ರಾಜ್ಯದಲ್ಲಿ ಬಿಜೆಪಿ ಸರಕಾರ ಸೋಲಲು, ಕಾಂಗ್ರೆಸ್ ಸರಕಾರ ಬರಲು, ಗ್ಯಾರಂಟಿಯೇ ಮುಖ್ಯ ಕಾರಣವಲ್ಲ-ಬಿಜೆಪಿ ಸರಕಾರದ ವಿರುದ್ಧ 40% ಭ್ರಷ್ಟಾಚಾರದ ಆರೋಪ,ಕಾಂಗ್ರೆಸ್ ಸರಕಾರದ ಭ್ರಷ್ಟಾಚಾರ ರಹಿತ ಆಡಳಿತದ ಭರವಸೆಯೇ ಕಾರಣ

0

ವಿಧಾನಸಭಾ ಅಧಿವೇಶನದಲ್ಲಿ ವಾಲ್ಮೀಕಿ ನಿಗಮದ ಹಗರಣ 3 ದಿನಗಳ ಕಲಾಪಗಳನ್ನು ಬಲಿ ಕೊಟ್ಟಿದೆ. ವಿರೋಧ ಪಕ್ಷದವರು 7 ಗಂಟೆಗಳಿಗಿಂತ ಹೆಚ್ಚು ಕಾಲ ವಾಲ್ಮೀಕಿ ಹಗರಣದ ಬಗ್ಗೆ ಮಾತನಾಡಿದ್ದಾರೆ. ಸಿದ್ದರಾಮಯ್ಯ ಸೇರಿದಂತೆ ಕಾಂಗ್ರೆಸ್ ಪಕ್ಷದವರು ಅದಕ್ಕೆ ಉತ್ತರ ಕೊಡಲು ದೀರ್ಘ ಸಮಯ ತೆಗೆದುಕೊಂಡಿದ್ದಾರೆ. ರಾಜ್ಯದಲ್ಲಿ ಮಳೆಯ ಅನಾಹುತಗಳಿಂದಾಗಿ ಸಾವುಗಳು, ನಷ್ಟಗಳು ಸಂಭವಿಸುತ್ತಿದ್ದರೂ ಎಲ್ಲಾ ಪಕ್ಷಗಳು ಭ್ರಷ್ಟಾಚಾರದ ಹಗರಣದಲ್ಲಿಯೇ ಹೆಚ್ಚಿನ ಸಮಯ ಕಳೆದಿದ್ದಾರೆ.


ಕಳೆದ ಸಲ ಬಿಜೆಪಿ ಸರಕಾರ ಸೋಲಲು ಕಾಂಗ್ರೆಸ್‌ನ ಗ್ಯಾರಂಟಿಗಳಿಗಿಂತ 40% ಸಿಎಂ ಮತ್ತು ಸರಕಾರ ಎಂಬ ಭ್ರಷ್ಟಾಚಾರದ ಆರೋಪವೇ ಮುಖ್ಯ ಕಾರಣವಾಗಿತ್ತು. ಸಿದ್ದರಾಮಯ್ಯರವರ ನೇತೃತ್ವದಲ್ಲಿ ಕಾಂಗ್ರೆಸ್ ಆಡಳಿತಕ್ಕೆ ಬಂದರೆ ಲಂಚ, ಭ್ರಷ್ಟಾಚಾರ ನಿಲ್ಲಿಸುವುದು ಮಾತ್ರವಲ್ಲ ಬಿಜೆಪಿ ಆಡಳಿತದ ಅವಽಯಲ್ಲಿ ನಡೆದ ಲಂಚ, ಭ್ರಷ್ಟಾಚಾರದ ಹಗರಣಗಳನ್ನು ಬೆಳಕಿಗೆ ತಂದು ಶಿಕ್ಷೆಗೆ ಒಳಪಡಿಸುವುದಾಗಿ ಕಾಂಗ್ರೆಸ್‌ನವರು ಜನರಿಗೆ ಆಶ್ವಾಸನೆ ನೀಡಿದ್ದರು. ಆದರೆ ಅದು ಕಾರ್ಯರೂಪಕ್ಕೆ ಬರಲೇ ಇಲ್ಲ. ಯಾಕೆಂದರೆ ಅಽಕಾರಕ್ಕೆ ಬಂದವರು ಅದೇ ಲಂಚ, ಭ್ರಷ್ಟಾಚಾರದ ಸುಳಿಯಲ್ಲೇ ಇರುತ್ತಾರೆ. ಲಂಚ, ಭ್ರಷ್ಟಾಚಾರ ಮಾಡುವುದು ತಮ್ಮ ಹಕ್ಕು, ಅದಕ್ಕಾಗಿಯೇ ಆಡಳಿತ ಎಂದು ಭಾವಿಸಿರುತ್ತಾರೆ. ಅದರಿಂದಾಗಿ ಲಂಚ, ಭ್ರಷ್ಟಾಚಾರ ನಿಲ್ಲಲೇ ಇಲ್ಲ, ಶಿಕ್ಷೆಯಾಗುವುದು ಬಿಡಿ ತನಿಖೆಯೇ ಆಗಲಿಲ್ಲ.


ಈ ಸಲ ಸಿದ್ದರಾಮಯ್ಯ ಸರಕಾರದ ಮೇಲೆ ವಾಗ್ದಾಳಿ ನಡೆದು ಮುಖ್ಯಮಂತ್ರಿ ಸಿದ್ದರಾಮಯ್ಯರ ರಾಜೀನಾಮೆಗೆ ಒತ್ತಾಯ ಬಂದದ್ದಲ್ಲದೆ, ನಾಚಿಕೆಗೆಟ್ಟ ಸರಕಾರ ಎಂದು ವಿಪಕ್ಷ ನಾಯಕ ಆರ್.ಅಶೋಕ್‌ರವರು ನಿರಂತರ ಘೋಷಣೆ ಕೂಗಿದ್ದಾರೆ. ಅದರೊಂದಿಗೆ ಮೂಡಾ ಹಗರಣದಲ್ಲಿಯೂ ಸಿದ್ದರಾಮಯ್ಯರ ನೇರ ಪಾತ್ರವಿದೆ ಎಂದು ವಿರೋಧಪಕ್ಷದವರು ಪ್ರಚಾರ ಮಾಡುತ್ತಿದ್ದು, ಸಿದ್ದರಾಮಯ್ಯರಿಗೆ ಹಾಗೂ ಹಲವು ಮಂತ್ರಿಗಳಿಗೆ ಜೈಲು ಶಿಕ್ಷೆಯಾಗುತ್ತದೆ ಎಂದು ಹೇಳುತ್ತಿದ್ದಾರೆ. ಇದರ ಪರಿಣಾಮವಾಗಿ ಕೆರಳಿದ ಸಿದ್ದರಾಮಯ್ಯ ಮತ್ತು ಕಾಂಗ್ರೆಸ್ ನಾಯಕರು ಬಿಜೆಪಿ ಕಾಲದ ಭ್ರಷ್ಟಾಚಾರದ 21 ಹಗರಣಗಳ ಪಟ್ಟಿಯನ್ನು ಬಿಡುಗಡೆ ಮಾಡಿದ್ದಾರೆ. ಹಗರಣದಲ್ಲಿ ಭಾಗಿಯಾದವರನ್ನು ಜೈಲಿಗೆ ಕಳುಹಿಸುವುದಾಗಿ ಘೋಷಿಸಿದ್ದಾರೆ. ಎರಡೂ ಪಕ್ಷದವರು ಆ ರೀತಿ ಹಗರಣಗಳನ್ನು ಬೆಳಕಿಗೆ ತಂದು ತಪ್ಪು ಮಾಡಿದವರು ಜೈಲಿಗೆ ಹೋಗುವಂತಾಗಲಿ ಆ ಮೂಲಕ ರಾಜ್ಯ ಲಂಚ, ಭ್ರಷ್ಟಾಚಾರ ಮುಕ್ತವಾಗಲಿ ಎಂದು ಜನರು ಆಶಿಸಬೇಕು. ಸಿನಿಮಾಗಳಲ್ಲಿ ಭ್ರಷ್ಟಾಚಾರ ಮಾಡಿದ ಮಂತ್ರಿಗಳನ್ನು, ಶಾಸಕರನ್ನು ಗುಂಡಿಟ್ಟು ಜೈಲಿಗೆ ಹೋದ ನಾಯಕನಿಗೆ ಚಪ್ಪಾಳೆ ತಟ್ಟುವುದಕ್ಕಿಂತ ತಮ್ಮ ತಮ್ಮ ಪಕ್ಷದ ನಾಯಕರ ಮೇಲೆ, ಲಂಚ, ಭ್ರಷ್ಟಾಚಾರ ನಿರ್ಮೂಲನೆಗೆ ಒತ್ತಡ ತರುವುದು ಉತ್ತಮವಲ್ಲವೇ? ಎಂದು ಜನರು ಚಿಂತಿಸಬೇಕು. ಆ ಮೂಲಕವಾದರೂ ಲಂಚ, ಭ್ರಷ್ಟಾಚಾರ ಕಡಿಮೆಯಾಗುತ್ತದೆಯೇ ಎಂದು ಮತದಾರ ರಾಜರುಗಳು ಪ್ರಯತ್ನಪಡಬೇಕು ಅಲ್ಲವೇ?.


ಅದಕ್ಕಿಂತ ಒಂದು ಹೆಜ್ಜೆ ಮುಂದೆ ಹೋಗಿ ಹೇಳುವುದಾದರೆ ಅಗಸ್ಟ್ 15ನ್ನು ಲಂಚ, ಭ್ರಷ್ಟಾಚಾರ ಮುಕ್ತ ದಿನವನ್ನಾಗಿ ಸ್ವಾತಂತ್ರ್ಯ ದಿನವನ್ನಾಗಿ (ನಿಜವಾದ ಅರ್ಥದಲ್ಲಿ) ಸರಕಾರ ಘೋಷಣೆ ಮಾಡುವಂತಾಗಬೇಕು. ಪ್ರತಿಯೊಬ್ಬ ಶಾಸಕರು, ಸಂಸದರು ತಮ್ಮ ತಮ್ಮ ಊರಿನಲ್ಲಿ ಲಂಚ, ಭ್ರಷ್ಟಾಚಾರದ ವಿರುದ್ಧ ಸಮರ ಸಾರಬೇಕು. ತಮ್ಮ ತಾಲೂಕನ್ನು ಲಂಚ, ಭ್ರಷ್ಟಾಚಾರ ಮುಕ್ತ ತಾಲೂಕನ್ನಾಗಿ ಮಾಡುವ ಪ್ರತಿಜ್ಞೆ ಕೈಗೊಳ್ಳಬೇಕು.


ಬೆಳ್ತಂಗಡಿ ಶಾಸಕ ಹರೀಶ್ ಪೂಂಜರು ಮೇ20ರಂದು ಬೆಳ್ತಂಗಡಿಯಲ್ಲಿ ಲಂಚ, ಭ್ರಷ್ಟಾಚಾರಕ್ಕೆ ಇತೀಶ್ರೀ ಹಾಕುವುದಾಗಿ ಘೋಷಿಸಿದ್ದಾರೆ. ಅದನ್ನು ಮಾಡುವ ಕ್ರಿಯೆಯಲ್ಲಿ ಪೊಲೀಸರ ಕಾಲರ್‌ಗೆ ಕೈಹಾಕಲೂ ಸಿದ್ದ, ಅಧಿಕಾರಿಗಳ ಕಛೇರಿಗೆ ಮುತ್ತಿಗೆ ಹಾಕಲೂ ಸಿದ್ದ. ಅದಕ್ಕಾಗಿ ಬೇಲ್ ತೆಗೆದುಕೊಳ್ಳದೆ ಜೈಲಿಗೆ ಹೋಗಲೂ ಸಿದ್ದ ಎಂದು ಬಹಿರಂಗವಾಗಿ ಘೋಷಿಸಿದ್ದಾರೆ. ಅದರ ವೀಡಿಯೋ ವೈರಲ್ ಆಗಿದೆ. ವಿಧಾನ ಸಭಾ ಕಲಾಪದಲ್ಲಿಯೂ ಶಾಸಕ ಹರೀಶ್ ಪೂಂಜ ಭ್ರಷ್ಟಾಚಾರದ ವಿರುದ್ಧ ಪ್ರತಿಭಟನೆ ನಡೆಸಿದ್ದಾರೆ. ಪುತ್ತೂರಿನ ಶಾಸಕ ಅಶೋಕ್ ಕುಮಾರ್ ರೈಯವರು ಲಂಚ, ಭ್ರಷ್ಟಾಚಾರದ ವಿರುದ್ಧ ಘೋಷಣೆ ಕೂಗಿದ್ದಲ್ಲದೆ ಅದನ್ನು ಕಾರ್ಯರೂಪಕ್ಕೆ ತರುತ್ತಿದ್ದಾರೆ. ಪುತ್ತೂರಿನಲ್ಲಿ ಲಂಚ, ಭ್ರಷ್ಟಾಚಾರ ಕಡಿಮೆಯಾಗಿದೆ ಎಂಬ ಅಭಿಪ್ರಾಯ ಜನರಲ್ಲಿದೆ. ಶಾಸಕರಾದ ಪೂಂಜರಿಗೂ, ಅಶೋಕ್ ರೈಯವರಿಗೂ ಲಂಚ, ಭ್ರಷ್ಟಾಚಾರದ ವಿರುದ್ಧದ ಅವರ ಹೋರಾಟಕ್ಕೆ ಸುದ್ದಿ ಜನಾಂದೋಲನ ವೇದಿಕೆ ಸಂಪೂರ್ಣ ಬೆಂಬಲ ನೀಡುವುದಾಗಿ ಘೋಷಿಸಿದ್ದೇವೆ.


ಆಗಸ್ಟ್ 15ರಂದು ಲಂಚ, ಭ್ರಷ್ಟಾಚಾರ ಮುಕ್ತ ದಿನವನ್ನಾಗಿ ಘೋಷಣೆ ಮಾಡಲು, ಅದು ಕಾರ್ಯರೂಪಕ್ಕೆ ಬರಲು ತಾಲೂಕು ಮತ್ತು ರಾಜ್ಯದ ಜನತೆ ತಮ್ಮ ಶಾಸಕರ, ಸಂಸದರ ಮೇಲೆ ಒತ್ತಡ ತರಬೇಕೆಂದು ವಿನಂತಿ ಮಾಡುತ್ತಿದ್ದೇನೆ.
ಡಾ.ಯು.ಪಿ.ಶಿವಾನಂದ, ಸುದ್ದಿ ಜನಾಂದೋಲನ ವೇದಿಕೆ, ಪುತ್ತೂರು, ಸುಳ್ಯ, ಬೆಳ್ತಂಗಡಿ

LEAVE A REPLY

Please enter your comment!
Please enter your name here