ರಾಮಕುಂಜ: ರಾಮಕುಂಜ ಗ್ರಾಮದ ಆರಿಂಜ ನಿವಾಸಿ ಜನಾರ್ದನ ಗೌಡ(45ವ.)ಎಂಬವರು ಸೋಫಾದ ಮೇಲೆ ಮಲಗಿದ ಸ್ಥಿತಿಯಲ್ಲಿಯೇ ಮೃತಪಟ್ಟಿರುವ ಘಟನೆ ಜು.17ರಂದು ನಡೆದಿದೆ.
ಒಂದೂವರೇ ವರ್ಷದ ಹಿಂದೆ ಜನಾರ್ದನ ಗೌಡ ಅವರ ಪತ್ನಿ ಜಯಂತಿ ಅವರು ಮಕ್ಕಳೊಂದಿಗೆ ಆಲಂಕಾರು ಗ್ರಾಮದಲ್ಲಿರುವ ತಾಯಿ ಮನೆಗೆ ಹೋಗಿ ಅಲ್ಲಿಯೇ ತಂಗಿದ್ದರು. ಆರಿಂಜದ ಮನೆಯಲ್ಲಿ ಜನಾರ್ದನ ಗೌಡರು ಒಬ್ಬನೇ ವಾಸವಿದ್ದರು. 2 ದಿನಗಳ ಹಿಂದಿನಿಂದಲೂ ಜನಾರ್ದನ ಗೌಡರಿಗೆ ಅವರ ಅಣ್ಣನ ಪತ್ನಿ ಫೋನ್ ಕರೆ ಮಾಡಿದ್ದು ಅವರು ರಿಸೀವ್ ಮಾಡುತ್ತಿರಲಿಲ್ಲ. ಈ ಹಿನ್ನೆಲೆಯಲ್ಲಿ ಅವರ ಸಂಬಂಧಿಕರು ಜನಾರ್ದನ ಗೌಡರ ಮನೆಗೆ ಬಂದು ನೋಡಿದಾಗ ಅವರು ಮನೆಯ ಬಾಗಿಲಿನ ಚಿಲಕವನ್ನು ಒಳಗಡೆಯಿಂದ ಹಾಕಿಕೊಂಡಿದ್ದರು. ಕಿಟಕಿಯಿಂದ ನೋಡಿದಾಗ ಜನಾರ್ದನ ಗೌಡ ಅವರು ಸೋಫಾದ ಮೇಲೆ ಮಲಗಿದ ಸ್ಥಿತಿಯಲ್ಲಿಯೇ ಇರುವುದು ಕಂಡುಬಂದಿದ್ದು ಬಳಿಕ ಬಾಗಿಲು ಮುರಿದು ಒಳಹೋಗಿ ನೋಡಿದಾಗ ಸೋಫಾದ ಮೇಲೆ ಜನಾರ್ದನ ಗೌಡರು ಮೃತಪಟ್ಟಿರುವುದು ಕಂಡುಬಂದಿದೆ. ಈ ಬಗ್ಗೆ ಮೃತರ ಪತ್ನಿ ಜಯಂತಿ ಅವರು ನೀಡಿದ ದೂರಿನಂತೆ ಕಡಬ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.