ಕೊಂಬಾರು: ಹೊಲಿಗೆ ತರಬೇತಿ ಶಿಬಿರ ಉದ್ಘಾಟನೆ

0

ಕಡಬ: ವಿಜಯಾ ಗ್ರಾಮೀಣ ಅಭಿವೃದ್ಧಿ ಪ್ರತಿಷ್ಠಾನ ಮಂಗಳೂರು, ಭಾರತೀಯ ವಿಕಾಸ ಟ್ರಸ್ಟ್ ಮಣಿಪಾಲ, ಬ್ಯಾಂಕ್ ಆಫ್ ಬರೋಡಾ ನೆಟ್ಟಣ ಶಾಖೆ, ಗ್ರಾ.ಪಂ.ಕೊಂಬಾರು ಹಾಗೂ ಶ್ರೀ ದುರ್ಗಾಪರಮೇಶ್ವರಿ ಸಂಜೀವಿನಿ ಗ್ರಾ.ಪಂ.ಒಕ್ಕೂಟ ಕೊಂಬಾರು ಇವುಗಳ ಜಂಟಿ ಆಶ್ರಯದಲ್ಲಿ ಹೊಲಿಗೆ ತರಬೇತಿ ಶಿಬಿರ ಕೊಂಬಾರು ಗ್ರಾ.ಪಂ.ಸಂಜೀವಿನಿ ಕಟ್ಟಡದ ಸಭಾಭವನದಲ್ಲಿ ನಡೆಯಿತು.


ವಿಜಯಾ ಗ್ರಾಮೀಣ ಅಭಿವೃದ್ಧಿ ಪ್ರತಿಷ್ಠಾನ ಮಂಗಳೂರು ಇದರ ಮುಖ್ಯ ಕಾರ್ಯನಿರ್ವಹಣಾಧಿಕಾರಿ ವಿಶ್ವನಾಥ ಶೆಟ್ಟಿ ಅವರು ಉದ್ಘಾಟಿಸಿ ಸ್ವ ಉದ್ಯೋಗ ಮಾಡುವವರಿಗೆ ಬ್ಯಾಂಕಿನಿಂದ ಸಿಗುವ ಸವಲತ್ತುಗಳು ಹಾಗೂ ಸಾಲ ಸೌಲಭ್ಯಗಳ ಬಗ್ಗೆ ಮಾಹಿತಿ ನೀಡಿದರು. ಮಣಿಪಾಲ ಭಾರತೀಯ ವಿಕಾಸ ಟ್ರಸ್ಟ್‌ನ ಕಾರ್ಯಕ್ರಮ ವ್ಯವಸ್ಥಾಪಕರಾದ ಜೀವನ್ ಕೊಲ್ಯರವರು ಸ್ವ ಉದ್ಯೋಗದ ನಿಯಮಗಳ ಕುರಿತು ಮಾಹಿತಿ ನೀಡಿದರು. ಕೊಂಬಾರು ಗ್ರಾ.ಪಂ.ಪಿಡಿಒ ರಾಘವೇಂದ್ರ ಗೌಡ ಅವರು ಮಾತನಾಡಿ, ಗ್ರಾಮ ಪಂಚಾಯತ್ ಸಂಜೀವಿನಿ ಒಕ್ಕೂಟವು ಬೇರೆ ಬೇರೆ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು ಅದರಲ್ಲಿ ಹೊಲಿಗೆ ತರಬೇತಿ ಕೂಡ ಒಂದಾಗಿರುತ್ತದೆ. ಈಗಾಗಲೇ ಸಂಜೀವಿನಿ ಸಂಘದ ಬಹಳಷ್ಟು ಸದಸ್ಯರು ಸಾಲ ಸೌಲಭ್ಯ ಪಡೆದು ಸ್ವಾವಲಂಬಿ ಬದುಕು ಆರಂಭಿಸಿದ್ದಾರೆ. ಈ ಶಿಬಿರದ ಶಿಬಿರಾರ್ಥಿಗಳೂ ಪ್ರಯೋಜನ ಪಡೆದುಕೊಳ್ಳಲಿ ಎಂದರು. ಬಿಳಿನೆಲೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ದಾಮೋದರ ಡಿ.ಯಂ.ಅವರು ಮಾತನಾಡಿ, ಮಹಿಳೆಯರ ಸಬಲೀಕರಣದ ಉದ್ದೇಶದೊಂದಿಗೆ ಆರಂಭಗೊಂಡಿರುವ ಈ ಯೋಜನೆ ಯಶಸ್ವಿಯಾಗಲಿ ಎಂದು ಹಾರೈಸಿದರು.


ಅಧ್ಯಕ್ಷತೆ ವಹಿಸಿದ್ದ ಕೊಂಬಾರು ಗ್ರಾ.ಪಂ.ಅಧ್ಯಕ್ಷ ಮಧುಸೂದನ್ ಅವರು ಮಾತನಾಡಿ, ಸಂಜೀವಿನಿ ಸಂಘವು ಕೇಂದ್ರ ಸರಕಾರದ ಮಹತ್ವಕಾಂಕ್ಷಿ ಯೋಜನೆಯಾಗಿದ್ದು ಮಹಿಳೆಯರ ಸ್ವಾವಲಂಬಿ ಬದುಕಿಗಾಗಿ ಮಾಡಿದ ಯೋಜನೆಯಾಗಿದೆ. ಇಲ್ಲಿ ನಡೆದ ಶಿಬಿರವು ಕೊಂಬಾರು ಗ್ರಾಮದ ಮಹಿಳೆಯರ ಸ್ವಾವಲಂಬಿ ಬದುಕಿಗಾಗಿ ಮಾಡಲಾಗಿದ್ದು ಈ ತರಬೇತಿ ಶಿಬಿರವು ಗ್ರಾಮದ ಮಹಿಳೆಯರ ಬದುಕಿಗೆ ದಾರಿದೀಪವಾಗಲಿ ಎಂದರು. ಕಡಬ ತಾಲೂಕು ಅಭಿಯಾನ ನಿರ್ವಹಣಾ ಘಟಕದ ವ್ಯವಸ್ಥಾಪಕಿ ನಳಿನಿ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ಶಿಬಿರದ ಉದ್ದೇಶ ಹಾಗೂ ಸಂಜೀವಿನಿ ಸಂಘದ ಮಹಿಳೆಯರ ಸಬಲೀಕರಣವೇ ಸಂಘದ ಮೂಲ ಉದ್ದೇಶ ಎಂದರು.


ಟೈಲರಿಂಗ್ ಮೆಷಿನ್ ಕೊಡುಗೆ:
ಬಿಳಿನೆಲೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ವತಿಯಿಂದ ಗ್ರಾಮ ಪಂಚಾಯತ್ ಸಂಜೀವಿನಿ ಒಕ್ಕೂಟಕ್ಕೆ ಶಾಶ್ವತ ಕೊಡುಗೆಯಾಗಿ ಎರಡು ಟೈಲರಿಂಗ್ ಮೆಷಿನ್‌ಗಳನ್ನು ಕೊಡುಗೆಯಾಗಿ ನೀಡಲಾಯಿತು. ಬಿಳಿನೆಲೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ನಿರ್ದೇಶಕ, ಕೊಂಬಾರು ಗ್ರಾ.ಪಂ.ಸದಸ್ಯರೂ ಆದ ಚೆನ್ನಕೇಶವ ಗೌಡ ಕೈಂತಿಲ, ಲೋಕೋಪಯೋಗಿ ಇಲಾಖೆ ಸಹಾಯಕ ಅಭಿಯಂತರ ಪ್ರಮೋದ್ ಕುಮಾರ್ ಮಣಿಬಾಂಡ ಅವರು ತಲಾ ಒಂದು ಟೈಲರಿಂಗ್ ಮೆಷಿನ್ ಶಾಶ್ವತ ಕೊಡುಗೆಯಾಗಿ ನೀಡಿದರು. ಚಿದಾನಂದ ದೇವುಪಾಲು ಅವರು ತಮ್ಮ ಟೈಲರಿಂಗ್ ಮೆಷಿನ್ ಅನ್ನು ತರಬೇತಿಗೆ ನೀಡಿ ಸಹಕರಿಸಿದರು.


ಕೊಂಬಾರು ಶ್ರೀ ದುರ್ಗಾಪರಮೇಶ್ವರಿ ಸಂಜೀವಿನಿ ಗ್ರಾ.ಪಂ.ಒಕ್ಕೂಟದ ಅಧ್ಯಕ್ಷೆ ದೇವಕಿ, ತರಬೇತುದಾರರಾದ ಮಮತಾಹರಿಕುಮಾರ್, ಕೊಂಬಾರು ಗ್ರಾ.ಪಂ.ಉಪಾಧ್ಯಕ್ಷರು, ಸದಸ್ಯರು, ಒಕ್ಕೂಟದ ಪದಾಧಿಕಾರಿಗಳು, ಸ್ವಸಹಾಯ ಸಂಘದ ಸದಸ್ಯರು, ಯಂಬಿಕೆ, ಯಲ್‌ಸಿಆರ್‌ಪಿ ಮತ್ತು ವಿವಿಧ ಸಖಿಗಳು, ಅಂಗನವಾಡಿ ಕಾರ್ಯಕರ್ತೆಯರು, ಆಶಾ ಕಾರ್ಯಕರ್ತೆಯರು, ಶಿಬಿರಾರ್ಥಿಗಳು, ಗ್ರಾ.ಪಂ.ಸಿಬ್ಬಂದಿಗಳು ಉಪಸ್ಥಿತರಿದ್ದರು.
ಪಶುಸಖಿ ದಿವ್ಯಶ್ರೀ ಸ್ವಾಗತಿಸಿ, ಕೃಷಿ ಸಖಿ ಚೇತನಾ ವಂದಿಸಿದರು. ಸಂಜೀವಿನಿ ಸಂಘದ ಯಂಬಿಕೆ ಜಯಶ್ರೀ ನಿರೂಪಿಸಿದರು. ದಿವ್ಯ ಪುನೀತ್ ಮಣಿಬಾಂಡ ಪ್ರಾರ್ಥಿಸಿದರು.

LEAVE A REPLY

Please enter your comment!
Please enter your name here