ಉಪ್ಪಿನಂಗಡಿ ಭಾಗದಲ್ಲಿ ರಣಭಯಂಕರ ಗಾಳಿ ಧರೆಗುರುಳಿದ ಮರಗಳು, ಹಲವು ಮನೆಗಳಿಗೆ ಹಾನಿ-ನೆಲಕ್ಕುರುಳಿದ 2 ಟಿಸಿ, 28 ಕಂಬಗಳು- ವಿದ್ಯುತ್ ವ್ಯವಸ್ಥೆ ಅಸ್ತವ್ಯಸ್ಥ

0

ಉಪ್ಪಿನಂಗಡಿ: ಈ ಭಾಗದಲ್ಲಿ ಸಂಜೆಯ ವೇಳೆ ಬೀಸಿದ ಬಿರುಗಾಳಿಗೆ ಕೆಲವು ಕಡೆ ಸಾಲು ಸಾಲು ಮರಗಳು ನೆಲಕ್ಕುರುಳಿದ್ದು, ಹಲವು ಮನೆಗಳಿಗೆ ಹಾನಿಯಾಗಿದೆ. ಅಲ್ಲದೆ, ಉಪ್ಪಿನಂಗಡಿ ಮೆಸ್ಕಾಂ ಶಾಖಾ ವ್ಯಾಪ್ತಿಯಲ್ಲಿ ಒಟ್ಟು 28 ವಿದ್ಯುತ್ ಕಂಬಗಳು, ಎರಡು ವಿದ್ಯುತ್ ಪರಿವರ್ತಕಗಳು ಧರೆಗುರುಳಿದ್ದು, ವಿದ್ಯುತ್ ವ್ಯವಸ್ಥೆ ಅಸ್ತವ್ಯಸ್ಥವಾಗುವುದರೊಂದಿಗೆ ಮೆಸ್ಕಾಂಗೆ ಭಾರೀ ನಷ್ಟ ಸಂಭವಿಸಿದೆ.


ಸಂಜೆ ಸುಮಾರು ಮೂರು ಮುಕ್ಕಾಲರಿಂದ ನಾಲ್ಕು ಗಂಟೆಯ ಸುಮಾರಿಗೆ ಈ ಭಾಗದ ಒಂದು ಬದಿಯಲ್ಲಿ ಭಾರೀ ಬಿರುಗಾಳಿ ಬೀಸಿದ್ದು, ಸಾಲು ಸಾಲು ಮರಗಳು, ಅಡಿಕೆ ಮರಗಳು ನೆಲಕ್ಕುರುಳಿವೆ. ಉಪ್ಪಿನಂಗಡಿ ಗ್ರಾಮದ ಪಟ್ಲ, ನೆಕ್ಕರೆ, 34 ನೆಕ್ಕಿಲಾಡಿ ಗ್ರಾಮದ ದರ್ಬೆ, ಬೀತಲಪ್ಪು ಬೇರಿಕೆಗಳಲ್ಲಿ ಬಹಳಷ್ಟು ಹಾನಿ ಸಂಭವಿಸಿದೆ. ಉಪ್ಪಿನಂಗಡಿ ಗ್ರಾಮದ ಬಸ್ತಿಕ್ಕಾರ್ ಎಂಬಲ್ಲಿ ಮನೆಯ ಮೇಲೆ ಮರವೊಂದು ಬಿದ್ದು ಮನೆಗೆ ಹಾನಿಯಾಗಿದೆ. 34 ನೆಕ್ಕಿಲಾಡಿಯ ಬೀತಲಪ್ಪು ಎಂಬಲ್ಲಿ ಬಬಿತಾ ಅವರ ಮನೆಯ ಮೇಲೆ ಮರ ಬಿದ್ದು ಮನೆಗೆ ಹಾಗೂ ಕೊಟ್ಟಿಗೆಗೆ ಹಾನಿ ಸಂಭವಿಸಿದೆ. ಅಲ್ಲಿಯೇ ಸುಬ್ಬ ಎಂಬವರ ಕೊಟ್ಟಿಗೆಯ ಶೀಟ್‌ಗಳೆಲ್ಲಾ ಗಾಳಿಗೆ ಹಾರಿ ಹೋಗಿ ಪುಡಿಪುಡಿಯಾಗಿವೆ. ನೆಕ್ಕಲ ಎಂಬಲ್ಲಿಯೂ ಕೊಟ್ಟಿಗೆಯೊಂದಕ್ಕೆ ಮರವೊಂದು ಉರುಳಿ ಬಿದ್ದಿದೆ. ಪೆರಿಯಡ್ಕದ ಪಟ್ಲ- ನೆಕ್ಕರೆ- ಕಂಪ ರಸ್ತೆಯಲ್ಲಿ ಸಾಲು ಸಾಲು ಮರಗಳು ಬಿದ್ದಿವೆ. ಅಲ್ಲಿ 8 ವಿದ್ಯುತ್ ಕಂಬಗಳು ಬಿದ್ದಿದ್ದು, ಒಂದು ವಿದ್ಯುತ್ ಪರಿವರ್ತಕವೂ ನೆಲಕ್ಕುರಳಿದೆ. ಇದರಿಂದಾಗಿ ಗ್ರಾ.ಪಂ. ಕುಡಿಯುವ ನೀರಿನ ವ್ಯವಸ್ಥೆಯಲ್ಲೂ ಅವ್ಯವಸ್ಥೆಯುಂಟಾಗಿದೆ. ಇನ್ನು ಹಲವು ಕೃಷಿಕರ ಅಡಿಕೆ ಮರಗಳು ತುಂಡಾಗಿದ್ದು, ಕೃಷಿ ನಾಶ ಉಂಟಾಗಿದೆ.


ಮೆಸ್ಕಾಂಗೆ ಭಾರಿ ನಷ್ಟ:
ಮೆಸ್ಕಾಂನ ಉಪ್ಪಿನಂಗಡಿ ಶಾಖಾ ವ್ಯಾಪ್ತಿಯಲ್ಲಿ ಗಾಳಿಯಿಂದಾಗಿ 11 ಎಚ್.ಟಿ. ಕಂಬಗಳು, 17 ಎಲ್.ಟಿ. ಕಂಬಗಳು ಧರೆಗುರುಳಿದ್ದು, ಎರಡು ವಿದ್ಯುತ್ ಪರಿವರ್ತಕಗಳೂ ನೆಲಕ್ಕುರುಳಿವೆ. ವಿದ್ಯುತ್ ತಂತಿಗಳೆಲ್ಲಾ ಭೂ ಪ್ರದೇಶದಲ್ಲಿ ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದು, ವಿದ್ಯುತ್ ವ್ಯವಸ್ಥೆಯಲ್ಲಿ ಅವ್ಯವಸ್ಥೆವುಂಟಾಗಿದೆ. ಇಲ್ಲಿ ಮೆಸ್ಕಾಂಗೆ ಸುಮಾರು 9 ಲಕ್ಷದಷ್ಟು ನಷ್ಟವುಂಟಾಗಿದೆ. ಉಪ್ಪಿನಂಗಡಿ ಮೆಸ್ಕಾಂ ಶಾಖಾ ಸಹಾಯಕ ಅಭಿಯಂತರರಾದ ನಿತಿನ್ ಅವರ ನೇತೃತ್ವದಲ್ಲಿ ಮೆಸ್ಕಾಂ ಸಿಬ್ಬಂದಿ ವಿದ್ಯುತ್ ಸಂಪರ್ಕ ಪುನರಾರಂಭಿಸಲು ಮಳೆ, ಗಾಳಿಯನ್ನೂ ಲೆಕ್ಕಿಸದೆ ಕಾರ್ಯಪ್ರವೃತರಾಗಿದ್ದಾರೆ.

ನೆಲ್ಯಾಡಿಯಲ್ಲಿ ಮೆಸ್ಕಾಂಗೆ 10 ಲಕ್ಷ ರೂ. ನಷ್ಟ:
ನೆಲ್ಯಾಡಿ ಶಾಖಾ ವ್ಯಾಪ್ತಿಯಲ್ಲಿ ಹಲವೆಡೆ ಭಾರೀ ಗಾಳಿಗೆ ಮರ ಬಿದ್ದ ಪರಿಣಾಮ 25 ಕ್ಕೂ ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯುತ್ ಕಂಬಗಳು ಮುರಿದು ಬಿದ್ದಿವೆ. 2 ಡಿಸಿ ಮತ್ತು 3 ಟಿ ಸಿ ಗಳು ಹಾನಿಗೀಡಾಗಿದ್ದು, ಈ ವ್ಯಾಪ್ತಿಯಲ್ಲಿ ಸುಮಾರು ಹತ್ತು ಲಕ್ಷಕ್ಕೂ ಹೆಚ್ಚಿನ ನಷ್ಠ ಸಂಭವಿಸಿದೆ. ಕೊಕ್ಕಡ ಶಾಖಾ ವ್ಯಾಪ್ತಿಯ ರೆಖ್ಯಾ ಗ್ರಾಮದ ನೇಲ್ಯಡ್ಕ ಎಂಬಲ್ಲಿ ಗಾಳಿ ಮಳೆಗೆ ಮರ ಬಿದ್ದ ಪರಿಣಾಮ ನಾಲ್ಕು ವಿದ್ಯುತ್ ಕಂಬಗಳು ಹಾಗೂ 1 ವಿದ್ಯುತ್ ಪರಿವರ್ತಕ ಹಾನಿಗೀಡಾಗಿದೆ. ಇಲ್ಲೂ ಮೆಸ್ಕಾಂ ಸಿಬ್ಬಂದಿ ವಿದ್ಯುತ್ ಸಂಪರ್ಕ ಪುನರಾರಂಭಿಸಲು ಮಳೆ, ಗಾಳಿಯನ್ನೂ ಲೆಕ್ಕಿಸದೆ ಕಾರ್ಯಪ್ರವೃತರಾಗಿದ್ದಾರೆ.

ಏರಿಕೆ ಕಂಡ ನದಿ ನೀರಿನ ಮಟ್ಟ
ಪಶ್ಚಿಮ ಘಟ್ಟ ಪ್ರದೇಶಗಳಲ್ಲಿ ಮಳೆಯ ಪ್ರಮಾಣ ಜಾಸ್ತಿಯಾದ ಕಾರಣದಿಂದಾಗಿ ಗುರುವಾರಕ್ಕಿಂತ ಶುಕ್ರವಾರ ನದಿ ನೀರಿನ ಮಟ್ಟದಲ್ಲಿ ಸ್ವಲ್ಪ ಏರಿಕೆಯುಂಟಾಗಿದೆ. ಗುರುವಾರ ನದಿ ನೀರಿನ ಮಟ್ಟ 28.04 ಇದ್ದರೆ, ಶುಕ್ರವಾರ ಅದು 28.05ಕ್ಕೆ ಬಂದು ನಿಂತಿದೆ. ಇಲ್ಲಿ ಅಪಾಯದ ಮಟ್ಟ 31.05 ಆಗಿದೆ. ಶ್ರೀ ಸಹಸ್ರಲಿಂಗೇಶ್ವರ- ಮಹಾಕಾಳಿ ದೇವಾಲಯದ ಸ್ನಾನ ಘಟ್ಟದ ಬಳಿ ನೇತ್ರಾವತಿ ನದಿಗಿಳಿಯಲು ಇರುವ 36 ಮೆಟ್ಟಿಲುಗಳಲ್ಲಿ ಗುರುವಾರ ಮಧ್ಯಾಹ್ನದ ಬಳಿಕ 10 ಮೆಟ್ಟಿಲುಗಳಷ್ಟೇ ಕಾಣುತ್ತಿವೆ. ಶುಕ್ರವಾರ ಇನ್ನೊಂದು ಮೆಟ್ಟಿಲು ಮುಳುಗಿದ್ದು, ಈಗ 9 ಮೆಟ್ಟಿಲುಗಳು ಕಾಣುತ್ತಿವೆ. ಉಪ್ಪಿನಂಗಡಿಯಲ್ಲಿ ನಿರಂತರ ಮಳೆಯಿಲ್ಲದಿದ್ದರೂ, ಆಗಾಗ ಜೋರಾಗಿ ಗಾಳಿ- ಮಳೆಯಾಗುತ್ತಿದೆ. ನೇತ್ರಾವತಿ ನದಿಗಿಂತ ಕುಮಾರಧಾರ ನದಿಯಲ್ಲಿ ನೀರ ಹರಿವು ಹೆಚ್ಚಿದೆ.

LEAVE A REPLY

Please enter your comment!
Please enter your name here