಾರ್ಯ ಪುಳಿತ್ತಡಿ, ಮಾಜಿ ಅಧ್ಯಕ್ಷ ಹರೀಶ್ ಮದ್ದಡ್ಕ ಉಪಸ್ಥಿತರಿದ್ದರು.
ಸಂಘದ ಖಜಾಂಜಿ ಹರೀಶ ಆಚಾರ್ಯ ಬಾರ್ಯ ಕಾರ್ಯಕ್ರಮ ನಿರೂಪಿಸಿದರು. ಕಾರ್ಯದರ್ಶಿ ಶ್ರೀಪತಿ ಭಟ್ ಉಪ್ಪಿನಂಗಡಿ ವಂದಿಸಿದರು.ಈ ಸಂದರ್ಭ ಮಹಾಭಾರತ ಸರಣಿಯಲ್ಲಿ ‘ಊರ್ವಶಿ ಶಾಪ’ ತಾಳಮದ್ದಳೆ ನಡೆಯಿತು. ಭಾಗವತರಾಗಿ ಪದ್ಮನಾಭ ಕುಲಾಲ್, ಮಲ್ಲಿಕಾ ಶೆಟ್ಟಿ ಸಿದ್ಧಕಟ್ಟೆ, ಕಿಶೋರ ಶೆಟ್ಟಿ, ನಿತಿನ್ ಕುಮಾರ್ ವೈ.
ಹಿಮ್ಮೇಳದಲ್ಲಿ ಶ್ರೀಪತಿ ಭಟ್ ಉಪ್ಪಿನಂಗಡಿ, ಗುರುಮೂರ್ತಿ ಅಮ್ಮಣ್ಣಾಯ. ಅರ್ಥಧಾರಿಗಳಾಗಿ ವಿದ್ವಾನ್ ವಿನಾಯಕ ಭಟ್ ಗಾಳಿಮನೆ, ಶ್ರೀಧರ್ ಎಸ್ಪಿ ಮಂಗಳೂರು(ಅರ್ಜುನ), ದಿವಾಕರ ಆಚಾರ್ಯ ಗೇರುಕಟ್ಟೆ(ಊರ್ವಶಿ), ಜಯರಾಮ ಬಲ್ಯ(ದೇವೇಂದ್ರ), ಸಂಜೀವ ಪಾರೆಂಕಿ(ಮಾತಲಿ), ಹರೀಶ್ ಆಚಾರ್ಯ ಬಾರ್ಯ(ಚಿತ್ರಸೇನ)ಭಾಗವಹಿಸಿದ್ದರು.