ಉಪ್ಪಿನಂಗಡಿ: ನಿರಂತರ ಮಳೆಗೆ 34 ನೆಕ್ಕಿಲಾಡಿ ಗ್ರಾಮದಲ್ಲಿ ಕೆಲವು ಕಡೆ ಧರೆ ಕುಸಿತ ಉಂಟಾಗಿದ್ದು, ಇನ್ನಷ್ಟು ಧರೆ ಕುಸಿತವಾದರೆ ಮನೆಗಳಿಗೆ ಅಪಾಯವಾಗುವ ಸಂಭವವಿದೆ.
ಆದರ್ಶನಗರ ಬಳಿಯ ಕಜೆ ಎಂಬಲ್ಲಿ ಹಮೀದ್ ಎಂಬವರ ಮನೆಯ ಮುಂದಿನ ಬೃಹತ್ತಾದ ಧರೆ ಕುಸಿದಿದ್ದು, ಇವರ ಮನೆಯ ಸಿಟೌಟ್ ಬಳಿ ಮಣ್ಣು ಬಿದ್ದಿದೆ. ಇಲ್ಲಿ ಇನ್ನಷ್ಟು ಧರೆ ಕುಸಿಯುವ ಅಪಾಯವಿದ್ದು, ಇನ್ನಷ್ಟು ಧರೆ ಕುಸಿದರೆ ಮನೆಗೆ ಹಾನಿಯಾಗುವ ಸಂಭವವಿದೆ. ಆದರ್ಶನಗರ ಕಾಲನಿಯಲ್ಲಿ ಅಂಗನವಾಡಿಗೆ ತೆರಳುವ ದಾರಿಯು ಧರೆ ಕುಸಿತದಿಂದ ಸಂಪೂರ್ಣ ಮುಚ್ಚಿ ಹೋಗಿದ್ದು, ಬೆಟ್ಟ ಪ್ರದೇಶವಾಗಿರುವ ಇಲ್ಲಿ ಭೂ ಕುಸಿತವುಂಟಾದರೆ ದಾರಿ ಹಾಗೂ ಮನೆಗಳಿಗೂ ಅಪಾಯವಾಗುವ ಸಾಧ್ಯತೆ ಇದೆ. ಆದ್ದರಿಂದ ಇಲ್ಲಿ ತಡೆಗೋಡೆ ನಿರ್ಮಾಣ ಅಗತ್ಯವಾಗಿ ಆಗಬೇಕಿದೆ. ಬೊಳಂತಿಲ ಹೊಸ ಕಾಲನಿಯ ಈಸುಬು ಎಂಬವರ ಮನೆಯ ಎದುರಿನ ಆವರಣ ಗೋಡೆ ಬಿರುಕು ಬಿಟ್ಟಿದೆ. ಇಲ್ಲಿ ಆವರಣ ಗೋಡೆಯನ್ನು ನಿರ್ಮಿಸಿ ಅದಕ್ಕೆ ಮಣ್ಣು ತುಂಬಿಸಿ ಮನೆ ಕಟ್ಟಿದ್ದು, ಆವರಣ ಗೋಡೆ ಕುಸಿತಕ್ಕೊಳಗಾದರೆ ಮನೆಯೂ ಬೀಳುವ ಸಂಭವವಿದೆ. ಕರ್ವೇಲಿನಲ್ಲಿ ದಿ. ಮುಹಮ್ಮದ್ ಎಂಬವರ ಮನೆ ಎದುರಿನ ಧರೆ ಕುಸಿದಿದ್ದು, ಇನ್ನಷ್ಟು ಧರೆ ಕುಸಿದರೆ ಧರೆಯ ಮೇಲಿರುವ ಮನೆಯೂ ಕುಸಿಯುವ ಭೀತಿಯಿದೆ. ಆದ್ದರಿಂದ ಇಲ್ಲಿಯೂ ತಡೆಗೋಡೆ ನಿರ್ಮಾಣ ಅಗತ್ಯವಿದೆ.
ಕಾಂಗ್ರೆಸ್ ನಿಯೋಗ ಭೇಟಿ: ಹಾನಿಗೀಡಾದ ಸ್ಥಳಗಳಿಗೆ 34 ನೆಕ್ಕಿಲಾಡಿ ಕಾಂಗ್ರೆಸ್ ವಲಯಾಧ್ಯಕ್ಷೆ ಅನಿ ಮಿನೇಜಸ್ ನೇತೃತ್ವದಲ್ಲಿ ಕಾಂಗ್ರೆಸ್ ಮುಖಂಡರ ನಿಯೋಗ ಭೇಟಿ ನೀಡಿದ್ದು, ಇಲ್ಲಿನ ಪರಿಸ್ಥಿತಿಯ ಬಗ್ಗೆ ಶಾಸಕ ಅಶೋಕ್ ಕುಮಾರ್ ರೈ ಅವರ ಗಮನಕ್ಕೆ ತರುವುದಾಗಿ ತಿಳಿಸಿದ್ದಾರೆ. ನಿಯೋಗದಲ್ಲಿ 34 ನೆಕ್ಕಿಲಾಡಿ ಗ್ರಾ.ಪಂ. ಮಾಜಿ ಅಧ್ಯಕ್ಷ ಅಸ್ಕರ್ ಅಲಿ, ಮುಖಂಡರಾದ ಶರೀಕ್ ಅರಪ್ಪಾ, ಜಯಶೀಲ ಶೆಟ್ಟಿ, ರಶೀದ್ ಜೊತೆಗಿದ್ದರು.