ಪುತ್ತೂರು: ಪ್ರಗತಿ ಸ್ಪೆಷಾಲಿಟಿ ಆಸ್ಪತ್ರೆ ಬೊಳ್ವಾರು, ರೋಟರಿ ಕ್ಲಬ್ ಪುತ್ತೂರು, ಪ್ರಗತಿ ಪ್ಯಾರಾಮೆಡಿಕಲ್ ರೋಟರ‍್ಯಾಕ್ಟ್ ಕ್ಲಬ್ ಇವುಗಳ ಜಂಟಿ ಆಶ್ರಯದಲ್ಲಿ ಪ್ರಸಕ್ತ ವರ್ಷದ ಪ್ರಗತಿ ಆಸ್ಪತ್ರೆಯಲ್ಲಿ ಉಚಿತ ಮಕ್ಕಳ ಆರೋಗ್ಯ ಚಿಕಿತ್ಸೆಗೆ ಜು.12 ರಂದು ಚಾಲನೆಯನ್ನು ನೀಡಲಾಯಿತು.
ರೋಟರಿ ಕ್ಲಬ್ ಪುತ್ತೂರು ಅಧ್ಯಕ್ಷ ಹಾಗೂ ಪ್ರಗತಿ ಆಸ್ಪತ್ರೆಯ ವೈದ್ಯಾಧಿಕಾರಿ ಡಾ.ಶ್ರೀಪತಿ ರಾವ್‌ರವರು ಮಾತನಾಡಿ, ಕಳೆದ 24 ವರ್ಷಗಳಿಂದ ಆಸ್ಪತ್ರೆಯಲ್ಲಿ ಆರೋಗ್ಯ ಸಂಬಂಧಿತ ಶಿಬಿರಗಳನ್ನು ಹಮ್ಮಿಕೊಂಡು ಬರುತ್ತಿದ್ದೇವೆ. ಮಧುಮೇಹ ಹಾಗೂ ರಕ್ತದೊತ್ತಡ ಮಾನವನ ಆರೋಗ್ಯವನ್ನು ಕುಂದಿಸುತ್ತದೆ. ಒಬ್ಬ ವ್ಯಕ್ತಿಗೆ ಪ್ರಾಯ 45 ಹೊಂದಿದಾಗ ಮಧುಮೇಹ, ರಕ್ತದೊತ್ತಡ ಕಾಯಿಲೆಗಳು ಬರುವುದು ಸಹಜವಾದರೂ ಅವೆರಡು ಕಾಯಿಲೆಗಳು ಮನುಷ್ಯನ 25ರ ಹರೆಯದಿಂದಲೇ ಆರಂಭಗೊಳ್ಳುವ ಸಂಭವವಿರುತ್ತದೆ ಎಂಬುದು ವೈದ್ಯಕೀಯ ಅಂಕಿ-ಅಂಶಗಳು ತಿಳಿಸುತ್ತದೆ. ಆಸ್ಪತ್ರೆಯಲ್ಲಿ ಪ್ರತಿ ತಿಂಗಳು ಉಚಿತವಾಗಿ ಮಧುಮೇಹ, ರಕ್ತದೊತ್ತಡ, ಮಕ್ಕಳ ಆರೋಗ್ಯ ಚಿಕಿತ್ಸೆ, ಸೇವ್ ಹಾರ್ಟ್, ಶ್ವಾಸಕೋಶ ತಪಾಸಣೆ, ಥೈರಾಯ್ಡ್ ತಪಾಸಣೆ ಮುಂತಾದ ಶಿಬಿರಗಳನ್ನು ಆಯೋಜಿಸುತ್ತಿದೆ. ಆದ್ದರಿಂದ ವ್ಯಕ್ತಿಯು ತನ್ನ ಆರೋಗ್ಯ ಉತ್ತಮವಾಗಿರಬೇಕಾದರೆ ಆವಾಗವಾಗ ತಪಾಸಣೆ ಮಾಡುವ ಮೂಲಕ ರೋಗವನ್ನು ತಡೆಗಟ್ಟಬೇಕು ಎಂದರು.
ಕಾರ್ಯಕ್ರಮದಲ್ಲಿ ರೋಟರಿ ಕ್ಲಬ್ ಪುತ್ತೂರು ನಿಕಟಪೂರ್ವ ಅಧ್ಯಕ್ಷ ಜೈರಾಜ್ ಭಂಡಾರಿ, ಮಾಜಿ ಅಧ್ಯಕ್ಷ ಉಮಾನಾಥ್ ಪಿ.ಬಿ, ಸದಸ್ಯರಾದ ಹೆರಾಲ್ಡ್ ಮಾಡ್ತಾ, ಸತೀಶ್, ದತ್ತಾತ್ರೇಯ ರಾವ್, ಮನೋಜ್ ಟಿ.ವಿ, ಡಾ.ಸುಧಾ ಎಸ್.ರಾವ್, ಆಸ್ಪತ್ರೆಯ ವೈದ್ಯರುಗಳು, ಸಿಬ್ಬಂದಿ ಉಪಸ್ಥಿತರಿದ್ದರು. ಯೂತ್ ಸರ್ವಿಸ್ ನಿರ್ದೇಶಕಿ ಪ್ರೀತಾ ಹೆಗ್ಡೆ ಸ್ವಾಗತಿಸಿ, ಕಾರ್ಯದರ್ಶಿ ದಾಮೋದರ್ ಕೆ ವಂದಿಸಿದರು.
ಆಸ್ಪತ್ರೆಯಲ್ಲಿನ ಉಚಿತ ಸೇವೆಗಳು..
-ಪ್ರತಿ ತಿಂಗಳ ಒಂದನೇ ತಾರೀಖಿನಂದು ಮಧುಮೇಹ, ರಕ್ತದೊತ್ತಡ,
ಸೇವ್ ಹಾರ್ಟ್, ಇಸಿಜಿ ಉಚಿತ((9 ರಿಂದ 12)-ಡಾ.ಶ್ರೀಪತಿ ರಾವ್,ಎಂಡಿ
-ತಿಂಗಳ ಎರಡನೇ ವಾರದ ಶುಕ್ರವಾರ ಮಕ್ಕಳ ಆರೋಗ್ಯ
ತಪಾಸಣೆ(9 ರಿಂದ 12)-ಡಾ.ಸಂದೀಪ್,ಎಂಡಿ
-ತಿಂಗಳ ಮೂರನೇ ವಾರದ ಶುಕ್ರವಾರ ಶ್ವಾಸಕೋಶ/ಸ್ಪೈರೋಮೆಟ್ರಿ
ತಪಾಸಣೆ(9 ರಿಂದ 12)-ಡಾ.ಶ್ರೀಪತಿ ರಾವ್,ಎಂಡಿ
-ತಿಂಗಳ ಮೂರನೇ ವಾರದ ಶುಕ್ರವಾರ ಸಂಜೆ(4 ರಿಂದ 6)
ಥೈರಾಯ್ಡ್ ತಪಾಸಣೆ-ಡಾ.ಸ್ಮಿತಾ ರಾವ್(ಥೈರಾಯ್ಡ್ ಸರ್ಜನ್),ಎಂಸಿಎಚ್