ಅಪರಾಧ ಕೃತ್ಯಕ್ಕೆ ಸಂಚು: ರಾಜಧಾನಿ ಜ್ಯುವೆಲ್ಲರ‍್ಸ್,ಎಂಎಸ್‌ಎಸ್ ಮಳಿಗೆ ಶೂಟೌಟ್ ಪ್ರಕರಣದ ಆರೋಪಿ ಸಹಿತ ಇಬ್ಬರ ಬಂಧನ-ಮಂಗಳೂರು ಸಿಸಿಬಿ ಪೊಲೀಸರ ಕಾರ್ಯಾಚರಣೆ

0

ಪುತ್ತೂರು:ಮಂಗಳೂರು ನಗರದಲ್ಲಿ ಅಪರಾಧ ಕೃತ್ಯವನ್ನು ನಡೆಸಲು ಸಂಚು ರೂಪಿಸಿ ತಿರುಗಾಡಿಕೊಂಡಿದ್ದ ಇಬ್ಬರು ಆರೋಪಿಗಳನ್ನು ಮಂಗಳೂರು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.ಈ ಪೈಕಿ ಓರ್ವ ಪುತ್ತೂರಿನ ರಾಜಧಾನಿ ಜ್ಯುವೆಲ್ಲರ‍್ಸ್ ಮತ್ತು ಮಂಗಳೂರುನಲ್ಲಿ ಎಂ.ಸಂಜೀವ ಶೆಟ್ಟಿ ಬಟ್ಟೆ ಮಳಿಗೆಯಲ್ಲಿ ನಡೆದಿದ್ದ ಶೂಟೌಟ್ ಪ್ರಕರಣಗಳ ಆರೋಪಿಯಾಗಿದ್ದಾರೆ.


ಭೂಗತ ಪಾತಕಿ ಕಲಿ ಯೋಗೀಶನ ಸಹಚರರಾದ ಪೈವಳಿಕೆಯ ಹನೀಫ್ ಯಾನೆ ಅಲಿ ಮುನ್ನಾ (40ವ) ಮತ್ತು ಮುಡಿಪು ಕುಕ್ಕುದಕಟ್ಟೆಯ ರಫೀಕ್ ಯಾನೆ ಮುಡಿಪು ರಫೀಕ್ (36ವ.) ಬಂಧಿತ ಆರೋಪಿಗಳು. ವಿದೇಶದಲ್ಲಿ ತಲೆಮರೆಸಿಕೊಂಡಿರುವ ಭೂಗತ ಪಾತಕಿ ಕಲಿ ಯೋಗೀಶನ ಸಹಚರರಾದ ಬಂಧಿತರು ಪಿಸ್ತೂಲ್, ರಿವಾಲ್ವರ್, ಸಜೀವ ಮದ್ದುಗುಂಡು, ಮಾದಕ ವಸ್ತು ಎಂಡಿಎಂಎ ಸಹಿತ ಕಾರಿನಲ್ಲಿ ಮಂಗಳೂರು ನಗರದಲ್ಲಿ ಅಪರಾಧ ಕೃತ್ಯವನ್ನು ನಡೆಸಲು ಸಂಚು ರೂಪಿಸಿ ತಿರುಗಾಡಿಕೊಂಡಿರುವ ಕುರಿತು ಖಚಿತ ಮಾಹಿತಿ ಪಡೆದ ಮಂಗಳೂರು ಸಿಸಿಬಿ ಪೊಲೀಸರು ಆರೋಪಿಗಳನ್ನು ಬಂಽಸಿದ್ದಾರೆ ಎಂದು ಮಂಗಳೂರು ನಗರ ಪೊಲೀಸ್ ಆಯುಕ್ತ ಅನುಪಮ್ ಅಗರ್ವಾಲ್ ತಿಳಿಸಿದ್ದಾರೆ.


ಆರೋಪಿಗಳ ಪೈಕಿ ಹನೀಫ್ ಯಾನೆ ಅಲಿ ಮುನ್ನಾ ಈ ಹಿಂದೆ ಮಂಗಳೂರು ನಗರದಲ್ಲಿ ಎಂ.ಸಂಜೀವ ಶೆಟ್ಟಿ ಬಟ್ಟೆ ಅಂಗಡಿಯಲ್ಲಿ ಶೂಟೌಟ್ ನಡೆಸಿದ ಪ್ರಕರಣ, ಪುತ್ತೂರು ರಾಜಧಾನಿ ಜುವೆಲ್ಲರಿ ಶೂಟೌಟ್ ಪ್ರಕರಣ, ಕಾಸರಗೋಡು ಜಿಲ್ಲೆಯ ಬೇವಿಂಜೆಯ ಪಿಡಬ್ಲ್ಯೂಡಿ ಕಂಟ್ರಾಕ್ಟರ್ ಮನೆಗೆ ಶೂಟೌಟ್ ನಡೆಸಿದ ಪ್ರಕರಣ ಸೇರಿದಂತೆ ಒಟ್ಟು 14 ಪ್ರಕರಣಗಳಲ್ಲಿ ಭಾಗಿಯಾಗಿರುತ್ತಾನೆ.ಈತನ ವಿರುದ್ಧ ಮಂಗಳೂರು ಉತ್ತರ, ಬರ್ಕೆ, ಉಳ್ಳಾಲ, ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ವಾರಂಟ್ ಜ್ಯಾರಿಯಲ್ಲಿರುತ್ತದೆ.ಇನ್ನೋರ್ವ ಆರೋಪಿ ಮುಡಿವು ರಫೀಕ್ ವಿರುದ್ಧ ಮುಲ್ಕಿ ಪೊಲೀಸ್ ಠಾಣೆಯಲ್ಲಿ ಕಳವು ಪ್ರಕರಣ, ಬರ್ಕೆ ಪೊಲೀಸ್ ಠಾಣೆಯಲ್ಲಿ ಕೊಲೆ ಯತ್ನ ಪ್ರಕರಣ, ಮಹಿಳಾ ಠಾಣೆಯಲ್ಲಿ ಪೊಕ್ಸೋ ಪ್ರಕರಣ, ಮಂಗಳೂರು ಪೂರ್ವ ಠಾಣೆಯಲ್ಲಿ ದರೋಡೆಗೆ ಸಂಚು ರೂಪಿಸಿದ ಪ್ರಕರಣ, ಕೊಣಾಜೆ ಠಾಣೆಯಲ್ಲಿ ಅಪಹರಣ ಪ್ರಕರಣ, ದೇವಸ್ಥಾನ ಕಳವು ಪ್ರಕರಣ ಹಾಗೂ ಹಲ್ಲೆ ಪ್ರಕರಣ, ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಕಳವು ಪ್ರಕರಣ ಹಾಗೂ ಕೇರಳದ ಮಂಜೇಶ್ವರ,ಕಣ್ಣೂರು ನಗರ ಪೊಲೀಸ್ ಠಾಣೆಗಳಲ್ಲಿ ಕಳವು ಪ್ರಕರಣ ಹೀಗೆ ಒಟ್ಟು 9 ಪ್ರಕರಣಗಳು ದಾಖಲಾಗಿರುತ್ತದೆ ಎಂದು ಕಮಿಷನರ್ ಮಾಹಿತಿ ನೀಡಿದರು.ಬಂಧಿತರಿಂದ ಪಿಸ್ತೂಲ್-1, ರಿವಾಲ್ವರ್-1, ಸಜೀವ ಮದ್ದುಗುಂಡುಗಳು-12, ಮಾದಕ ವಸ್ತು ಎಂಡಿಎಂಎ-42 ಗ್ರಾಂ,ಇನ್ನೋವಾ ಕಾರು ಹಾಗೂ ಮೂರು ಮೊಬೈಲ್ ಫೋನ್‌ ಗಳು ಮತ್ತು ಡಿಜಿಟಲ್ ತೂಕ ಮಾಪಕಗಳು ಸೇರಿದಂತೆ 10 ಲಕ್ಷ ರೂ.ಅಂದಾಜು ಮೌಲ್ಯದ ಸೊತ್ತುವಶಪಡಿಸಿಕೊಳ್ಳಲಾಗಿದೆ.ಆರೋಪಿಗಳ ಪತ್ತೆ ಕಾರ್ಯದಲ್ಲಿ ಸಿಸಿಬಿ ಘಟಕದ ಎಸಿಪಿ ಗೀತಾ ಡಿ ಕುಲಕರ್ಣಿ, ಪೊಲೀಸ್ ನಿರೀಕ್ಷಕರಾದ ಶ್ಯಾಮ್‌ಸುಂದರ್ ಎಚ್.ಎಂ.,ಸಿಸಿಬಿ ಪಿಎಸ್‌ಐಗಳಾದ ನರೇಂದ್ರ, ಶರಣಪ್ಪ ಭಂಡಾರಿ, ಹರೀಶ್ ಪದವಿನಂಗಡಿ, ಎಎಸ್‌ಐ ಮೋಹನ್ ಕೆ.ವಿ.,ರಾಮ ಪೂಜಾರಿ, ಶೀನಪ್ಪ, ಸುಜನ್ ಶೆಟ್ಟಿ ಮತ್ತು ಸಿಸಿಬಿ ಘಟಕದ ಸಿಬ್ಬಂದಿ ಪಾಲ್ಗೊಂಡಿದ್ದರು.


ಪುತ್ತೂರು ಮುಖ್ಯರಸ್ತೆ ಸಿಪಿಸಿ ಪ್ಲಾಜಾದಲ್ಲಿನ ರಾಜಧಾನಿ ಜ್ಯುವೆಲ್ಲರ‍್ಸ್ ಮೇಲೆ 2015ರ ಅಕ್ಟೋಬರ್ 6ರಂದು ರಾತ್ರಿ ಗುಂಡಿನ ದಾಳಿ ನಡೆದಿತ್ತು.ಆದಿನ ರಾತ್ರಿ ಪುತ್ತೂರಿನ ಮುಖ್ಯ ರಸ್ತೆಯಲ್ಲಿ ಎರಡು ಸಲ ಬೈಕ್‌ನಲ್ಲಿ ಬಂದ, ಮುಖಕ್ಕೆ ಬಟ್ಟೆ ಕಟ್ಟಿಕೊಂಡಿದ್ದ ಅಪರಿಚಿತ ಯುವಕರು ಕೆಲವೇ ಕ್ಷಣಗಳ ಅಂತರದಲ್ಲಿ ರಾಜಧಾನಿ ಜುವೆಲ್ಲರ‍್ಸ್‌ಗೆ ಮೂರು ಬಾರಿ ಫೈರಿಂಗ್ ನಡೆಸಿ ಪರಾರಿಯಾಗಿದ್ದರು.ಶೂಟೌಟ್ ನಡೆಸಿದವರಿಗಾಗಿ ಪೊಲೀಸರು ವಿವಿಧೆಡೆ ಶೋಧ ಮುಂದುವರಿಸುತ್ತಿದ್ದಂತೆಯೇ ಅ.7ರಂದು ಬೆಳಿಗ್ಗೆ ಪತ್ರಕರ್ತರಿಗೆ ಕರೆ ಮಾಡಿದ್ದ ಕಲಿ ಯೋಗೀಶ ಇದು ನನ್ನ ಹುಡುಗರ ಕೆಲಸವಾಗಿದೆ,ಉಪ್ಪಳದಲ್ಲಿರುವ ವಿವಾದವೊಂದನ್ನು ಪರಿಹರಿಸಿದ್ದಕ್ಕಾಗಿ ಹಣ ಕೇಳಿದ್ದಾಗ ಕೊಡುವುದಾಗಿ ಒಪ್ಪಿಕೊಂಡಿದ್ದ ಜುವೆಲ್ಲರ‍್ಸ್ ಮಾಲಕ ಬಳಿಕ ಹಣವನ್ನೂ ಕೊಟ್ಟಿಲ್ಲ, ದೂರವಾಣಿ ಕರೆಯನ್ನೂ ಸ್ವೀಕರಿಸುತ್ತಿಲ್ಲ, ಆದ್ದರಿಂದ ನನ್ನ ಹುಡುಗರ ಮೂಲಕ ಶೂಟೌಟ್ ಮಾಡಲಾಗಿದೆ ಎಂದು ಹೇಳಿಕೆ ನೀಡಿದ್ದ.ಜ್ಯುವೆಲ್ಲರ‍್ಸ್ ಪಾಲುದಾರ, ಮೂಲತಃ ಮಹಾರಾಷ್ಟ್ರದವರಾಗಿದ್ದು ವಿಟ್ಲ ನಿವಾಸಿಯಾಗಿದ್ದ ತಾನಾಜಿ ಶೇಟ್ ನೀಡಿದ್ದ ದೂರಿನ ಮೇರೆಗೆ ಅಪರಿಚಿತ ಯುವಕರಿಂದ ಗುಂಡಿನ ದಾಳಿ ಪ್ರಕರಣ ದಾಖಲಿಸಿಕೊಂಡಿದ್ದ ಪುತ್ತೂರು ನಗರ ಠಾಣಾ ಪೊಲೀಸರು, ಶೂಟೌಟ್ ಪ್ರಕರಣದಲ್ಲಿ ಅಂಡರ್‌ವರ್ಲ್ಡ್ ಲಿಂಕ್ ಇರುವ ಬಗ್ಗೆ ಮಾಹಿತಿ ದೊರೆಯುತ್ತಿದ್ದಂತೆಯೇ ತನಿಖೆಯನ್ನು ಮತ್ತಷ್ಟು ಚುರುಕುಗೊಳಿಸಿದ್ದರು.2023ರಲ್ಲಿ ಮಂಗಳೂರು ದಕ್ಷಿಣ ವಿಭಾಗದ ಎಸಿಪಿಯಾಗಿದ್ದ ಧನ್ಯಾ ನಾಯಕ್ ನೇತೃತ್ವದ ತಂಡ 2023ರ ಅಕ್ಟೋಬರ್‌ನಲ್ಲಿ ನಡೆಸಿದ್ದ ಕಾರ್ಯಾಚರಣೆಯಲ್ಲಿ ಆರೋಪಿ ಪೈವಳಿಕೆ ಹನೀಫ್ ಯಾನೆ ಅಲಿ ಮುನ್ನಾ ಬಂಧಿತನಾಗಿದ್ದ.ನ್ಯಾಯಾಲಯದಿಂದ ಜಾಮೀನಿನ ಮೇಲೆ ಬಿಡುಗಡೆಗೊಂಡಿದ್ದ ಆರೋಪಿ ಇದೀಗ ಮತ್ತೆ ಮಂಗಳೂರು ಸಿಸಿಬಿ ಪೊಲೀಸರಿಂದ ಬಂಧಿತನಾಗಿದ್ದಾನೆ.

LEAVE A REPLY

Please enter your comment!
Please enter your name here