ಉಪ್ಪಿನಂಗಡಿ: ತುಂಬಿ ಹರಿಯುವ ನದಿಯಲ್ಲಿ ದನದ ರಕ್ಷಣೆ- ಸಾರ್ವಜನಿಕರಿಂದ ಪ್ರಶಂಸೆ

0

ಉಪ್ಪಿನಂಗಡಿ: ತುಂಬಿದ ನೇತ್ರಾವತಿ ನದಿಯಲ್ಲಿ ತೇಲಿ ಬರುತ್ತಿದ್ದ ದನವೊಂದನ್ನು ಉಪ್ಪಿನಂಗಡಿಯಲ್ಲಿರುವ ಗೃಹರಕ್ಷಕದಳದವರನ್ನೊಳಗೊಂಡ ಪ್ರವಾಹ ರಕ್ಷಣಾ ತಂಡ ದೋಣಿಯ ಮೂಲಕ ನದಿ ಮಧ್ಯಕ್ಕೆ ಹೋಗಿ ರಕ್ಷಣೆ ಮಾಡಿ ದಡಕ್ಕೆ ಕರೆದುಕೊಂಡು ಬಂದ ಘಟನೆ ಉಪ್ಪಿನಂಗಡಿಯಲ್ಲಿ ಜು.27ರಂದು ನಡೆದಿದೆ.

ನೇತ್ರಾವತಿ ನದಿಯ ನೀರಿನ ಮಟ್ಟ ಇಂದು ನಿನ್ನೆಗಿಂತಲೂ ಏರಿಕೆಯಾಗಿದ್ದು, 28.05 ಮೀ. ಎತ್ತರದಲ್ಲಿ ಹರಿಯುತ್ತಿತ್ತು. ನದಿಯು ರಭಸದಿಂದ ಹರಿಯುತ್ತಿದ್ದು, ಈ ನದಿಯ ಮಧ್ಯದಲ್ಲಿ ದನವೊಂದು ನದಿ ನೀರಿನಲ್ಲಿ ತೇಲಿಕೊಂಡು ಹೋಗುತ್ತಿರುವುದನ್ನು ಹಳೆಗೇಟು ಬಳಿಯ ದಡ್ಡು ಎಂಬಲ್ಲಿರುವ ಟಯರ್ ಅಂಗಡಿಯ ಮಾಲಕ ಚಂದಪ್ಪ ಅವರು ಕಂಡಿದ್ದು, ಕೂಡಲೇ ದನವು ನದಿಯಲ್ಲಿ ತೇಲಿ ಬರುತ್ತಿದ್ದ ಮಾಹಿತಿಯನ್ನು ಉಪ್ಪಿನಂಗಡಿಯ ಶ್ರೀ ಸಹಸ್ರಲಿಂಗೇಶ್ವರ- ಮಹಾಕಾಳಿ ದೇವಾಲಯದ ಬಳಿ ಬೀಡು ಬಿಟ್ಟಿರುವ ಪ್ರವಾಹ ರಕ್ಷಣಾ ತಂಡಕ್ಕೆ ನೀಡಿದರು. ತಕ್ಷಣವೇ ಕಾರ್ಯಪ್ರವೃತವಾದ ಈ ತಂಡ ತಮ್ಮಲ್ಲಿರುವ ರಬ್ಬರ್ ದೋಣಿಯ ಮೂಲಕ ಉಪ್ಪಿನಂಗಡಿ ಬಳಿಯ ನೇತ್ರಾವತಿ ನದಿ ಸೇತುವೆಯ ಬಳಿ ತೆರಳುತ್ತಿರುವಾಗ ಎದುರಿನಿಂದ ನದಿಯ ಮಧ್ಯ ಭಾಗದಲ್ಲಿ ದನವು ನೀರಿನಲ್ಲಿ ಕೊಚ್ಚಿಕೊಂಡು ಬರುವುದನ್ನು ಕಂಡು ಅಲ್ಲಿಯೇ ಕಾರ್ಯಾಚರಣೆ ನಡೆಸಿ, ದನದ ಮೂಗುದಾರಕ್ಕೆ ಹಗ್ಗವನ್ನು ಕಟ್ಟಿ ದೇವಾಲಯದ ಬಳಿ ದಡಕ್ಕೆ ತಂದು ಅದನ್ನಲ್ಲಿ ಕಟ್ಟಿ ಹಾಕಿದರು.


ಉಪ್ಪಿನಂಗಡಿ ಕಂದಾಯ ಹೋಬಳಿ ಉಪತಹಶೀಲ್ದಾರ್ ಚೆನ್ನಪ್ಪ ಗೌಡರ ಸೂಚನೆಯಂತೆ ತೆರಳಿದ ಗೃಹ ರಕ್ಷಕದಳದ ಪ್ರಭಾರ ಘಟಕಾಧಿಕಾರಿ ದಿನೇಶ್ ಬಿ. ಅವರ ನೇತೃತ್ವದ ಈ ರಕ್ಷಣಾ ಕಾರ್ಯಾಚರಣ ತಂಡದಲ್ಲಿ ಎ.ಎಸ್.ಎಲ್. ಜನಾರ್ದನ, ಚರಣ್, ಸುದರ್ಶನ್, ಹಾರೀಸ್, ಸಮದ್ ಇದ್ದರು.
ಸಾರ್ವಜನಿಕರಿಂದ ಪ್ರಶಂಸೆ: ರಭಸದಿಂದ ಹರಿಯುವ ನದಿ ನೀರಿನಲ್ಲಿ ಜಾನುವಾರುಗಳ ರಕ್ಷಣೆ ಸುಲಭದ ಮಾತಲ್ಲ. ಅದನ್ನು ಹಿಡಿದುಕೊಳ್ಳಲು ಹೋದಾಗ ಅವುಗಳು ಬೆದರಿ ಆ ಕಡೆ, ಈಕಡೆ ಹಾರಲು, ಹೊರಳಾಡಲು ನೋಡುತ್ತವೆ. ಇದರಿಂದ ದೋಣಿಯೇ ಮಗುಚುವ ಸಂಭವವಿದೆ. ಆದರೂ ಇಂತಹ ಅಪಾಯದ ಪರಿಸ್ಥಿತಿಯಲ್ಲಿ ನದಿ ಮಧ್ಯದಿಂದ ದನವನ್ನು ರಕ್ಷಿಸಿ ತಂದ ಪ್ರವಾಹ ರಕ್ಷಣಾ ತಂಡವು ಸಾರ್ವಜನಿಕ ವಲಯದಲ್ಲಿ ಪ್ರಶಂಸೆಗೆ ಪಾತ್ರವಾಗಿದೆ.

ಮೊಗ್ರುವಿಂದ ಬಂದಿತ್ತು ದನ!
ಬೆಳ್ತಂಗಡಿ ತಾಲೂಕಿನ ಬಂದಾರು ಗ್ರಾ.ಪಂ. ವ್ಯಾಪ್ತಿಯ ಮೊಗ್ರು ಗ್ರಾಮದ ಪುಂಡಪಿಲ ನಿವಾಸಿ ವಿಶ್ವನಾಥ ಗೌಡರ ದನ ಇದಾಗಿದ್ದು, ಮೇಯಲು ಬಿಟ್ಟ ದನ ಆಕಸ್ಮಿಕವಾಗಿ ನದಿ ನೀರಿನಲ್ಲಿ ಕೊಚ್ಚಿಕೊಂಡು ಬಂದಿತ್ತು. ಇಲ್ಲಿ ದನವನ್ನು ಹಿಡಿದಿರುವ ಬಗ್ಗೆ ಸುದ್ದಿ ತಿಳಿದು ಅದರ ಮಾಲಕರು ಉಪ್ಪಿನಂಗಡಿಗೆ ಬಂದಿದ್ದು, ಇಲ್ಲಿನ ಪೊಲೀಸ್ ಠಾಣೆಯಲ್ಲಿ ಪತ್ರವ್ಯವಹಾರಗಳನ್ನು ಮುಗಿಸಿ ದನವನ್ನು ಕೊಂಡೊಯ್ದಿದ್ದಾರೆ. ಈ ಸಂದರ್ಭ ಶ್ರೀ ಸಹಸ್ರಲಿಂಗೇಶ್ವರ- ಮಹಾಕಾಳಿ ದೇವಾಲಯದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ರಾಧಾಕೃಷ್ಣ ನಾಕ್, ಸಿಬ್ಬಂದಿ ಕೃಷ್ಣ ಪ್ರಸಾದ್, ಪದ್ಮನಾಭ, ದಿವಾಕರ ಹಾಗೂ ಪ್ರವಾಹ ರಕ್ಷಣಾ ತಂಡದ ಸಿಬ್ಬಂದಿ ಉಪಸ್ಥಿತರಿದ್ದರು.

ಪ್ರೀತಿ ಎಂಬ ಹೆಸರಿನ ಈ ದನ
ಮೊಗ್ರು ಗ್ರಾಮದ ಪುಂಡುಪಿಲ ಮನೆ ನಿವಾಸಿ ವಿಶ್ವನಾಥ ಗೌಡ ಎಂಬವರ ಮನೆಯಲ್ಲಿ ಹುಟ್ಟಿ ಬೆಳೆದ ಈ ದನದ ವಯಸ್ಸು 1 ವರ್ಷ 7 ತಿಂಗಳು. ಪ್ರೀತಿ ಎಂಬ ಹೆಸರಿನಲ್ಲಿ ಕರೆಯಲ್ಪಡುತ್ತಿದ್ದ ಇದು ಮೊನ್ನೆ ಮೊನ್ನೆ ತನಕ ಮನೆಯಲ್ಲಿದ್ದ ಇತರ ಎರಡು ದನಗಳ ಮೊಲೆ ಹಾಲು ಕುಡಿದು ಮುದ್ದಿನಿಂದ ಬೆಳೆದಿದೆ. ಇದನ್ನು ಶುಕ್ರವಾರದಂದು ಮೇಯಲು ಗುಡ್ಡಕ್ಕೆ ಬಿಡಲಾಗಿತ್ತು. ಎತ್ತರವಾದ ಗುಡ್ಡದಲ್ಲಿ ಕಿವಿಗೆ ಗಾಳಿ ಸೋಕಿದಂತಾಗಿ ಜಿಗಿಯತೊಡಗಿದ ದನಕ್ಕೆ ಅಪಾಯದ ಅರಿವಾಗದೆ 40 ಅಡಿ ಆಳದ ತೋಡಿಗೆ ಬಿದ್ದಿತ್ತು. ದನ ಬಿದ್ದ ಗುರುತು ಪತ್ತೆ ಹಚ್ಚಿದ ಮನೆ ಮಂದಿ ಇಷ್ಟೊಂದು ಆಳದಿಂದ ಬಿದ್ದ ಕಾರಣ ದನ ಬದುಕಿ ಉಳಿಯುವ ಸಾಧ್ಯತೆ ಇಲ್ಲವೆಂದು ದುಃಖೀತರಾಗಿ ತೋಡಿನಲ್ಲಿಯೇ ಹುಡುಕಾಟದಲ್ಲಿ ನಿರತರಾಗಿದ್ದರು. ಈ ವೇಳೆ ಸಾಮಾಜಿಕ ಜಾಲ ತಾಣಗಳಲ್ಲಿ ಉಪ್ಪಿನಂಗಡಿಯಲ್ಲಿ ನದಿಯಲ್ಲಿ ಕೊಚ್ಚಿ ಹೋಗುತ್ತಿದ್ದ ದನದ ರಕ್ಷಣೆ ಎಂಬ ಮಾಹಿತಿಯನ್ನು ಪಡೆದ ಮಂಗಳೂರಿನ ಮಹಿಳೆಯೋರ್ವರು ವಿಶ್ವನಾಥ ಗೌಡರಿಗೆ ಪೋನಾಯಿಸಿ ವಿಚಾರ ತಿಳಿಸಿದಾಗ ತಮ್ಮ ಮನೆಯ ದನವಾಗಿರಬಹುದೆಂದು ಅಂದಾಜಿಸಿ ಅವರು ಉಪ್ಪಿನಂಗಡಿಗೆ ದೌಡಾಯಿಸಿದರು. ಸಾವು ಬದುಕಿನ ನಡುವೆ ರಕ್ಷಿಸಲ್ಪಟ್ಟು ನಿತ್ರಾಣಗೊಂಡಿದ್ದ ದನ ತನ್ನ ಯಜಮಾನರನ್ನು ಕಂಡಾಕ್ಷಣ ಭಾವಪರವಶತೆಗೆ ಒಳಗಾದ ವರ್ತನೆ ತೋರಿತು. ದನ ಬದುಕಿ ಉಳಿದ ಸಂತಸದಿಂದ ಕಣ್ಣೀರ ಧಾರೆ ವಿಶ್ವನಾಥರಲ್ಲಿ ವ್ಯಕ್ತವಾಯಿತು. ತಮ್ಮ ಪ್ರೀತಿಯ ದನವನ್ನು ರಕ್ಷಿಸಿದ ಗೃಹ ರಕ್ಷಕ ದಳದ ಸಿಬ್ಬಂದಿಗೆ ಹೃದಯಸ್ಪರ್ಶಿ ಧನ್ಯವಾದ ಸಲ್ಲಿಸಿ ಬಳಿಕ ದನವನ್ನು ವಾಹನವೊಂದರಲ್ಲಿ ಅವರು ಕರೆದೊಯ್ದರು.

LEAVE A REPLY

Please enter your comment!
Please enter your name here