ಕೆಯ್ಯೂರು : ಸರಕಾರಿ ಪದವಿಪೂರ್ವ ಕಾಲೇಜು ಕೆಯ್ಯೂರು ಇಲ್ಲಿ ಪೋಕ್ಸೋ ಕಾಯ್ದೆ ಮತ್ತು ಬಾಲ್ಯ ವಿವಾಹ ನಿಷೇಧ ಕಾಯ್ದೆಯ ಬಗ್ಗೆ ಕಾನೂನು ಅರಿವು ಮಾಹಿತಿ ಕಾರ್ಯಾಗಾರ ಜುಲೈ 8ರಂದು ಸಂಸ್ಥೆಯ ಸಭಾಂಗಣದಲ್ಲಿ ನಡೆಯಿತು.
ಬಾಲ ನ್ಯಾಯ ಮಂಡಳಿ ದಕ್ಷಿಣ ಕನ್ನಡ ಜಿಲ್ಲೆ ಇದರ ಸದಸ್ಯೆ, ಕಾನೂನು ಹೋರಾಟಗಾರ್ತಿ ಕಸ್ತೂರಿ ಬೊಳುವಾರು ಸಂಪನ್ಮೂಲ ವ್ಯಕ್ತಿಗಳಾಗಿ ಪಾಲ್ಗೊಂಡು ಪೋಕ್ಸೋ ಕಾಯ್ದೆ, ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ತಡೆಯುವಲ್ಲಿ ಪೋಕ್ಸೋ ಕಾಯ್ದೆಯ ಮಹತ್ವ ಮತ್ತು ಮಕ್ಕಳಲ್ಲಿ ಕಾನೂನು ಅರಿವನ್ನು ಮೂಡಿಸುವ ಅಗತ್ಯತೆ ಹಾಗೂ ಬಾಲ್ಯ ವಿವಾಹ ತಡೆ ಕಾಯ್ದೆಯ ಕುರಿತು ಸವಿವರವಾದ ಮಾಹಿತಿ ಉಪನ್ಯಾಸ ನೀಡಿದರು.
ಕಾಲೇಜಿನ ಪ್ರಾಂಶುಪಾಲರಾದ ಇಸ್ಮಾಯಿಲ್ ಪಿ ಸಭಾಧ್ಯಕ್ಷತೆ ವಹಿಸಿದ್ದರು. ಇಂಗ್ಲಿಷ್ ಉಪನ್ಯಾಸಕ ಬಾಲಕೃಷ್ಣ ಬೇರಿಕೆ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಸಂಸ್ಥೆಯ ಉಪಪ್ರಾಂಶುಪಾಲರಾದ ವಿನೋದ್ ಕುಮಾರ್ ಕೆ ಎಸ್ ವಿದ್ಯಾರ್ಥಿಗಳನ್ನುದ್ದೇಶಿಸಿ ಮಾತನಾಡಿದರು. ಕಾಲೇಜಿನ ಉಪನ್ಯಾಸಕ ವೃಂದದ ಉಪಸ್ಥಿತಿಯಲ್ಲಿ ಸಂಪನ್ಮೂಲ ವ್ಯಕ್ತಿಗಳಾದ ಕಸ್ತೂರಿ ಬೊಳುವಾರು ಅವರನ್ನು ಪುಸ್ತಕ ಸ್ಮರಣಿಕೆ ನೀಡಿ ಗೌರವಿಸಲಾಯಿತು.
ವಿದ್ಯಾರ್ಥಿಗಳಾದ ನಿರೀಕ್ಷಾ, ಗಗನಾ, ದಿವ್ಯಾ, ಜೀವಿತಾ ಪ್ರಾರ್ಥಿಸಿದರು. ಮಹಮ್ಮದ್ ಝಿಯಾದ್ ಸ್ವಾಗತಿಸಿದರು. ಮಹಮ್ಮದ್ ಮಿಕ್ದಾದ್ ಅತಿಥಿಗಳ ಪರಿಚಯ ನೆರವೇರಿಸಿದರು. ಲೋಕೇಶ್ ವಂದಿಸಿದರು. ಫಾತಿಮತ್ ತಸ್ಫಿಯಾ ಕಾರ್ಯಕ್ರಮ ನಿರೂಪಿಸಿದರು.