ವಿಟ್ಲದಲ್ಲಿ ಒಕ್ಕಲಿಗ ಸಮುದಾಯ ಪತ್ತಿನ ಸಹಕಾರ ಸಂಘದ 10ನೇ ಶಾಖೆ ಉದ್ಘಾಟನೆ

0

ಬದುಕಿನ ಭರವಸೆ ತುಂಬುವ ಕೆಲಸ ಇಂತಹ ಸಹಕಾರ ಸಂಘದಿಂದ ಆಗುತ್ತಿದೆ: ಶ್ರೀ ಡಾ| ಧರ್ಮಪಾಲನಾಥ ಸ್ವಾಮೀಜಿ

ವಿಟ್ಲ: ಸಹಕಾರಿ ಬ್ಯಾಂಕ್‌ನಲ್ಲಿ ಪ್ರೀತಿ ವಿಶ್ವಾಸ ಕಾಣಸಿಗುತ್ತದೆ. ರಾಷ್ಟ್ರೀಕೃತ ಬ್ಯಾಂಕ್ ಕೇವಲ ವ್ಯಾವಹಾರಿಕವಾಗಿದೆ. ಬದುಕಿನ ಭರವಸೆ ತುಂಬುವ ಕೆಲಸ ಇಂತಹ ಸಹಕಾರ ಸಂಘಗಳಿಂದ ಆಗುತ್ತಿದೆ. ನಂಬಿಕೆ ವಿಶ್ವಾಸ ಇಲ್ಲಿ ಕೆಲಸ ಮಾಡಿದೆ. ಸಿಬ್ಬಂದಿಗಳು ಹಾಗೂ ಗ್ರಾಹಕರ ನಡುವಿನ ಸಂಬಂಧವೇ ಯಶಸ್ಸಿನ ರಹದಾರಿ. ಮಕ್ಕಳಿಗೆ ಆಸ್ತಿ ಮಾಡುವ ಬದಲು ಮಕ್ಕಳನ್ನೇ ಆಸ್ತಿಯನ್ನಾಗಿ ಮಾಡಿ.ಒಂಬತ್ತು ಶಾಖೆಗಳನ್ನು ಎಲ್ಲೂ ನ್ಯೂನತೆ ಬಾರದ ರೀತಿಯಲ್ಲಿ ನಡೆಸಿಕೊಂಡು ಬಂದ ಆಡಳಿತ ಮಂಡಳಿಯ ಜಾಣ್ಮೆ ಇಂದು ಹತ್ತನೇ ಶಾಖೆಯನ್ನು ತೆರೆಯುವ ಹಂತಕ್ಕೆ ಬಂದಿದೆ. ಇದಕ್ಕೆಲ್ಲ ಕಾರಣ ಎಲ್ಲರ ಶ್ರಮ, ಶ್ರದ್ಧೆ ಎಂದು ಶ್ರೀ ಆದಿಚುಂಚನಗಿರಿ ಮಂಗಳೂರು ಶಾಖಾ ಮಠದ ಶ್ರೀ ಡಾ| ಧರ್ಮಪಾಲನಾಥ ಸ್ವಾಮೀಜಿಯವರು ಹೇಳಿದರು.


ಪುತ್ತೂರಿನ ಎಪಿಎಂಸಿ ರಸ್ತೆಯ ಮಣಾಯಿ ಆರ್ಚ್‌ನಲ್ಲಿ ಪ್ರಧಾನ ಕಚೇರಿ ಹೊಂದಿರುವ ಒಕ್ಕಲಿಗ ಸಮುದಾಯ ಪತ್ತಿನ ಸಹಕಾರ ಸಂಘದ 10ನೇ ಶಾಖೆಯನ್ನು ಜು.13ರಂದು ವಿಟ್ಲದಲ್ಲಿರುವ ಎಂಪೈರ್ ಮಹಲ್‌ನಲ್ಲಿ ದೀಪಬೆಳಗಿಸಿ ಅವರು ಉದ್ಘಾಟಿಸಿ ಆಶೀರ್ವಚನ ನೀಡಿದರು.


ಅತ್ಯುತ್ತಮ ಶಾಖೆ ಏಳುಬೀಳನ್ನು ಎದುರಿಸಿ ಮುನ್ನಡೆದಿದೆ. ಒಗ್ಗಟ್ಟಿನ ಮಂತ್ರ ಇಲ್ಲಿ ಫಲಿಸಿದೆ. ವ್ಯವಹಾರ ಧರ್ಮ ಚೆನ್ನಾಗಿ ನಡೆದಿದೆ. ಉದ್ದೇಶ ಮತ್ತು ಗುರಿಯನ್ನು ಅರ್ಥ ಮಾಡಿಕೊಂಡಾಗ ಯಶಸ್ಸು ಸಾಧ್ಯ. ನಾವು ಬದುಕುವ ರೀತಿ ಪ್ರಾಮುಖ್ಯವಾದುದು. ಧರ್ಮದ ತಳಹದಿಯಲ್ಲಿ ಬದುಕು ಇರಬೇಕು ಎಂದರು.


ಶುಭ ಹಾರೈಸಿದ ಡಿ.ವಿ.ಎಸ್.:
ಮಾಜಿ ಮುಖ್ಯಮಂತ್ರಿ, ಕೇಂದ್ರದ ಮಾಜಿ ಸಚಿವರೂ ಆಗಿರುವ ಮಾಜಿ ಸಂಸದ ಡಿ.ವಿ. ಸದಾನಂದ ಗೌಡರು ಬೆಳಿಗ್ಗೆ ಪೂಜಾ ಸಂದರ್ಭದಲ್ಲಿ ಆಗಮಿಸಿ ಶುಭ ಹಾರೈಸಿದರು.
ಸಂಘದ ಅಧ್ಯಕ್ಷ ಚಿದಾನಂದ ಬೈಲಾಡಿರವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ ಬಹಳ ಕಷ್ಟದಿಂದ ಮೇಲೆ ಬಂದ ಸಂಸ್ಥೆ ಇದಾಗಿದ್ದು, ಈಗ ಎಲ್ಲರ ಸಹಕಾರದಿಂದ ಈ ಮಟ್ಟಕ್ಕೆ ಸಂಸ್ಥೆ ಬೆಳೆಯಲು ಕಾರಣವಾಗಿದೆ. ಎರಡು ವರುಷದ ಹಿಂದೆಯೇ ವಿಟ್ಲದಲ್ಲಿ ಶಾಖೆ ತೆರೆಯುವ ಆಲೋಚನೆಯನ್ನು ನಾವು ಮಾಡಿದ್ದೆವು. ಆದರೆ ಈಗ ಕಾಲ ಕೂಡಿಬಂತು. ದ.ಕ. ವ್ಯಾಪ್ತಿಯನ್ನು ಹೊಂದಿರುವ ಸಂಸ್ಥೆ ನಮ್ಮದಾಗಿದ್ದು ಜಿಲ್ಲೆಯಾದ್ಯಂತ ಶಾಖೆ ತೆರೆಯುವ ಪರವಾನಿಗೆ ನಮಗಿದೆ. ಮುಂದಿನ ದಿನಗಳಲ್ಲಿ ಬೆಳ್ತಂಗಡಿ ತಾಲೂಕಿನಲ್ಲಿ ಶಾಖೆ ತೆರೆಯುವ ಇರಾದೆ ಇದೆ. ಮುಂದೆ ಗುರಿ ಹಾಗೂ ಹಿಂದೆ ಗುರು ಇದ್ದರೆ ಏನನ್ನೂ ಮಾಡಬಹುದು ಎನ್ನುವುದಕ್ಕೆ ನಮ್ಮ ಸಂಘವೇ ಸಾಕ್ಷಿ. ವಿಟ್ಲ ಶಾಖೆಯನ್ನು ಒಂದು ಮಾದರಿ ಶಾಖೆಯನ್ನಾಗಿ ಮಾಡಲು ಎಲ್ಲರ ಸಹಕಾರ ಅಗತ್ಯ ಎಂದರು.


ಸಂಘದ ಉಪಾಧ್ಯಕ್ಷ ಯು.ಪಿ. ರಾಮಕೃಷ್ಣರವರು ಮಾತನಾಡಿ ನಮ್ಮ ಹಿಂದಿರುವ ದೈವೀ ಶಕ್ತಿಯಿಂದ ನಮಗೆ ಯಶಸ್ಸಾಗಿದೆ. ನಮ್ಮ ಯಶಸ್ಸಿನಲ್ಲಿ ಸಂಸ್ಥೆಯ ಸಿಬ್ಬಂದಿಗಳು, ನಿರ್ದೇಶಕರು ಹಾಗೂ ಸಲಹಾ ಸಮಿತಿ ಹಾಗೂ ಸಮುದಾಯದ ಹಿತೈಷಿಗಳ ಪಾತ್ರ ಪ್ರಮುಖದ್ದಾಗಿದೆ. ನಾವು ನಿಂತ ನೀರಾಗದೆ ಸದಾ ಪ್ರಯತ್ನ ನಡೆಸುತ್ತಿರಬೇಕು ಆಗ ಯಶಸ್ಸು ಹೆಚ್ಚು ಎಂದರು.


ನಾನು ಎಂಬುದನ್ನು ಬಿಟ್ಟು ನಾವು ಎನ್ನುವ ಭಾವನೆಯಲ್ಲಿ ಮುಂದುವರಿದ ಕಾರಣ ನಾವು ಈ ಮಟ್ಟಕ್ಕೆ ಬೆಳೆದಿದ್ದೇವೆ. ಅವಕಾಶಗಳನ್ನು ಸದುಪಯೋಗ ಪಡಿಸುವ ಕೆಲಸ ಎಲ್ಲರಿಂದಲೂ ಆಗಬೇಕಿದೆ ಎಂದವರು ಹೇಳಿದರು.


ಮಾಜಿ ಶಾಸಕ ಸಂಜೀವ ಮಠಂದೂರುರವರು ಮಾತನಾಡಿ ಇದೊಂದು ಶುಭ ಸಂದರ್ಭವಾಗಿದೆ. ಶಾಖೆ ಆರ್ಥಿಕವಾಗಿ ಸಬಲತೆ ಪಡೆದರೆ ಇನ್ನೊಂದು ಶಾಖೆ ತೆರೆಯಲು ಸಾಧ್ಯ. ನಾವುಗಳು ಆರ್ಥಿಕವಾಗಿ ಬಲಾಢ್ಯರಾಗಲು ಸಹಕಾರ ಸಂಘಗಳ ಪಾತ್ರ ಮಹತ್ವದ್ದು ಎಂದರು. ದ.ಕ.ಜಿಲ್ಲೆ ಬ್ಯಾಂಕಿಂಗ್‌ನ ತವರೂರು. ಜಿಲ್ಲೆ ಶಿಕ್ಷಣದ ಜೊತೆಗೆ ಆರ್ಥಿಕವಾಗಿ ಮುಂದೆ ಬಂದಿದೆ. ಪುತ್ತೂರು ಸಹಕಾರಿ ತತ್ವಕ್ಕೆ ದೊಡ್ಡ ಕೊಡುಗೆ ಕೊಟ್ಟ ತಾಲೂಕು. ಸಹಕಾರಿ ಸಂಘಗಳು ರಾಷ್ಟ್ರೀಕೃತ ಬ್ಯಾಂಕ್‌ಗಳಿಗೆ ಸಡ್ಡು ಹೊಡೆಯುವ ರೀತಿಯಲ್ಲಿ ಮುಂದುವರಿದಿದೆ. ಸಂಘದ ಸ್ಥಾಪನೆ ಇತರ ಸಹಕಾರಿ ಸಂಘಗಳಿಗೆ ಸ್ಪರ್ಧೆ ಕೊಡುವ ಉದ್ದೇಶವಲ್ಲ ಸಮಾಜದ ಕಟ್ಟ ಕಡೇಯ ವ್ಯಕ್ತಿಯನ್ನು ಮುಂದೆ ತರುವ ಪ್ರಯತ್ನವಾಗಿದೆ ಎಂದರು.


ದ.ಕ.ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ನ ನಿರ್ದೇಶಕ ಶಶಿಕುಮಾರ್ ರೈ ಬಾಲ್ಯೊಟ್ಟುರವರು ಮಾತನಾಡಿ ವಿಶೇಷ ಕಾರ್ಯಕ್ರಮವಿದು. ವಿಟ್ಲ ಶಾಖೆ ಅಭಿವೃದ್ಧಿ ಹೊಂದುವುದರಲ್ಲಿ ಯಾವುದೇ ಸಂಶಯವಿಲ್ಲ. ಇಲ್ಲಿ ಎಲ್ಲರ ಪ್ರಯತ್ನ ಎದ್ದು ಕಾಣುತ್ತಿದೆ. ಸಿಬ್ಬಂದಿಗಳ ನಗುಮುಖದ ಸೇವೆಯೇ ಶಾಖೆಯ ಯಶಸ್ಸಿನ ರಹದಾರಿ. ಸಂಸ್ಥೆ ಇನ್ನಷ್ಟು ಎತ್ತರಕ್ಕೆ ಬೆಳೆಯಲಿ. ಸಹಕಾರಿ ಕ್ಷೇತ್ರ ಪವಿತ್ರವಾದುದು ಅದನ್ನು ಉಳಿಸಿ ಬೆಳೆಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದರು.


ಪುತ್ತೂರು ತಾಲೂಕು ಒಕ್ಕಲಿಗ ಗೌಡ ಸೇವಾ ಸಂಘ ಅಧ್ಯಕ್ಷ ರವಿ ಮುಂಗ್ಲಿಮನೆ, ಎಂಪೈರ್ ಮಹಲ್‌ನ ಮಾಲಕ ಪೀಟರ್ ಫ್ರಾಸ್ಸಿಸ್ ಲಸ್ರಾದೋ, ಸಂಘದ ನಿರ್ದೇಶಕರಾದ ಇಡ್ಯಡ್ಕ ಮೋಹನ ಗೌಡರವರು ಶುಭಹಾರೈಸಿದರು.


ವಿಟ್ಲ ಪಟ್ಟಣ ಪಂಚಾಯತ್‌ನ ಸದಸ್ಯ ಜಯಂತ ಪಿ. ಹೆಚ್, ಸಂಘದ ನಿರ್ದೇಶಕರಾದ ಸತೀಶ್ ಪಾಂಬಾರು, ಪ್ರವೀಣ್ ಕುಂಟ್ಯಾನ, ಜಿನ್ನಪ್ಪ ಗೌಡ ಮಳುವೇಲು,ಲೋಕೇಶ್ ಚಾಕೋಟೆ, ಸುದರ್ಶನ ಗೌಡ ಕೆ., ಸುಪ್ರೀತಾ ರವಿಚಂದ್ರ, ಸಂಜೀವ ಗೌಡ ಕೆ., ತೇಜಸ್ವಿನಿ ಶೇಖರ ಗೌಡ ವೇದಿಕೆಯಲ್ಲಿ ಉಪಸ್ಥಿತರಿದ್ದರು.


ಸಂಘದ ಸಿ.ಇ.ಒ ಸುಧಾಕರ್ ಕೆ. ಹಾಗೂ ಸದಾನಂದ ಡೆಪ್ಪುಣಿರವರನ್ನು ವೇದಿಕೆಯಲ್ಲಿ ಗೌರವಿಸಲಾಯಿತು. ಸಂಘದ ಸಿ.ಇ.ಒ ಸುಧಾಕರ್ ಕೆ. ಕಾರ್ಯಕ್ರಮ ನಿರೂಪಿಸಿದರು. ನಿರ್ದೇಶಕ ರಾಮಕೃಷ್ಣ ಗೌಡ ಕರ್ಮಲ ಸ್ವಾಗತಿಸಿದರು. ವಿಟ್ಲ ಶಾಖಾ ವ್ಯವಸ್ಥಾಪಕರಾದ ದಿನೇಶ್ ಪೆಲತ್ತಿಂಜ ವಂದಿಸಿದರು.

ಸಹಕಾರ ಸಂಘವು ಕೇವಲ ವ್ಯಾವಹಾರಿಕವಾಗಿ ಮುಂದುವರಿಯದೆ ಸಾಮಾಜಿಕವಾಗಿಯೂ ಹೆಜ್ಜೆಹಾಕುತ್ತಿದೆ
2002 ರಲ್ಲಿ ಪ್ರಾರಂಭವಾದ ಒಕ್ಕಲಿಗ ಸಮುದಾಯ ಪತ್ತಿನ ಸಹಕಾರ ಸಂಘವು ಹತ್ತನೇ ಶಾಖೆಯನ್ನು ತೆರೆಯುವ ಹಂತಕ್ಕೆ ಬಂದಿದೆ ಎಂದರೆ ಅದು ಬಹಳಷ್ಟು ಬೆಳವಣಿಗೆ ಹೊಂದಿದೆ ಎಂದರ್ಥ.ಆರಂಭದ ದಿನಗಳಲ್ಲಿ ಹಲವಾರು ಸಮಾನ ಮನಸ್ಕ ಸಮುದಾಯದ ಹಿರಿಯರು ಸೇರಿಕೊಂಡು ಹಿರಿಯರ ಮಾರ್ಗ ದರ್ಶನದ ಮುಖಾಂತರ ಸಹಕಾರ ಸಂಘವನ್ನು ಹುಟ್ಟು ಹಾಕಿದೆವು. ಸಹಕಾರ ಸಂಘವನ್ನು ಕೇವಲ ನಮ್ಮ ಸಮುದಾಯದವರಿಗೆ ಮಾತ್ರ ಸೀಮಿತ ಮಾಡದೆ ಇತರ ಸಮುದಾಯದವರನ್ನೂ ಮೇಲಕ್ಕೆತ್ತುವ ನಿಟ್ಟಿನಲ್ಲಿ ಕೆಲಸ ಕಾರ್ಯವನ್ನು ನಿರ್ವಹಿಸುತ್ತಾ ಬಂದಿರುವುದು ಸಂಸ್ಥೆಯ ಏಳಿಗೆಗೆ ಪೂರಕವಾಗಿದೆ. ಸಹಕಾರ ಸಂಘವು ಕೇವಲ ವ್ಯಾವಹಾರಿಕವಾಗಿ ಮುಂದುವರಿಯದೆ ಹಲವಾರು ಸಮಾಜಮುಖಿಯಾದ ಚಿಂತನೆಗಳನ್ನು ಇಟ್ಟುಕೊಂಡು ಮುಂದುವರಿದಿದೆ. ಒಕ್ಕಲಿಗೆ ಸಮುದಾಯ ಭವನ ನಿರ್ಮಾಣದ ಸಂದರ್ಭದಲ್ಲಿ ಸಹಕಾರ ಸಂಘದ ಸಹಕಾರ ಅನನ್ಯವಾದುದು. ಸಹಕಾರ ಸಂಘವು ಇನ್ನಷ್ಟು ಬೆಳೆಯಲಿ ಹತ್ತಾರು ಶಾಖೆಯನ್ನು ತೆರೆಯುವಂತಾಗಲಿ
-ಡಿ.ವಿ. ಸದಾನಂದ ಗೌಡ, ಕೇಂದ್ರದ ಮಾಜಿ ಸಚಿವರು ಹಾಗೂ ರಾಜ್ಯದ ಮಾಜಿ ಮುಖ್ಯಮಂತ್ರಿಗಳು

LEAVE A REPLY

Please enter your comment!
Please enter your name here