-ಅಪರೂಪದ ಯಕ್ಷ ಕಲಾವಿದ ಶ್ರೀಧರ ರಾವ್ ಯಕ್ಷ ಕ್ಷೇತ್ರಕ್ಕೆ ಶಾಶ್ವತ ಕೊಡುಗೆ ನೀಡಿದ್ದಾರೆ-ಉಜಿರೆ ಅಶೋಕ್ ಭಟ್
ಉಪ್ಪಿನಂಗಡಿ: ಸ್ತ್ರೀ ವೇಷ ಸೇರಿದಂತೆ ಎಲ್ಲಾ ಪಾತ್ರಗಳನ್ನು ನಿರ್ವಹಿಸಿದ ಅನುಭವವುಳ್ಳ ಅಪರೂಪದ ಯಕ್ಷ ಕಲಾವಿದ ಕುಂಬ್ಳೆ ಶ್ರೀಧರ ರಾವ್ ಅವರು ನಮ್ಮನ್ನಗಲಿದ್ದರೂ ಅವರು ಯಕ್ಷ ಕ್ಷೇತ್ರಕ್ಕೆ ತನ್ನದೊಂದು ಶಾಶ್ವತ ಕೊಡುಗೆ ಕೊಟ್ಟು ಹೋಗಿದ್ದಾರೆ ಎಂದು ಹಿರಿಯ ಯಕ್ಷಗಾನ ಕಲಾವಿದ ಅಶೋಕ್ ಭಟ್ ಉಜಿರೆ ಹೇಳಿದರು.
ಉಪ್ಪಿನಂಗಡಿಯ ಶ್ರೀ ಶಕ್ತಿ ಸಭಾಭವನದಲ್ಲಿ ಜು.15ರಂದು ನಡೆದ ಖ್ಯಾತ ಯಕ್ಷಗಾನ ಕಲಾವಿದ ಕುಂಬ್ಳೆ ಶ್ರೀಧರ ರಾವ್ ಅವರಿಗೆ ಶೃದ್ಧಾಂಜಲಿ ಸಲ್ಲಿಸುವ ಕಾರ್ಯಕ್ರಮದಲ್ಲಿ ಅವರು ನುಡಿ ನಮನ ಸಲ್ಲಿಸಿದರು.
ಕಲಾವಿದನೋರ್ವ ತನ್ನ ಜೀವನದಲ್ಲಿ ಸಾವಿರಾರು ಕಷ್ಟಗಳಿದ್ದರೂ ಯಕ್ಷಗಾನದ ಚೌಕಿಗೆ ಬಂದ ಬಳಿಕ ಎಲ್ಲವನ್ನೂ ಮರೆಯುತ್ತಾನೆ. ಕುಂಬ್ಳೆ ಶ್ರೀಧರ ರಾವ್ ಕೂಡಾ ಅದೇ ರೀತಿಯವರಾಗಿದ್ದು ತನ್ನ ಪಾತ್ರದಲ್ಲಿ ತಲ್ಲೀನರಾಗಿ ಹೋಗುತ್ತಿದ್ದರು. ಅವರಲ್ಲಿದ್ದ ಕಲೆಗೆ ಬೆಲೆ ಕಟ್ಟಲು ಸಾಧ್ಯವಿಲ್ಲ. ಶ್ರೇಣಿ ಗೋಪಾಲಕೃಷ್ಣ ಭಟ್ ಸೇರಿದಂತೆ ಅತಿರಥ ಮಹಾರಥ ಕಲಾವಿದರ ಒಡನಾಟ ಕುಂಬ್ಳೆ ಶ್ರೀಧರ ರಾವ್ ಅವರಿಗೆ ದೊರೆತಿದ್ದು ಅದು ಇವರ ಕಲಾ ಶ್ರೀಮಂತಿಕೆ ಬೆಳೆಯಲು ಗೊಬ್ಬರ ಒದಗಿಸಿದಂತಾಗಿದೆ. ಎಲ್ಲಾ ಪಾತ್ರಗಳನ್ನು ನಿರ್ವಹಿಸುವ, ಎಲ್ಲಾ ಕಲಾವಿದರ, ಭಾಗವತರ ಶೈಲಿಗಳಿಗೆ ಹೊಂದಿಕೊಂಡು, ಎಲ್ಲರೊಂದಿಗೆ ಆತ್ಮೀಯವಾಗಿ ಬೆರೆಯುವ ಗುಣ ಅವರಲ್ಲಿತ್ತು. ಆದ್ದರಿಂದ ಅವರೊಬ್ಬ ಅಪರೂಪದ ಕಲಾವಿದ ಎಂದು ಅಶೋಕ್ ಭಟ್ ಬಣ್ಣಿಸಿದರು.
ಯಕ್ಷಗಾನ ಭಾಗವತ ದಿನೇಶ್ ಅಮ್ಮಣ್ಣಾಯ ಮಾತನಾಡಿ, ಕುಂಬ್ಳೆ ಶ್ರೀಧರ ರಾವ್ ಅವರು ಯಾವುದೇ ಪಾತ್ರ ನಿರ್ವಹಿಸಲಿ ಅವರು ರಂಗಸ್ಥಳದಲ್ಲಿ ಪಾತ್ರದೊಳಗೆ ಪರಕಾಯ ಪ್ರವೇಶ ಮಾಡುವ ಮೂಲಕ ಪಾತ್ರಕ್ಕೆ ಜೀವ ತುಂಬುತ್ತಿದ್ದರು. ರಂಗಸ್ಥಳದಲ್ಲಿ ಎಲ್ಲವನ್ನೂ ಸಮರ್ಥವಾಗಿ ನಿರ್ವಹಿಸುವ ಮೂಲಕ ಹೊಸ ರಂಗವನ್ನು ನಿರ್ಮಾಣ ಮಾಡಿದ್ದರು. ಅವರ ಅಗಲಿಕೆ ಯಕ್ಷಗಾನ ಕ್ಷೇತ್ರಕ್ಕೆ ಅಪಾರ ನಷ್ಟವನ್ನುಂಟು ಮಾಡಿದೆ ಎಂದರು.
ಯಕ್ಷಗಾನ ಕಲಾವಿದ ನಿಡ್ಲೆ ಗೋವಿಂದ ಭಟ್, ಲೇಖಕ ಡಾ. ಮೋಹನ್, ಯಕ್ಷ ಸಂಘಟಕ ರಮೇಶ ಮಂಜೇಶ್ವರ, ಸಿರಿಬಾಗಿಲು ಪ್ರತಿಷ್ಠಾನದ ರಾಮಕೃಷ್ಣ ಅವರು ಮಾತನಾಡಿ ನುಡಿನಮನ ಅರ್ಪಿಸಿದರು.
34ನೇ ನೆಕ್ಕಿಲಾಡಿ ಗ್ರಾಮದ ಶಾಂತಿನಗರ ಸಮೀಪದ ಬೇರಿಕೆಯವರಾದ ಖ್ಯಾತ ಯಕ್ಷಗಾನ ಕಲಾವಿದ ಕುಂಬ್ಳೆ ಶ್ರೀಧರ ರಾವ್ ಅವರ ಪತ್ನಿ ಸುಲೋಚನಾ, ಪುತ್ರರಾದ ಗಣೇಶ್ ಪ್ರಸಾದ್, ಕೃಷ್ಣಪ್ರಸಾದ್, ದೇವಿಪ್ರಸಾದ್ ಸೇರಿದಂತೆ ನೂರಾರು ಮಂದಿ ಭಾಗವಹಿಸಿದ್ದರು.