ಉಪ್ಪಿನಂಗಡಿ: ಅತಿಕ್ರಮಿತ ಭೂಮಿ ಗ್ರಾ.ಪಂ.ನಿಂದ ಸ್ವಾಧೀನ

0

ಉಪ್ಪಿನಂಗಡಿ: ಗ್ರಾ.ಪಂ. ಕೃಷಿ ಮಾರುಕಟ್ಟೆಗೆಂದು ಕಾಯ್ದಿರಿಸಿದ್ದ ಜಾಗವನ್ನು ಖಾಸಗಿ ವ್ಯಕ್ತಿಯೋರ್ವರು ಅತಿಕ್ರಮಿಸಿದ್ದು, ಅದನ್ನು ಮರಳಿ ಗ್ರಾ.ಪಂ. ಸ್ವಾಧೀನಪಡಿಸಿಕೊಂಡ ಘಟನೆ ಜು.12ರಂದು ತಣ್ಣೀರುಪಂಥದಲ್ಲಿ ನಡೆದಿದೆ.


ತಣ್ಣೀರುಪಂಥ ಗ್ರಾ.ಪಂ. ಕಲ್ಲೇರಿ ಪೇಟೆಯ ಹೃದಯಭಾಗದಲ್ಲಿ ಕೃಷಿ ಮಾರುಕಟ್ಟೆ ನಿರ್ಮಾಣಕ್ಕೆಂದು 48 ಸೆಂಟ್ಸ್ ಜಾಗವನ್ನು ಕಾಯ್ದಿರಿಸಿತ್ತು. ಆದರೆ ಇದನ್ನು ಖಾಸಗಿ ವ್ಯಕ್ತಿಯೋರ್ವರು ಅತಿಕ್ರಮಿಸಿದ್ದು, ಕಳೆದ ನಾಲ್ಕು ವರ್ಷಗಳ ಹಿಂದೆ ಗ್ರಾ.ಪಂ. ವತಿಯಿಂದ ಇದರ ಸರ್ವೇಗೆಂದು ತೆರಳಿದಾಗ ಅದಕ್ಕೆ ಆಕ್ಷೇಪಿಸಿದ ಆ ವ್ಯಕ್ತಿ ಈ ಬಗ್ಗೆ ಹೈಕೋರ್ಟ್ ಮೊರೆ ಹೋಗಿದ್ದರು. ಆಗ ಗ್ರಾ.ಪಂ. ಕೂಡಾ ಹೈಕೋರ್ಟ್ ಕಾನೂನು ಹೋರಾಟ ನಡೆಸಿದ್ದು, ವಾದ- ಪ್ರತಿವಾದವನ್ನು ಆಲಿಸಿದ ನಾಯ್ಯಾಲಯವು ಖಾಸಗಿ ವ್ಯಕ್ತಿ ಸಲ್ಲಿಸಿದ ರಿಟ್ ಅರ್ಜಿಯನ್ನು ತಿರಸ್ಕರಿಸಿತು. ಈ ಹಿನ್ನೆಲೆಯಲ್ಲಿ ಗ್ರಾ.ಪಂ. ಆ ಜಾಗವನ್ನು ಸ್ವಾಧೀನಪಡಿಸಿಕೊಂಡಿತು. ಆ ಜಾಗದಲ್ಲಿ ಸ್ವಲ್ಪ ಅಡಿಕೆ ಗಿಡವಲ್ಲದೆ, ಅಂಗಡಿಕೋಣೆಗಳುಲ್ಲ ಕಟ್ಟಡವೂ ಇತ್ತು. ಬೆಳ್ತಂಗಡಿ ತಹಶೀಲ್ದಾರ್ ಪೃಥ್ವಿ ಸಾನಿಕಂ ನೇತೃತ್ವದಲ್ಲಿ ಅಳತೆ ಕಾರ್ಯ ನಡೆಯಿತು.
ಭೂ ಸ್ವಾಧೀನ ಪ್ರಕ್ರಿಯೆಯ ಸಂದರ್ಭ ತಣ್ಣೀರುಪಂಥ ಗ್ರಾಂ.ಪಂ. ಅಧ್ಯಕ್ಷೆ ಹೇಮಾವತಿ, ಉಪಾಧ್ಯಕ್ಷೆ ಪ್ರಿಯಾ, ಸದಸ್ಯರಾದ ಜಯವಿಕ್ರಮ್ ಕಲ್ಲಾಪು, ಸದಾನಂದ ಶೆಟ್ಟಿ ಮಡಪ್ಪಾಡಿ, ಡಿ.ಕೆ. ಅಯೂಬ್, ಲೀಲಾವತಿ, ಸಾಮ್ರಾಟ್, ಗ್ರಾ.ಪಂ. ಮಾಜಿ ಸದಸ್ಯ ಕೆ.ಎಸ್. ಅಬ್ದುಲ್ಲಾ, ಕಂದಾಯ ನಿರೀಕ್ಷಕ ಪವಾಡಪ್ಪ ದೊಡ್ಡಮನೆ, ಗ್ರಾ.ಪಂ. ಪ್ರಭಾರ ಅಭಿವೃದ್ಧಿ ಅಧಿಕಾರಿ ಶ್ರವಣ್‌ಕುಮಾರ್, ಕಾರ್ಯದರ್ಶಿ ಆನಂದ ಉಪಸ್ಥಿತರಿದ್ದರು. ಉಪ್ಪಿನಂಗಡಿ ಪೊಲೀಸರು ಬಂದೋಬಸ್ತ್ ವ್ಯವಸ್ಥೆ ಕಲ್ಪಿಸಿದ್ದರು.

LEAVE A REPLY

Please enter your comment!
Please enter your name here