ಉಪ್ಪಿನಂಗಡಿ: ಕಾಪು ಗರುಡ ಗ್ಯಾಂಗ್‌ನ ಸದಸ್ಯರಿಗೆ ಹಣಕಾಸಿನ ನೆರವು ಸೇರಿದಂತೆ ಇನ್ನಿತರ ಸಹಾಯ ಮಾಡಿದ ಹಿನ್ನೆಲೆಯಲ್ಲಿ ಗರುಡ ಗ್ಯಾಂಗ್ ಸದಸ್ಯನೋರ್ವನ ಸಂಬಂಧಿತೆ ಉಪ್ಪಿನಂಗಡಿಯ ಕರ್ವೇಲಿನ ಬಾನೊಟ್ಟು ನಿವಾಸಿ ಮಹಿಳೆಯೋರ್ವರನ್ನು ಉಡುಪಿ ಪೊಲೀಸರು ಬಂಧಿಸಿದ್ದಾರೆ.
ಕರ್ವೇಲಿನ ಬಾನೊಟ್ಟು ನಿವಾಸಿ ಝಕಾರಿಯ ಎಂಬವರ ಪತ್ನಿ ಸಾಜಿದ ಯಾನೆ ಶಫೀರಾ (21) ಬಂಧಿತ ಆರೋಪಿ. ಈಕೆ ಮೂಲತಃ ಮೂರುಗೋಳಿಯ ಕಳೆಂಜಿಬೈಲು ನಿವಾಸಿಯಾಗಿದ್ದು, ಮದುವೆಯಾಗಿ ಬಾನೊಟ್ಟಿನ ಪತಿ ಮನೆಯಲ್ಲಿ ವಾಸ್ತವ್ಯವಿದ್ದರು. ಇವರ ಪತಿ ವಿದೇಶದಲ್ಲಿ ಉದ್ಯೋಗದಲ್ಲಿದ್ದಾರೆ. ಗರುಡ ಗ್ಯಾಂಗ್ ಸದಸ್ಯರಿಗೆ ಆರ್ಥಿಕ ನೆರವು, ಆಶ್ರಯ ವ್ಯವಸ್ಥೆ ಮಾಡಿದ್ದಲ್ಲದೆ, ಮೊಬೈಲ್ ಫೋನ್ ನೀಡಿ ಹಣ ವರ್ಗಾವಣೆ ಮಾಡಿರುವ ಆರೋಪವೂ ಬಂಧಿತೆ ಸಾಜಿದಾ ಮೇಲಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಕಳೆದ ಮೇ.18ರಂದು ಉಡುಪಿ- ಮಣಿಪಾಲ ರಾಷ್ಟ್ರೀಯ ಹೆದ್ದಾರಿಯಲ್ಲಿ ಗರುಡ ಗ್ಯಾಂಗ್‌ನ ಇಬ್ಭಾಗವಾದ ಎರಡು ತಂಡದೊಳಗೆ ಜಗಳ ನಡೆದಿದ್ದು, ಈ ಸಂದರ್ಭ ಈ ತಂಡಗಳ ಸದಸ್ಯರು ಎರಡು ಕಾರುಗಳನ್ನು ಸಿನಿಮೀಯ ಶೈಲಿಯಲ್ಲಿ ಡಿಕ್ಕಿ ಹೊಡೆಸಿಕೊಂಡಿದ್ದರಲ್ಲದೆ, ತಲವಾರು ಬೀಸಿದ್ದರು. ಈ ಸಂದರ್ಭ ಒಬ್ಬನಿಗೆ ಕಾರನ್ನು ಡಿಕ್ಕಿ ಹೊಡೆಸಿಲಾಗಿತ್ತು. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರು ಮಂದಿಯನ್ನು ಬಂಧಿಸಿದ್ದು, ಈ ಪ್ರಕರಣದ ಆರೋಪಿಯಾದ ನಾವುಂದ ನಿವಾಸಿ ಇಸಾಕ್ ಎಂಬಾತ ತಲೆಮರೆಸಿಕೊಂಡಿದ್ದ. ಈತ ಗರುಡ ಗ್ಯಾಂಗ್‌ನ ಸದಸ್ಯನಾಗಿದ್ದು, ಕರ್ವೇಲ್‌ನ ಸಾಜಿದಳ ಪತಿ ಝಕಾರಿಯ ಅವರ ಅಕ್ಕನ ಮಗನಾಗಿದ್ದಾನೆ. ಈ ಪ್ರಕರಣಕ್ಕೆ ಸಂಬಂಧಿಸಿ ಗರುಡ ಗ್ಯಾಂಗ್‌ನ ಸದಸ್ಯರಿಗೆ ನೆರವು ನೀಡಿದ ಹಿನ್ನೆಲೆಯಲ್ಲಿ ಸಾಜಿದಳ ಬಂಧನವಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಕರ್ವೇಲ್ ಚೂರಿ ಇರಿತಕ್ಕೆ ಗರುಡ ಗ್ಯಾಂಗ್‌ನ ಲಿಂಕ್: ಕಳೆದ ಎ.12ರಂದು ಬೆಳಗ್ಗೆ ಕರ್ವೇಲು ಜನತಾ ಕಾಲನಿ ನಿವಾಸಿ ಹಕೀಂ (34) ಎಂಬವರಿಗೆ ಕಾರಿನಲ್ಲಿ ಬಂದ ತಂಡವೊಂದು ಕರ್ವೇಲು ಜಂಕ್ಷನ್‌ನಲ್ಲಿ ಚೂರಿ ಇರಿದು ಪರಾರಿಯಾಗಿತ್ತು. ಇದು ಗರುಡ ಗ್ಯಾಂಗ್‌ನ ಕೃತ್ಯವಾಗಿದ್ದು, ಹುಡುಗಿ ವಿಚಾರಕ್ಕೆ ಸಂಬಂಧಿಸಿ ಈ ಕೃತ್ಯ ನಡೆದಿತ್ತು ಎನ್ನಲಾಗಿದೆ. ಈ ಗ್ಯಾಂಗ್‌ನ ಸದಸ್ಯನಾಗಿರುವ ನಾವುಂದ ನಿವಾಸಿ ಇಸಾಕ್ ಎಂಬಾತ ಹಕೀಂ ಅವರಿಗೆ ಚೂರಿಯಲ್ಲಿ ಇರಿದಿದ್ದ.
ಏನಿದು ಗರುಡ ಗ್ಯಾಂಗ್?: ಬೈಂದೂರು, ಕುಂದಾಪುರ, ಕೋಟ, ಕಾಪು ಸೇರಿದಂತೆ ಇತರ ಪ್ರದೇಶಗಳಲ್ಲಿ ಈ ಗರುಡ ಗ್ಯಾಂಗ್ ಸಕ್ರೀಯವಾಗಿದ್ದು, ಗೋವುಗಳ ಕಳ್ಳತನ, ಮಾದಕ ದ್ರವ್ಯ ದಂಧೆ, ಸುಲಿಗೆ ಸೇರಿದಂತೆ ಹಲವು ಕ್ರಿಮಿನಲ್ ಪ್ರಕರಣಗಳು ಈ ಗರುಡ ಗ್ಯಾಂಗ್ ಸದಸ್ಯರ ಮೇಲೆ ದಾಖಲಾಗಿವೆ. ಪ್ರಕಾರ 16 ರಿಂದ 25 ವರ್ಷದ ಯುವಕರು ಈ ಗ್ಯಾಂಗ್ ಅನ್ನು ಸೇರಿಕೊಳ್ಳಲು ಅವರಿಗೆ ಹಣ ಮತ್ತು ಅಕ್ರಮ ವಸ್ತುಗಳ ಆಮಿಷವೊಡ್ಡಲಾಗುತ್ತದೆ. ಈ ಗ್ಯಾಂಗ್ ಸದಸ್ಯರು ಗರುಡ (ಹದ್ದು) ಚಿತ್ರವನ್ನು ತಮ್ಮ ಇನ್ಸ್ಟಾಗ್ರಾಮ್‌ನಲ್ಲಿ ಪ್ರೊಫೈಲ್ ಚಿತ್ರವಾಗಿ ಪೋಸ್ಟ್ ಮಾಡುವ ಮೂಲಕ ತಾವು ‘ಗರುಡ’ ತಂಡದ ಸದಸ್ಯರು ಎಂದು ಗುರುತಿಸಿಕೊಳ್ಳುತ್ತಾರೆ. ಇದರ ಸದಸ್ಯರು ತಮ್ಮ ಗ್ರೂಪ್ ಪೋಟೋಗಳು, ಚಲನಚಿತ್ರಗಳ ಹಿಂಸಾತ್ಮಕ ದೃಶ್ಯಗಳು ಇತ್ಯಾದಿಗಳನ್ನು ತಮ್ಮ ಖಾತೆಗಳಲ್ಲಿ ಅಪ್‌ಲೋಡ್ ಮಾಡಿಕೊಂಡಿರುತ್ತಾರೆ. ಕ್ರಿಮಿನಲ್ ಚಟುವಟಿಕೆಗಳನ್ನು ಮಾಡುತ್ತಾ ಆಯಾಯ ಪ್ರದೇಶದಲ್ಲಿ ಒಬ್ಬೊಬ್ಬರಂತೆ ಈ ಗ್ಯಾಂಗ್‌ನ ನೇತೃತ್ವ ವಹಿಸುತ್ತಿರುತ್ತಾರೆ. ಮೇ.18ರಂದು ನಡೆದ ಗರುಡ ಗ್ಯಾಂಗ್‌ನ ಎರಡು ತಂಡದೊಳಗೆ ನಡೆದ ತಲವಾರು ಕಾಳಗ ಪ್ರಕರಣಕ್ಕೆ ಸಂಬಂಧಿಸಿ ಆ ಗುಂಪಿಗೆ ಆಶಿಕ್ ಎಂಬಾತ ಕ್ಯಾಪ್ಟನ್ ಆಗಿದ್ದ. ಈ ತಂಡದಲ್ಲೇ ಇದ್ದುಕೊಂಡು ಆಶಿಕ್ ವಿರುದ್ಧ ಮುನಿಸಿಕೊಂಡಿದ್ದ ಅಲ್ಫಾಝ್ ತಂಡ ಮತ್ತು ಆಶಿಕ್ ತಂಡದೊಂದಿಗೆ ಅಂದು ಕಾಳಗ ನಡೆದಿತ್ತು. ‘ನಾವು ರಾಜಿ ಆಗೋಣ, ಗಲಾಟೆ ಬೇಡ. ಬಾ” ಎಂದು ಆಶಿಕ್‌ನನ್ನು ಅಲ್ಫಾಝ್ ತಂಡ ಕರೆಸಿಕೊಂಡಿತ್ತು. ಆದ್ರೆ ಅಲ್ಫಾಝ್ ವಿಷಯ ಗೊತ್ತಿದ್ದ ಆಶಿಕ್ ಕುಂಜಿಬೆಟ್ಟಿಗೆ ಬಂದವನೇ ಕಾರಿನಿಂದ ಇಳಿದಿರಲಿಲ್ಲ. ಹೀಗಾಗಿ ಕಾರು ಗುದ್ದಾಟದ ಮೂಲಕ ಆಶಿಕ್‌ನನ್ನು ಮಟ್ಟ ಹಾಕಲು ಅಲ್ಫಾಝ್ ತಂಡ ಪ್ರಯತ್ನಿಸಿತ್ತು. ಅಷ್ಟೇ ಅಲ್ಲ ತಲವಾರು ದಾಳಿ ನಡೆಸಲು ಮುಂದಾಗಿತ್ತು. ಇಷ್ಟಾಗುತ್ತಲೇ ಆಶಿಕ್ ಕಡೆಯವರು ತಮ್ಮ ಸ್ವಿಫ್ಟ್ ಕಾರನ್ನು ಅಲ್ಫಾಝ್ ತಂಡದ ಶರೀಫ್ ಎಂಬಾತನ ಮೇಲೆ ಹರಿಸಿದ್ದರು ಎಂದು ಪೊಲೀಸ್ ಮೂಲಗಳು ತಿಳಿಸಿವೆ.