ಉಪ್ಪಿನಂಗಡಿ: ಇಲ್ಲಿನ ಸಮುದಾಯ ಆರೋಗ್ಯ ಕೇಂದ್ರದಲ್ಲಿ ತಕ್ಷಣಕ್ಕೆ ಆಗಬೇಕಿರುವ ವೈದ್ಯಕೀಯ ವ್ಯವಸ್ಥೆಗಳ ಬಗ್ಗೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖಾ ಸಚಿವ ದಿನೇಶ್ ಗುಂಡೂರಾವ್ ಅವರಿಗೆ ಉಬಾರ್ ಡೋನಾರ್ಸ್ ಹೆಲ್ಪ್ ಲೈನ್ ತಂಡದ ವತಿಯಿಂದ ಮನವಿ ಸಲ್ಲಿಸಲಾಯಿತು.
ಉಪ್ಪಿನಂಗಡಿ ಆರೋಗ್ಯ ಕೇಂದ್ರಕ್ಕೆ ಸಚಿವರು ಭೇಟಿ ನೀಡಿದ ಸಂದರ್ಭದಲ್ಲಿ ಮನವಿ ನೀಡಿದ ನಿಯೋಗವು, ಇಲ್ಲಿ ಎಕ್ಸ್‌ರೇ ಯಂತ್ರೋಪಕರಣಕ್ಕೆ ಟೆಕ್ನಿಷಿಯನ್ ನೇಮಕಾತಿ, ರಕ್ತ, ಮಲ, ಮೂತ್ರ ಪರೀಕ್ಷಾ ಕೇಂದ್ರದಲ್ಲಿ ತಜ್ಞ ಸಿಬ್ಬಂದಿಯ ನೇಮಕಾತಿ, ಸಿಸೇರಿಯನ್ ಹೆರಿಗೆಗಾಗಿ ಸುಸಜ್ಜಿತ ಅಪರೇಷನ್ ಥಿಯೇಟರ್, ಓರ್ವ ಅನಸ್ತೇಶಿಯಾ ತಜ್ಞರ ನೇಮಕಾತಿ, ಔಷಧಿ ವಿತರಕರ ಖಾಲಿ ಹುದ್ದೆ ಭರ್ತಿಗೆ ಕ್ರಮ, ದಿನದ 24 ಗಂಟೆಯೂ ಪ್ರಥಮ ಚಿಕಿತ್ಸೆ ನೀಡಲು ತಜ್ಞ ವೈದ್ಯರ ತಂಡ ನೇಮಕಕ್ಕೆ ಕ್ರಮ ಹಾಗೂ ಡಯಾಲಿಸಿಸ್ ಕೇಂದ್ರದ ವ್ಯವಸ್ಥೆಗೆ ಕ್ರಮ ಕೈಗೊಳ್ಳಬೇಕೆಂದು ಮನವಿಯಲ್ಲಿ ಆಗ್ರಹಿಸಿತು.
ಉಬಾರ್ ಡೋನರ್ಸ್ ಹೆಲ್ಪ್ ಲೈನ್ ತಂಡದ ಅಧ್ಯಕ್ಷ ಶಬೀರ್ ಕೆಂಪಿ ನೇತೃತ್ವದಲ್ಲಿ ಮನವಿ ನೀಡಿದ ಸಂದರ್ಭ ವಿಟ್ಲ- ಉಪ್ಪಿನಂಗಡಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಡಾ. ರಾಜಾರಾಮ್ ಕೆ.ಬಿ., ಉಬಾರ್ ಡೋನಾರ‍್ಸ್ ತಂಡದ ಇರ್ಷಾದ್ ಯು.ಟಿ., ಅನಾಸ್ ದಿಲ್ದಾರ್, ಜಮಾಲ್ ಕೆಂಪಿ, ಲತೀಫ್ ಕುದ್ಲೂರ್, ರಿಯಾಝ್ ಮತ್ತಿತರರು ಉಪಸ್ಥಿತರಿದ್ದರು.