ಮಳೆಗೆ ಮನೆ ಪೂರ್ತಿ ಹಾನಿಯಾದರೆ 5 ಲಕ್ಷ ರೂ ಪರಿಹಾರ ಕೊಡಬೇಕು- ಅಡಿಕೆರೋಗ ತಡೆಗೆ ಕೃಷಿಕರಿಗೆ ಸರಕಾರ ಉಚಿತ ಔಷಧಿ ನೀಡಬೇಕು – ಸದನದಲ್ಲಿ ಶಾಸಕ ಅಶೋಕ್ ರೈ ಮನವಿ

0

ಪುತ್ತೂರು: ಕರಾವಳಿ ಜಿಲ್ಲೆಗಳಾದ ದ.ಕ ಮತ್ತು ಉಡುಪಿ ಜಿಲ್ಲೆಗಳಲ್ಲಿ ವ್ಯಾಪಕವಾಗಿ ಮಳೆ ಬರುತ್ತಿದ್ದು, ಪ್ರವಾಹದ ಪರಿಸ್ಥಿತಿ ನಿರ್ಮಾಣವಾಗಿದೆ. ಬಹುತೇಕ ಕಡೆಗಳಲ್ಲಿ ವಾಸದ ಮನೆಗೆ ಹಾನಿಯಾಗಿದೆ, ಕೆಲವು ಮನೆಗಳು ಪೂರ್ತಿಯಾಗಿ ಧ್ವಂಸವಾಗಿದೆ, ಕಡಲು ಕೊರೆತದಿಂದ ಹಲವಾರು ಮನೆಗಳು ಅಪಾಯದಲ್ಲಿದೆ, ಜಿಲ್ಲೆಯಲ್ಲಿ ಅಡಿಕೆಗೆ ಹಳದಿ ಮತ್ತು ಎಲೆ ಚುಕ್ಕಿ ರೋಗ ಬಂದಿದೆ. ಇವೆಲ್ಲಾ ಕಾರಣಕ್ಕೆ ಕರಾವಳಿ ಜನ ತತ್ತರಿಸಿದ್ದಾರೆ. ಸರಕಾರ ಈ ಎಲ್ಲಾ ಸಮಸ್ಯೆಗಳಿಗೆ ಸೂಕ್ತ ಸ್ಪಂದನೆ ನೀಡಬೇಕು ಎಂದು ಪುತ್ತೂರು ಶಾಸಕ ಅಶೋಕ್ ರೈ ವಿಧಾನಸಭಾ ಅಧಿವೇಶನದಲ್ಲಿ ಸರಕಾರದ ಗಮನಸೆಳೆದರು. ಸರಕಾರವು ಶಾಸಕ ಅಶೋಕ್ ರೈ ಪ್ರಸ್ತಾಪವನ್ನು ಸರಕಾರ ಗಂಭೀರವಾಗಿ ಪರಿಗಣಿಸಿದೆ ಎಂದು ಕಂದಾಯ ಸಚಿವ ಕೃಷ್ಣಬೈರೇ ಗೌಡ ಸಭೆಗೆ ತಿಳಿಸಿದರು.

ಪೂರ್ತಿ ಮನೆ ದ್ವಂಸವಾದರೆ 5 ಲಕ್ಷ ಕೊಡಬೇಕು
ಮಳೆಗೆ ಅಥವಾ ಪೃಕೃತಿ ವಿಕೋಪಕ್ಕೆ ವಾಸ್ತವ್ಯದ ಮನೆ ಪೂರ್ತಿ ದ್ವಂಸವಾದರೆ ಸರಕಾರದಿಂದ 1.25 ಲಕ್ಷ ಪರಿಹಾರ ಕೊಡಲಾಗುತ್ತಿದ್ದು ಅದನ್ನು 5 ಲಕ್ಷಕ್ಕೆ ಏರಿಕೆ ಮಾಡಬೇಕು. ಕನಿಷ್ಠ ಪರಿಹಾರ ಮೊತ್ತದಿಂದ ಮನೆ ನಿರ್ಮಾಣ ಮಾಡಲು ಸಾಧ್ಯವಿಲ್ಲ. ಭಾಗಶ ಹಾನಿಗೊಳಗಾದ ಮನೆ ಮಾಲೀಕರಿಗೂ ಸರಕಾರ ಹೆಚ್ಚಿನ ಪರಿಹಾರವನ್ನು ಕೊಡಬೇಕು. ಈ ಬಾರಿಯ ವಿಪರೀತ ಮಳೆಗೆ ಪುತ್ತೂರು ವಿಧಾನಸಭಾ ಕ್ಷೆತ್ರದಲ್ಲಿ 5 ಮನೆ ಪೂರ್ಣ ದ್ವಂಸವಾಗಿದ್ದು 14 ಮನೆಗಳಿಗೆ ಭಾಗಶ ಹಾನಿಯಾಗಿದೆ. ಮಂಗಳೂರು ತಾಲೂಕಿನಲ್ಲಿ 43 ಮನೆಗಳು, ಬಂಟ್ವಾಳದಲ್ಲಿ 36 ಮನೆಗಳಿಗೆ ಭಾಗಶ ಹಾನಿಯಾಗಿದೆ. ಬೆಳ್ತಂಗಡಿಯಲ್ಲಿ 5 ಮನೆಗಳು ಪೂರ್ತಿ ಧ್ವಂಸವಾಗಿದ್ದು 52 ಮನೆಗಳಿಗೆ ಬಾಗಶ ಹಾನಿಯಾಗಿದೆ, ಸುಳ್ಯದಲ್ಲಿ 3 ಪೂರ್ತಿ ಹಾನಿ, 10 ಭಾಗಶ, ಮೂಡಬಿದ್ರೆ 8 ಹಾನಿ, ಕಡಬದಲ್ಲಿ 17 ಮನೆಗಳು ಭಾಗಶ ಹಾನಿ, ಉಳ್ಳಾಲದಲ್ಲಿ 31 ಮನೆಗಳು ಭಾಗಶ ಹಾನಿಯಾಗಿದೆ. ಒಟ್ಟು ದ.ಕ ಜಿಲ್ಲೆಯ ಇ 280 ಮನೆಗಳಿಗೆ ಹಾನಿಯಾಗಿದೆ ಎಂದು ಶಾಸಕ ಅಶೋಕ್ ರೈ ಸದನದಲ್ಲಿ ಸರಕಾರದ ಗಮನಕ್ಕೆ ತಂದರು.

ವಿದ್ಯುತ್ ಅವಘಡಕ್ಕೂ ಪರಿಹಾರ ನೀಡಬೇಕು
ಮಳೆಗಾಲದಲ್ಲಿ ವಿದ್ಯುತ್ ಅವಘಡದಿಂದ ಅನೇಕ ಮನೆಗಳು ಸುಟ್ಟು ಹೋಗಿದೆ, ವಿದ್ಯುತ್ ಉಪಕರಣಗಳು ಕರಕಲಾಗಿವೆ, ಇದರಿಂದ ಮನೆ ಮಾಲಕಗೆ ನಷ್ಟವಾಗಿದೆ. ವಿದ್ಯುತ್ ನಿಂದ ಹಾನಿಗೊಳಗಾದ ಮನೆಗಳಿಗೂ ಸರಕಾರ ಸೂಕ್ತ ರೀತಿಯಲ್ಲಿ ಪರಿಹಾರ ನೀಡಬೇಕು ಎಂದು ಶಾಸಕರು ಮನವಿ ಮಾಡಿದರು.

ಅಡಿಕೆ ರೋಗಕ್ಕೆ ಉಚಿತ ಔಷಧಿ ನೀಡಬೇಕು
ವ್ಯಾಪಕ ಮಳೆಯಿಂದಾಗಿ ಕರಾವಳಿ ಜಿಲ್ಲೆಗಳಲ್ಲಿ ಅಡಿಕೆಗೆ ಹಳದಿ ಮತ್ತು ಎಲೆ ಚುಕ್ಕಿ ರೋಗ ಬಂದಿದೆ. ಎಲೆ ಚುಕ್ಕಿ ರೋಗದಿಂದ ಅಡಿಕೆ ಪಿಂಗಾರ ಒಣಗಿ ಹೋಗಿದ್ದು ಇದರಿಂದ ಕೃಷಿಕರಿಗೆ ತುಂಬಾ ನಷ್ಟವಾಗಿದೆ. ಅಡಿಕೆಯನ್ನೇ ನಂಬಿ ಜೀವನ ಮಾಡುತ್ತಿರುವ ಕರಾವಳಿಯ ಕೃಷಿಕರು ಆತಂಕದಲ್ಲಿದ್ದಾರೆ. ಅಡಿಕೆಗೆ ಬಿಡುವ ಔಷಧಿ ಮತ್ತು ಮೈಲುತುತ್ತನ್ನು ಸರಕಾರ ಉಚಿತವಾಗಿ ನೀಡುವ ಮೂಲಕ ಕೃಷಿಕರ ನೆರವಿಗೆ ಬರಬೇಕು ಮತ್ತು ಈ ರೋಗದಿಂದ ಅಡಿಕೆ ನಷ್ಟವಾದ ಕೃಷಿಕರಿಗೆ ಸರಕಾರ ಸೂಕ್ತ ರೀತಿಯಲ್ಲಿ ಪರಿಹಾರವನ್ನು ನೀಡಬೇಕು ಎಂದು ಶಾಸಕ ಅಶೋಕ್ ರೈ ಸದನದಲ್ಲಿ ಸರಕಾರದ ಗಮನಸೆಳೆದರು.

ನಿಮ್ಮ ಪ್ರಸ್ತಾಪವನೆಯನ್ನು ಸರಕಾರ ಗಂಭಿರವಾಗಿ ಪರಿಗಣಿಸಿದೆ: ಸಚಿವ ಬೈರೇಗೌಡ
ಕರಾವಳಿ ಜಿಲ್ಲೆಗಳಾದ ಉಡುಪಿ ಮ್ತತು ದಕ ಜಿಲ್ಲೆಯ ಜನರ ಸಮಸ್ಯೆಯನ್ನು ಪುತ್ತೂರು ಶಾಸಕ ಅಶೋಕ್ ರೈ ಸರಕಾರದ ಗಮನಕ್ಕೆ ತಂದಿದ್ದಾರೆ. ಸರಕಾರ ಇದನ್ನು ಗಂಭೀರವಾಗಿ ಪರಿಗಣಿಸಿದೆ. ಸೋಮವಾರ ಸಚಿವ ಸಂಪುಟದ ಸಭೆಯಲ್ಲಿ ವಿಚಾರವನ್ನು ಮುಖ್ಯಮಂತ್ರಿಗಳ ಜೊತೆ ಚರ್ಚೆ ಮಾಡುತ್ತೇನೆ. ವ್ಯಾಪಕ ಮಳೆಗೆ ರಸ್ತೆ ಹಾನಿ, ವಿದ್ಯುತ್ ವ್ಯತ್ಯಯ ಮತ್ತು ಮನೆ ಕಳೆದುಕೊಂಡವರು ಮತ್ತು ಬೆಳೆ ಹಾನಿಯ ಬಗ್ಗೆ ಸೂಕ್ತ ಪರಿಹಾರ ಒದಗಿಸುವ ನಿಟ್ಟಿನಲ್ಲಿ ಸರಕಾರದ ಜೊತೆ ಮಾತುಕತೆ ನಡೆಸುತ್ತೇನೆ. ಶಾಸಕರೇ ಏನೂ ಹೆದರಬೇಡಿ ಸರಕಾರ ನಿಮ್ಮ ಜೊತೆಗಿದೆ, ನೊಂದವರ ಪರವಾಗಿದೆ, ಬಡವರ ಪರವಾಗಿದೆ. ಯಾರೆಲ್ಲಾ ತೊಂದರೆ ಅನುಭವಿಸಿದ್ದಾರೋ ಅವರಿಗೆ ಸೂಕ್ತ ಭದ್ರತೆಯನ್ನು ಸರಕಾರ ನೀಡಲಿದೆ ಎಂದ ಸಚಿವರು ಈ ಬಾರಿ ವಾಡಿಕೆಗಿಂದ ಹೆಚ್ಚು ಮಳೆಯಾಗಿದೆ. ಕರಾವಳಿ ಜಿಲ್ಲೆಗಳಲ್ಲಿ ವಾಡಿಕೆಗಿಂತ ಶೇ. 21 ಹೆಚ್ಚು ಮಳೆಯಾಗಿರುವ ಕಾರಣ ಬಹುತೇಕ ಕಡೆ ಸಮಸ್ಯೆ ಸೃಷ್ಟಿಯಾಗಿದೆ. ತುರ್ತು ಕ್ರಮಕ್ಕಾಗಿ ಈಗಾಗಲೇ ಪರಿಹಾರ ಮೊತ್ತವನ್ನು ಬಿಡುಗಡೆ ಮಾಡಲಾಗಿದೆ. ಇನ್ನೂ ಹೆಚ್ಚಿನ ಪರಿಹಾರ ಮೊತ್ತವನ್ನು ನೀಡಲಿದ್ದೇವೆ. ಎಷ್ಟು ಬೇಡಿಕೆ ಇದೆಯೋ ಅಷ್ಟು ಪರಿಹಾರ ಕೊಡಲು ಸರಕಾರ ಬದ್ದವಾಗಿದೆ ಎಂದು ಕಂದಾಯ ಸಚಿವ ಕೃಷ್ಣಬೈರೇಗೌಡ ಸಭೆಗೆ ತಿಳಿಸಿದರು.

LEAVE A REPLY

Please enter your comment!
Please enter your name here