ಪುತ್ತೂರು ಆರ್‌ಟಿಒ ಕಛೇರಿಯ ಹಿರಿಯ ಪ್ರಥಮ ದರ್ಜೆ ಸಹಾಯಕ ಪುರುಷೋತ್ತಮ್ ಬಿ.ರವರಿಗೆ ಬೀಳ್ಕೊಡುಗೆ ಸನ್ಮಾನ

0

ಪುತ್ತೂರು: ಪ್ರಾದೇಶಿಕ ಸಾರಿಗೆ ಇಲಾಖೆಗಳ ಕಛೇರಿ(ಆರ್‌ಟಿಒ)ಯಲ್ಲಿ ಸುದೀರ್ಘ 37 ವರ್ಷಗಳ ಕಾಲ ಸೇವೆ ಸಲ್ಲಿಸಿ ಸೇವಾ ನಿವೃತ್ತಿ ಹೊಂದಿದ ಪುತ್ತೂರು ಆರ್‌ಟಿಒ ಕಛೇರಿಯ ಹಿರಿಯ ಪ್ರಥಮ ದರ್ಜೆ ಸಹಾಯಕರಾದ ಪುರುಷೋತ್ತಮ್ ಬಿ.ರವರಿಗೆ ಬೀಳ್ಕೊಡುಗೆ ಸನ್ಮಾನವು ಜು.31 ರಂದು ಆರ್‌ಟಿಒ ಕಛೇರಿಯ ಸಭಾಂಗಣದಲ್ಲಿ ನೆರವೇರಿತು.

ಪುರುಷೋತ್ತಮರವರು ಕರ್ತವ್ಯದ ಜೊತೆಗೆ ಎಲ್ಲರೊಂದಿಗೆ ಆತ್ಮೀಯರಾಗಿ ಬೆರೆಯುತ್ತಿದ್ದರು-ಶಿವಾನಂದ ಆಚಾರ್ಯ:
ಮುಖ್ಯ ಅತಿಥಿಯಾಗಿ ಭಾಗವಹಿಸಿದ ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘದ ತಾಲೂಕು ಶಾಖೆಯ ಅಧ್ಯಕ್ಷ ಶಿವಾನಂದ ಆಚಾರ್ಯ ಮಾತನಾಡಿ, ಪುತ್ತೂರು ಸರಕಾರಿ ನೌಕರರ ಸಂಘಕ್ಕೆ ಅರ್ಹ ವ್ಯಕ್ತಿ ಪುರುಷೋತ್ತಮ್‌ರವರಾಗಿದ್ದರು. ಅನಿವಾರ್ಯ ಕಾರಣಗಳಿಂದ ಅವರು ಅದರಿಂದ ಹೊರಗುಳಿದು ರಾಜ್ಯ ಪರಿಷತ್ ಸದಸ್ಯ ಸ್ಥಾನವನ್ನು ಅಲಂಕರಿಸಿದ್ದರು. ಪುರುಷೋತ್ತಮ್‌ರವರು ಸಾರಿಗೆ ಇಲಾಖೆಯಲ್ಲಿ ನಿವೃತ್ತರಾಗಿರಬಹುದು, ಆದರೆ ನಮ್ಮ ಸರಕಾರಿ ನೌಕರರ ಸಹಕಾರಿ ಸಂಘದ ಮುಖ್ಯ ಪ್ರವರ್ತಕರಾಗಿರುವ ಅವರು ಸೊಸೈಟಿಯಿಂದ ನಿವೃತ್ತರಾಗಿಲ್ಲ. ಪುರುಷೋತ್ತಮರವರು ತಮ್ಮ ಕರ್ತವ್ಯದ ಜೊತೆಗೆ ಎಲ್ಲರೊಂದಿಗೆ ಆತ್ಮೀಯರಾಗಿ ಬೆರೆಯುತ್ತಿದ್ದರು ಎಂಬುದಕ್ಕೆ ಇಲ್ಲಿನ ಜನಸಮೂಹವೇ ಸಾಕ್ಷಿ ಎಂದು ಹೇಳಿ ನಿವೃತ್ತರಾದ ಪುರುಷೋತ್ತಮ್‌ರವರ ಮುಂದಿನ ನಿವೃತ್ತ ಜೀವನವು ಯಶಸ್ವಿಯಾಗಲಿ ಎಂದರು.

ಶಿಸ್ತು, ಶ್ರದ್ಧೆ, ಕಾನೂನು ರೀತಿಯಲ್ಲಿ ಕಡತಗಳ ನಿರ್ವಹಣೆ ಶ್ಲಾಘನೀಯ-ವಿಶ್ವನಾಥ ಅಜಿಲ:
ಅಧ್ಯಕ್ಷತೆ ವಹಿಸಿದ ಪ್ರಾದೇಶಿಕ ಸಾರಿಗೆ ಇಲಾಖೆಯ ಅಧಿಕಾರಿ ವಿಶ್ವನಾಥ ಅಜಿಲ ಮಾತನಾಡಿ, ಸುದೀರ್ಘ 36 ವರ್ಷ ಶಿಸ್ತು, ಶ್ರದ್ಧೆಯಿಂದ ಹಾಗೂ ಕಾನೂನು ರೀತಿಯಲ್ಲಿ ಕಡತಗಳನ್ನು ಸರಿಯಾಗಿ ನಿರ್ವಹಿಸಿದ್ದು ನಿಮ್ಮ ಈ ಸೇವೆಯನ್ನು ಮರೆಯಲು ಸಾಧ್ಯವಿಲ್ಲ. ನಾವು ನಿಮ್ಮನ್ನು ಬೀಳ್ಕೊಡುತ್ತಿಲ್ಲ ಬದಲಾಗಿ ನಿಮ್ಮ ಪ್ರಾಮಾಣಿಕ ಸೇವೆಯ ಸಂತೋಷದ ಸಂಭ್ರಮವನ್ನು ಆಚರಿಸುತ್ತಿದ್ದೇವೆ ಅಷ್ಟೇ. ವೃತ್ತಿಯಿಂದ ನಿವೃತ್ತರಾದರೂ ನೀವು ಆವಾಗವಾಗ ನಮ್ಮ ಕಛೇರಿಗೆ ಬಂದು ಸಲಹೆ ಸೂಚನೆಗಳನ್ನು ನೀಡುತ್ತಾ ನಮ್ಮನ್ನು ಪ್ರೋತ್ಸಾಹಿಸಬೇಕು. ನಿವೃತ್ತಿ ನಂತರ ಬದುಕಿನಲ್ಲಿ ಬದಲಾವಣೆಗಳು ಆಗುವುದು ಸಹಜವಾದರೂ ಆರೋಗ್ಯಕರ ಬದುಕು ನಿಮ್ಮದಾಗಲಿ ಎಂದು ಹೇಳಿ ನಿವೃತ್ತಿಯ ಬದುಕಿಗೆ ಶುಭ ಹಾರೈಸಿದರು.

ಸಾರಿಗೆ ಇಲಾಖೆಯೊಂದಿಗೆ ಸರಕಾರಿ ನೌಕರರ ಸಂಘದ ಪ್ರಗತಿಯಲ್ಲೂ ದುಡಿದಿದ್ದಾರೆ-ಮೌರಿಸ್ ಮಸ್ಕರೇನ್ಹಸ್:
ರಾಜ್ಯ ಸರಕಾರಿ ನೌಕರರ ಸಂಘದ ತಾಲೂಕು ಶಾಖೆಯ ನಿಕಟಪೂರ್ವ ಅಧ್ಯಕ್ಷ ಮೌರಿಸ್ ಮಸ್ಕರೇನ್ಹಸ್ ಮಾತನಾಡಿ, ಪುರುಷರಲ್ಲಿ ಉತ್ತಮ ಪುರುಷ ಪುರುಷೋತ್ತಮ. ಅದರಂತೆ ಪುರುಷೋತ್ತಮ್‌ರವರು ಕೆಲಸ ಕಾರ್ಯಗಳನ್ನು ನಿರ್ವಹಿಸಿದವರು. ಪುರುಷೋತ್ತಮ್‌ರವರು ಕೇವಲ ಸಾರಿಗೆ ಇಲಾಖೆಯಲ್ಲಿ ಮಾತ್ರವಲ್ಲ, ಸರಕಾರಿ ನೌಕರರ ಸಂಘದ ಪ್ರಗತಿಯಲ್ಲೂ ಉತ್ತಮವಾಗಿ ದುಡಿದವರಾಗಿದ್ದಾರೆ. ನಾನು ಅಧ್ಯಕ್ಷನಾಗಿದ್ದ ಸಂದರ್ಭದಲ್ಲಿ ನನಗೆ ಬಲಗೈಯಾಗಿ ಕೃಷ್ಣಪ್ಪ ಕೆ, ಎಡಗೈಯಾಗಿ ಪುರುಷೋತ್ತಮ್‌ರವರು ಸಾಥ್ ನೀಡಿದವರು. ತುಂಬಾ ತಮಾಷೆಯ ವ್ಯಕ್ತಿಯಾಗಿರುವ ಪುರುಷೋತ್ತಮ್‌ರವರು ಓರ್ವ ಉತ್ತಮ ವ್ಯಕ್ತಿಯಾಗಿದ್ದಾರೆ ಎಂಬುದು ಅವರನ್ನು ಹತ್ತಿರದಿಂದ ಬಲ್ಲವರಿಗೆ ಗೊತ್ತು ಎಂದು ಹೇಳಿ ನಿವೃತ್ತ ಜೀವನಕ್ಕೆ ಶುಭ ಹಾರೈಸಿದರು.

ಪುರುಷೋತ್ತಮ್‌ರವರ ಒಡನಾಟ, ಪ್ರೀತಿ ಎಂದಿಗೂ ಮರೆಯಲು ಸಾಧ್ಯವಿಲ್ಲ-ವಿವೇಕಾನಂದ ಸಪಲಿಗ:
ಪುತ್ತೂರು ಆರ್‌ಟಿಒ ಕಛೇರಿಯ ಪರವಾಗಿ ಪ್ರಥಮ ದರ್ಜೆ ಸಹಾಯಕ ವಿವೇಕಾನಂದ ಸಪಲಿಗ ಮಾತನಾಡಿ, ನಿವೃತ್ತಿಗೊಂಡ ಪುರುಷೋತ್ತಮ್‌ರವರು ಎಲ್ಲರೊಂದಿಗೆ ಆತ್ಮೀಯವಾಗಿ ಬೆರೆಯುತ್ತಿರುವವರು ಮಾತ್ರವಲ್ಲ ನನ್ನ ಕುಟುಂಬಕ್ಕೆ ಬಹಳ ಆತ್ಮೀಯರಾಗಿದ್ದಾರೆ. ಯಾವುದೇ ಫಲಾಪೇಕ್ಷೆಯಿಲ್ಲದೆ ದುಡಿಯುವ ವ್ಯಕ್ತಿತ್ವ ಪುರುಷೋತ್ತಮ್‌ರವರದ್ದು. ಸಾರಿಗೆ ಇಲಾಖೆಯ ಸದಸ್ಯರಾಗಿದ್ದು, ಸರಕಾರಿ ನೌಕರರ ಸಂಘದಲ್ಲಿ ರಾಜ್ಯ ಪರಿಷತ್ ಸದಸ್ಯರಾಗಿ ಪ್ರತಿನಿಧಿಸುತ್ತಿರುವುದು ಹೆಗ್ಗಳಿಕೆಯಾಗಿದೆ. ಆಧ್ಯಾತ್ಮಿಕೆಯಲ್ಲೂ ಬಹಳ ಮುಂದಿರುವ ಪುರುಷೋತ್ತಮ್‌ರವರ ಒಡನಾಟ, ಪ್ರೀತಿಯನ್ನು ಎಂದಿಗೂ ಮರೆಯಲು ಸಾಧ್ಯವಿಲ್ಲ ಎಂದು ಹೇಳಿ ಶುಭ ಹಾರೈಸಿದರು.

ಎಕ್ಸ್‌ಪರ್ಟ್ ಡ್ರೈವಿಂಗ್ ಸ್ಕೂಲ್‌ನ ಪ್ರೇಮಾ ಕಿಶೋರ್, ದೀಕ್ಷಿತ್ ಕಾಣಿಯೂರು, ನಿವೃತ್ತ ಅಬಕಾರಿ ಎಸ್‌ಐ ಮಹಾಲಿಂಗ ನಾಯ್ಕ, ಇಲ್ಯಾಸ್ ಉಪ್ಪಿನಂಗಡಿ, ಪುತ್ತೂರು ನಗರಸಭಾ ಸದಸ್ಯ ರಮೇಶ್ ರೈ ನೆಲ್ಲಿಕಟ್ಟೆರವರು ಮಾತನಾಡಿ ಶುಭ ಹಾರೈಸಿದರು. ಹಿರಿಯ ಮೋಟಾರು ವಾಹನ ನಿರೀಕ್ಷಕ ಆಸ್ಪಾನ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಇಲಾಖೆಯ ಪ್ರಥಮ ದರ್ಜೆ ಸಹಾಯಕ ನಾಗಾರಾಜು, ದ್ವಿತೀಯ ದರ್ಜೆ ಸಹಾಯಕರಾದ ಗಣೇಶ್, ಗಿರೀಶ್, ಕಛೇರಿ ಸಿಬ್ಬಂದಿಗಳು, ಹೊರಗುತ್ತಿಗೆ ಸಿಬ್ಬಂದಿಗಳು, ತಾಲೂಕು ಸರಕಾರಿ ನೌಕರರ ಸಂಘದ ಹಿರಿಯ ಉಪಾಧ್ಯಕ್ಷ ರಾಮಚಂದ್ರ, ಉಪಾಧ್ಯಕ್ಷ ರಾಮಚಂದ್ರ ಭಟ್, ಕಾರ್ಯಕಾರಿ ಸಮಿತಿ ಸದಸ್ಯ ವಿನೋದ್, ಸೀತಾರಾಮ ನಾಯ್ಕ, ಸುದಾನ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಸುಪ್ರೀತ್ ಕೆ.ಸಿ, ಸುದಾನ ವಿದ್ಯಾಸಂಸ್ಥೆಯ ಕೋಶಾಧಿಕಾರಿ ಆಸ್ಕರ್ ಆನಂದ್ ಸಹಿತ ಹಲವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಕಛೇರಿ ಅಧೀಕ್ಷಕ ದೀಪಕ್ ಕುಮಾರ್‌ರವರು ಸ್ವಾಗತಿಸಿ,ಪ್ರಾಸ್ತಾವಿಕವಾಗಿ ಮಾತನಾಡಿದರು. ಅಧೀಕ್ಷಕ ಆಸ್ಕರ್ ಸಂತೋಷ್ ವಂದಿಸಿದರು. ಬಾಲಕೃಷ್ಣ ಪೊರ್ದಾಲ್ ಕಾರ್ಯಕ್ರಮ ನಿರೂಪಿಸಿದರು.

ಪ್ರಾಮಾಣಿಕ ವೃತ್ತಿಗೆ ಎಲ್ಲರ ಪ್ರೀತಿ ಸಿಕ್ಕಿದೆ,
ಆತ್ಮತೃಪ್ತಿಯಿಂದ ನಿರ್ಗಮಿಸುತ್ತಿದ್ದೇನೆ..

ಭೂಮಿ ಎನ್ನುವುದೇ ಒಂದು ಪವಿತ್ರ.ಈ ಭೂಮಿಯಲ್ಲಿ ನಾನು ಜನ್ಮ ತಾಳಿರುವುದು ಭಾಗ್ಯವಾಗಿದೆ. ಸುಮಾರು 8 ಲಕ್ಷ ಜೀವರಾಶಿಗಳಲ್ಲಿ ಮಾನವ ಜನ್ಮ ಅನ್ನುವುದು ಶ್ರೇಷ್ಟ ಜನ್ಮವಾಗಿದೆ. ಭೂಮಿಯಲ್ಲಿ ಜೀವಿಸುವ ನಾವು ಶಾಶ್ವತರಲ್ಲ, ಒಂದರ್ಥದಲ್ಲಿ ಬಾಡಿಗೆದಾರರು. ಯಾರಿಗೆ ಎಷ್ಟೆಷ್ಟು ಸಮಯ ನಗದಿಪಡಿಸಿದೆಯೋ ಆವಾಗ ಹೊರಡಲೇ ಬೇಕಾಗುತ್ತದೆ. ಅದರಂತೆ ಸರಕಾರಿ ಕೆಲಸವೂ. 60ನೇ ವರ್ಷಕ್ಕೆ ನೌಕರರು ತನ್ನ ವೃತ್ತಿಯಿಂದ ನಿವೃತ್ತರಾಗಲೇಬೇಕು. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಎಲ್ಲಾ ಇಲಾಖೆಗಳು ಸರಿಯಾಗಿ ಕಾರ್ಯನಿರ್ವಹಿಸಿದರೆ ಮಾತ್ರ ಸರಕಾರ ನಡೆಯೋದು. ಸರಕಾರದ ಬೊಕ್ಕಸವನ್ನು ತುಂಬಿಸುವ ಇಲಾಖೆಯಲ್ಲಿ, ಜೊತೆಗೆ ಸರಕಾರಿ ನೌಕರರ ಸಂಘದಲ್ಲೂ ತಾನು ಪ್ರಾಮಾಣಿಕವಾಗಿ ಸೇವೆ ಸಲ್ಲಿಸಿದ್ದೇನೆ. ಆದ್ದರಿಂದ ತನ್ನ ಪ್ರಾಮಾಣಿಕ ವೃತ್ತಿಗೆ ಎಲ್ಲರ ಪ್ರೀತಿ ಸಿಕ್ಕಿದೆ, ಆತ್ಮತೃಪ್ತಿಯಿಂದಲೇ ನಿರ್ಗಮಿಸುತ್ತಿದ್ದೇನೆ.
ಪುರುಷೋತ್ತಮ್ ಬಿ, ನಿವೃತ್ತ ಹಿರಿಯ ಪ್ರಥಮ ದರ್ಜೆ ಸಹಾಯಕರು, ಆರ್‌ಟಿಒ, ಪುತ್ತೂರು

ಸನ್ಮಾನ..
ಪ್ರಾದೇಶಿಕ ಸಾರಿಗೆ ಇಲಾಖೆಗಳ ಕಛೇರಿ(ಆರ್‌ಟಿಒ)ಯಲ್ಲಿ ಸುದೀರ್ಘ 37 ವರ್ಷಗಳ ಕಾಲ ಸೇವೆ ಸಲ್ಲಿಸಿ ಸೇವಾ ನಿವೃತ್ತಿ ಹೊಂದಿದ ಹಿರಿಯ ಪ್ರಥಮ ದರ್ಜೆ ಸಹಾಯಕ ಪುರುಷೋತ್ತಮ್ ಬಿ.ರವರನ್ನು ಆರ್‌ಟಿಒ ಕಛೇರಿ ವತಿಯಿಂದ ಶಾಲು ಹೊದಿಸಿ ಸನ್ಮಾನಿಸಿ ಬೀಳ್ಕೊಡಲಾಯಿತು. ಈ ಸಂದರ್ಭದಲ್ಲಿ ಪುರುಷೋತ್ತಮ್ ಬಿ.ರವರ ಆತ್ಮೀಯರು, ಹಿತೈಷಿಗಳು ಶಾಲು ಹೊದಿಸಿ ಸನ್ಮಾನಿಸಿದರು. ಸನ್ಮಾನಿತ ಪುರುಷೋತ್ತಮ್ ಬಿ.ರವರ ಪತ್ನಿ ಶ್ರೀಮತಿ ಸುಶೀಲರವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here