ಪುತ್ತೂರು: ಪುತ್ತೂರು-ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿಯ ನರಿಮೊಗರು ಜಂಕ್ಷನ್ನ ಅನತಿ ದೂರದಲ್ಲಿ ಮತ್ತು ಪಾಪೆತ್ತಡ್ಕದಲ್ಲಿ ಅನೇಕ ಮರಗಳು ರಸ್ತೆಗೆ ಬೀಳಲು ಸಿದ್ದಗೊಂಡಿದ್ದು ಮರವನ್ನು ತೆರವುಗೊಳಿಸುವಂತೆ ಸ್ಥಳೀಯ ನಿವಾಸಿಗಳು ಮತ್ತ ವಾಹನ ಸವಾರರು ಅನೇಕ ದಿನಗಳಿಂದ ಆಗ್ರಹಿಸುತ್ತಿದ್ದರೂ ಕೂಡಾ ಸಂಬಂಧಪಟ್ಟವರು ಅದನ್ನು ತೆರವುಗೊಳಿಸುವ ಕಾರ್ಯ ಮಾಡದೇ ಇರುವುದರಿಂದ ಯಾವುದೇ ಸಂದರ್ಭದಲ್ಲಿ ಅಪಾಯ ಸಂಭವಿಸುವ ಸಾಧ್ಯತೆ ಹೆಚ್ಚಾಗಿದೆ.
ಇತ್ತೀಚೆಗೆ ಇಲ್ಲಿ ರಸ್ತೆ ಅಗಲೀಕರಣ ಕಾಮಗಾರಿ ನಡೆದಿದ್ದು ಈ ವೇಳೆ ರಸ್ತೆ ಬದಿಯ ಬರೆ ತೆಗೆಯಲಾಗಿದೆ. ಮರ ಇರುವ ವರೆಗೆ ಬರೆ ತೆಗೆದಿದ್ದು ಮರದ ಬೇರುಗಳು ಕೂಡಾ ಬರೆಯಲ್ಲಿ ಕಾಣುತ್ತಿದ್ದು ಅಪಾಯಕಾರಿ ಸ್ಥಿತಿಯಲ್ಲಿದೆ. ಬೆಳಿಗ್ಗೆ ಮತ್ತು ಸಂಜೆ ಹೊತ್ತಿಲ್ಲಿ ಇದೇ ರಸ್ತೆ ಬದಿಯಲ್ಲಿ ವಿದ್ಯಾರ್ಥಿಗಳು ನಡೆದುಕೊಂಡು ಹೋಗುತ್ತಿದ್ದು ಅವರೂ ಭಯದಿಂದಲೇ ಹೋಗುವ ಸನ್ನಿವೇಶ ನಿರ್ಮಾಣವಾಗಿದೆ. ದಿನನಿತ್ಯ ನೂರಾರು ವಾಹನಗಳು ಓಡಾಡುವ ಈ ರಸ್ತೆಯ ಬದಿಯಲ್ಲಿರುವ ಮರಗಳನ್ನು ಕೂಡಲೇ ತೆರವುಗೊಳಿಸದೇ ಇದ್ದಲ್ಲಿ ಅಪಾಯ ಕಟ್ಟಿಟ್ಟ ಬುತ್ತಿ ಎನ್ನುವ ಮಾತುಗಳು ಕೇಳಿ ಬಂದಿದೆ. ಈ ಬಗ್ಗೆ ಮಾಧ್ಯಮಗಳಲ್ಲೂ ಸುದ್ದಿ ಪ್ರಕಟಗೊಂಡಿತ್ತು. ಸಂಬಂಧಪಟ್ಟವರು ವಿದ್ಯಾರ್ಥಿಗಳ ಹಿತದೃಷ್ಟಿಯಿಂದಾದರೂ ಈ ಮರಗಳನ್ನು ತೆರವುಗೊಳಿಸುವ ಮೂಲಕ ಸಂಭಾವ್ಯ ಅಪಾಯವನ್ನು ತಪ್ಪಿಸಬೇಕಿದೆ ಎನ್ನುವ ಆಗ್ರಹ ವ್ಯಕ್ತವಾಗಿದೆ.