5 ಎಕ್ರೆ ಜಮೀನು ಹೊಂದಿದವರನ್ನು ಸಣ್ಣ ರೈತನೆಂದು ಪರಿಗಣಿಸಿ, ಆಗ್ರಹ
ಪುತ್ತೂರು: ಕೆಯ್ಯೂರು ಗ್ರಾಮ ಪಂಚಾಯತ್‌ನ 2024-25 ನೇ ಸಾಲಿನ ಮಹಾತ್ಮ ಗಾಂಧೀ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯ ಮತ್ತು 15 ನೇ ಹಣಕಾಸು ಯೋಜನೆಯ ಸಾಮಾಜಿಕ ಪರಿಶೋಧನೆಯ ವಿಶೇಷ ಗ್ರಾಮ ಸಭೆ ಜು.22 ರಂದು ಗ್ರಾಪಂ ಸಭಾಂಗಣದಲ್ಲಿ ಗ್ರಾಪಂ ಅಧ್ಯಕ್ಷ ಶರತ್ ಕುಮಾರ್ ಮಾಡಾವುರವರ ಅಧ್ಯಕ್ಷತೆಯಲ್ಲಿ ನಡೆಯಿತು.
ಮೀನುಗಾರಿಕಾ ಇಲಾಖೆಯ ಸಹಾಯಕ ನಿರ್ದೇಶಕಿ ಮಂಜುಶ್ರೀ ಶೆಣೈಯವರು ನೋಡೆಲ್ ಅಧಿಕಾರಿಯಾಗಿ ಸಭೆ ನಡೆಸಿಕೊಟ್ಟರು.ನರೇಗಾ ಸಂಯೋಜಕಿ ಸೌಮ್ಯ ಕುಮಾರಿ ವಿಷಯ ಮಂಡನೆ ಮಾಡಿದರು. ಐಇಸಿ ಕಾರ್ಯಕರ್ತ ಭರತ್‌ರಾಜ್‌ರವರು ಉದ್ಯೋಗ ಖಾತರಿ ಯೋಜನೆಯ ಬಗ್ಗೆ ಮಾಹಿತಿ ನೀಡಿದರು.
ಗ್ರಾಪಂ ಅಧ್ಯಕ್ಷ ಶರತ್ ಕುಮಾರ್ ಮಾಡಾವುರವರು ಮಾತನಾಡಿ, ಉದ್ಯೋಗ ಖಾತರಿ ಯೋಜನೆ ಒಂದು ಒಳ್ಳೆಯ ಯೋಜನೆಯಾಗಿದ್ದು ಪ್ರತಿಯೊಬ್ಬರು ಇದರ ಸದುಪಯೋಗ ಪಡೆದುಕೊಳ್ಳುವಂತೆ ತಿಳಿಸಿದರು. ವೇದಿಕೆಯಲ್ಲಿ ಗ್ರಾಪಂ ಉಪಾಧ್ಯಕ್ಷೆ ಸುಮಿತ್ರಾ ಪಲ್ಲತ್ತಡ್ಕ, ಅಭಿವೃದ್ಧಿ ಅಧಿಕಾರಿ ನಮಿತಾ ಎ.ಕೆ, ತೋಟಗಾರಿಕಾ ಸಿವಿಲ್ ಇಂಜಿನಿಯರ್ ಆಕಾಂಕ್ಷ ರೈ, ಸಿವಿಲ್ ಇಂಜಿನಿಯರ್ ಶ್ರೀಲಕ್ಷ್ಮೀ ಉಪಸ್ಥಿತರಿದ್ದರು. ಗ್ರಾಪಂ ಕಾರ್ಯದರ್ಶಿ ಸುರೇಂದ್ರ ರೈ ಇಳಂತಾಜೆ ಸ್ವಾಗತಿಸಿ, ವಂದಿಸಿದರು. ಸಭೆಯಲ್ಲಿ ಗ್ರಾಪಂನ ಸದಸ್ಯರು, ಉದ್ಯೋಗ ಖಾತರಿ ಫಲಾನುಭವಿಗಳು, ಗ್ರಾಮಸ್ಥರು ಉಪಸ್ಥಿತರಿದ್ದರು. ಗ್ರಾಪಂ ಸಿಬ್ಬಂದಿಗಳು ಸಹಕರಿಸಿದ್ದರು.
5 ಎಕ್ರೆ ಜಮೀನು-ಸಣ್ಣ ರೈತ ಪರಿಗಣಿಸಿ
ಈಗಾಗಲೇ ಸಣ್ಣ ರೈತ ಸರ್ಟೀಫಿಕೇಟ್ ಕೊಡುವ ವಿಚಾರದಲ್ಲಿ ಬಹಳಷ್ಟು ಗೊಂದಲವಿದ್ದು ಬಹಳಷ್ಟು ರೈತರು ಉದ್ಯೋಗ ಖಾತರಿ ಯೋಜನೆಯಿಂದ ಹೊರಗುಳಿಯುತ್ತಿದ್ದಾರೆ. ಆದ್ದರಿಂದ 5 ಎಕರೆ ಜಮೀನು ಹೊಂದಿದ ಎಲ್ಲಾ ರೈತರನ್ನು ಸಣ್ಣ ರೈತ ಎಂದು ಪರಿಗಣಿಸಿ ಅವರಿಗೆ ಸಣ್ಣ ರೈತ ಸರ್ಟೀಫಿಕೇಟ್ ಕೊಡುವಂತೆ ಆಗಬೇಕು ಈ ಬಗ್ಗೆ ಸರಕಾರಕ್ಕೆ ಬರೆದುಕೊಳ್ಳಬೇಕು ಎಂದು ಸದಸ್ಯ ಜಯಂತ ಪೂಜಾರಿ ಕೆಂಗುಡೇಲು ಆಗ್ರಹಿಸಿದರು. ಇದಕ್ಕೆ ಸದಸ್ಯ ಅಬ್ದುಲ್ ಖಾದರ್ ಮೇರ್ಲ ಧ್ವನಿಗೂಡಿಸಿದರು. ಈ ಬಗ್ಗೆ ನಿರ್ಣಯಿಸಲಾಯಿತು.
5993 ಮಾನವ ದಿನದ ಕೆಲಸ
ಉದ್ಯೋಗ ಖಾತರಿ ಯೋಜನೆಯಲ್ಲಿ ಗ್ರಾಪಂನಿಂದ 130 ಕಾಮಗಾರಿ, ತಾಪಂನಿಂದ 4 ಕಾಮಗಾರಿ ಹಾಗೂ ಜಿಪಂ ಇಂಜಿನಿಯರ್ ಇಲಾಖೆಯಿಂದ 5 ಕಾಮಗಾರಿ ನಡೆದಿದೆ. 5993 ಮಾನವ ದಿನಗಳ ಕೆಲಸ ನಡೆದಿದ್ದು ರೂ.18,84,923 ಕೂಲಿ ವೆಚ್ಚ, ರೂ.3,81,195 ಸಾಮಾಗ್ರಿ ವೆಚ್ಚ ಸೇರಿದಂತೆ ಒಟ್ಟು ರೂ.22,66,118 ಮೊತ್ತದ ಕಾಮಗಾರಿ ನಡೆದಿದೆ.