ಪುತ್ತೂರು: ಮಾಯಿದೆ ದೇವುಸ್ ಚರ್ಚ್ ವಠಾರದಲ್ಲಿ ಕಾರ್ಯಾಚರಿಸುತ್ತಿರುವ ಡೊನ್ ಬೊಸ್ಕೊ ಕ್ಲಬ್ ವತಿಯಿಂದ ಕ್ಲಬ್ ಸದಸ್ಯರ ಕುಟುಂಬ ಸಮ್ಮಿಲನ ಕಾರ್ಯಕ್ರಮವು ಜು.28ರಂದು ರೋಟರಿ ಮನೀಷಾ ಸಭಾಂಗಣದಲ್ಲಿ ಸಂಜೆ ನೆರವೇರಿತು.
ಸರಳವಾಗಿ ನಡೆದ ಈ ಕಾರ್ಯಕ್ರಮದಲ್ಲಿ ಜುಲೈ ತಿಂಗಳಲ್ಲಿ ಜನುಮ ದಿನವನ್ನು ಆಚರಿಸಿದ ಸದಸ್ಯರಾದ ಹೆರಿ ಡಿ’ಸೋಜ, ಅಲೆಕ್ಸ್ ಮಿನೇಜಸ್, ಜೀವನ್ ಗೋವಿಯಸ್, ಹೆನ್ರಿ ಕುಟಿನ್ಹಾ, ಸಿಪ್ರಿಯನ್ ಡಿ’ಸೋಜ, ವಲೇರಿಯನ್ ಲೋಬೊರವರು ಜೊತೆಗೂಡಿ ಕೇಕ್ ಕತ್ತರಿಸಿ ಜನುಮದಿನದ ಶುಭಾಶಯವನ್ನು ಹಂಚಿಕೊಂಡರು. ಬಳಿಕ ಜು.21ಕ್ಕೆ ಜೀವಿತದ 75 ಸಂವತ್ಸರಗಳನ್ನು ಪೂರೈಸಿದ ಕ್ಲಬ್‌ನ ಹಿರಿಯ ಸದಸ್ಯರಾದ ಸಿಪ್ರಿಯನ್ ಡಿ’ಸೋಜ ದಂಪತಿಯನ್ನು ಶಾಲು ಹೊದಿಸಿ ಸನ್ಮಾನಿಸಲಾಯಿತು. ಸದಸ್ಯ ಜೋನ್ ಕುಟಿನ್ಹಾ ಸನ್ಮಾನಿತರ ಕುರಿತು ಮಾತನಾಡಿದರು.
ಪಯಣ್ ಕೊಂಕಣಿ ಚಿತ್ರದ ಪೋಸ್ಟರ್ ಬಿಡುಗಡೆ:
ಕೊಂಕಣಿ ಚಿತ್ರ ಪಯಣ್ ಇದರ ಪೋಸ್ಟರ್ ಬಿಡುಗಡೆಯನ್ನು ಮಾಯಿದೆ ದೇವುಸ್ ಚರ್ಚ್ ಪಾಲನಾ ಸಮಿತಿಯ ಉಪಾಧ್ಯಕ್ಷ ಜೆರಾಲ್ಡ್ ಡಿ’ಕೋಸ್ಟ, ಡೊನ್ ಬೊಸ್ಕೊ ಕ್ಲಬ್ ಅಧ್ಯಕ್ಷ ಆಂಟನಿ ಒಲಿವೆರಾ, ಕಾರ್ಯದರ್ಶಿ ಜ್ಯೋ ಡಿ’ಸೋಜರವರು ಜೊತೆಗೂಡಿ ಬಿಡುಗಡೆಗೊಳಿಸಿದರು. ಬಳಿಕ ಮಾತನಾಡಿದ ನಟ, ಉದ್ಯಮಿ ಲೆಸ್ಲಿ ರೇಗೊರವರು, ಸಮಾಜಮುಖಿ ಕಾರ್ಯಕ್ರಮಗಳಿಂದ ಡೊನ್ ಬೊಸ್ಕೊ ಕ್ಲಬ್‌ನ ಕೀರ್ತಿ ಎಲ್ಲೆಡೆ ಹಬ್ಬಿದೆ. ಗಾಯಕ ಅಲೆಕ್ಸ್ ಮಾಡ್ತಾರವರಂತಹ ಪ್ರತಿಭೆ ಕ್ಲಬ್‌ನಲ್ಲಿದೆ. ಪುತ್ತೂರು ಪ್ರತಿಭಾವಂತರ ನಾಡು. ಇತ್ತೀಚೆಗೆ ಬಿಡುಗಡೆಯಾದ ಆಸ್ಮಿತಾಯ್ ಚಿತ್ರದಲ್ಲಿ ಪುತ್ತೂರಿನ ಕಿಶೋರ್ ಫೆರ್ನಾಂಡೀಸ್ ಹಾಗೂ ಪ್ರವೀಣ್ ಪಿಂಟೋರವರು ನಟಿಸಿದ್ದಾರೆ. ಇದೀಗ ಚಿಕ್ಕಪುತ್ತೂರಿನ ಬ್ರಾಯನ್ ಸಿಕ್ವೇರಾರವರು ನಾಯಕನಟನಾಗಿ ಮೂಡಿ ಬಂದಿದ್ದಾರೆ. ಎಲ್ಲರೂ ಚಿತ್ರ ವೀಕ್ಷಿಸಿ ಚಿತ್ರತಂಡವನ್ನು ಪ್ರೋತ್ಸಾಹಿಸಿ ಕೊಂಕಣಿ ಭಾಷೆಯ ಆಸ್ತಿತ್ವವನ್ನು ಮುಂದಿನ ಪೀಳಿಗೆಗೆ ಪ್ರಚುರಪಡಿಸುವಂತಾಗಬೇಕು ಎಂದರು. ಈ ಸಂದರ್ಭದಲ್ಲಿ ಚಿತ್ರದ ನಿರ್ದೇಶಕ ಜೋಯೆಲ್ ಪಿರೇರಾರವರು ಚಿತ್ರವನ್ನು ವೀಕ್ಷಿಸಿ ಚಿತ್ರತಂಡವನ್ನು ಪ್ರೋತ್ಸಾಹಿಸಿ ಎಂದರು. ಚಿತ್ರದ ನಾಯಕ ಬ್ರಾಯನ್ ಸಿಕ್ವೇರಾ, ನಾಯಕಿಯರಾದ ಶೈನಾ ಡಿ’ಸೋಜ, ಕೇಟ್ ಪಿರೇರಾ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಸದಸ್ಯರಿಗೆ ಸಾಂಸ್ಕೃತಿಕ ಸ್ಪರ್ಧೆಯನ್ನು ಏರ್ಪಡಿಸಲಾಗಿದ್ದು ಸದಸ್ಯ ಆಂಡ್ರ್ಯೂ ಜ್ಯೋ ರೊಡ್ರಿಗಸ್ ಸ್ಪರ್ಧೆಯನ್ನು ನಡೆಸಿಕೊಟ್ಟರು. ಕ್ಲಬ್ ಉಪಾಧ್ಯಕ್ಷ ಬ್ಯಾಪ್ಟಿಸ್ಟ್ ರೊಡ್ರಿಗಸ್ ಪ್ರಾರ್ಥಿಸಿದರು. ಅಧ್ಯಕ್ಷ ಆಂಟನಿ ಒಲಿವೆರಾ ಸ್ವಾಗತಿಸಿದರು. ಕ್ರೀಡಾ ಮತ್ತು ಸಾಂಸ್ಕೃತಿಕ ಕಾರ್ಯದರ್ಶಿ ವಿಜಯ್ ಡಿ’ಸೋಜ ಸಮ್ಮಿಲನದ ಕುರಿತು ಮಾತನಾಡಿದರು. ಕಾರ್ಯದರ್ಶಿ ಜ್ಯೋ ಡಿ’ಸೋಜ ಕಾರ್ಯಕ್ರಮ ನಿರೂಪಿಸಿದರು. ಬಳಿಕ ಕ್ಲಬ್ ಸದಸ್ಯರಿಂದ ಹಾಡುಗಾರಿಕೆ ಕಾರ್ಯಕ್ರಮ ನೆರವೇರಿತು.
ಪುತ್ತೂರಿನಲ್ಲಿ ಸೆಪ್ಟೆಂಬರ್ 14ಕ್ಕೆ ಪ್ರೀಮಿಯರ್ ಶೋ..
ಕಾಲಾತೀತ ಪರಂಪರೆ ಎಂಬ ಟ್ಯಾಗ್‌ಲೈನ್‌ನೊಂದಿಗೆ ‘ಪಯಣ್(ಪ್ರಯಾಣ)’ ಎಂಬ ಕೊಂಕಣಿ ಚಿತ್ರವು ಸೆಪ್ಟೆಂಬರ್‌ನಲ್ಲಿ ಕರುನಾಡಿನಾದ್ಯಂತ ಬಿಡುಗಡೆಯಾಗಲಿದ್ದು, ಚಿತ್ರಕ್ಕೆ ಸಂಗೀತ ಗುರು ಜೋಯೆಲ್ ಪಿರೇರಾರವರು ಕಥೆ ಬರೆದು ನಿರ್ದೇಶಿಸಿದ್ದಾರೆ. ಸಂಗೀತ್ ಘರ್ ಪ್ರೊಡಕ್ಷನ್‌ನಲ್ಲಿ ಗಾಯಕ ಮೆಲ್ವಿನ್ ಹಾಗೂ ನೀತಾ ಪೆರಿಸ್ ದಂಪತಿ ಚಿತ್ರದ ನಿರ್ಮಾಪಕರಾಗಿದ್ದು, ಪುತ್ತೂರಿನ ಚಿಕ್ಕಪುತ್ತೂರು ನಿವಾಸಿ ಬ್ರಾಯನ್ ಸಿಕ್ವೇರಾರವರು ನಾಯಕರಾಗಿ ಅಭಿನಯಿಸಿದ್ದಾರೆ. ಚಿತ್ರದ ಪ್ರೀಮಿಯರ್ ಶೋ ಸೆಪ್ಟೆಂಬರ್ 14ರಂದು ಪುತ್ತೂರಿನ ಭಾರತ್ ಸಿನೆಮಾಸ್ ಸಂಜೆ ಏಳು ಗಂಟೆಗೆ ಪ್ರದರ್ಶನಗೊಳ್ಳಲಿದೆ.