ಉಪ್ಪಿನಂಗಡಿ: ಸತತವಾಗಿ ಸುರಿದ ಭಾರೀ ಮಳೆಗೆ ಬುಧವಾರ ರಾತ್ರಿ ರೌದ್ರ ರೂಪ ತಾಳಿದ ನೇತ್ರಾವತಿ ನದಿಯು ಏಕಾಏಕಿ ಅಪಾಯದ ಮಟ್ಟವನ್ನು ಮೀರಿ ಹರಿದು ಉಪ್ಪಿನಂಗಡಿಯಲ್ಲಿ ಜನತೆಯನ್ನು ನೆರೆ ಭೀತಿಗೆ ಒಳಪಡಿಸಿದ ಘಟನೆ ನಡೆದಿದೆ.
ಬುಧವಾರ ಮುಂಜಾನೆಯಿಂದಲೇ ಇಳಿಮುಖವಾಗಿ ಹರಿಯುತ್ತಿದ್ದ ನದಿಯು ಸಾಯಂಕಾಲವಾದಂತೆ ತುಸು ಚೇತರಿಕೆಗೆ ಒಳಗಾಗಿತ್ತು. ರಾತ್ರಿಯಾಗುತ್ತಿದ್ದಂತೆಯೇ ನದಿಯ ನೀರಿನ ಮಟ್ಟವು ನೋಡ ನೋಡುತ್ತಿದ್ದಂತೆಯೇ ಅಪಾಯದ ಮಟ್ಟಕ್ಕೇರಿ ಹರಿಯ ತೊಡಗಿದೆ. ತಡ ರಾತ್ರಿ 2.15ರ ಹೊತ್ತಿಗೆ ಉಪ್ಪಿನಂಗಡಿಯ ಶ್ರೀ ಸಹಸ್ರಲಿಂಗೇಶ್ವರ- ಮಹಾಕಾಳಿ ದೇವಾಲಯದ ಬಳಿ ನದಿಯು ಉಕ್ಕಿ ಹರಿದು ದೇವಳದ ಮುಂಭಾಗದ ಪ್ರಾಂಗಣಕ್ಕೆ ವ್ಯಾಪಿಸಿತ್ತು. ವರ್ಷದ 2ನೇ ಸಂಗಮದ ನಿರೀಕ್ಷೆಯನ್ನು ಮೂಡಿಸಿತ್ತಾದರೂ 2.30 ರ ವೇಳೆ ನೀರು ಇಳಿಮುಖವನ್ನು ಕಂಡಿತ್ತು.
ಮಂಗಳವಾರವಷ್ಟೇ ನೆರೆ ಪೀಡಿತ ಪ್ರದೇಶದ ಮಂದಿ ಸ್ಥಳಾಂತರಗೊಂಡಿದ್ದ ಸಾಮಾನು ಸಾಮಾಗ್ರಿಗಳನ್ನು ಬುಧವಾರ ಮತ್ತೆ ಮನೆಗಳಿಗೆ ತಂದು ಜೋಡಿಸಿಟ್ಟ ಬೆನ್ನಿಗೆ ಮತ್ತೆ ನದಿಯು ನೆರೆ ಭೀತಿಯನ್ನು ಮೂಡಿಸಿದ್ದು, ಅವರೆಲ್ಲರನ್ನೂ ನಿದ್ರೆಗೆಡಿಸುವಂತೆ ಮಾಡಿತ್ತು. ಪಂಜಳದಲ್ಲಿ ನದಿ ನೀರು ರಾಷ್ಟ್ರೀಯ ಹೆದ್ದಾರಿಗೆ ನುಗ್ಗಿದರೆ, ಹಲವು ತಗ್ಗು ಪ್ರದೇಶಗಳಿಗೂ ನದಿ ನೀರು ನುಗ್ಗಿ ನಿವಾಸಿಗಳು ಭೀತಿಗೆ ಒಳಗಾಗಿದ್ದರು. ಮಾತ್ರವಲ್ಲದೆ, ಬೆಳ್ತಂಗಡಿ ತಾಲೂಕಿನ ಕುಪ್ಪೆಟ್ಟಿ ಎಂಬಲ್ಲಿಯೂ ಅಲ್ಲಿನ ತೋಡಿನಲ್ಲಿ ದೊಡ್ಡ ಪ್ರಮಾಣದ ನೀರು ಉಕ್ಕಿ ಹರಿದು ಉಪ್ಪಿನಂಗಡಿ ಬೆಳ್ತಂಗಡಿ ನಡುವಣದ ರಸ್ತೆಯನ್ನಾವರಿಸಿದ ಕಾರಣ ವಾಹನ ಸಂಚಾರಕ್ಕೆ ತಡೆಯುಂಟಾಗಿತ್ತು.
ಮಂಗಳವಾರ ರಾತ್ರಿಯಿಡೀ ನೆರೆ ಪೀಡಿತ ಉಪ್ಪಿನಂಗಡಿ ಮತ್ತದರ ಸುತ್ತಮುತ್ತಲ ಪ್ರದೇಶಗಳಲ್ಲಿ ರಕ್ಷಣಾ ಕಾರ್ಯಾಚರಣೆ ನಡೆಸಿ ದಣಿದಿದ್ದ ಗೃಹ ರಕ್ಷಕ ದಳದ ಪ್ರವಾಹ ರಕ್ಷಣಾ ತಂಡ, ಕಂದಾಯ ಇಲಾಖಾಧಿಕಾರಿಗಳ ತಂಡ ಬುಧವಾರ ರಾತ್ರಿ ಅನಿರೀಕ್ಷಿತ ಪ್ರವಾಹದ ಭೀತಿ ಮೂಡಿದಾಗ ತಕ್ಷಣಕ್ಕೆ ಸ್ಥಳದಲ್ಲಿ ಕಾರ್ಯೋನ್ಮುಖರಾಗಿ ಅಪಾಯ ನಿರೀಕ್ಷಿತ ಸೂಕ್ಷ್ಮ ಪ್ರದೇಶದ ನಿವಾಸಿಗರಿಗೆ ಎಚ್ಚರಿಕೆಯನ್ನು ನೀಡಿ ಇಲಾಖಾತ್ಮಕ ಕ್ರಮಗಳಿಗೆ ರಾತ್ರಿಯಿಡೀ ಸನ್ನದ್ದರಾಗಿದ್ದರು.
ದೇವಾಲಯದ ಸ್ನಾನ ಘಟ್ಟದ ಬಳಿ ನೆರೆ ಬಂದಾಗ ತಕ್ಷಣದ ರಕ್ಷಣೆಗೆ ಬೇಕಾದ ದೋಣಿ ಸಹಿತ ಅಗತ್ಯ ಸಾಮಗ್ರಿಗಳನ್ನಿಟ್ಟು ಪ್ರವಾಹ ರಕ್ಷಣಾ ತಂಡದ ಸೋಮನಾಥ, ವಸಂತ, ಚರಣ್, ಸುದರ್ಶನ್ ಸನ್ನದ್ಧ ಸ್ಥಿತಿಯಲ್ಲಿದ್ದು, ಕಂದಾಯ ಇಲಾಖೆಯ ಅಧಿಕಾರಿಗಳಿಗೆ ನೀರಿನ ಮಟ್ಟದ ಕ್ಷಣ ಕ್ಷಣದ ಮಾಹಿತಿಯನ್ನು ನೀಡುತ್ತಿದ್ದರು.ಉಪ್ಪಿನಂಗಡಿ ಗ್ರಾಮ ಪಂಚಾಯತ್ ಉಪಾಧ್ಯಕ್ಷೆ ವಿದ್ಯಾಲಕ್ಷ್ಮಿ ಪ್ರಭು ತಾನೋರ್ವ ಮಹಿಳೆಯಾಗಿದ್ದರೂ, ಅಪಾಯದ ಸುಳಿವು ದೊರೆತಾಕ್ಷಣ ತನ್ನ ಮಗಳು ಅಳಿಯನೊಡಗೂಡಿ ತಗ್ಗು ಪ್ರದೇಶ, ಅಪಾಯಕಾರಿ ಪ್ರದೇಶಗಳಿಗೆ ಭೇಟಿ ನೀಡಿ ಧ್ವನಿವರ್ಧಕದ ಮೂಲಕ ನಿವಾಸಿಗರನ್ನು ಎಚ್ಚರಿಸುವ ಕಾರ್ಯ ನಡೆಸಿದರು.
ಈ ಮಧ್ಯೆ ಎಸ್ಕೆಎಸ್ಸೆಸ್ಸೆಫ್ನ ವಿಖಾಯ ತಂಡ, ವಿಶ್ವಹಿಂದೂ ಪರಿಷತ್ ಬಜರಂಗ ದಳದ ಸ್ವಯಂಸೇವಕರ ತಂಡ ಸಾಂಧರ್ಭಿಕ ಅಪಾಯವನ್ನೆದುರಿಸಲು ಗುರುವಾರ ನಸುಕಿನ ವರೆಗೆ ಸನ್ನದರಾಗಿದ್ದುದ್ದು ಶ್ಲಾಘನೆಗೆ ಪಾತ್ರವಾಯಿತು. ಗುರುವಾರ ಈ ಪರಿಸರದಲ್ಲಿ ದಿನವಿಡೀ ಮಳೆ ಸುರಿದಿದ್ದು, ರಾತ್ರಿ 9 ಗಂಟೆಗೆ ನದಿಯ ನೀರಿನ ಮಟ್ಟ 28.5 ಮೀ. ದಾಖಲಾಗಿದೆ.
ಸನ್ನದ್ದ ಅಧಿಕಾರಿಗಳ ತಂಡದಲ್ಲಿ ತಹಶೀಲ್ದಾರ್ ಪುರಂದರ ಹೆಗ್ಡೆ, ಕಂದಾಯ ನಿರೀಕ್ಷಕ ಚಂದ್ರ ನಾಯ್ಕ, ಗ್ರಾಮ ಕರಣಿಕರಾದ ಜಯಚಂದ್ರ, ನರಿಯಪ್ಪ, ಗ್ರಾಮ ಸಹಾಯಕ ಯತೀಶ್, ಗೃಹರಕ್ಷಕ ಪ್ರವಾಹ ರಕ್ಷಣಾ ತಂಡದ ಮುಖ್ಯಸ್ಥ ದಿನೇಶ್ ಬಿ., ಜನಾರ್ದನ ಮತ್ತಿತರರಿದ್ದರು.