ಸರಕಾರಿ ಆಸ್ಪತ್ರೆಗೆ ರೋಟರಿಯ ಕೊಡುಗೆ ಅಪಾರ -ಡಾ ಪ್ರಶಾಂತ್ ಭಟ್
ಪುತ್ತೂರು,ರೋಟರಿ ಕ್ಲಬ್ ಪುತ್ತೂರು ಯುವ ಇದರ ದಶಮಾನೋತ್ಸವ ಹಾಗೂ ಇನ್ನರ್ವಿಲ್ ಕ್ಲಬ್ ಇದರ ಸುವರ್ಣ ಮಹೋತ್ಸವ ಸಂಭ್ರಮಾಚರಣೆಯ ಪ್ರಯುಕ್ತ ಪುತ್ತೂರಿನ ಉಷಾ ಪಾಲಿ ಕ್ಲಿನಿಕ್ ನಲ್ಲಿ ಉಚಿತ ವೈದ್ಯಕೀಯ ತಪಾಸಣಾ ಶಿಬಿರಕ್ಕೆ ಚಾಲನೆ ನೀಡಲಾಯಿತು.
ಪುತ್ತೂರು ಸರಕಾರಿ ಆಸ್ಪತ್ರೆಯ ವೈದ್ಯಾಧಿಕಾರಿಗಳಾದ ಮಕ್ಕಳ ತಜ್ಞ ಡಾ. ಪ್ರಶಾಂತ್ ಭಟ್ ಅವರು ದೀಪ ಬೆಳಗಿಸಿ ಪುತ್ತೂರಿನ ರೋಟರಿ ಸಂಸ್ಥೆಗಳು ಈಗಾಗಲೇ ಸರಕಾರಿ ಆಸ್ಪತ್ರೆಗೆ ಬೇಕಾದ ಅನೇಕ ಸವಲತ್ತುಗಳನ್ನು ನೀಡುವುದರ ಮೂಲಕ ಸಮಾಜಮುಖಿ ಕಾರ್ಯವನ್ನು ಮಾಡುತ್ತಿದ್ದು ಇದೀಗ ಉಚಿತ ವೈದ್ಯಕೀಯ ತಪಾಸಣಾ ಶಿಬಿರದ ಸರಣಿ ಕಾರ್ಯಕ್ರಮ ನಡೆಸಿರುವುದು ಶ್ಲಾಘನೀಯವಾಗಿದೆ ಸಾರ್ವಜನಿಕರಿಗೆ ಇದರ ಸದುಪಯೋಗವಾಗಲಿ ಎಂದು ಕಾರ್ಯಕ್ರಮಕ್ಕೆ ವಿದ್ಯುಕ್ತವಾಗಿ ಚಾಲನೆ ನೀಡಿ ಶುಭ ಹಾರೈಸಿದರು.
ಉಚಿತ ವೈದ್ಯಕೀಯ ತಪಾಸಣೆ ಶಿಬಿರದ ಪ್ರಪ್ರಥಮ ಶಿಬಿರವನ್ನು ಜನರಲ್ ಫಿಜಿಷಿಯನ್ ಡಾ.ಸ್ವಾತಿ ಭಟ್ ವರು ನಡೆಸಿಕೊಟ್ಟರು. ಈ ಸಂದರ್ಭದಲ್ಲಿ ಡಾ. ಪ್ರಶಾಂತ್ ಭಟ್ ಅವರು ಹಾಗೂ ಡಾ. ಸ್ವಾತಿ ಭಟ್ ಅವರನ್ನು ಸನ್ಮಾನಿಸಲಾಯಿತು.
ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಪುತ್ತೂರು ಉಮೇಶ್ ನಾಯಕ್ ಅವರು ಸರ್ವರನ್ನು ಸ್ವಾಗತಿಸಿದರು, ಇನ್ನರ್ ವಿಲ್ ಕ್ಲಬ್ಬಿನ ನಿಯೋಜಿತ ಅಧ್ಯಕ್ಷರಾದ ಸುಧಾ ಕಾರ್ಯಪ್ಪ ಅವರು ಧನ್ಯವಾದ ಸಮರ್ಪಿಸಿದರು. ಉಷಾ ಪಾಲಿ ಕ್ಲಿನಿಕ್ ನ ಮಾಲಕರಾದ ಗಣೇಶ ಭಟ್ ಅವರು ಉಪಸ್ಥಿತರಿದ್ದರು.