ಪುತ್ತೂರು: ಯಾವುದೇ ಆರೋಪ ಸಂಬಂಧ ಆರೋಪಿಯನ್ನು ಪೊಲೀಸ್ ಠಾಣೆಗೆ ಕರೆಸಿಕೊಳ್ಳಲು ನೀಡುವ ನೋಟಿಸ್ನಲ್ಲಿ ಕ್ರೈಂ ಸಂಖ್ಯೆ, ಎಫ್ಐಆರ್ ಪ್ರತಿ, ಅಪರಾಧದ ಬಗ್ಗೆ ಮಾಹಿತಿ ಮತ್ತು ದೂರಿನ ಸಂಕ್ಷಿಪ್ತ ರೂಪವನ್ನು ಒಳಗೊಂಡ ಚೆಕ್ ಲಿಸ್ಟ್ ಅನ್ನು ಕಡ್ಡಾಯವಾಗಿ ಒದಗಿಸಬೇಕು ಎಂದು ಹೈಕೋರ್ಟ್ ರಾಜ್ಯ ಸರಕಾರಕ್ಕೆ ನಿರ್ದೇಶನ ನೀಡಿದೆ.
ಅಲ್ಲದೆ, ಈ ಕುರಿತು ಸಾರ್ವಜನಿಕರ ಅವಗಾಹನೆಗಾಗಿ ರಾಜ್ಯ ಗೃಹ ಕಾರ್ಯದರ್ಶಿ ಮತ್ತು ರಾಜ್ಯ ಪೊಲೀಸ್ ಮಹಾನಿರ್ದೇಶಕರು ಸೂಕ್ತ ಮಾರ್ಗಸೂಚಿಗಳನ್ನು ಹೊರಡಿಸಬೇಕು ಎಂದು ಆದೇಶಿಸಿದೆ.
ಅಮೃತಹಳ್ಳಿ ಪೊಲೀಸ್ ಠಾಣೆಯ ಪೊಲೀಸ್ ಸಬ್ ಇನ್ಸ್ಪೆಕ್ಟರ್ ಅವರು ವಾಟ್ಸ್ಆಪ್ ಮೂಲಕ ನೀವು ಠಾಣೆಗೆ ಹಾಜರಾಗಬೇಕೆಂದು ಕಳುಹಿಸಿದ್ದ ಸಂದೇಶವನ್ನು ಪ್ರಶ್ನಿಸಿ ಪತ್ರಕರ್ತ ಟಿ.ಆರ್. ಶಿವಪ್ರಸಾದ್ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯಪೀಠ ಈ ಆದೇಶ ನೀಡಿದೆ.
ಭಾರತೀಯ ನ್ಯಾಯ ಸುರಕ್ಷಾ ಸಂಹಿತೆ-2023ರ ಕಲಂ 35ರ ಅನುಸಾರ ಆರೋಪಿಗೆ ಚೆಕ್ಲಿಸ್ಟ್ ಒದಗಿಸದೆ ಹೋದಲ್ಲಿ ಅಂತಹ ಆರೋಪಿ ಠಾಣಾಧಿಕಾರಿ ಮುಂದೆ ಹಾಜರಾಗುವ ಅವಶ್ಯಕತೆ ಇಲ್ಲ. ಅಂತೆಯೇ, ಪೊಲೀಸರು ಇಂತಹ ಆರೋಪಿಯ ವಿರುದ್ಧ ಯಾವುದೇ ಬಲವಂತದ ಕ್ರಮ ಕೈಗೊಳ್ಳುವಂತಿಲ್ಲ’ ಎಂದು ನ್ಯಾಯಪೀಠ ಆದೇಶದಲ್ಲಿ ತಿಳಿಸಿದೆ.
ಅರ್ಜಿದಾರರ ಪರ ಹಿರಿಯ ವಕೀಲ ಎಂ. ಅರುಣ್ ಶ್ಯಾಮ್ ಪುತ್ತೂರು ವಾದ ಮಂಡಿಸಿದ್ದರು.
ನನಗೆ ಹಾಗೂ ನನ್ನ ಕುಟುಂಬದ ಸದಸ್ಯರಿಗೆ ಜೀವ ಬೆದರಿಕೆ ಹಾಕಲಾಗಿದೆ ಎಂಬ ಆರೋಪ ಸಂಬಂಧ ಟಿ.ವಿ. ಚಾನಲ್ನ ಸಿಇಒ ವಿಜಯ್ ಟಾಟಾ ನೀಡಿದ ದೂರಿನ ಅನುಸಾರ ಅಮೃತಹಳ್ಳಿ ಠಾಣೆಯ ಪೊಲಿಸರು ಟಿ.ಆರ್. ಶಿವಪ್ರಸಾದ್ಗೆ ವಾಟ್ಸ್ಆಪ್ ಮೂಲಕ ಸಂದೇಶ ಕಳುಹಿಸಿ ಠಾಣೆಗೆ ಹಾಜರಾಗಬೇಕೆಂದು ಸೂಚಿಸಿದ್ದರು. ಅದನ್ನು ಪ್ರಶ್ನಿಸಿ ಅವರು ನ್ಯಾಯಾಲಯದ ಮೊರೆ ಹೋಗಿದ್ದರು.