ಸವಣೂರು: ಸವಣೂರು ಗ್ರಾ.ಪಂ.ನ ಕುಮಾರಧಾರ ಸಭಾಂಗಣದಲ್ಲಿ ಕುಡಿಯುವ ನೀರು ನಿರ್ವಾಹಕರ ಸಭೆ ಹಾಗೂ ನೀರು ಮತ್ತು ನೈರ್ಮಲ್ಯ ಕುರಿತಾದ ಸಭೆ ಗ್ರಾ.ಪಂ.ಅಧ್ಯಕ್ಷೆ ಸುಂದರಿ ಬಿ.ಎಸ್ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.
ಸಭೆಯಲ್ಲಿ ಸವಣೂರು, ಪುಣ್ಚಪ್ಪಾಡಿ, ಪಾಲ್ತಾಡಿ ಗ್ರಾಮಗಳ ಕುಡಿಯುವ ನೀರು ನಿರ್ವಾಹಕರು ಹಾಗೂ ಬಳಕೆದಾರರಿಂದ ನೀರು ನಿರ್ವಹಣೆ ಕುರಿತು ಸಮಾಲೋಚನೆ ನಡೆಯಿತು. ಈ ಸಂದರ್ಭದಲ್ಲಿ ಕುಡಿಯುವ ನೀರಿನ ಬಿಲ್ ಪಾವತಿ ಮಾಡದಿರುವುದು ಹಾಗೂ ವಿದ್ಯುತ್ ಬಿಲ್ ಬಾಕಿ ಕುರಿತು ಮಾಹಿತಿಯನ್ನು ನೀಡಲಾಯಿತು.ಕುಡಿಯುವ ನೀರಿನ ಬಿಲ್ ಪಾವತಿ ಮಾಡದಿರುವ ಬಳಕೆದಾರರ ನೀರಿನ ಸಂಪರ್ಕ ಕಡಿತ ಮಾಡುವಂತೆ ಸಭೆಯಲ್ಲಿ ನಿರ್ಣಯಿಸಲಾಯಿತು. ವಿವಿಧ ಯೋಜನೆಗಳ ಕುಡಿಯುವ ನೀರಿನ ಅನುಷ್ಠಾನ ಸಮಯದಲ್ಲಿ ಖಾಸಗಿ ಜಾಗದಲ್ಲಿ ಟ್ಯಾಂಕ್ ನಿರ್ಮಿಸಲು ಅವಕಾಶ ನೀಡಿ ಬಳಿಕ ಕುಡಿಯುವ ನೀರು ಬಿಡುವ ಸಮಯದಲ್ಲಿ ತಕರಾರು ಮಾಡುವ ವ್ಯಕ್ತಿಗಳ ಜಾಗವನ್ನು ಗ್ರಾ.ಪಂ.ಸುಪರ್ದಿಗೆ ತೆಗೆದುಕೊಳ್ಳುವ ಕುರಿತು ಸಭೆಯಲ್ಲಿ ಪ್ರಸ್ತಾಪಿಸಲಾಯಿತು.
ನೀರಿನ ಬಿಲ್ ಮುಂಗಡ ಪಾವತಿಗೆ ಕ್ರಮ:
ಸಭೆಯಲ್ಲಿ ಸದಸ್ಯರಾದ ಗಿರಿಶಂಕರ ಸುಲಾಯ ಅವರು ಅಭಿಪ್ರಾಯ ವ್ಯಕ್ತಪಡಿಸಿ, ಕೆಲವರ ನೀರಿನ ಬಿಲ್ ಪಾವತಿಯಾಗದಿರುವುದರಿಂದ ಸಮಸ್ಯೆಯಾಗುವುದರಿಂದ ಮುಂದಿನ ದಿನಗಳಲ್ಲಿ ಒಂದು ವರ್ಷದ ನೀರಿನ ಬಿಲ್ ಮುಂಗಡವಾಗಿ ಪಾವತಿಸುವ ಕುರಿತಂತೆ ನಿರ್ಣಯಕೈಗೊಳ್ಳಬೇಕು. ಪ್ರತೀ ವರ್ಷ ಮುಂಗಡವಾಗಿ ಪ್ರಿಪೈಡ್ ವ್ಯವಸ್ಥೆ ಮಾಡಿದರೆ ಒಳ್ಳೆಯದು ಎಂದರು.ಇದಕ್ಕೆ ಸಭೆ ಒಪ್ಪಿಗೆ ಸೂಚಿಸಿತು. ಪಿಡಿಓ ಸಂದೇಶ್ ಕೆ.ಎನ್ ಅವರು ಮಾತನಾಡಿ, ನೀರಿನ ಎಲ್ಲಾ ಟ್ಯಾಂಕ್‌ಗಳಿಗೆ ಮುಚ್ಚಳ ಹಾಕುವುದು ಕಡ್ಡಾಯ. ಮಕ್ಕಳಿರುವ ಕಡೆ ಟ್ಯಾಂಕಿಗೆ ಅಳವಡಿಸಿರುವ ಏಣಿಯನ್ನು ತೆಗೆದಿಟ್ಟು, ಅವಶ್ಯಕತೆ ಇರುವ ಸಂದರ್ಭದಲ್ಲಿ ಅಳವಡಿಸಬೇಕು.ಇದರಿಂದಾಗಿ ಸಂಭಾವ್ಯ ಅಪಾಯಗಳನ್ನು ತಡೆಗಟ್ಟಬಹುದು. ಕುಡಿಯುವ ನೀರಿನ ಗುಣಮಟ್ಟ ಪರೀಕ್ಷೆಯನ್ನೂ ಕೂಡ ಗ್ರಾ.ಪಂ. ಮಾಡುತ್ತಿದೆ.ಸಕಾಲದಲ್ಲಿ ಬಳಕೆದಾರರು ನೀರಿನ ಬಿಲ್ ಪಾವತಿ ಮಾಡಬೇಕು ಎಂದರು. ಇನ್ನು ಮುಂದೆ ಕೊಳವೆ ಬಾವಿ ಇದ್ದವರಿಗೆ ನೀರಿನ ಸಂಪರ್ಕ ಬೇಕಾದರೆ ರೂ.5000 ಮುಂಗಡವಾಗಿ ಡೆಪಾಸಿಟ್ ಪಾವತಿ ಮಾಡುವ ಕುರಿತು ಅಭಿಪ್ರಾಯ ಸಭೆಯಲ್ಲಿ ಕೇಳಿಬಂತು.
ಜಲಜೀವನ್ ಯೋಜನೆಯ ಅಭಿಲಾಶ್ ಅವರು ಮಳೆ ನೀರಿಂಗಿಸುವಿಕೆ ಹಾಗೂ ನೀರಿನ ಮಿತಬಳಕೆ ಹಾಗೂ ನೀರಿಂಗಿಸಲು ಉದ್ಯೋಗ ಖಾತರಿ ಯೋಜನೆಯ ಮೂಲಕ ಇರುವ ಸವಲತ್ತುಗಳ ಬಗ್ಗೆ ವಿವರಿಸಿದರು. ಶಾಲೆ, ಕಾಲೇಜುಗಳಲ್ಲಿ ಪೋಷಕರು ಹಾಗೂ ಶಾಲಾಭಿವೃದ್ದಿ ಸಮಿತಿಯವರು ಉದ್ಯೋಗ ಖಾತರಿ ಯೋಜನೆಯ ಮೂಲಕ ಪಾತ್ರೆ ತೊಳೆದ ನೀರು ಹಾಗೂ ಮಳೆ ನೀರು ಇಂಗಿಸುವ ಸೋಕ್‌ಪಿಟ್ ಮಾಡಲು ಅವಕಾಶವಿದೆ ಎಂದರು. ಸಭೆಯಲ್ಲಿ ಗ್ರಾ.ಪಂ.ವ್ಯಾಪ್ತಿಯ ಆಶಾ ಕಾರ್ಯಕರ್ತೆಯರಿಂದ ನೀರು ನಿಲ್ಲುವ ಜಾಗಗಳು ಹಾಗೂ ಕಟ್ಟಡಗಳ ಕುರಿತು ಮಾಹಿತಿ ಪಡೆದುಕೊಳ್ಳಲಾಯಿತು. ವೇದಿಕೆಯಲ್ಲಿ ಗ್ರಾ.ಪಂ.ಉಪಾಧ್ಯಕ್ಷೆ ಜಯಶ್ರೀ ವಿಜಯ, ಗ್ರಾ.ಪಂ.ಲೆಕ್ಕ ಸಹಾಯಕ ಎ.ಮನ್ಮಥ ಉಪಸ್ಥಿತರಿದ್ದರು. ಸಭೆಯಲ್ಲಿ ಗ್ರಾ.ಪಂ.ಸದಸ್ಯರಾದ ಗಿರಿಶಂಕರ ಸುಲಾಯ, ಅಬ್ದುಲ್ ರಝಾಕ್, ರಾಜೀವಿ ಶೆಟ್ಟಿ, ಎಂ.ಎ.ರಫೀಕ್, ಬಾಬು ಎನ್., ತಾರಾನಾಥ ಬೊಳಿಯಾಲ, ತೀರ್ಥರಾಮ ಕೆಡೆಂಜಿ, ಚಂದ್ರಾವತಿ ಸುಣ್ಣಾಜೆ, ಹರಿಕಲಾ ರೈ ಕುಂಜಾಡಿ, ಹರೀಶ್ ಕಾಯರಗುರಿ ಹಾಗೂ ಸವಣೂರು, ಪಾಲ್ತಾಡಿ, ಪುಣ್ಚಪ್ಪಾಡಿ ಗ್ರಾಮಗಳ ನೀರು ನಿರ್ವಾಹಕರು, ಬಳಕೆದಾರರು ಪಾಲ್ಗೊಂಡಿದ್ದರು.