ಉಪ್ಪಿನಂಗಡಿ: ಇವತ್ತಿನ ಸರಕಾರಿ ಕೇಂದ್ರಿತ ಎಲ್ಲಾ ವ್ಯವಸ್ಥೆಗಳಿಗೂ ಆಧಾರ್ ಕಡ್ಡ್ಡಾಯವಾಗಿರುವುದರಿಂದ ಹೊಸ ಆಧಾರ್ ಅಥವಾ ಆಧಾರ್ ತಿದ್ದುಪಡಿಗಾಗಿ ಜನ ಮುಂದಾಗುವುದು ಸಹಜ. ಪ್ರಸಕ್ತ ಉಪ್ಪಿನಂಗಡಿಯಲ್ಲಿ ಅಂಚೆ ಕಚೇರಿ ಹಾಗೂ ನಾಡಕಚೇರಿಗಳಲ್ಲಿ ಆಧಾರ್ ಸೇವೆ ಸ್ಥಗಿತಗೊಂಡಿರುವುದರಿಂದ ಆಧಾರ್‌ಗಾಗಿ ಜನತೆ ಬಿಎಸ್ಸೆನ್ನೆಲ್ ಕಚೇರಿ ಮುಂಭಾಗದಲ್ಲಿ ಗೇಟಿನ ಮುಂದೆ ಕಾಯುತ್ತಿರುವ ದೃಶ್ಯ ಇದಾಗಿದೆ.
ಈ ಮೊದಲು ಉಪ್ಪಿನಂಗಡಿಯ ಅಂಚೆ ಕಚೇರಿಯಲ್ಲಿ ವ್ಯವಸ್ಥಿತವಾಗಿ ಆಧಾರ್ ಸೇವೆ ಲಭಿಸುತ್ತಿತ್ತು. ಅಲ್ಲಿನ ಆಧಾರ್ ಸೇವೆ ನೀಡುವ ಸಿಬ್ಬಂದಿಗೆ ಭಡ್ತಿಯಾಗಿ ವರ್ಗಾವಣೆಯಾದ ದಿನದಿಂದ ಆಧಾರ್ ಸೇವೆ ಸ್ಥಗಿತಗೊಂಡಿದೆ. ನಾಡಕಚೇರಿಯಲ್ಲಿ ಯಾವಾಗ ಸೇವೆ ದೊರೆಯುತ್ತದೆ ಎನ್ನುವುದೇ ತಿಳಿಯದಾಗಿದೆ. ಈ ಮಧ್ಯೆ ಉಪ್ಪಿನಂಗಡಿಯ ಬಿಎಸ್ಸೆನ್ನೆಲ್ ಕಚೇರಿಯಲ್ಲಿ ಗುತ್ತಿಗೆ ಆಧಾರದಲ್ಲಿ ಆಧಾರ್ ಸೇವೆ ನೀಡಲಾಗುತ್ತಿದೆಯಾದರೂ, ಅಲ್ಲಿ ಹತ್ತು ಗಂಟೆಯ ಬಳಿಕ ಕಚೇರಿ ತೆರೆಯುವುದು ಹಾಗೂ ಹೆಚ್ಚುವರಿ ಸೇವಾಶುಲ್ಕ ಸ್ವೀಕರಿಸಲಾಗುತ್ತಿದೆ ಎಂಬ ದೂರು ಕೇಳಿ ಬರುತ್ತಿದೆ. ಎಲ್ಲೂ ಸೇವೆ ದೊರೆಯದೇ ಇದ್ದಾಗ ದೊರೆಯುವ ಒಂದೇ ಕೇಂದ್ರಕ್ಕೆ ಜನತೆ ಅವಲಂಭಿತರಾಗುವುದು ಅನಿವಾರ್ಯವೆನಿಸಿದೆ. ಹೀಗಾಗಿ ಮುಂಜಾನೆ 8 ಗಂಟೆಗೆ ಬಂದು ನಿಲ್ಲುವ ಜನತೆ ಸುಧೀರ್ಘ ಕಾಯುವಿಕೆಗೆ ಒಳಗಾಗುತ್ತಿದ್ದಾರೆ.
ಅಂಚೆ ಕಚೇರಿಯಲ್ಲಿ ಈ ಹಿಂದಿನಂತೆ ಸೇವೆ ದೊರೆಯಲಿ:
ಉಪ್ಪಿನಂಗಡಿಯ ಅಂಚೆ ಕಚೇರಿಯಲ್ಲಿ ಈ ಹಿಂದೆ ಮುಂಜಾನೆ 8 ಗಂಟೆಯಿಂದಲೇ ಆಧಾರ್ ಸೇವೆ ದೊರಕುತ್ತಿತ್ತು. ಇದೀಗ ಸಿಬ್ಬಂದಿ ಕೊರತೆ ಕಾರಣಕ್ಕೆ ಸೇವೆ ಸ್ಥಗಿತಗೊಳಿಸಿರುವುದು ಸರಿಯಲ್ಲ. ಅಗತ್ಯ ಸಿಬ್ಬಂದಿಯನ್ನು ನೇಮಿಸಿಕೊಂಡು ಜನತೆಗೆ ಆಧಾರ್ ಸೇವೆಯನ್ನು ನಿರಂತರ ಒದಗಿಸುವತ್ತ ಅಂಚೆ ಇಲಾಖಾಧಿಕಾರಿಗಳು ಗಮನ ಹರಿಸಬೇಕು. ಇಲ್ಲವಾದರೆ ಪ್ರತಿಭಟನೆಯಂತಹ ಕ್ರಮಕ್ಕೆ ಮುಂದಾಗಬೇಕಾಗುತ್ತದೆ ಎಂದು ಉಪ್ಪಿನಂಗಡಿಯ ವಾಣಿಜ್ಯ ಮತ್ತು ಕೈಗಾರಿಕ ಸಂಘದ ಅಧ್ಯಕ್ಷ ಪ್ರಶಾಂತ್ ಡಿಕೋಸ್ಟ ಎಚ್ಚರಿಸಿದ್ದಾರೆ.