ನೆಕ್ಕಿಲಾಡಿ: ಗುಡ್ಡ ಕುಸಿತದಿಂದ ಮನೆಗೆ ಹಾನಿ – ಮಣ್ಣಿನಡಿ ಸಿಲುಕಿದ ವಾಹನಗಳು, ಸಾಕು ನಾಯಿ- ಮನೆ ಮಂದಿ ಅಪಾಯದಿಂದ ಪಾರು

0

ಉಪ್ಪಿನಂಗಡಿ: 34 ನೆಕ್ಕಿಲಾಡಿ ಗ್ರಾಮದ ಆನೆಬೈಲು ಸಮೀಪದ ಉಡ್ಲದಕೋಡಿ ಎಂಬಲ್ಲಿ ಗುಡ್ಡ ಕುಸಿದು ಮನೆ ಮೇಲೆ ಬಿದ್ದಿದ್ದು, ಮನೆ ಮಂದಿ ಅದೃಷ್ಟವಶಾತ್ ಅಪಾಯದಿಂದ ಪಾರಾಗಿದ್ದಾರೆ. ಘಟನೆಯಲ್ಲಿ ಓಮ್ನಿ ಕಾರು, ದ್ವಿಚಕ್ರ ವಾಹನ ಹಾಗೂ ಸಾಕು ನಾಯಿಯೊಂದು ಮಣ್ಣಿನಡಿ ಸಿಲುಕಿದೆ. ಗುಡ್ಡದ ಮಣ್ಣು ತೋಡಿಗೂ ಬಿದ್ದಿದ್ದು, ಇದರಿಂದ ಕೃಷಿ ತೋಟಕ್ಕೆ ತೋಡಿನ ನೀರು ನುಗ್ಗಿದ್ದು ನದಿಯಂತೆ ಹರಿಯುತ್ತಿದೆ.

ಶುಕ್ರವಾರ ಬೆಳಗ್ಗಿನ ಜಾವ 4.15ರ ಸುಮಾರಿಗೆ ಇಲ್ಲಿನ ವಿಶ್ವನಾಥ ನಾಯ್ಕ ಎಂಬವರ ಮನೆಯ ಬದಿಯ ಗುಡ್ಡ ಕುಸಿತಕ್ಕೊಳಗಾಗಿದೆ. ಈ ಸಂದರ್ಭ ಮನೆಯಲ್ಲಿ ವಿಶ್ವನಾಥ ನಾಯ್ಕ, ಅವರ ವೃದ್ಧ ತಾಯಿ ಲಲಿತಾ, ಪತ್ನಿ ವಾರಿಜಾ ಹಾಗೂ ಅಂಗನವಾಡಿ ಹಾಗೂ ಎರಡನೇ ತರಗತಿಯಲ್ಲಿ ಕಲಿಯುತ್ತಿರುವ ಅವರ ಇಬ್ಬರು ಮಕ್ಕಳು ಗಾಢ ನಿದ್ದೆಯಲ್ಲಿದ್ದರು. ಭಾರೀ ಶಬ್ದ ಕೇಳಿ ಮನೆ ಮಂದಿ ಎಚ್ಚರಗೊಂಡು ನೋಡಿದಾಗ ಮನೆಯ ಹಿಂಬದಿಯ ಗುಡ್ಡ ಕುಸಿದು ಮನೆಯ ಗೋಡೆಗೆ ತಾಗಿ ನಿಂತಿತ್ತು. ಇದರಿಂದ ಮನೆಯ ಒಂದು ಬದಿಯಲ್ಲಿ ಶೀಟ್ ಹಾಕಿ ಕಟ್ಟಲಾಗಿದ್ದ ಕೋಣೆ ಸಂಪೂರ್ಣ ನಾಶವಾಗಿದ್ದು, ಮನೆಯ ಗೋಡೆಗಳೂ ಬಿರುಕು ಬಿಟ್ಟಿವೆ. ಇದೇ ಬದಿಯಲ್ಲಿ ನಿಲ್ಲಿಸಲಾಗಿದ್ದ ಓಮ್ನಿ ಕಾರು ಹಾಗೂ ದ್ವಿಚಕ್ರ ವಾಹನಗಳು ಮಣ್ಣಿನಡಿ ಸಿಲುಕಿ ಕೊಂಡಿದೆ. ಮಣ್ಣು ಬಿದ್ದು ಮನೆಯ ಕೆಳಗೆ ಹರಿಯುತ್ತಿದ್ದ ಬೃಹತ್ ತೋಡು ತನ್ನ ನೀರಿನ ಹರಿವಿನ ದಿಕ್ಕು ಬದಲಿಸಿದ್ದು, ತೋಟದೆಲ್ಲೆಡೆ ನೀರು ತುಂಬಿದ್ದು, ಮನೆ ದಾರಿ ಜಲಾವೃತಗೊಂಡಿದ್ದು ವಿದ್ಯುತ್ ಕಂಬ ನೆಲಕ್ಕುರುಳಿದೆ.


ರಕ್ಷಣಾ ಕಾರ್ಯ: ಸುದ್ದಿ ತಿಳಿದು 34 ನೆಕ್ಕಿಲಾಡಿ ಗ್ರಾ.ಪಂ. ಸದಸ್ಯರಾದ ಪ್ರಶಾಂತ್ ಎನ್. ಹಾಗೂ ಹರೀಶ್ ಕುಲಾಲ್ ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿದ್ದಾರೆ. ಗುರುರಾಜ ಭಟ್, ಧನಂಜಯ ಸೇರಿದಂತೆ ಸ್ಥಳೀಯರು ರಕ್ಷಣಾ ಕಾರ್ಯದಲ್ಲಿ ನಿರತರಾಗಿದ್ದಾರೆ. ತೋಟದಲ್ಲಿ ಎದೆಯೆತ್ತರಕ್ಕೆ ನೀರು ತುಂಬಿದ್ದು ನೀರಿದ್ದು, ಮನೆಯಲ್ಲಿದ್ದ ವೃದ್ಧೆ ಲಲಿತಾ ಅವರನ್ನು ಸುರಕ್ಷಿತ ಜಾಗಕ್ಕೆ ಸ್ಥಳಾಂತರಿಸಲಾಗಿದೆ. ಬಳಿಕ ಗೃಹರಕ್ಷಕ ದಳದ ಪ್ರವಾಹ ರಕ್ಷಣಾ ತಂಡ ದೋಣಿಯೊಂದಿಗೆ ಸ್ಥಳಕ್ಕೆ ಆಗಮಿಸಿ, ಮನೆಯ ಸಾಮಾಗ್ರಿ, ಸರಂಜಾಮುಗಳನ್ನು ಹಾಗೂ ಮನೆಯಲ್ಲಿದ್ದ ಅಡಿಕೆ ಸೇರಿದಂತೆ ಇನ್ನಿತರ ವಸ್ತುಗಳನ್ನು ದೋಣಿಯ ಮೂಲಕ ಸುರಕ್ಷಿತ ಜಾಗಕ್ಕೆ ತಲುಪಿಸಿದರು. ಕುಸಿದು ಬಿದ್ದ ಮಣ್ಣು ತೆಗೆಯುವ ಕಾರ್ಯ ಪ್ರಗತಿಯಲ್ಲಿದೆ. ಸಾಕು ನಾಯಿ ಮಣ್ಣಿನಡಿಯಲ್ಲಿ ಸಿಲುಕಿಕೊಂಡಿದ್ದು, ಈವರೆಗೆ ಪತ್ತೆಯಾಗಿಲ್ಲ.


ಸ್ಥಳಕ್ಕೆ ಉಪ್ಪಿನಂಗಡಿ ಕಂದಾಯ ಹೋಬಳಿ ಉಪತಹಶೀಲ್ದಾರ್ ಚೆನ್ನಪ್ಪ ಗೌಡ, ಗ್ರಾಮ ಕರಣಿಕ ಜಂಗಪ್ಪ, ಗ್ರಾಮ ಸಹಾಯಕ ದಿವಾಕರ, ನೆಕ್ಕಿಲಾಡಿ ಗ್ರಾ.ಪಂ. ಅಭಿವೃದ್ಧಿ ಅಧಿಕಾರಿ ಸತೀಶ ಕೆ. ಬಂಗೇರ, ಅಧ್ಯಕ್ಷೆ ಸುಜಾತ ಆರ್. ರೈ, ಉಪಾಧ್ಯಕ್ಷ ಹರೀಶ್ ಡಿ., 34 ನೆಕ್ಕಿಲಾಡಿ ವಲಯ ಕಾಂಗ್ರೆಸ್ ಅಧ್ಯಕ್ಷೆ ಅನಿ ಮಿನೇಜಸ್, ಗ್ರಾ.ಪಂ. ಮಾಜಿ ಅಧ್ಯಕ್ಷ ಅಸ್ಕರ್ ಅಲಿ, ಕಾಂಗ್ರೆಸ್ ಮುಖಂಡೆ ಜಯಶೀಲ ಶೆಟ್ಟಿ ಭೇಟಿ ನೀಡಿದ್ದು, ಪರಿಶೀಲನೆ ನಡೆಸಿದ್ದಾರೆ.
ಗ್ರಾಮದಲ್ಲಿ ನಡೆದಿರುವ ಮಳೆ ಹಾನಿ ಪ್ರದೇಶಕ್ಕೆ ಭೇಟಿ ನೀಡಿ ವರದಿ ನೀಡುವಂತೆ ಶಾಸಕ ಅಶೋಕ್ ಕುಮಾರ್ ರೈ ಸೂಚನೆ ನೀಡಿದ್ದಾರೆ. ಈಗಾಗಲೇ 34 ನೆಕ್ಕಿಲಾಡಿ ಗ್ರಾಮದಲ್ಲಿ ನಡೆದಿರುವ ಮಳೆ ಹಾನಿಯ ಬಗ್ಗೆ ಶಾಸಕರಿಗೆ ವರದಿ ನೀಡಲಾಗಿದೆ. ಇಲ್ಲಿಯ ವಸ್ತು ಸ್ಥಿತಿಯ ಬಗ್ಗೆಯೂ ಶಾಸಕರಿಗೆ ವರದಿ ನೀಡಲಾಗುವುದು ಎಂದು 34 ನೆಕ್ಕಿಲಾಡಿ ವಲಯ ಕಾಂಗ್ರೆಸ್ ಅಧ್ಯಕ್ಷೆ ಅನಿ ಮಿನೇಜಸ್ ಹೇಳಿದ್ದಾರೆ.

LEAVE A REPLY

Please enter your comment!
Please enter your name here