ಪುತ್ತೂರು: ಸಂಘದ ಅಭಿವೃದ್ಧಿಗೆ ಬೇರೆ ಬೇರೆ ಯೋಚನೆ, ಯೋಜನೆಗಳಿವೆ. ಸಂಘವು ಅಭಿವೃದ್ಧಿಯಾಗಬೇಕಾದರೆ ಅಲ್ಲಿ ಹಣಕಾಸಿನ ನೆರವು ಅತ್ಯಗತ್ಯ. ನಮ್ಮಲ್ಲಿ ಯಾವುದೇ ಗ್ರೂಪಿಸಂ, ರಾಜಕೀಯ ಮೇಳೈಸದೆ ಸಂಘದ ಬಲವರ್ಧನೆ ನಿಟ್ಟಿನಲ್ಲಿ ಒಗ್ಗಟ್ಟು ಪ್ರದರ್ಶಿಸಬೇಕಾಗಿದೆ. ಸಂಘದ ಸದಸ್ಯರು, ಗ್ರಾಮ ಸಮಿತಿ ಈ ವಿಚಾರದಲ್ಲಿ ಹೆಚ್ಚಿನ ಒತ್ತು ನೀಡಬೇಕು ಎಂದು ಬ್ರಹ್ಮಶ್ರೀ ನಾರಾಯಣ ಗುರುಸ್ವಾಮಿ ಬಿಲ್ಲವ ಸಂಘದ ಅಧ್ಯಕ್ಷ ಸತೀಶ್ ಕುಮಾರ್ ಕೆಡೆಂಜಿರವರು ಹೇಳಿದರು.
ಬಪ್ಪಳಿಗೆ-ಪುತ್ತೂರು ಇಲ್ಲಿನ ಬ್ರಹ್ಮಶ್ರೀ ನಾರಾಯಣ ಗುರುಸ್ವಾಮಿ ಸಭಾಭವನದಲ್ಲಿ ಜು.14ರಂದು ಜರಗಿದ ಪುತ್ತೂರು ತಾಲೂಕು ಬಿಲ್ಲವ ಸಂಘದ 48ನೇ ವಾರ್ಷಿಕ ಮಹಾಸಭೆಯಲ್ಲಿ ಅವರು ಮಹಾಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಈ ಸಂದರ್ಭದಲ್ಲಿ ಸಂಘದ ಉಪಾಧ್ಯಕ್ಷೆ ವಿಮಲ ಸುರೇಶ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ನಾರಾಯಣ ಗುರುಮಂದಿರದ ಅರ್ಚಕ ಉಮೇಶ್ ಶಾಂತಿ ಪ್ರಾರ್ಥಿಸಿದರು. ಬಿಲ್ಲವ ಸಂಘದ ಉಪಾಧ್ಯಕ್ಷ ಅಶೋಕ್ ಕುಮಾರ್ ಪಡ್ಪು ಸ್ವಾಗತಿಸಿ, ಜೊತೆ ಕಾರ್ಯದರ್ಶಿ ದಯಾನಂದ ಕರ್ಕೇರಾ ವಂದಿಸಿದರು. ಕಾರ್ಯದರ್ಶಿ ಚಿದಾನಂದ ಸುವರ್ಣ ವಾರ್ಷಿಕ ವರದಿ ಮಂಡಿಸಿದರು. ಕೋಶಾಧಿಕಾರಿ ಬಿ.ಟಿ ಮಹೇಶ್ಚಂದ್ರ ಸಾಲಿಯಾನ್ ವಾರ್ಷಿಕ ಲೆಕ್ಕಪತ್ರ ಮಂಡಿಸಿದರು. 2023-24ನೇ ಸಾಲಿನ ಬಜೆಟಿಗಿಂತ ಹೆಚ್ಚುವರಿ ಖರ್ಚಿನ ತಖ್ತೆ, ೨೦೨೪-೨೫ನೇ ಸಾಲಿನ ಬಜೆಟ್ ಮಂಡನೆಯನ್ನು ಈ ಸಂದರ್ಭದಲ್ಲಿ ಮಂಡಿಸಲಾಯಿತು. ಗುರುಮಂದಿರದ ಲೆಕ್ಕಪತ್ರವನ್ನು ಕಾರ್ಯನಿರ್ವಹಣಾಧಿಕಾರಿ ಉದಯಕುಮಾರ್ ಕೋಲಾಡಿ ಮಂಡಿಸಿದರು. ಸಭೆಯ ಆರಂಭದಲ್ಲಿ ಅಗಲಿದ ಹಿರಿಯ ಸದಸ್ಯರ ಆತ್ಮಕ್ಕೆ ಚಿರಶಾಂತಿಯನ್ನು ಕೋರಿ ಒಂದು ನಿಮಿಷದ ಮೌನ ಪ್ರಾರ್ಥನೆಯನ್ನು ಸಲ್ಲಿಸಲಾಯಿತು.