ವಿಟ್ಲ: ದ.ಕ ಜಿಲ್ಲಾ ಗ್ಯಾರೇಜ್ ಮಾಲಕರ ಸಂಘ ಮಂಗಳೂರು (ದ.ಕ.ಮತ್ತು ಉಡುಪಿ ಜಿಲ್ಲೆ) ಇದರ ವಿಟ್ಲ ವಲಯ, ಯಕ್ಷ ಭಾರತ ಸೇವಾ ಪ್ರತಿಷ್ಠಾನ ಮತ್ತು ಭಾರತ ಅಡಿಟೋರಿಯಂ ವಿಟ್ಲ ಚಂದಳಿಕೆ, ಆನಂದಾಶ್ರಮ ಸೇವಾ ಟ್ರಸ್ಟ್ ಪುತ್ತೂರು, ಜಿಲ್ಲಾ ವೆನ್ಲಾಕ್ ಆಸ್ಪತ್ರೆ ಮಂಗಳೂರು, ಸಮುದಾಯ ಆರೋಗ್ಯ ಕೇಂದ್ರ ವಿಟ್ಲ ಇವರ ಜಂಟಿ ಆಶ್ರಯದಲ್ಲಿ ತಜ್ಞ ವೈದ್ಯರಿಂದ ಉಚಿತ ನೇತ್ರ ಚಿಕಿತ್ಸಾ ಸೇವಾ ಶಿಬಿರ ವಿಟ್ಲ ಚಂದಳಿಕೆಯ ಭಾರತ್ ಅಡಿಟೋರಿಯಂನಲ್ಲಿ ನಡೆಯಿತು.
ಅಡ್ಯನಡ್ಕ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ವಿಶ್ವೇಶ್ವರ ವಿ.ಕೆ.ಅವರು ಶಿಬಿರ ಉದ್ಘಾಟಿಸಿ ಮಾತನಾಡಿ, ಗ್ರಾಮೀಣ ಭಾಗದಲ್ಲಿ ನಡೆಯುವ ಇಂತಹ ಚಿಕಿತ್ಸಾ ಶಿಬಿರಗಳು ಆ ಭಾಗದ ಜನರಿಗೆ ವರದಾನವಾಗಿದೆ. ಇದೊಂದು ಅತ್ಯಂತ ಉಪಯುಕ್ತವಾದ ಶಿಬಿರವಾಗಿದೆ. ಸಾರ್ವಜನಿಕರಿಗೆ ಲಕ್ಷಾಂತರ ರೂಪಾಯಿಗಳ ಸೇವೆ ಈ ಶಿಬಿರದಲ್ಲಿ ಸಿಗುತ್ತದೆ. ಉಚಿತ ಕಣ್ಣಿನ ತಪಾಸಣೆ, ಉಚಿತ ಪೊರೆ ಶಸ್ತ್ರ ಚಿಕಿತ್ಸೆ, ಉಚಿತ ಕನ್ನಡಕ ವಿತರಣೆಯಂತಹ ಸೇವೆಗಳು ಬೆಲೆ ಕಟ್ಟಲಾಗದ ಸೇವೆಯಾಗಿದೆ. ಇಂತಹ ಶಿಬಿರ ಸಂಘಟಿಸಿ ಜನರ ನಂಬಿಕೆ ಮತ್ತು ವಿಶ್ವಾಸ ಉಳಿಸಿಕೊಂಡ ಗ್ಯಾರೇಜ್ ಮಾಲಕರ ಸಂಘ ಮತ್ತು ಇತರೇ ಸಂಘಟನೆಗಳಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದರು.
ಜಿಲ್ಲಾ ವೆನ್ಲಾಕ್ ಆಸ್ಪತ್ರೆಯ ನೇತ್ರಾಧಿಕಾರಿ ಶಾಂತರಾಜ ಅವರು ಶಿಬಿರದ ಬಗ್ಗೆ ಮಾಹಿತಿ ನೀಡಿದರು. ಮುಖ್ಯ ಅತಿಥಿ ಪುತ್ತೂರು ಆನಂದಾಶ್ರಮ ಸೇವಾ ಟ್ರಸ್ಟ್ನ ಅಧ್ಯಕ್ಷೆ ಡಾ.ಗೌರಿ ಪೈ, ವಿಟ್ಲ ಸಮುದಾಯ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ವೇದವತಿ ಬಲ್ಲಾಳ್, ದ.ಕ. ಜಿಲ್ಲಾ ಗ್ಯಾರೇಜ್ ಮಾಲಕರ ಸೌಹಾರ್ದ ಸಹಕಾರಿ ಸಂಘದ ಅಧ್ಯಕ್ಷ ಜನಾರ್ದನ ಅತ್ತಾವರ, ಖ್ಯಾತ ನೇತ್ರ ತಜ್ಞೆ ಡಾ.ಪಲ್ಲವಿ, 54ನೇ ನೇತ್ರ ಚಿಕಿತ್ಸಾ ಶಿಬಿರದ ಸಂಘಟಕರೂ ಆದ ದ.ಕ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಸಮಾಜ ಸೇವಕ ಗಂಗಾಧರ ಶೆಟ್ಟಿ ಹೊಸಮನೆ ಶುಭಹಾರೈಸಿದರು.
ಅಧ್ಯಕ್ಷತೆ ವಹಿಸಿದ್ದ ವಿಟ್ಲ ವಲಯ ಗ್ಯಾರೇಜ್ ಮಾಲಕರ ಸಂಘದ ಅಧ್ಯಕ್ಷ ಲಿಯೋ ಡಿ ಲಸ್ರಾದೋರವರು ಮಾತನಾಡಿ, ನಿಸ್ವಾರ್ಥ ಸೇವಾ ಮನೋಭಾವದಿಂದ ಸಂಘಟಿಸಿದ ಈ ಶಿಬಿರಕ್ಕೆ ಜನರು ಅಭೂತ ಪೂರ್ವ ಬೆಂಬಲ ನೀಡಿದ್ದಾರೆ. ಅಂಧತ್ವದಿಂದ ಬಳಲುತ್ತಿರುವ ಸಾರ್ವಜನಿಕರಿಗೆ ಈ ಶಿಬಿರ ಬೆಳಕಾಗಲಿ ಎಂದು ಹಾರೈಸಿದರು.
ಗ್ಯಾರೇಜ್ ಮಾಲಕರ ಸಂಘದ ಗೌರವಾಧ್ಯಕ್ಷ ಬಿ.ಕೆ ಬಾಬು, ದ.ಕ.ಜಿಲ್ಲಾ ಗ್ಯಾರೇಜ್ ಮಾಲಕರ ಸಂಘದ ನಿಕಟಪೂರ್ವ ಅಧ್ಯಕ್ಷ ದಿನೇಶ್ ಕುಮಾರ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಚಂದ್ರಶೇಖರ ಭಟ್ ಪಿ. ಪ್ರಾಸ್ತಾವಿಕವಾಗಿ ಮಾತನಾಡಿ, ಗ್ಯಾರೇಜ್ ಮಾಲಕರ ಸಂಘ ನಡೆದು ಬಂದ ಹಾದಿಯನ್ನು ವಿವರಿಸಿ, ಸಂಘದ ಕಾರ್ಯ ಚಟುವಟಿಕೆಗಳನ್ನು ತಿಳಿಸಿದರು. ವಿಟ್ಲ ವಲಯ ಗ್ಯಾರೇಜ್ ಮಾಲಕರ ಸಂಘದ ಗೌರವ ಸಲಹೆಗಾರ ನೆಗಳಗುಳಿ ಸುಂದರ ಆಚಾರ್ಯ ಸ್ವಾಗತಿಸಿದರು. ವಿಟ್ಲ ಜೆಸಿ ಸ್ಕೂಲ್ನ ಆಡಳಿತ ಅಧಿಕಾರಿ ರಾಧಾಕೃಷ್ಣ ಎರುಂಬು ಕಾರ್ಯಕ್ರಮ ನಿರೂಪಿಸಿದರು.
40೦ಕ್ಕೂ ಹೆಚ್ಚು ಜನರಿಂದ ನೇತ್ರ ತಪಾಸಣೆ:
ಚಿಕಿತ್ಸಾ ಶಿಬಿರದಲ್ಲಿ 400ಕ್ಕೂ ಮಿಕ್ಕಿ ಸಾರ್ವಜನಿಕರು ನೇತ್ರ ತಪಾಸಣೆ ಮಾಡಿಸಿಕೊಂಡರು. ಈ ಪೈಕಿ 25 ಜನರನ್ನು ಕಣ್ಣಿನ ಪೊರೆ ಶಸ್ತ್ರ ಚಿಕಿತ್ಸೆಗೆ ಆಯ್ಕೆ ಮಾಡಿ ಜಿಲ್ಲಾ ವೆನ್ಲಾಕ್ ಆಸ್ಪತ್ರೆಗೆ ಕಳಿಸಿಕೊಡಲಾಯಿತು. ಪುತ್ತೂರು ಶ್ರೀ ಆನಂದಾಶ್ರಮ ಸೇವಾ ಟ್ರಸ್ಟ್ನ ಅಧ್ಯಕ್ಷೆ ಡಾ.ಗೌರಿ ಪೈ ಅವರು ಶಿಬಿರದಲ್ಲಿ 3೦೦ಕ್ಕೂ ಮಿಕ್ಕಿ ಉಚಿತ ಕನ್ನಡಕ ವಿತರಿಸಿದರು.
ಸನ್ಮಾನ:
ಶ್ರೀ ಆನಂದಾಶ್ರಮ ಸೇವಾ ಟ್ರಸ್ಟ್ ಪುತ್ತೂರು ಇದರ ಅಧ್ಯಕ್ಷೆ ಡಾ.ಗೌರಿ ಪೈ, ವಿಟ್ಲದ ಖ್ಯಾತ ವೈದ್ಯರಾದ ಡಾ.ಗಣಪತಿ ಭಟ್ ಮೊಗಸಾಲೆ, ವಿಟ್ಲ-ಚಂದಳಿಕೆ ಭಾರತ ಅಡಿಟೋರಿಯಂ ಮಾಲಕ, ಸಮಾಜಸೇವಕರೂ ಆದ ಡಿ.ಸಂಜೀವ ಪೂಜಾರಿ, 54ನೇ ನೇತ್ರ ಚಿಕಿತ್ಸಾ ಶಿಬಿರದ ಸಂಘಟಕರೂ ಆದ ದ.ಕ. ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಸಮಾಜ ಸೇವಕ ಗಂಗಾಧರ ಶೆಟ್ಟಿ ಹೊಸಮನೆ ನೆಲ್ಯಾಡಿರವರಿಗೆ ಶಾಲು, ಹಾರ, ಸ್ಮರಣಿಕೆ, ಹಣ್ಣು ಹಂಪಲು, ಸನ್ಮಾನ ಪತ್ರ ನೀಡಿ ಗೌರವಿಸಲಾಯಿತು. ಕಳೆದ ಶೈಕ್ಷಣಿಕ ಸಾಲಿನ ಎಸ್ಎಸ್ಎಲ್ಸಿ ಹಾಗೂ ಪಿಯುಸಿಯಲ್ಲಿ ಅತೀ ಹೆಚ್ಚು ಅಂಕಗಳಿಸಿದ ವಿಟ್ಲ ವಲಯದ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ನೀಡಿ ಗೌರವಿಸಲಾಯಿತು.