ರಾಮಕುಂಜ: ಗ್ರಾಮದ ಕೊಂದಪಡೆ ಶ್ರೀ ಅನಂತಪದ್ಮನಾಭ ದೇವಸ್ಥಾನದಲ್ಲಿ ಆಟಿ ಅಮವಾಷ್ಯೆಯ ಪ್ರಯುಕ್ತ ವಿಶೇಷ ಪೂಜೆ ನಡೆಯಿತು. ಸಂತಾನ ಪ್ರಾಪ್ತಿಗೆ ಹೆಸರುವಾಸಿಯಾದ ಈ ದೇವಾಲಯದಲ್ಲಿ ಸಂತಾನ ಅಭೀಷ್ಟೆಗಾಗಿ ದಂಪತಿಗಳು ಸಂಕಲ್ಪ ಮಾಡಿಕೊಂಡರು. ಇಷ್ಠಾರ್ಥ ಸಿದ್ದಿಸಿಕೊಂಡ ದಂಪತಿಗಳು ಹರಕೆ ಸಲ್ಲಿಸಿದರು. ವಿಶೇಷ ಪೂಜೆ ಕೈಂಕರ್ಯಗಳು ನಡೆಯಿತು. ಅರ್ಚಕ ರಾಮಶಂಕರ ಮುಚ್ಚಿಂತ್ತಾಯ ನೇತೃತ್ವದಲ್ಲಿ ಪೂಜಾ ಕೈಂಕರ್ಯಗಳು ನಡೆಯಿತು. ಆಡಳಿತ ಮೊಕ್ತೆಸರ ಗೋಕುಲ ಪಿ.ಎಸ್., ಸದಸ್ಯರಾದ ಪ್ರಕಾಶ್ ಆಚಾರ್ಯ, ಅನಂತಕುಮಾರ್, ರವಿರಾಜ್ ಮೊದಲಾದವರು ಇದ್ದರು.
ಸಂತಾನ ಪ್ರಾಪ್ತಿಯ ವಿಶೇಷ ಸೇವೆ:
ಸಂತಾನ ಪ್ರಾಪ್ತಿಯ ವಿಶೇಷ ಬೇಡಿಕೆಯನ್ನೇ ಇಟ್ಟುಕೊಂಡು ಭಕ್ತರು ಇಲ್ಲಿಗೆ ಬರುತ್ತಿದ್ದು, ದೂರದೂರಿನ ಭಕ್ತರು ಆಟಿ ಅಮವಾಸ್ಯೆಯಂದು ಆಗಮಿಸುತ್ತಾರೆ. ಬೆಳಿಗ್ಗೆ 11 ಗಂಟೆಯಿಂದ ವಿಶೇಷ ಪ್ರಾರ್ಥನೆ ಆರಂಭವಾಗಿ ಮಧ್ಯಾಹ್ನ 12 ಗಂಟೆಗೆ ವಿಶೇಷ ಪೂಜೆ ನಡೆಯುವುದು ವಾಡಿಕೆ. ಸಂತಾನ ಪ್ರಾಪ್ತಿಯ ವಿಶೇಷ ಪ್ರಾರ್ಥನೆಯ ದಂಪತಿಗಳು ದೇವಾಲಯದ ಎದುರಿನ ಕೆರೆಯಲ್ಲಿ ತೀರ್ಥ ಸ್ನಾನ ಮಾಡಿ, ಬಳಿಕ ಸ್ನಾನ ಮಾಡಿದ ಬಟ್ಟೆಯಲ್ಲೇ ದಂಪತಿಗಳು ದೇವಾಲಯಕ್ಕೆ ಬಂದು ಪ್ರಾರ್ಥನೆ ಸಲ್ಲಿಸಬೇಕಾಗುತ್ತದೆ. ಬಳಿಕ ಅರ್ಚಕರು ದೇವಾಲಯದಿಂದ ಪ್ರಸಾದದೊಂದಿಗೆ ವಿಶೇಷ ಅರ್ಚನೆಯನ್ನು ಮಾಡಿದ ಅಕ್ಕಿಯನ್ನು ದಂಪತಿಗಳಿಗೆ ನೀಡುತ್ತಾರೆ. ಈ ಅಕ್ಕಿಯನ್ನು ದಂಪತಿಗಳು 12 ದಿನ ತಮ್ಮ ಮನೆಯಲ್ಲಿ ಪ್ರತೀ ದಿನ ಬೆಳಿಗ್ಗೆ ಸ್ನಾನ ಮಾಡಿ ಮಡಿಯುಟ್ಟು ತಾವು ಸೇವಿಸುವ ಆಹಾರದಲ್ಲಿ ಈ ಅಕ್ಕಿಯನ್ನು ಬೆರೆಸಿ ಸ್ವೀಕರಿಸಬೇಕು. ಹೀಗೆ ಮಾಡಿದಲ್ಲಿ ದಂಪತಿಗಳಿಗೆ ಸಂತಾನ ಪ್ರಾಪ್ತಿಯಾಗುವುದೆಂದು ಭಕ್ತರ ನಂಬಿಕೆಯಾಗಿದೆ.
ಹರಿಕೆ ರೂಪದಲ್ಲಿ ತೊಟ್ಟಿಲು ಮಗು:
ಕ್ಷೇತ್ರದಲ್ಲಿ ತೊಟ್ಟಿಲು ಮಗು ರೂಪದಲ್ಲಿ ಹರಿಕೆ ಸಲ್ಲಿಸುವುದು ವಿಶೇಷವಾಗಿದೆ. ಹೆಚ್ಚಾಗಿ ಕ್ಷೇತ್ರದ ಪ್ರಾಥನೆಯಿಂದಾಗಿ ಸಂತಾನ ಪಡೆದ ದಂಪತಿಗಳು ಈ ಸೇವೆಯನ್ನು ಮಾಡುತ್ತಾರೆ. ಜೊತೆಗೆ ತುಪ್ಪ, ನಾಗನ ಹೆಡೆಯು ಹರಿಕೆ ರೂಪದಲ್ಲಿ ಸಂದಾಯವಾಗುತ್ತದೆ.