ಪುತ್ತೂರು :ಮಂಗಳೂರು ,ಅತ್ತಾವರದಲ್ಲಿ ಕಾರ್ಯಾಚರಿಸುತ್ತಿರುವ ಮ್ಯಾಕ್ಸ್ ಲೈಫ್ ಇನ್ಸೂರೆನ್ಸ್ ಮತ್ತು ಆಕ್ಸಿಸ್ ಬ್ಯಾಂಕ್ ಸಹಯೋಗದಲ್ಲಿ ಅನೇಕ ಕ್ಷೇತ್ರಗಳಲ್ಲಿ ಗುರುತಿಸಿಕೊಳ್ಳುವ ಪ್ರತಿಭಾನ್ವಿತರನ್ನು ಗೌರವಿಸುವ ಸದುದ್ದೇಶವನ್ನು ಇಟ್ಟುಕೊಂಡು ಅಂತಹ ಪ್ರತಿಭಾನ್ವಿತರನ್ನು ಗುರುತಿಸಿ ಪ್ರಶಸ್ತಿ ಗೌರವವನ್ನು ನೀಡುತ್ತಾ ಬರುತ್ತಿದೆ.ಯುವ ಪ್ರತಿಭೆ ಶರತ್ ಆಳ್ವ ಚನಿಲರವರಿಗೆ ಈ ಸಂಸ್ಥೆಯಿಂದ ಕಲಾರತ್ನ ಪ್ರಶಸ್ತಿಯು ಜು .19 ರಂದು ಒಲಿದು ಬಂದಿದೆ .
ಪೆರ್ವತ್ತೊಡಿಗುತ್ತು ರಘುರಾಮ ಆಳ್ವ ಮತ್ತು ಬೆಳಿಯೂರುಗುತ್ತು ಚಿತ್ರಾರೈ ದಂಪತಿಗಳ ಪುತ್ರನಾಗಿರುವ ಶರತ್ ಆಳ್ವರವರು ಬಾಲ್ಯದಲ್ಲಿಯೇ ಪ್ರತಿಭಾಸಕ್ತರಾಗಿ ಬೆಳೆದು ಮುಂದಕ್ಕೆ ಯುವ ಬರಹಗಾರಾಗಿ, ಕಲಾಪ್ರತಿಭೆಯಾಗಿ ಬೆಳೆದವರು.ಬರಹಗಾರರಾಗಿ ಕವನ, ಲೇಖನಗಳನ್ನು ಬರೆದಿರುವ ಇವರು ಪದವಿ ಹಂತದಲ್ಲೇ ಬರೆಯುವ ಆಸಕ್ತಿ ಹೊಂದಿದ್ದು , ಪುತ್ತೂರು ಸುದ್ದಿಬಿಡುಗಡೆ ದಿನಪತ್ರಿಕೆಯಲ್ಲಿ ಜಗ -ಜಗಲಿ ಎಂಬ ಅಂಕಣದಿಂದ ಅನೇಕ ಸಾಮಾಜಿಕ ಜಾಗೃತಿ ಲೇಖನಗಳನ್ನು ಬರೆಯುತ್ತಿದ್ದಾರೆ. ಕವನ ಬರಹಗಾರನಾಗಿ ಅನೇಕ ಕವನಗಳನ್ನು ಬರೆದಿದ್ದು ಅನೇಕ ಸಾಹಿತ್ಯ ಗೋಷ್ಠಿಗಳಲ್ಲಿ ಕವನವನ್ನು ವಾಚಿಸಿರುತ್ತಾರೆ. ಕಾರ್ಕಳದಲ್ಲಿ ನಡೆದ ಬೆಳದಿಂಗಳ ಸಾಹಿತ್ಯ ಸಮ್ಮೇಳನದಲ್ಲಿ ಇವರ ಕವನ ದ್ವಿತೀಯ ಸ್ಥಾನವನ್ನು ಪಡೆದಿದೆ .
ಕಲಾ ಪ್ರತಿಭೆಯಾಗಿರುವ ಇವರು ಯಕ್ಷಗಾನದಲ್ಲಿ ವೇಷಧಾರಿಯಾಗಿ ಬೆಳೆದು ಮುಂದಕ್ಕೆ ಯಕ್ಷಗಾನ ಗುರುಗಳಾದ ಮಾಂಬಾಡಿ ಸುಬ್ರಹ್ಮಣ್ಯ ಭಟ್ ರವರಿಂದ ಭಾಗವತಿಕೆಯನ್ನು ಕಲಿತು ಭಾಗವತಿಕೆಯನ್ನು ಮಾಡುತ್ತಿದ್ದಾರೆ. ಇವರು ಕಲಾ ಸಂಘಟಕನಾಗಿದ್ದು ಪುತ್ತೂರು ಶ್ರೀ ದುರ್ಗಾ ರಂಗ ಕಲಾ ಚಾವಡಿ ಎಂಬ ಕಲಾ ಸಂಸ್ಥೆಯನ್ನು ಹುಟ್ಟು ಹಾಕಿ ಆ ಮೂಲಕ ಯಕ್ಷ ಹಾಸ್ಯ ವೈಭವ , ತಾಳಮದ್ದಳೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನೀಡುತ್ತಿದ್ದಾರೆ . ನಾಟಕ ಕಲಾವಿದನಾಗಿ ಅನೇಕ ತುಳು ನಾಟಕಗಳಲ್ಲಿ ಅಭಿನಯ ಮಾಡಿದ್ದಾರೆ.
ಚರಿತ್ರೆಯ ಆಸಕ್ತಿಯುಳ್ಳ ಇವರು ಕೊಣಾಜೆಯ ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ಇತಿಹಾಸದಲ್ಲಿ ಸ್ನಾತಕೋತ್ತರ ಪದವಿ ಪಡೆದು ಪುತ್ತೂರಿನ ಪ್ರತಿಷ್ಠಿತ ಶಿಕ್ಷಣ ಸಂಸ್ಥೆ ಸಂತ ಫಿಲೋಮಿನಾ ಪದವಿ ಪೂರ್ವ ಕಾಲೇಜಿನ ಇತಿಹಾಸ ವಿಭಾಗದ ಪ್ರಾಧ್ಯಪಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ .ಇತಿಹಾಸ ಸಂಶೋಧನೆಯಲ್ಲಿ ಆಸಕ್ತಿ ಇರುವ ಇವರು “ಬಲ್ನಾಡು ಶ್ರೀ ದಂಡನಾಯಕ ಉಳ್ಳಾಲ್ತಿ ದೈವಸ್ಥಾನ –ಒಂದು ಮೌಖಿಕ ಅಧ್ಯಯನ” ಎಂಬ ವಿಷಯದಲ್ಲಿ ಮಾಹಿತಿಯನ್ನು ಸಂಗ್ರಹಿಸುತ್ತಿದ್ದು ಇತಿಹಾಸ ಸಂಶೋಧನೆಯಲ್ಲಿ ತನ್ನನ್ನು ತಾನು ತೊಡಗಿಸಿಕೊಂಡಿದ್ದಾರೆ .ಅನೇಕ ಸಂಘ ಸಂಸ್ಥೆಗಳ ಗೌರವ ಸನ್ಮಾನಗಳಿಗೆ ಭಾಜನರಾಗಿದ್ದಾರೆ.