ಉಪ್ಪಿನಂಗಡಿ: ಯುವತಿಯೋರ್ವಳು ತನ್ನ ಮನೆಯ ಬಚ್ಚಲು ಕೋಣೆಯಲ್ಲಿ ಸ್ನಾನ ಮಾಡುತ್ತಿದ್ದಾಗ ಬಚ್ಚಲು ಕೋಣೆಯ ಹೊರಭಾಗದ ಕಿಟಕಿಯಿಂದ ಇಣುಕಿ ನೋಡಿ ಸಾರ್ವಜನಿಕರ ಕೈಗೆ ಸಿಕ್ಕಿ ಬಿದ್ದು ಪೊಲೀಸ್ ವಶವಾದ ಇಲ್ಲಿನ ಪೆರಿಯಡ್ಕ ನಿವಾಸಿ ಅಬ್ದುಲ್ ರಹಿಮಾನ್ (41) ಎಂಬಾತನ ಮೇಲೆ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 85/2020 ಕಲಂ: 77 ಬಿಎನ್‌ಎಸ್ 2023ರಡಿ ಪ್ರಕರಣ ದಾಖಲಿಸಿದ್ದು, ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಲಯ ಈತನಿಗೆ ನ್ಯಾಯಾಂಗ ಬಂಧನ ವಿಧಿಸಿದೆ.
ಈ ಹಿಂದೆ ಕೊಯಿಲ ನಿವಾಸಿಯಾಗಿದ್ದ ಈತ ಕೆಲವು ವರ್ಷಗಳ ಹಿಂದೆ ಪೆರಿಯಡ್ಕದಲ್ಲಿ ಬಂದು ನೆಲೆಸಿದ್ದು, ಜು.21ರಂದು ರಾತ್ರಿ 9 ಗಂಟೆಯ ಸುಮಾರಿಗೆ ಪೆರಿಯಡ್ಕದ 22 ವರ್ಷದ ಯುವತಿಯೋರ್ವಳು ತನ್ನ ಓದು ಮುಗಿಸಿ ಸ್ನಾನ ಮಾಡಲೆಂದು ತನ್ನ ಮನೆಯ ಬಚ್ಚಲು ಕೋಣೆಗೆ ಹೋಗಿ ಸ್ನಾನ ಮಾಡುತ್ತಿದ್ದಾಗ ಹೊರಗಡೆಯಿಂದ ಶಬ್ದ ಬಂದಿದ್ದು, ಈಕೆ ಕಿಟಕಿಯಿಂದ ಹೊರ ನೋಡಿದಾಗ ಈಕೆಯ ನೆರೆಮನೆಯ ನಿವಾಸಿ ಅಬ್ದುಲ್ ರಹಿಮಾನ್ ಈಕೆ ಸ್ನಾನ ಮಾಡುತ್ತಿದ್ದದ್ದನ್ನು ಕಿಟಕಿಯ ಹೊರಭಾಗದಿಂದ ಇಣುಕಿ ನೋಡುತ್ತಿದ್ದ. ಆಗ ಈಕೆ ಬೊಬ್ಬೆ ಹೊಡೆದು, ತಾಯಿಯಲ್ಲಿ ಈ ವಿಚಾರ ತಿಳಿಸಿದ್ದು, ತಾಯಿಯು ಟಾರ್ಚ್ ಲೈಟ್ ಹಾಕಿದಾಗ ತಾಯಿಯನ್ನು ನೋಡಿದ ಆರೋಪಿ ಅಬ್ದುಲ್ ರಹಿಮಾನ್ ಕಾಂಪೌಂಡ್ ಹಾರಿ ಅಲ್ಲಿಂದ ಓಡಿ ಹೋಗಿದ್ದು, ಬಳಿಕ ಇವರ ಮನೆಯ ಮುಂದಿನ ಗೇಟ್ ಮೂಲಕ ಮನೆಗೆ ಬಂದು ಮುಂಬಾಗಿಲು ಬಡಿಯುತ್ತಿದ್ದ. ಕೂಡಲೇ ಈಕೆಯ ತಾಯಿ ತಮ್ಮ ನೆರೆಕರೆಯವರಾದ ಹರೀಶ್ ಪಟ್ಲ ಹಾಗೂ ಚಂದ್ರಶೇಖರ ಅವರಿಗೆ ಫೋನ್ ಮಾಡಿ ವಿಷಯ ತಿಳಿಸಿದ್ದು, ಅವರು ಮನೆಗೆ ಬರುವುದನ್ನು ನೋಡಿ ಅಬ್ದುಲ್ ರಹಿಮಾನ್ ಅಲ್ಲಿಂದ ಪರಾಯಿಯಾಗಿದ್ದ. ಬಳಿಕ ಯುವತಿಯು ಉಪ್ಪನಂಗಡಿ ಪೊಲೀಸರಿಗೆ ದೂರು ನೀಡಿದ್ದು, ಈತನನ್ನು ಪೊಲೀಸರು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.
ಪೆರಿಯಡ್ಕದಲ್ಲಿ ದಿನಸಿ ಅಂಗಡಿ ಇಟ್ಟುಕೊಂಡಿರುವ ಈತ ವಿವಾಹಿತನಾಗಿದ್ದು, ಇಬ್ಬರು ಮಕ್ಕಳ ತಂದೆಯಾಗಿದ್ದಾನೆ. ತಾನು ಕಿಟಕಿಯಿಂದ ವೀಕ್ಷಿಸಲು ಯತ್ನಿಸಿ ಪರಾರಿಯಾಗುತ್ತಿದ್ದ ಕೃತ್ಯವನ್ನು ಯಾರೂ ನೋಡಿಲ್ಲ ಎಂದು ಭಾವಿಸಿದ್ದ ಈತ, ಯುವತಿಯ ತಾಯಿ ಬೊಬ್ಬೆ ಹೊಡೆದಾಗ, ಮನೆಗೆ ಮೊದಲಾಗಿ ಧಾವಿಸಿ ಬಂದ ಅಬ್ದುಲ್ ರಹಿಮಾನ್ ಇವರ ಬಾಗಿಲು ಬಡಿದು ಏನಾಯಿತ್ತಕ್ಕ . .? ಬಾಗಿಲು ತೆರೆಯಿರಿ ಎಂದು ಸುಭಗನಂತೆ ನಟಿಸಿ ನೆರೆಮನೆಯವರ ಸಂಕಷ್ಠಕ್ಕೆ ಧಾವಿಸಿ ಬಂದವನಂತೆ ವರ್ತಿಸಿದ್ದ.
ಠಾಣೆಯೆದುರು ಜಮಾಯಿಸಿದ ಜನ:
ಈ ಘಟನೆ ನಡೆದ ಬಗ್ಗೆ ತಿಳಿಯುತ್ತಲೇ ನಿನ್ನೆ ರಾತ್ರಿ ಠಾಣೆಯ ಮುಂದೆ ಹಿಂದೂ ಯುವಕರು ಜಮಾಯಿಸಿದ್ದು, ಠಾಣೆಗೆ ಹಿಂದೂಪರ ಸಂಘಟನೆಯ ಮುಖಂಡ ಅರುಣ್ ಕುಮಾರ್ ಪುತ್ತಿಲ, ಬಿಜೆಪಿ ಮುಖಂಡರಾದ ಸುರೇಶ್ ಅತ್ರೆಮಜಲು, ರಮೇಶ್ ಬಂಡಾರಿ ಸೇರಿದಂತೆ ಹಲವರು ಧಾವಿಸಿ, ಈತನ ಮೇಲೆ ಕಠಿಣ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.
ಮನೆಗೆ ನುಗ್ಗಿರುವ ಪ್ರಕರಣದ ತನಿಖೆಯಾಗಲಿ:
ಇದೇ ಪರಿಸರದಲ್ಲಿ ಮನೆ ಮಂದಿ ಗಾಢ ನಿದ್ದೆಯಲ್ಲಿರುವ ರಾತ್ರಿ ಸಮಯದಲ್ಲಿ ಮನೆಯ ಹಿಂಬಾಗಿಲನ್ನು ಸ್ಕ್ರೂ ಡ್ರೈವರ್ ಮೂಲಕ ತೆರೆದು ಒಳಗೆ ನುಗ್ಗಿರುವ ಘಟನೆ ಹಲವು ಮನೆಗಳಲ್ಲಿ ನಡೆದಿದ್ದು, ಇಲ್ಲಿ ಯಾವುದೇ ಕಳ್ಳತನವಾಗಿಲ್ಲ. ಬದಲಾಗಿ ಮನೆಯವರು ಎಚ್ಚರವಾಗಿ ಬೊಬ್ಬೆ ಹೊಡೆದಾಗ ವ್ಯಕ್ತಿಯೋರ್ವ ಓಡಿ ತಪ್ಪಿಸಿಕೊಳ್ಳುತ್ತಿದ್ದ. ಈ ಘಟನೆಯಲ್ಲಿ ಈತನ ಪಾತ್ರ ಇರುವ ಬಗ್ಗೆ ಸಾರ್ವಜನಿಕರಿಗೆ ಸಂಶಯವಿದ್ದು, ಈ ಬಗ್ಗೆಯೂ ಪೊಲೀಸರು ಕೂಲಂಕುಶ ತನಿಖೆ ನಡೆಸಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.